ಕನ್ನಡ ನಾಡು | Kannada Naadu

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಾಧನೆ. ಸಂಚಾರ ಮತ್ತು ಸರಕು ಸಾಗಣೆಯಲ್ಲಿ ಹೊಸ ಮೈಲಿಗಲ್ಲು

09 Apr, 2025

ಬೆಂಗಳೂರು-ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು 2024-25ರ ಹಣಕಾಸು ವರ್ಷದಲ್ಲಿ ಹೊಸ ದಾಖಲೆ ಬರೆದಿದ್ದು, ಪ್ರಯಾಣಿಕರ ಸಂಚಾರ ಮತ್ತು ಸರಕು ಸಾಗಣೆಯಲ್ಲಿ ಮೈಲಿಗಲ್ಲು ಸೃಷ್ಟಿಸಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ 2024-25ರ ಹಣಕಾಸು ವರ್ಷದಲ್ಲಿ 41 ದಶಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದು, 500,000 ಮೆಟ್ರಿಕ್‌ ಟನ್‌ (ಎಂಟಿ) ತೂಕದ ಸರಕುಗಳನ್ನು ಸಾಗಿಸಲಾಗಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಕಳೆದ ಹಣಕಾಸು ವರ್ಷದಲ್ಲಿ 37.53 ದಶಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದರು. 2024-25ರ ಹಣಕಾಸು ವರ್ಷದಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆಯಾಗಿ 41.88 ದಶಲಕ್ಷಕ್ಕೆ ತಲುಪಿದ್ದು, ಶೇ.11.6ರಷ್ಟು ಹೆಚ್ಚಳವಾಗಿದೆ. ದೇಶೀಯ ಪ್ರಯಾಣಿಕರ ಸಂಖ್ಯೆಯು ಶೇ.10ರಷ್ಟು ಬೆಳವಣಿಗೆಯಾಗಿ 36.05 ದಶಲಕ್ಷ ತಲುಪಿದ್ದರೆ, ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆಯು ಶೇ.25ರಷ್ಟು ಹೆಚ್ಚಳವಾಗಿ, 5.83 ದಶಲಕ್ಷಕ್ಕೆ ಏರಿಕೆಯಾಗಿದೆ.

 
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸುವ ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಲು, ಇಂಡಿಗೋ ವಿಮಾನಯಾನ ಸಂಸ್ಥೆಯು ತನ್ನ ಜಾಗತಿಕ ಜಾಲವನ್ನು ವಿಸ್ತರಿಸಿರುವುದು ಪ್ರಮುಖ ಕಾರಣವಾಗಿದೆ. ಜೊತೆಗೆ, ಬೆಂಗಳೂರಿನಿಂದ ಲಂಡನ್‌ ಹೀಥ್ರೂಗೆ ದೈನಂದಿನ ಹೆಚ್ಚುವರಿ ವಿಮಾನ ಹಾರಾಟ, ಕ್ಯಾಥೆ ಪೆಸಿಫಿಕ್‌, ಕೆಎಲ್‌ಎಂ, ಜಪಾನ್‌ ಏರ್‌ಲ್ಸೃ್‌, ಕ್ವಾಂಟಾಸ್‌‍ ಸೇರಿದಂತೆ ಹಲವು ವಿದೇಶಿ ವಿಮಾನಯಾನ ಸಂಸ್ಥೆಗಳು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಒದಗಿಸುವ
ವಿಮಾನ ಸೇವೆಯನ್ನು ಇನ್ನಷ್ಟು ಹೆಚ್ಚಿಸಿರುವುದು ಸಹ ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆಯ ಹೆಚ್ಚಳಕ್ಕೆ ಕಾರಣವಾಗಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು, ಕಳೆದ ನಾಲ್ಕು ತಿಂಗಳುಗಳಿಂದ ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರತದ ಮೂರನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾಗಿ ಸ್ಥಾನ ಪಡೆದುಕೊಂಡಿದೆ. 76 ದೇಶೀಯ ಮತ್ತು 33 ಅಂತಾರಾಷ್ಟ್ರೀಯ ತಾಣಗಳಿಗೆ ಬೆಂಗಳೂರಿನಿಂದ ತಡೆರಹಿತ ವಿಮಾನ ಸೇವೆ ಲಭ್ಯವಿದ್ದು, ಇದೇ ವರ್ಷದ ಮೇ ತಿಂಗಳಿನಿಂದ ವಿಯೆಟ್ನಾಂನ ಹನೋಯಿ ನಗರಕ್ಕೆ ಆರಂಭವಾಗಲಿರುವ ವಿಮಾನ ಸೇವೆಯು 34ನೇ ಅಂತಾರಾಷ್ಟ್ರೀಯ ತಾಣವಾಗಿ ಹೊರಹೊಮಲಿದೆ.

 
ಸರಕು ಸಾಗಣೆಯಲ್ಲಿಯೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ದಾಖಲೆ ನಿರ್ಮಿಸಿದೆ. ಇದೇ ಮೊದಲ ಬಾರಿಗೆ, 500,000 ಮೆಟ್ರಿಕ್‌ ಟನ್‌ಗಿಂತ ಹೆಚ್ಚು ಸರಕು ಸಾಗಣೆ ಮಾಡುವ ಮೂಲಕ ಮಹತ್ವದ ಮೈಲಿಗಲ್ಲು ಸಾಧಿಸಿದೆ. 2024-25ರ ಆರ್ಥಿಕ ವರ್ಷದಲ್ಲಿ ಒಟ್ಟು 502,480 ಮೆಟ್ರಿಕ್‌ಟನ್‌ ಸರಕನ್ನು ಸಾಗಣೆ ಮಾಡಲಾಗಿದ್ದು, ವರ್ಷದಿಂದ ವರ್ಷಕ್ಕೆ ಗಮನಾರ್ಹವಾದ ಶೇ.14ರಷ್ಟು ಬೆಳವಣಿಗೆ ದಾಖಲಾಗುತ್ತಿದೆ.

ಈ ಪೈಕಿ, ಅಂತಾರಾಷ್ಟ್ರೀಯ ಸರಕು ಸಾಗಣೆಯಲ್ಲಿ ಶೇ.21ರಷ್ಟು ಏರಿಕೆಯಾಗಿದ್ದು, ಒಟ್ಟು 321,418 ಮೆಟ್ರಿಕ್‌ಟನ್‌ ಸರಕು ಸಾಗಿಸಲಾಗಿದೆ. ದೇಶೀಯ ಸರಕು ಸಾಗಣೆಯಲ್ಲಿ ಶೇ.4ರಷ್ಟು ಏರಿಕೆಯಾಗಿದ್ದು, 181,062 ಮೆಟ್ರಿಕ್‌ಟನ್‌ ತಲುಪಿದೆ. ಸತತ ನಾಲ್ಕನೇ ವರ್ಷ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಕೊಳೆತುಹೋಗುವ ಪದಾರ್ಥಗಳ ರಫ್ತಿನಲ್ಲಿ ಭಾರತದ ನಂ.1 ವಿಮಾನ ನಿಲ್ದಾಣವಾಗಿ ಹೊರಹೊಮುವ ಮೂಲಕ ತನ್ನ ಸ್ಥಾನವನ್ನು ಬಲಪಡಿಸಿಕೊಂಡಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು, ಗಮನಾರ್ಹವಾದ ಬೆಳವಣಿಗೆ ಸಾಧಿಸುತ್ತಿದ್ದು, ಸಾಧನೆಗಳತ್ತ ಮುನ್ನುಗ್ಗುತ್ತಿದೆ. ಈ ಮೂಲಕ, ಜಾಗತಿಕವಾಗಿ ಪ್ರಮುಖ ವಿಮಾನಯಾನ ಕೇಂದ್ರಗಳಲ್ಲಿ ಒಂದಾಗಿ ಬದ್ಧತೆಯನ್ನು ಹೆಚ್ಚಿಸಿಕೊಂಡಿದೆ.

Publisher: ಕನ್ನಡ ನಾಡು | Kannada Naadu

Login to Give your comment
Powered by