ಕನ್ನಡ ನಾಡು | Kannada Naadu

ಬೆಳಗಾವಿ-ಹುಬ್ಬಳ್ಳಿಯಲ್ಲೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾಡಲು ಚಿಂತನೆ

08 Apr, 2025

 ಬೆಂಗಳೂರು: ಬೆಂಗಳೂರಿನ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಕನಕಪುರ ರಸ್ತೆ ಅಥವಾ ನೆಲಮಂಗಲ, ಕುಣಿಗಲ್‌ ರಸ್ತೆ ಎರಡರಲ್ಲಿ ಒಂದನ್ನು ಅಂತಿಮಗೊಳಿಸಲು ಮೂರು ದಿನ ಕೇಂದ್ರದ ತಂಡ ಪರಿಶೀಲನೆ ನಡೆಸಲಿದೆ ಎಂದು ಸಚಿವ ಎಂ.ಬಿ.ಪಾಟೀಲ್‌ ಹೇಳಿದ್ದಾರೆ.

ಸಚಿವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಿರಾದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾಡಲಾಗಲ್ಲ ಎಂದು ಸಚಿವ ಡಾ। ಜಿ.ಪರಮೇಶ್ವರ್‌ ಅವರ ಗಮನಕ್ಕೂ ತಂದಿದ್ದೇವೆ. ಬೆಂಗಳೂರಿನಿಂದ 50 ಕಿ.ಮೀ. ಒಳಗೆ ಮಾಡಬೇಕು. 150 ಕಿ.ಮೀ. ದೂರದಲ್ಲಿ ಮಾಡಿದರೆ ಬೆಂಗಳೂರಿನ ಜನರಿಗೆ ಅನುಕೂಲ ಆಗುವುದಿಲ್ಲ. ಜತೆಗೆ ಯಾವ ಕಂಪನಿಯೂ ಅಲ್ಲಿ ವಿಮಾನ ನಿಲ್ದಾಣ ಮಾಡಲು ಮುಂದೆ ಬರುವುದಿಲ್ಲ ಎಂದು ಹೇಳಿದರು.

ಕೇಂದ್ರ ವಿಮಾನಯಾನ ಸಚಿವರೊಂದಿಗೆ ಚರ್ಚಿಸಿದ್ದು, ನಾವು ಕನಕಪುರ ರಸ್ತೆ ಅಥವಾ ನೆಲಮಂಗಲ, ಕುಣಿಗಲ್‌ ರಸ್ತೆಯಲ್ಲಿ ಎರಡು ಕಡೆ ಜಾಗ ಗುರುತಿಸಿದ್ದೇವೆ. ಈ ಬಗ್ಗೆ ವರದಿಯನ್ನು ಕೇಂದ್ರಕ್ಕೆ ನೀಡಿದ್ದೇವೆ. ಕೇಂದ್ರ ವಿಮಾನಯಾನ ಇಲಾಖೆಯ ತಂಡವು ರಾಜ್ಯಕ್ಕೆ ಬಂದಿದ್ದು ಅವರು ಅಧ್ಯಯನ ನಡೆಸಿ ಎಲ್ಲಿ ಹೇಳುತ್ತಾರೋ ಅದೇ ಜಾಗ ಅಂತಿಮವಾಗಲಿದೆ. ಬಳಿಕ ಪ್ರಮುಖ ಕಂಪನಿಯಿಂದ ಸಾಧ್ಯಾಸಾಧ್ಯತೆ ಕುರಿತು ವರದಿ ಪಡೆಯಲಾಗುವುದು. ಬಳಿಕ ಅಂತಿಮವಾಗಿ ವಿಮಾನ ನಿಲ್ದಾಣ ಸ್ಥಳಕ್ಕೆ ಅನುಮೋದನೆ ನೀಡಲಾಗುವುದು ಎಂದು ಹೇಳಿದರು.

ಬೆಳಗಾವಿ ಅಥವಾ ಹುಬ್ಬಳ್ಳಿಯಲ್ಲೂ ಮಾಡಲು ಚಿಂತನೆ: 

ಇನ್ನು ಉತ್ತರ ಕರ್ನಾಟಕ ಭಾಗದ ಜನರ ಅನುಕೂಲಕ್ಕಾಗಿ ಬೆಳಗಾವಿ ಅಥವಾ ಹುಬ್ಬಳ್ಳಿಯಲ್ಲಿ ಒಂದರಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾಡಲೂ ಚಿಂತನೆ ನಡೆಸುತ್ತಿದ್ದೇವೆ. ಈ ಬಗ್ಗೆ ಸದ್ಯದಲ್ಲೇ ಚರ್ಚೆ ನಡೆಸಿ ಪ್ರಸ್ತಾವನೆ ಸಿದ್ಧಪಡಿಸುತ್ತೇವೆ ಎಂದು ಸಚಿವ ಎಂ.ಬಿ. ಪಾಟೀಲ್‌ ಹೇಳಿದರು.

2ನೇ ಏರ್‌ಪೋರ್ಟ್‌ ನಿರ್ಮಿಸಿ: ಬೆಂಗಳೂರಲ್ಲಿ ಮತ್ತೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಳ ಗುರುತಿಸುವ ವಿಚಾರದಲ್ಲಿ ಮಧ್ಯ ಹಾಗೂ ಉತ್ತರ ಕರ್ನಾಟಕ ಭಾಗದ ಕಾಂಗ್ರೆಸ್ ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಂಗಳೂರಲ್ಲಿ ಇನ್ನೊಂದು ವಿಮಾನ ನಿಲ್ದಾಣ ಬೇಡ ಎನ್ನುತ್ತಿರುವ ಶಾಸಕರು, ತುಮಕೂರು ಜಿಲ್ಲೆಯ ಶಿರಾ ಸುತ್ತಮುತ್ತ ವಿಮಾನ ನಿಲ್ದಾಣವಾಗಲಿ ಎಂದು ಮನವಿ ಮಾಡಿದ್ದಾರೆ. ಈ ಸಂಬಂಧ ಶಾಸಕ ಟಿ.ಬಿ.ಜಯಚಂದ್ರ ನೇತೃತ್ವದಲ್ಲಿ 33 ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ.

Publisher: ಕನ್ನಡ ನಾಡು | Kannada Naadu

Login to Give your comment
Powered by