ಕಳೆದ ಕೆಲವು ದಿನಗಳಿಂದ ಶ್ರೀ ಕ್ಷೇತ್ರ ಇಟಗಿಯ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ಅಷ್ಟಬಂಧ ಮಹೋತ್ಸವ ನಡೆಯಲಿದೆ ಎನ್ನುವ ಮಾಹಿತಿ ಸಿಕ್ಕಾಗಿನಿಂದ, ನನ್ನ ಬಾಲ್ಯದ ದಿನಗಳು ಒಮ್ಮೆ ನೆನಪಿಗೆ ಬಂದವು. ಆಗೆಲ್ಲಾ ರಜಾ ಬಂತು ಎಂದಾಗ ಅಜ್ಜನ ಮನೆಗೆ ತೆರಳುವುದು ನನಗೆ ಇಟಗಿ ಮತ್ತು ಅಲ್ಲಿನ ದೇವಸ್ಥಾನ ತುಂಬಾ ಆಪ್ಯಾಯಮಾನವಾಗಿತ್ತು. ಗಟ್ಟದ ಕೆಳಗಿನವನಾದ ನನ್ನ, ಅಮ್ಮನ ತವರು ಮನೆ ಇಟಗಿ ಸಮಿಪದ ಹೊನ್ನೆಕೈ. ಮುಸೇಗಾರ ನನ್ನ ದೊಡ್ಡಜ್ಜನ ಮನೆ, ಗೊದ್ಲಮನೆ, ಮಳವತ್ತಿ ದೊಡ್ಡಮ್ಮನ ಮನೆ, ಬೆಳೆಮಡ್ಕೆ ಚಿಕ್ಕಮ್ಮನ ಮನೆ. ಹೀಗೆ ಸಿದ್ದಾಪುರ ತಾಲೂಕಿನ ಎಲ್ಲಾ ಸೀಮೆಗಳಲ್ಲಿ ಒಂದಿಲ್ಲೊಂದು ನೆಂಟರ ಮನೆ ಇದೆ.
ಹಾಗಂತ ಎಲ್ಲಕ್ಕಿಂತ ಹೆಚ್ಚು ಭಾವಭಕ್ತಿಯ ಸಮ್ಮಿಲನದಂತೆ ನನ್ನ ಪಾಲಿಗೆ ಇದ್ದಿದ್ದು, ಇಟಗಿಯ ಶ್ರೀ ರಾಮೇಶ್ವರ ಸ್ವಾಮಿ. ಅದಕ್ಕೆ ಕಾರಣ, ನನ್ನ ಅಮ್ಮ! ಯಾವಾಗಲೂ ಆ ಭಾಗಕ್ಕೆ ಹೋದಾಗಲೆಲ್ಲಾ ಕಡ್ಡಾಯವಾಗಿ "ಇಟಗಿ ದೇವಸ್ಥಾನಕ್ಕೆ ಹೋಗಿ ಹಣ್ಣುಕಾಯಿ ಮಾಡಿಸಿಕೊಂಡು ಬಾ" ಎಂದು ಹೇಳುತ್ತಿರುವುದೇ ಕಾರಣ. ಕಳೆದ ಬಾರಿ ನನ್ನ ಗೆಳೆಯ ಗಣೇಶ್ ಇಟಗಿಯ ಮಗನ ಉಪನಯನಕ್ಕೆ, ಶ್ರೀಧರ ಭಾಗ್ವತ್ ಅವರ ಜೊತೆಗೆ ತೆರಳಿದ್ದೆ. ಉಪನಯನ ರಾಮೇಶ್ವರ ದೇವಸ್ಥಾನದಲ್ಲಿಯೇ ಇತ್ತು. ಅಲ್ಲಿಗೆ ಬಹಳ ದಿನವೇ ಆಗಿತ್ತು ರಾಮೇಶ್ವರನ ದರ್ಶನ ಮಾಡದೆ. ಅಂದು ಉಪನಯನದ ನೆಪದಲ್ಲಿ ಇಟಗಿ ದೇವಸ್ಥಾನದಲ್ಲಿ ಬಹಳಷ್ಟು ಕಾಲ ಸಮಯ ಕಳೆದಿದ್ದೆ.
ಗೆಳೆಯ ಶ್ರೀಧರನಿಗೆ ನಾನು ನನಗೆ ತಿಳಿದ ಅಲ್ಲಿನ ಕಥೆಗಳನ್ನು ಹೇಳಿದ್ದೆ... ಈ ಕ್ಷೇತ್ರದಲ್ಲಿ ಇಂದಿಗೂ ನಿತ್ಯ ತ್ರಿಕಾಲ ಪೂಜೆ, ನೈವೇದ್ಯ, ಬಲಿ ನಡೆಯುತ್ತದೆ. ಪ್ರದಕ್ಷಿಣಪಥ ಅಂತರಾಳದೊಂದಿಗಿರುವ ಗರ್ಭಗೃಹ, ಕದಂಬ ನಾಗರ ಶಿಲ್ಪದ ಶುಖನಾಸಗಳನ್ನು ಹೊಂದಿದ ನವರಂಗ, ಆಲಯದಲ್ಲಿ ಪರಶುರಾಮ ಉಬ್ಬುಚಿತ್ರ, ಕಪೋತಕಲ್ಲಿನ ಛಾವಣಿ ಮತ್ತು ನೆಲಹಾಸು, ದ್ವಾರದ ಎಡ-ಬಲಕ್ಕೆ ದ್ವಾರಪಾಲರ ತ್ರಿಭಂಗ ಶಿಲ್ಪ, ಲಲಾಟದಡಿ ಕಮಲಪುಷ್ಪದ ಕೆತ್ತನೆ, ಛಾವಣಿಯಲ್ಲಿ ಗಜಲಕ್ಷ್ಮಿ, ನೃತ್ಯಮಾಡುತ್ತಿರುವ ಮುನಿ, ಪೀಠಾಸೀನ ಯೋಗಿಯ ಚಿತ್ರಣ ಬಿಡಿಸಲಾಗಿದೆ. ಕೈಗಳಲ್ಲಿ ಖಡ್ಗ, ಬಾಣ, ಧನಸ್ಸು, ಕಮಂಡಲನ್ನು ಧರಿಸಿದ ಪರಿವಾರದೈವ ವೀರಭದ್ರನ ಕೊರಳಲ್ಲಿ ರುಂಡಮಾಲೆ, ಕಟಿಬಂಧ, ಕಂಠಹಾರ, ಅಂಗದ, ಕಂಕಣ, ಕಾಲಿನ ಕಡಗ ಇತ್ಯಾದಿಗಳಿಂದ ಶೋಭಿಸುವ ಮೂರ್ತಿಯ ಕಿರೀಟದಲ್ಲಿ ಶಿವಲಿಂಗವು ಅಲಂಕರಿಸಲಾಗಿದೆ. ಇದರೊಂದಿಗೆ ಭಿತ್ತಿಯ ಮೇಲೆ ಕನ್ನಡ ಲಿಪಿಯ ಶಾಸನ, ವಿವಿಧ ಭಂಗಿಯ ಶಿಲ್ಪಕಲಾ ಕೆತ್ತನೆಗಳೊಂದಿಗೆ ಶಿಲಾಮಯ ಮಹಾದ್ವಾರ, ಆಲಯದ ಮುಂದೊಂದು ಸುಂದರ ಕಲ್ಯಾಣಿ, ಇವೆಲ್ಲವೂ ನೋಡುತ್ತಿದ್ದರೆ ʻಇದೇ ಶಿವಲೋಕʼ ಎನಿಸದೇ ಇರಲಾರದು.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕು ಕೇಂದ್ರದಿಂದ ಇಟಗಿ ಗ್ರಾಮವು ಸರಿ ಸುಮಾರು ೩೦ ಕೀ.ಮೀ. ದೂರದಲ್ಲಿ ಇದೆ. ಆರಂಭದಿಂದಲೇ ರಾಮೇಶ್ವರನ ಕುರಿತು ಭಕ್ತಿ ಉಳ್ಳವನಾದ ನನಗೆ ಸಿಕ್ಕಿದ್ದು, ಶ್ರೀ ಅತ್ತಿಮುರುಡು ವಿಶ್ವೇಶ್ವರ ಅವರು ಬರೆದ "ಇಟಗಿಯ ಇತಿವೃತ್ತ" ಎಂಬ ಗ್ರಂಥ. ಆ ಗ್ರಂಥದಲ್ಲಿ ಇಟಗಿಯ ಇತಿಹಾಸವನ್ನು ದಾಖಲಿಸಿದ್ದಾರೆ. ಶ್ರೀ ಕ್ಷೇತ್ರದ ಪ್ರಧಾನ ತಾಂತ್ರಿಕರಾದ ಶ್ರೀ ಅನಂತ ಭಟ್ಟ ಇಟಗಿ ಅವರು ಸಂಪಾದಿಸಿದ ಪುಸ್ತಕದಲ್ಲಿ, ಇಟಗಿಯ ಇತಿಹಾಸದೊಂದಿಗೆ ರಾಮೇಶ್ವರನ ಧಾರ್ಮಿಕ ಮಹತ್ವಗಳನ್ನು ವಿವರಿಸಿದ್ದಾರೆ
ಹಿಂದೆ ಕದಂಬರ ಆಳ್ವಿಕೆಗೆ ಒಳಪಟ್ಟ ಈ ಊರನ್ನು ಇಟ್ಗೆ, ಇಷ್ಟಿಕಾಪುರ, ಗಂಗಾಪುರ ಎಂಬಿತ್ಯಾದಿ ಹೆಸರುಗಳಿಂದ ಕರೆಯುತ್ತಿದ್ದರಂತೆ. ಕದಂಬರ ಕಾಲದಲ್ಲಿ ಐಸೂರು ಮತ್ತು ಬಿಳಗಿ ರಾಜಧಾನಿಯಾಗಿದ್ದು, ಅದರ ಪಕ್ಕದಲ್ಲಿರುವ ಗ್ರಾಮವೇ ಇಟಗಿ. ಇಲ್ಲಿನ ರಾಮೇಶ್ವರ ದೇವಸ್ಥಾನ, ಅಮ್ಮನವರ ಗುಡಿ ಹಾಗೂ ವಿಠ್ಠಲ ದೇವಾಲಯಗಳ ವಾಸ್ತುಶಿಲ್ಪವನ್ನು ಗಮನಿಸಿದಾಗ, ಅವೆಲ್ಲವೂ ವಿಜಯನಗರ ಶೈಲಿಯಿಂದ ಕೂಡಿರುವುದು ಇನ್ನೊಂದು ವಿಶೇಷ. ಇಟಗಿ ಗ್ರಾಮಕ್ಕೆ ೬ನೇ ಶತಮಾನದ ʻಬೃಹತ್ ಸಂಹಿತೆʼಯಲ್ಲಿ ʻಇಷ್ಟಿಕಾʼ ಎಂಬ ಹೆಸರಿನಿಂದ ಬಣ್ಣಿಸಿದ್ದಾರೆ. ಅದಕ್ಕೆ ಕಾರಣ, ಈ ಕ್ಷೇತ್ರದಲ್ಲಿ ಸಾಕಷ್ಟು ಯಾಗ-ಯಜ್ಞಾರ್ಥಗಳು ನಡೆಯುತ್ತಿದ್ದವಂತೆ. ಅದಕ್ಕೆ ತಕ್ಕಂತೆ, ಇಲ್ಲಿ ಹಲವು ಶ್ರೌತ್ರ ಯಾಗ-ಯಜ್ಞಗಳು ಶಾಸ್ತ್ರಸಮ್ಮತವಾಗಿ ನಡೆಯುತ್ತ ಬಂದಿರುವ ಕಾರಣ, ಇಲ್ಲಿಗೆ ಬಂದ ಎಲ್ಲ ಭಕ್ತರಿಗೆ ಇಷ್ಟಾರ್ಥ ಫಲಿಸುತ್ತಿತ್ತು ಎನ್ನುವ ಅಲಿಖಿತ ಮಾತೊಂದು ಪ್ರಚಲಿತದಲ್ಲಿತ್ತು. ಅದೇ ಕಾರಣಕ್ಕೆ ಇಟಗಿ ಕ್ಷೇತ್ರಕ್ಕೆ ʻಇಷ್ಟಿಕಾಪುರʼ ಎಂಬ ಹೆಸರು ಬಂದಿತ್ತು ಎನ್ನುವ ಇತಿಹಾಸ ಲಭ್ಯವಿದೆ.
ಇಟಗಿಯಲ್ಲಿ ಪರಶಿವನನ್ನು ಸ್ವತಃ ರಾಮದೇವರೇ ಸ್ಥಾಪಿಸಿದ್ದರಂತೆ. ತೇತ್ರಾಯುಗದಲ್ಲಿ ಸೀತಾನ್ವೇಶನೆಗಾಗಿ ದಕ್ಷಿಣದತ್ತ ಸಾಗುತ್ತಿದ್ದ ಶ್ರೀರಾಮ ಮತ್ತು ಲಕ್ಷ್ಮಣರು ತಮ್ಮ ಪ್ರದೋಷಕಾಲದ ಪೂಜೆಗಾಗಿ ಶಿವಲಿಂಗವೊಂದನ್ನು ಸ್ಥಾಪಿಸಿ, ಅದಕ್ಕೆ ಪ್ರಾಣಪ್ರತಿಷ್ಠೆ ಮಾಡಿ ಪೂಜೆ ಸಲ್ಲಿಸಿದ್ದರು. ಪ್ರಭು ಶ್ರೀ ರಾಮನಿಂದ ಸ್ಥಾಪಿತನಾದ ಶಿವನು, ಇಟಗಿಯಲ್ಲಿ ʻಶ್ರೀ ರಾಮೇಶ್ವರʼನಾಗಿ ನೆಲೆನಿಂತಿದ್ದಾನೆ. ಈ ದೇವಾಲಯದಲ್ಲಿ ಆಗಮ ಶಾಸ್ತ್ರ ಸಂಪ್ರದಾಯದಂತೆ ಅವಿಚ್ಛಿನ್ನ ಪರಂಪರೆಯಲ್ಲಿ ಪೂಜಾ ಕೈಂಕರ್ಯಗಳು ನಡೆಯುತ್ತ ಬಂದಿವೆ.
ಸ್ಥಳೀಯರ ಪ್ರಕಾರ, ಈ ದೇವಸ್ಥಾನದ ಕುರಿತು ಕಥೆಯೊಂದನ್ನು ಪ್ರಚಲಿತದಲ್ಲಿದೆ. ರಾಮಯ್ಯ ಹೆಗಡೆ ಎಂಬುವವರು ಹಾಲು ನೀಡುವ ಹಸು ಮನೆಗೆ ಬರುವಾಗ, ಕೆಚ್ಚಲಿನಲ್ಲಿ ಹಾಲು ಖಾಲಿಯಾಗಿರುತ್ತಿತ್ತಂತೆ. ಪರಿಣಾಮ, ಮನೆಯವರಿಗೆ ಹಸು ಹಾಲು ಕೊಡುತ್ತಿರಲಿಲ್ಲ. ಹಸು ಹಾಲು ಖಾಲಿಯಾಗುವುದಕ್ಕೆ ಕಾರಣವನ್ನು ಹುಡುಕುತ್ತಿರುವಾಗ, ಆ ಹಸು ಹುತ್ತದ ಮೇಲೆ ಹಾಲು ಸುರಿಸುತ್ತಿರುವುದನ್ನು ಕಂಡಿದ್ದರಂತೆ. ಆಶ್ಚರ್ಯಚಕಿತರಾಗಿ, ಹುತ್ತದಲ್ಲಿ ಏನಿದೆ ಎಂದು ಹುಡುಕಾಟ ನಡೆಸಿದಾಗ, ಅಲ್ಲೊಂದು ʻಅಪ್ರತಿಮ ಲಿಂಗʼ ಇರುವುದು ರಾಮಯ್ಯ ಹೆಗಡೆ ಅವರಿಗೆ ಅರಿವಿಗೆ ಬಂದಿತ್ತು. ಆಗ ರಾಮಯ್ಯ ಹೆಗಡೆಯವರು ತಮ್ಮ ಕುಲಪುರೋಹಿತರೊಂದಿಗೆ ಸಮಾಲೋಚಿಸಿ, ಹುತ್ತವಿದ್ದ ಜಾಗದಲ್ಲಿ ಲಿಂಗವನ್ನು ಸ್ಥಾಪಿಸುವ ನಿರ್ಧಾರಕ್ಕೆ ಬಂದು, ಅದಕ್ಕೊಂದು ಗುಡಿ ನಿರ್ಮಾಣ ಮಾಡುವ ಸಂಕಲ್ಪದೊಂದಿಗೆ ಗುಡಿಯನ್ನು ನಿರ್ಮಿಸಿ, ಆಗಮೋಕ್ತವಾಗಿ ಆ ಲಿಂಗವನ್ನು ಪ್ರತಿಷ್ಠಾಪಿಸಿ ಶ್ರೀ ರಾಮೇಶ್ವರ ಎಂಬ ಹೆಸರಿನಿಂದ ಆರಾಧನೆ ಆರಂಭಿಸಿದ್ದರಂತೆ. ಅಂದಿನಿಂದ ಇಂದಿನವರೆಗೆ, ಪೂಜಾ ಪದ್ಧತಿಯಲ್ಲಿ ಯಾವುದೇ ವ್ಯತ್ಯಾಸವಿಲ್ಲದೆ ನಡೆದುಕೊಂಡು ಬರುತ್ತಿದೆ ಎನ್ನುವ ಸಂಗತಿಯನ್ನು ಸ್ಥಳೀಯರು ತಿಳಿಸುತ್ತಾರೆ.
ಕ್ರಿ.ಶ. 1492 ರಲ್ಲಿ ವಿಜಯನಗರ ದೊರೆ ಶ್ರೀ ಕೃಷ್ಣದೇವರಾಯನ ಸಾಂಮಂತರಾಗಿ ಆಳ್ವಿಕೆ ನಡೆಸುತ್ತಿದ್ದ ಬಿಳಗಿಯ ಘಂಟಪ್ಪ ನಾಯಕನ ಹಿರಿಯ ಮಗ ತಿಮ್ಮರಸ ನಾಯಕ, ಅಲ್ಪಾಯುಷಿಯಾಗಿದ್ದರಿಂದ ಅಕಾಲಿಕ ಮರಣಹೊಂದುತ್ತಾನೆ. ಮುಂದೆ ಘಂಟಪ್ಪ ನಾಯಕನ ಉತ್ತರಾಧಿಕಾರಿಯಾಗಿ ಅವನ ಇನ್ನೊಬ್ಬ ಮಗ ನರಸಿಂಹರಾಜನು ಅಧಿಕಾರ ವಹಿಸಿಕೊಂಡಿದ್ದ. ವಾಸ್ತವದಲ್ಲಿ ಧಾರ್ಮಿಕ ಚಿಂತಕನಾದ ನರಸಿಂಹರಾಜನು, ತನ್ನ ಅಣ್ಣನ ನೆನಪಿಗಾಗಿ ʻಇಟಗಿ ಕ್ಷೇತ್ರದಲ್ಲಿರುವ ಶ್ರೀ ರಾಮೇಶ್ವರ ದೇವಾಲಯʼವನ್ನು ನಿರ್ಮಿಸಿದ್ದ. ಜೊತೆಗೆ, ಅದಕ್ಕೊಂದು ಶಿಲಾಮಯ ನಂದಿಮಂಟಪ ನಿರ್ಮಿಸಿ, ಅದರ ಬಲಭಾಗದಲ್ಲಿ ಮಹಾಗಣಪತಿಯನ್ನು, ಎಡಭಾಗದಲ್ಲಿ ವೀರಭದ್ರನನ್ನು ಕೆತ್ತಿಸಿ, ಉತ್ತರಕ್ಕೆ ಮಾತೆ ಪಾರ್ವತಿಯ ಮಂದಿರವನ್ನು ಮತ್ತು ಹಿಂಭಾಗದಲ್ಲಿ ಮೂಲ ಪುರುಷ ವಿಠ್ಠಲ ದೇವರ ದೇವಾಲಯವನ್ನು ನಿರ್ಮಿಸಿದ್ದ ಎನ್ನುವುದು ಇತಿಹಾಸದ ದಾಖಲೆಗಳು ತಿಳಿಸುತ್ತವೆ. ಇದಕ್ಕೆ ಸಾಕ್ಷಿಯಾಗಿ, ದೇವಾಲಯದ ನವರಂಗದ ನೆಲಹಾಸಿನಲ್ಲಿ ಕನ್ನಡದ ಶಾಸನವೊಂದು ಕಂಡುಬರುತ್ತದೆ. ಆ ಶಾಸನದಲ್ಲಿ "ಘಂಟಪ್ಪ ನಾಯಕ ತಿಮ್ಮರಸನ ಸದಾಸೇವೆ" ಎಂಬುದನ್ನು ಕೆತ್ತಲಾಗಿದೆ. ಐಸೂರು ಮೂಲ ಸಂಸ್ಥಾನದ ಬಿಳಗಿಯ ಪ್ರಸಿದ್ಧ ದೊರೆ ʻಘಂಟೇಂದ್ರನ ಮಗʼ ʻತಿಮ್ಮರಸನʼ ಹೆಸರಿನಲ್ಲಿ ಶ್ರೀ ರಾಮೇಶ್ವರ ದೇವರಿಗೆ ನಿತ್ಯ ಸೇವೆ ನಡೆಯುವ ವ್ಯವಸ್ಥೆ ಮಾಡಲಾಗಿದೆ ಎನ್ನುವುದೇ ಆ ಸಾಲಿನ ತಾತ್ಪರ್ಯವಾಗಿದೆ. ಇನ್ನೂ ವಿಶೇಷವೆಂದರೆ, ʻನವರಂಗದಲ್ಲಿರುವ ಮುಖ್ಯ ದ್ವಾರದ ಮುಂದಿರುವ ಹಾಸುಗಲ್ಲೊಂದರ ಮೇಲೆ ನಮಸ್ಕಾರ ಭಂಗಿಯಲ್ಲಿರುವ ಭಕ್ತನ ರೇಖಾಚಿತ್ರವಿದ್ದು, ಅದರ ಪಕ್ಕದಲ್ಲಿ ಈ ಶಾಸನವಿದೆ. ಇದೆಲ್ಲವು ಭಕ್ತಿಭಾವದ ಸಂಕೇತದೊಂದಿಗೆ, ಇನ್ನೂ ಹಲವಾರು ಸಂಗತಿಗಳನ್ನು ಇಂದಿಗೂ ಮೌನವಾಗಿ ಹೇಳುತ್ತಿವೆ.
ಪುರಾಣ ಮತ್ತು ಐತಿಹಾಸಿಕ ಪ್ರಸಿದ್ಧಿಯ ʻಬಿಳಗಿ ಸೀಮಾ ದೇವಸ್ಥಾನʼವಾಗಿರುವ ʻಶ್ರೀ ಕ್ಷೇತ್ರ ಇಟಗಿಯ ಶ್ರೀ ರಾಮೇಶ್ವರ ದೇವಸ್ಥಾನವುʼ 6ನೇ ಶತಮಾನದಿಂದಲೇ ಇದ್ದರೂ, 14ನೇ ಶತಮಾನದ ಮಧ್ಯಭಾಗದಲದಿಂದ ಈ ಆಲಯವು ವ್ಯವಸ್ಥಿತ ಕ್ಷೇತ್ರದ ರೂಪಕ್ಕೆ ಬಂದಿದೆ ಎನ್ನಲಾಗುತ್ತದೆ. ಆ ಸಂದರ್ಭದಲ್ಲಿ ʻಅಗಸ್ತ್ಯ ಪರಂಪರೆಯ ವಾತುಲಾಗಮ ಅನುಸಾರʼ, ಆಗಮ ಶಾಸ್ತ್ರದ ವಿಧಿ-ವಿಧಾನದಂತೆ, ʻರಥೋತ್ಸವ ಸೇರಿದಂತೆ ಇತರ ವಿಶೇಷ ಪೂಜಾ ಪದ್ದತಿಗಳನ್ನು ನಡೆದುಕೊಂಡು ಬಂದವು. ಅಂದಿನಾರಭ್ಯ ಇಂದಿನವರೆಗೂ ʻನಿತ್ಯಪೂಜೆ, ತ್ರಿಕಾಲ ಬಲಿ, ಉತ್ಸವ ವಿಶೇಷಾದಿಗಳು ಅವಿಚ್ಛಿನ್ನವಾಗಿʼ ನಡೆದುಕೊಂಡು ಬಂದಿರುವುದರಿಂದ ʻಇಟಗಿ ಶ್ರೀ ಕ್ಷೇತ್ರವು ಮಾತೋಭಾರ ಕ್ಷೇತ್ರʼ ಎಂದು ಗುರುತಿಸಿಕೊಂಡಿದೆ.
ಈ ಪವಿತ್ರ ಶೈವ ಕ್ಷೇತ್ರದಲ್ಲಿ59 ವರ್ಷಗಳ ಹಿಂದೆ ʻಅಷ್ಟಬಂಧ ಮಹೋತ್ಸವʼ ಜರುಗಿತ್ತು. ಕೆಲವು ವರ್ಷಗಳ ಹಿಂದೆ ಪುನಃ ʻಅಷ್ಟಬಂಧ ಮಹೋತ್ಸವʼ ನಡೆಯಬೇಕಾಗಿತ್ತು. ಕಾರಣಾಂತರಗಳಿಂದ ಆಗದ ದೈವಕಾರ್ಯ, 60 ವರ್ಷ ತುಂಬುವೊಳಗೇ ಮಾಡಲೇಬೇಕಾದ ಅಗತ್ಯತೆಯಿಂದಾಗಿ, ಈಗ ʻಏಪ್ರಿಲ್ 3 ರಿಂದ 10 ದಿನಗಳ ಕಾಲ ವಿಧಿವತ್ತಾಗಿ ಅಷ್ಟಬಂಧ ಮಹೋತ್ಸವʼದ ಕಾರ್ಯಕ್ರಮ ನಡೆಯುತ್ತಿದೆ. ಈ ʻಶಿವಕಾರ್ಯದʼಲ್ಲಿ ನಾವೆಲ್ಲರೂ ಭಾಗಿಯಾಗಿ, ಶಿವಸಾನಿಧ್ಯವನ್ನು ಪಡೆಯೋಣ !
ಶ್ರೀನಾಥ್ ಜೋಶಿ ಸಿದ್ದರ.
9060188081
Publisher: ಕನ್ನಡ ನಾಡು | Kannada Naadu