ಕನ್ನಡ ನಾಡು | Kannada Naadu

ಆಡಿ ಕಲಿ-ಬರೆದು ಕಲಿ ಎಂಬ ಹಿರಿಯರ ಮಾತಿನ ಗುಟ್ಟನ್ನು ಮಕ್ಕಳಿಗೆ ಹೇಳಿದ ಕೆ.ವಿ.ಪ್ರಭಾಕರ್ 

25 Mar, 2025

ಮಂಗಳೂರು: ಮಕ್ಕಳು ಕೈಗೆ ಮೈಗೆ ಮಣ್ಣು ಮತ್ತಿಕೊಂಡು ಬಂದರೆ ಖುಷಿ ಪಡಿ, ಅದೇ ಮಕ್ಕಳ ಕೈಗೆ ಮೊಬೈಲ್ ಅಂಟಿಸಿಕೊಂಡರೆ ಭಯ ಪಡಿ ಎಂದು ಮುಖ್ಯಮಂತ್ರಿಗಳ ಮಾಧ್ಯಮ‌ಸಲಹೆಗಾರರಾದ ಕೆ.ವಿ.ಪ್ರಭಾಕರ್ ಪೋಷಕರಿಗೆ ತಿಳಿ ಹೇಳಿದರು.

ಬಾಲಭವನ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿವಿಧ ಸ್ಫರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಿ ಮಾತನಾಡಿದರು. 

ನಮ್ಮ ಹಿರಿಯರು ಆಡಿ ಕಲಿ-ಬರೆದು ಕಲಿ ಎಂದು ಯಾವಾಗ್ಲೂ ಹೇಳುತ್ತಿದ್ದರು. ಇದರ ಗುಟ್ಟು ಏನು ಗೊತ್ತಾ ? 

ನಮ್ಮ ಬೆರಳಿನ ತುದಿಗಳಿಗೂ ನಮ್ಮ ಮೆದುಳಿಗೂ ನೇರ ನೇರ ಕನೆಕ್ಷನ್ (ಸಂಪರ್ಕ) ಇದೆ. ನಮ್ಮ ದೇಹದ ನರಮಂಡಲ ಮೆದುಳಿನಿಂದ ಶುರುವಾಗಿ ಬೆರಳ ತುದಿಯಲ್ಲಿ ಕೊನೆಗೊಳ್ಳುತ್ತದೆ. ಹೀಗಾಗಿ ಬೆರಳ ತುದಿಗಳು ಹೆಚ್ಚು active ಆಗಿದ್ದಷ್ಟೂ ಮೆದುಳು ಹೆಚ್ಚೆಚ್ಚು active ಆಗುತ್ತದೆ.

ಮಕ್ಕಳ ಬೆರಳುಗಳು ಹೆಚ್ಚು active ಆಗುವುದು ಆಟದಲ್ಲಿ ಮತ್ತು ಬರೆಯುವುದರಲ್ಲಿ. ಶಾಲೆಗಳಲ್ಲೂ ಟೀಚರ್ ಗಳು ಮಕ್ಕಳಿಗೆ ಹೆಚ್ಚೆಚ್ಚು ಬರೆಸುತ್ತಾರೆ ಏಕೆಂದರೆ, ಬಾಯಿಪಾಠ ಮಾಡಿದ್ದು ಮರೆತು ಹೋಗುತ್ತದೆ. ಬರೆದು ಕಲಿತದ್ದು ನೇರ ಮೆದುಳಲ್ಲಿ ದಾಖಲಾಗಿ ಮರೆಯುವುದಿಲ್ಲ. ಹಾಗೆಯೇ ಮಕ್ಕಳು ಆಟ ಆಡುವಾಗಲೂ ಕೈ ಬೆರಳುಗಳು ಪೂರ್ತಿಯಾಗಿ active ಆಗುತ್ತಿರುತ್ತವೆ. ಇದರಿಂದ ಮೆದುಳು ಕೂಡ ಹೆಚ್ಚೆಚ್ಚು active ಆಗುತ್ತದೆ.

15 ವರ್ಷದ ಒಳಗೆ ಮಕ್ಕಳ ಮೆದುಳಿನ ಬೆಳವಣಿಗೆ ಬಹುತೇಕ ಮುಗಿದಿರುತ್ತದೆ. ಆದ್ದರಿಂದ 15 ವರ್ಷದ ಒಳಗೆ ಮಕ್ಕಳು ಏನನ್ನಾದರೂ ಕಲಿತು ಬಿಡುತ್ತಾರೆ. ಸಂಗೀತ, ನೃತ್ಯ, ಹಲವು ಭಾಷೆಗಳನ್ನು ಕಲಿಯಲು 15 ವರ್ಷದ ಒಳಗಿನ ಮಕ್ಕಳಲ್ಲಿ ಹೆಚ್ಚು ಸಾಮರ್ಥ್ಯ ಇರುತ್ತದೆ  ಎಂದರು. 

ಈಗಿನ ತಾಯಂದಿರು ಮಕ್ಕಳು ಕೈಗೆ ಮಣ್ಣು ಮೆತ್ತಿಕೊಂಡರೆ ರಟ್ಟೆ ಹಿಡಿದು ದರ ದರನೆ ಎಳೆದುಕೊಂಡು ಹೋಗಿ ಎರಡು ಭಾರಿಸಿ ರೂಮಲ್ಲಿ ಕೂಡಿ ಹಾಕ್ತಾರೆ. ಇದೇ ತಾಯಂದಿರು ಮಕ್ಕಳು ಮೊಬೈಲ್ ಹಿಡಿದು ಸೋಫಾದಲ್ಲಿ ಕುಳಿತಿದ್ದರೆ ಏನೂ ಹೇಳುವುದಿಲ್ಲ. ಇದು ತಪ್ಪು.

ಮಣ್ಣಿನ ಮಕ್ಕಳಾದಷ್ಟೂ ಅವರಲ್ಲಿ ಕ್ರಿಯಾಶೀಲತೆ ಬೆಳೆಯುತ್ತದೆ. ಮೊಬೈಲ್ ಮಕ್ಕಳಾದಷ್ಟೂ ವ್ಯಕ್ತಿತ್ವ ಕುಬ್ಜಗೊಳ್ಳುತ್ತದೆ. 

ಸಿಟಿಯ ಮೊಬೈಲ್ ಮಕ್ಕಳಿಗೆ ಹಾಲು ಎಲ್ಲಿಂದ ಬರುತ್ತೆ ಅಂತ ಕೇಳಿದರೆ ಮಿಲ್ಕ್ ಡೈರಿಯಿಂದ ಎನ್ನುತ್ತಾರೆ. ಹಳ್ಳಿ ಮಕ್ಕಳಿಗೆ ಕೇಳಿದರೆ ಎಮ್ಮೆ, ಹಸು, ಕುರಿ ಎನ್ನುತ್ತಾರೆ. ಬೆಂಗಳೂರಿನಲ್ಲಿ ನಡೆಯುವ ಎಲ್ಲಾ sports ಗಳಲ್ಲೇ ಇರಬಹುದು, ಎಲ್ಲಾ ಕಾಂಪಿಟಿಟೀವ್ ಪರೀಕ್ಷೆಗಳಲ್ಲೂ ಹಳ್ಳಿಗಳಿಂದ ಬರುವ ಮಣ್ಣಿನ ಮಕ್ಕಳೇ ಗೋಲ್ಡ್ ಮೆಡಲ್ ಪಡೆಯುತ್ತಿದ್ದಾರೆ. ಸಿಟಿಗಳ ಮೊಬೈಲ್ ಮಕ್ಕಳು ವಿಡಿಯೊ ಗೇಮ್ ಗಳ ಚಟ, ಡ್ರಗ್ಸ್ ಚಟ ಹತ್ತಿಸಿಕೊಳ್ಳುತ್ತಿದ್ದಾರೆ. 

ಮೊಬೈಲ್ ಚಟ ಮಕ್ಕಳಲ್ಲಿ ಐಷಾರಾಮಿ ವಸ್ತುಗಳ ಬಗ್ಗೆ ಮೋಹ ಹುಟ್ಟಿಸುತ್ತದೆ. ಮೊಬೈಲ್ ಮಕ್ಕಳ ಕೈಗೆ ಹೋದ ಕೂಡಲೇ ಮಕ್ಕಳು ನೋಡುವ ಎಲ್ಲಾ ವಿಡಿಯೊಗಳ ಹಿಂದಿಂದೆ ಮಕ್ಕಳ ಶೂ, ಬಟ್ಟೆ, ವಾಚು, ವಿಡಿಯೊ ಗೇಮ್ ಗಳ ಜಾಹಿರಾತುಗಳ ಪ್ರವಾಹವೇ ಬರುತ್ತದೆ. ಹೀಗಾಗಿ ಮಕ್ಕಳಿಗೆ ಬ್ರಾಂಡೆಡ್ ಕಂಪನಿಗಳ ಹೆಸರು ಗೊತ್ತಿರುತ್ತವೆ. ರಾಜ್ಯದ ಮುಖ್ಯಮಂತ್ರಿ ಯಾರು, ದೇಶದ ಪ್ರಧಾನ ಮಂತ್ರಿ ಯಾರು ಅಂತ ಕೇಳಿದರೆ ಗೊತ್ತಿರುವುದಿಲ್ಲ. ಇವೆಲ್ಲಾ ಮಣ್ಣಿನ ಮಕ್ಕಳಿಗೂ, ಮೊಬೈಲ್ ಮಕ್ಕಳಿಗೂ ಇರುವ ವ್ಯತ್ಯಾಸ ಎಂದು ವಿವರಿಸಿದರು. 

ಬಾಲ ಭವನದ ಅಧ್ಯಕ್ಷರಿಗೆ ಮತ್ತು ಸಿಬ್ಬಂದಿಗೆ ನಾನು ಅಭಿನಂದಿಸುತ್ತೇನೆ. ಆಟಗಳು ಮತ್ತು ಸಾಂಸ್ಕೃತಿಕ ಚಟುವಟಿಕೆಗಳ  ಮೂಲಕ ಮಕ್ಕಳನ್ನು ಹೆಚ್ಚೆಚ್ಚು ಕ್ರಿಯಾಶೀಲರನ್ನಾಗಿ ಮಾಡುವಲ್ಲಿ ಬಾಲ ಭವನ ಹೆಚ್ಚೆಚ್ಚು ಕೆಲಸ ಮಾಡುತ್ತಿದೆ. 

ಆಟ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಮಕ್ಕಳು ಕೂಡಿ ಬಾಳುವುದನ್ನು, ಜೊತೆಯಲ್ಲಿ ಬೆಳೆಯುವುದನ್ನು ಕಲಿತು ಹೆಚ್ಚೆಚ್ಚು ಸಮಾಜಮುಖಿ ಆಗುತ್ತಾರೆ. ಇಂತಹ ಚಟುವಟಿಕೆಗಳು ಹೆಚ್ಚೆಚ್ಚು ನಡೆಯಲಿ ಎಂದು ಅಶಿಸುತ್ತೇನೆ ಎಂದರು.

ರಾಜ್ಯ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್,  ಬಾಲ ಭವನದ ಅಧ್ಯಕ್ಷರಾದ ಬಿ.ಆರ್.ನಾಯ್ಡು, ತೆಂಗಿನ ನಾರು ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ನಟರಾಜ್ ಸೇರಿ ಹಲವು ಪ್ರಮುಖರು ವೇದಿಕೆಯಲ್ಲಿದ್ದರು.

ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ ವಿತರಣೆ

ಇದೇ ಸಂದರ್ಭದಲ್ಲಿ ಮಂಗಳೂರಿನ ಬಿಜೈ ಕಾಪಿಕ್ಕಾಡು ಅಂಗನವಾಡಿಯ ಮಕ್ಕಳಿಗೆ ಕೆ.ವಿ.ಪ್ರಭಾಕರ್ ಅವರು ಸಮವಸ್ತ್ರ ವಿತರಿಸಿದರು. ಕಳೆದ ವರ್ಷ ಇದೇ ಅಂಗನವಾಡಿಗೆ ಉಚಿತವಾಗಿ ವಾಟರ್ ಫಿಲ್ಟರ್ ನೀಡಿದ್ದನ್ನು ಸ್ಮರಿಸಬಹುದು.

ಪತ್ರಕರ್ತರ ಸಂಘದ ಗೌರವ ಸ್ವೀಕಾರ

ಬಾಲ ಭವನ ಕಾರ್ಯಕ್ರಮಕ್ಕೂ ಮುನ್ನ ದ.ಕ. ಜಿಲ್ಲಾ ಕಾರ್ಯನಿತರ ಪತ್ರಕರ್ತರ ಸಂಘ ಕೆ.ವಿ.ಪ್ರಭಾಕರ್ ಅವರಿಗೆ ಪ್ರೆಸ್ ಕ್ಲಬ್ ನಲ್ಲಿ ಗೌರವಿಸಿ, ಸನ್ಮಾನಿಸಿತು.

Publisher: ಕನ್ನಡ ನಾಡು | Kannada Naadu

Login to Give your comment
Powered by