ಕನ್ನಡ ನಾಡು | Kannada Naadu

ಗ್ರಾಮಠಾಣಗಳಲ್ಲಿ ನೀಲಿ ನಕ್ಷೆ ಪ್ರಕಾರ ಮನೆ ಕಟ್ಟಲು ಅವಕಾಶ – ಭೂ ಪರಿವರ್ತನೆಗೆ ಅವಕಾಶ ಇಲ್ಲ – ಕಂದಾಯ ಸಚಿವ ಕೃಷ್ಣಬೈರೇಗೌಡ

19 Mar, 2025

ಬೆಂಗಳೂರು : ಗ್ರಾಮಠಾಣ ಒಳಗಡೆ ನೀಲಿ ನಕ್ಷೆಯ ಪ್ರಕಾರ ಮನೆ ಕಟ್ಟಲು ಅವಕಾಶ ಇರುತ್ತದೆ. ಆದರೆ ಭೂ ಪರಿವರ್ತನೆಗೆ ಅವಕಾಶ ಇಲ್ಲ. ಒಂದು ವೇಳೆ ಕೃಷಿ ಭೂಮಿ (ಸರ್ವೆ ನಂ) ವ್ಯಾಪ್ತಿಯಲ್ಲಿದ್ದರೆ, ಭೂಪರಿವರ್ತನೆಗೆ ಅವಕಾಶ ಇರುತ್ತದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ತಿಳಿಸಿದರು.

ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ಜವರಾಯಿಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು  ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಗ್ರಾಮಠಾಣ ಹಾಗೂ ಊರುಗುಪ್ಪೆ ಸರ್ವೆ ನಂಬರ್ ಗಳಲ್ಲಿ ಮನೆ ಕಟ್ಟಿಕೊಂಡು ವಾಸ ಮಾಡುತ್ತಿರುವ ನಿವಾಸಿಗಳಿಗೆ ಸಂಬಂಧಿಸಿದ ಹಕ್ಕು ಪತ್ರ ನೀಡುವ ಬಗ್ಗೆ ಸಂಬಂಧಿಸಿದ ಗ್ರಾಮ ಪಂಚಾಯತಿಗಳಿಂದ ನಿಯಮಾನುಸಾರ ಕ್ರಮವಹಿಸಬಹುದಾಗಿರುತ್ತದೆ.

ಗ್ರಾಮಠಾಣ ಹಾಗೂ ಊರುಗುಪ್ಪೆ ಸರ್ವೆ ನಂಬರ್ ಗಳಲ್ಲಿ ಕಂದಾಯ ಇಲಾಖೆಗೆ ಸೇರಿದ ಸರ್ವೆ ನಂಬರ್ ಅಥವಾ ಜಮೀನುಗಳಿದ್ದಲ್ಲಿ ಕರ್ನಾಟಕ ಭೂಕಂದಾಯ ಕಾಯ್ದೆ 1964 ರ ಕಲಂ 94ಸಿ/94ಸಿಸಿ/94ಡಿ ರಂತೆ ಕ್ರಮವಹಿಸಲು ಅವಕಾಶ ಇರುತ್ತದೆ. ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ವಾಸದ ಮನೆಗಳನ್ನು ಸಕ್ರಮಗೊಳಿಸಲು ಕರ್ನಾಟಕ ಭೂಕಂದಾಯ ಕಾಯ್ದೆ 1964ರ ಕಲಂ 94ಸಿ ಮತ್ತು ಕಲಂ 94ಸಿಸಿ ರಡಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅದರಂತೆ ಸ್ವೀಕರಿಸಿದ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ, ಅರ್ಹ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಲು ಅವಕಾಶವಿರುತ್ತದೆ.

ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿನ ನಿವೇಶನಗಳು ಮತ್ತು ಕಟ್ಟಡಗಳನ್ನು ಕ್ರಮಬದ್ಧವಲ್ಲದ (ಸರ್ಕಾರಿ/ಸ್ಥಳೀಯ ಸಂಸ್ಥೆ/ಶಾಸನಬದ್ಧ ಸಂಸ್ಥೆ/ಅರಣ್ಯ ಭೂಮಿಯನ್ನು ಹೊರತುಪಡಿಸಿ) ತೆರಿಗೆ ವ್ಯಾಪ್ತಿಗೆ ಒಳಪಡಿಸಲು ಪ್ರತ್ಯೇಕ ವಹಿಯಲ್ಲಿ ದಾಖಲಿಸಲು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ಕ್ಕೆ ತಿದ್ದುಪಡಿ ತರಲಾಗುತ್ತಿದೆ. ಅಧಿನಿಯಮಕ್ಕೆ ತರಲಾಗುವ ತಿದ್ದುಪಡಿಯನ್ವಯ, ನಿಯಮಗಳನ್ನು ರೂಪಿಸಿ ದಿನಾಂಕ: 14.06.2013 ಮೊದಲು ಹಾಗೂ ನಂತರ ನೋಂದಣಿಯಾದ ಎಲ್ಲಾ ನಿವೇಶನಗಳು ಮತ್ತು ಕಟ್ಟಡಗಳಿಗೆ ಅಭಿಯಾನದ ಮಾದರಿಯಲ್ಲಿ ಇ-ಸ್ವತ್ತು ತಂತ್ರಾಂಶದ ಮೂಲಕ ಖಾತೆ ನೀಡಲು ಕ್ರಮ ಕೈಗೊಳ್ಳಲಾಗುವುದು.

ಗ್ರಾಮಠಾಣಗಳಿಗೆ, ಊರುಗುಪ್ಪೆ ಸರ್ವೆ ನಂಬರ್ ನಲ್ಲಿರುವ ಸ್ವತ್ತು ಪಹಣಿಯಲ್ಲಿ ಗ್ರಾಮಸ್ಥರು ಎಂದು ಬರುತ್ತಿದ್ದಲ್ಲಿ ಪುನಃ ಪಹಣಿಯಲ್ಲಿ ತರುವ ಅವಶ್ಯಕತೆ ಕಂಡು ಬರುವುದಿಲ್ಲ. ಇಂತಹ ಪಹಣಿಗಳಲ್ಲಿ ಗ್ರಾಮಸ್ಥರು ಎಂದು ಪಹಣಿ ಕಾಲಂ 9 ಅಥವಾ 11 ರಲ್ಲಿ ನಮೂದಾಗಿರುವುದರಿಂದ ಹಾಗೂ ಖಾಸಗಿ ಖಾತೆದಾರರ ಹೆಸರು ನಮೂದಿರುವುದಿಲ್ಲವಾದ್ದರಿಂದ ಕರ್ನಾಟಕ ಭೂಕಂದಾಯ ಕಾಯ್ದೆ 1964 ರಡಿ ಭೂಪರಿವರ್ತನೆ ಮಾಡಲು ಸಾಧ್ಯವಿರುವುದಿಲ್ಲ. ಪ್ರಸ್ತುತ ಪಹಣಿಯಲ್ಲಿ ಮಾಲೀಕರ ಹೆಸರು ನಮೂದಿದ್ದಲ್ಲಿ ಮಾತ್ರ ಭೂ ಪರಿವರ್ತನೆಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

ಕೃಷಿ ಜಮೀನನ್ನು ವ್ಯವಸಾಯೇತರ ಉದ್ದೇಶಕ್ಕೆ ಭೂ ಪರಿವರ್ತಿಸಲು ಕರ್ನಾಟಕ ಭೂಕಂದಾಯ ಕಾಯ್ದೆ 1964ರ ಕಲಂ 95(2) ರಡಿ ಅವಕಾಶ ಕಲ್ಪಿಸಲಾಗಿದೆ.ಗ್ರಾಮಠಾಣ, ಊರುಗುಪ್ಪೆ ಸ.ನಂ ನಲ್ಲಿರುವ ಸ್ವತ್ತು, ಆರ್ ಟಿ ಸಿ ನಲ್ಲಿ ಗ್ರಾಮಸ್ಥರು ಎಂದು ದಾಖಲಿರುವ ಸ್ವತ್ತುಗಳಿಗೆ ಭೂಪರಿವರ್ತಿಸಲು ಕಾಯ್ದೆಗಳಡಿ ಅವಕಾಶ ಇರುವುದಿಲ್ಲ ಎಂದು ತಿಳಿಸಿದರು. 

Publisher: ಕನ್ನಡ ನಾಡು | Kannada Naadu

Login to Give your comment
Powered by