ಬೆಂಗಳೂರು : ತಿರುಮಲ ಕರ್ನಾಟಕ ರಾಜ್ಯ ಛತ್ರದ ನವೀಕರಣ ಪೂರ್ಣಗೊಂಡಿದೆ. ಉತ್ತರ ಪ್ರದೇಶದ ಕಾಶಿ / ವಾರಣಾಸಿಯ ಕಟ್ಟಡ ಕಾಮಗಾರಿಯನ್ನು ಶೀಘ್ರದಲ್ಲಿಯೇ ಕೈಗೊಳ್ಳಲಾಗುವುದು ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ತಿಳಿಸಿದರು.
ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ಟಿ.ಎ. ಶರವಣ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಆಂಧ್ರಪ್ರದೇಶ ಮತ್ತು ತಿರುಪತಿಯಲ್ಲಿರುವ ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯಲ್ಲಿರುವ ಕರ್ನಾಟಕ ರಾಜ್ಯ ಛತ್ರದ ಜಾಗದ ವಿಸ್ತೀರ್ಣವು ವಾರಣಾಸಿ 1576 ಚ.ಮೀ. (ಸ್ವಂತ), ತಿರುಮಲ 7ಎಕರೆ 05 ಸೆಂಟ್ (ಗುತ್ತಿಗೆ) ತಿರುಚಾನೂರು 17 ಸೆಂಟ್ಸ್ (ಸ್ವಂತ) ಮತ್ತು ತಿರುಪತಿ 46 1/2 ಸೆಂಟ್ಸ್ (ಸ್ವಂತ) ಇರುತ್ತದೆ. ತಿರುಮಲ ಕರ್ನಾಟಕ ರಾಜ್ಯ ಛತ್ರದಲ್ಲಿ ಕೈಗೊಳ್ಳಲಾಗುತ್ತಿರುವ ಸಮಗ್ರ ಅಭಿವೃದ್ಧಿ ಯೋಜನೆಯ ಕಾಮಗಾರಿಗಳಲ್ಲಿ ಹಳೇಬೀಡು ಬ್ಲಾಕ್ (ಕೆ.ಪಿ.ಎಸ್) ಕಟ್ಟಡದ ನವೀಕರಣ, ಹಂಪಿ ಮತ್ತು ಐಹೊಳೆ ಬ್ಲಾಕ್ ಕಟ್ಟಡದ ಕಾಮಗಾರಿಗಳು 2024-25 ಸಾಲಿನಲ್ಲಿ ಮುಕ್ತಾಯಗೊಂಡಿದ್ದು ಯಾತ್ರಾರ್ಥಿಗಳಿಗೆ ಆಫ್ಲೈನ್ ಮತ್ತು ಆನ್ಲೈನ್ ಮೂಲಕ ಕೊಠಡಿಗಳನ್ನು ಮಾಡಲಾಗುತ್ತಿದೆ. ಉಳಿದಂತೆ ಕೃಷ್ಣದೇವರಾಯ ವಿ.ವಿ.ಐ.ಪಿ ಬ್ಲಾಕ್ ಮತ್ತು ಶ್ರೀ ಕೃಷ್ಣ ರಾಜೇಂದ್ರ ಒಡೆಯರ್ ಕಲ್ಯಾಣ ಮಂಟಪ ಕಟ್ಟಡದ ಕಾಮಗಾರಿಗಳು ಅಂತಿಮ ಹಂತದಲ್ಲಿದ್ದು ಸದರಿ ಕಟ್ಟಡಗಳಿಂದ ಪ್ರಸಕ್ತ ಸಾಲಿನಿಂದ ಹೆಚ್ಚಿನ ಆದಾಯವನ್ನು ನಿರೀಕ್ಷಿಸಲಾಗುತ್ತಿದೆ.
ಪ್ರಸ್ತುತ ತಿರುಮಲ ಕರ್ನಾಟಕ ರಾಜ್ಯ ಛತ್ರದಲ್ಲಿ ಹೊಸದಾಗಿ ನವೀಕರಿಸಿರುವ ಹಳೇಬೀಡು (ಕೆಪಿಎಸ್) ಮತ್ತು ಹೊಸದಾಗಿ ನಿರ್ಮಾಣವಾಗಿರುವ ಹಂಪಿ ಮತ್ತು ಐಹೊಳೆ ಕಟ್ಟಡಗಳ ಸ್ವಚ್ಛತಾ ನಿರ್ವಹಣೆಯನ್ನು ಇ-ಟೆಂಡರ್ ಮೂಲಕ M/S Xeon Systems, Bengaluru, ಸಂಸ್ಥೆಯವರಿಗೆ ವಹಿಸಲಾಗಿರುತ್ತದೆ. ತಿರುಮಲ ಕರ್ನಾಟಕ ರಾಜ್ಯ ಛತ್ರದ ಆವರಣದಲ್ಲಿ ಸಮಗ್ರ ಅಭಿವೃದ್ಧಿ ಯೋಜನೆಯ ಕಾಮಗಾರಿಗಳನ್ನು ಕೈಗೊಂಡಿರುವ - ಹಿನ್ನೆಲೆಯಲ್ಲಿ ಛತ್ರದ ದೈನಂದಿನ ನಿರ್ವಹಣೆಯ ವೆಚ್ಚಗಳಿಗಾಗಿ 2022-23ನೇ ಸಾಲಿನಿಂದ ಇಲ್ಲಿಯವರೆಗೆ ಸರ್ಕಾರದಿಂದ 400 ಲಕ್ಷಗಳ ಅನುದಾನ ಬಿಡುಗಡೆ ಮಾಡಲಾಗಿದೆ.
ವಾರಣಾಸಿ ಕರ್ನಾಟಕ ರಾಜ್ಯ ಛತ್ರದಲ್ಲಿ 04 ಮಂದಿ ಮತ್ತು ತಿರುಮಲದ ಕರ್ನಾಟಕ ರಾಜ್ಯ ಛತ್ರದಲ್ಲಿ 51 ಮಂದಿ ಅಧಿಕಾರಿ/ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಎಲ್ಲಾ ಸಿಬ್ಬಂದಿಗಳಿಗೆ ಸಮವಸ್ತ್ರ ಧರಿಸುವಂತೆ ಸೂಚಿಸಲಾಗುವುದು. ಎಂದು ತಿಳಿಸಿದರು.
ಉತ್ತರ ಪ್ರದೇಶದ ಕಾಶಿ/ವಾರಣಾಸಿಯಲ್ಲಿ 1928ನೇ ಸಾಲಿನಲ್ಲಿ ಮೈಸೂರು ಮಹಾರಾಜರ ಕಾಲದಲ್ಲಿ ನಿರ್ಮಿಸಿರುವ ಹಳೇ ಕಟ್ಟಡ ಮತ್ತು 2002ರಲ್ಲಿ ನಿರ್ಮಿಸಿರುವ ಕಟ್ಟಡಗಳಿದ್ದು, ಸದರಿ ಕಟ್ಟಡಗಳ ಪೈಕಿ ಹಳೆಯ ಕಟ್ಟಡವು ಭಾಗಶಃ ಕುಸಿದಿರುವ ಹಿನ್ನೆಲೆಯಲ್ಲಿ ಯಾತ್ರಾರ್ಥಿಗಳ ಹಿತದೃಷ್ಟಿಯಿಂದ ಎರಡು ಕಟ್ಟಡದಲ್ಲಿನ ಕೊಠಡಿಗಳ ಹಂಚಿಕೆಯನ್ನು ದಿನಾಂಕ: 21.09.2024 ರಿಂದ ಸ್ಥಗಿತಗೊಳಿಸಲಾಗಿರುತ್ತದೆ.
2024ನೇ ಅಕ್ಟೋಬರ್ 29 ರಂದು ಮಾನ್ಯ ಧಾರ್ಮಿಕ ದತ್ತಿ ಹಾಗೂ ಸಾರಿಗೆ ಸಚಿವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ತಾಂತ್ರಿಕ ತಂಡವು ಕರ್ನಾಟಕ ರಾಜ್ಯ ಛತ್ರದ ಹಳೆಯ ಕಟ್ಟಡದ ಸಂಪೂರ್ಣ ಭಾಗ ಶಿತಿಥಿಲಗೊಂಡಿದ್ದು ಕಟ್ಟಡದ ಬಹುಭಾಗಗಳಲ್ಲಿ ಬಿರುಕು ಬಂದಿದ್ದು ಸದರಿ ಕಟ್ಟಡವನ್ನು 1928 ರಲ್ಲಿ ನಿರ್ಮಿಸಲಾಗಿದ್ದು ಸದರಿ ಕಟ್ಟಡವು ಸಾಮರ್ಥ್ಯ ಕಳೆದು ಕೊಂಡಿರುವುದರಿಂದ ಕುಸಿದು ಬೀಳುವ ಸಾಧ್ಯತೆ ಇದ್ದು ಸದರಿ ಸ್ಥಳದಲ್ಲಿ ಹೊಸ ಕಟ್ಟಡವನ್ನು ನಿರ್ಮಿಸುವುದು ಸೂಕ್ತವೆಂದು ಲೋಕೋಪಯೋಗಿ ಇಲಾಖೆಯವರು ಅಭಿಪ್ರಾಯಪಟ್ಟಿದ್ದು ಈ ಬಗ್ಗೆ ಸಭೆಯಲ್ಲಿ ಮಾನ್ಯ ಸಚಿವರು ಸೂಚಿಸಿರುವಂತೆ ವಾರಣಾಸಿಯಲ್ಲಿರುವ ಕರ್ನಾಟಕ ರಾಜ್ಯ ಅತಿಥಿ ಗೃಹದ ಬಿದ್ದು ಹೋಗಿರುವ ತಡೆಗೋಡೆ ಮತ್ತು ಹಳೆಯ ಕಟ್ಟಡವನ್ನು ತೆರವುಗೊಳಿಸಿ ಹೊಸದಾಗಿ ಅತಿಥಿ ಗೃಹ ನಿರ್ಮಿಸಲು ಕ್ರಮ ಕೈಗೊಳ್ಳುವಂತೆ ತೀರ್ಮಾನಿಸಲಾಗಿರುತ್ತದೆ.
ಅದರಂತೆ, ಮುಖ್ಯ ವಾಸ್ತು ಶಿಲ್ಪಿಗಳು ಮತ್ತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳೊಂದಿಗೆ ಸದರಿ ಸ್ಥಳ ಪರಿವೀಕ್ಷಣೆ ಮಾಡಿ ಸದರಿ ಕಟ್ಟಡದ ಸಂಪೂರ್ಣ ನಕ್ಷೆ ತಯಾರಿಸಿ ಕೊಡುವಂತೆ ಮುಖ್ಯ ವಾಸ್ತು ಶಿಲ್ಪಿ ರವರಿಗೆ ಸೂಚಿಸಲಾಗಿತ್ತು. ಕಾರ್ಯಪಾಲಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ ಕಟ್ಟಡಗಳ ವಿಭಾಗ -1, ಬೆಂಗಳೂರು ಇವರು ಸದರಿ ಸ್ಥಳದ ಮಣ್ಣು ಪರೀಕ್ಷೆಗಳನ್ನು ಮಾಡಿಸಿ ವಿನ್ಯಾಸ ನಕ್ಷೆಗಳಂತೆ ತಡೆಗೋಡೆ ನಿರ್ಮಿಸುವ ಕಾಮಗಾರಿಗೆ ಮೊತ್ತ ರೂ.1850.00ಲಕ್ಷಗಳ ಅಂದಾಜು ಪಟ್ಟಿಯನ್ನು ತಯಾರಿಸಿದ್ದು, 2025-26 ನೇ ಸಾಲಿನ ಆಯವ್ಯಯದ ಕ್ರಿಯಾ ಯೋಜನೆಯಲ್ಲಿ ಪರಿಗಣಿಸಲು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದರು.
ಕಾಶಿ ಮತ್ತು ತಿರುಮಲ ಕರ್ನಾಟಕ ರಾಜ್ಯ ಛತ್ರ/ಕರ್ನಾಟಕ ಭವನಗಳ ನಿರ್ವಹಣೆಯನ್ನು ಧಾರ್ಮಿಕ ದತ್ತಿ ಇಲಾಖೆಯಿಂದ ನಿರ್ವಹಿಸಲಾಗುತ್ತಿದೆ. ವಾರಣಾಸಿ ಕರ್ನಾಟಕ ರಾಜ್ಯ ಛತ್ರದ ನಿರ್ವಹಣೆಯ ವೆಚ್ಚವನ್ನು ರಾಜ್ಯ ಛತ್ರದ ಆದಾಯದಿಂದ ಭರಿಸಲಾಗುತ್ತಿದೆ ಎಂದು ತಿಳಿಸಿದರು.
Publisher: ಕನ್ನಡ ನಾಡು | Kannada Naadu