ಕನ್ನಡ ನಾಡು | Kannada Naadu

ಅಂದಿನ ಕಾನೂನುಗಳು ಅಂದಿನ ದಿನಕ್ಕೆ ಅನ್ವಯ -  ಇಂದಿನ ಕಾನೂಗಳು ಅಂದಿನ ದಿನಕ್ಕೆ ಅನ್ವಯವಾಗುವುದಿಲ್ಲ ನೈಜತೆಯಿಂದ ಕೂಡಿರುವ ಜಮೀನುಗಳಿಗೆ ಖಾತೆ ನೀಡಲು ಅಗತ್ಯ ಕ್ರಮ ವಹಿಸಲಾಗುವುದು – ಸಚಿವ ಕೃಷ್ಣಬೈರೇಗೌಡ.

19 Mar, 2025

 

ಬೆಂಗಳೂರು : ನೈಜತೆಯಿಂದ ಕೂಡಿರುವ ಜಮೀನುಗಳಿಗೆ ಖಾತೆಗಳನ್ನು ನೀಡಲು ಅಗತ್ಯ ಕ್ರಮ ವಹಿಸಲಾಗುವುದು. ಅಂದಿನ ಕಾನೂನುಗಳು ಅಂದಿನ ದಿನಕ್ಕೆ ಅನ್ವಯವಾಗಲಿದೆ. ಇಂದಿನ ಕಾನೂನುಗಳು ಈ ಹಿಂದಿನ ದಿನಗಳ ಕಾನೂನುಗಳಿಗೆ ಅನ್ವಯವಾಗುವುದಿಲ್ಲ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ತಿಳಿಸಿದರು. 

ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ಡಾ. ಯತೀಂದ್ರ ಎಸ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯ ನಡವಳಿ, ಸಾಗುವಳಿ ಚೀಟಿ ವಿತರಣಾ ವಹಿ, ಕಿಮ್ಮತ್ತು ಪಾವತಿಸಿರುವ ವಹಿ ಇತ್ಯಾದಿಗಳಲ್ಲಿ ಮೂಲ ಮಂಜೂರಿದಾರರ ಹೆಸರು, ಜಮೀನಿನ ವರ್ಗದ ಬಗ್ಗೆ, ಅರಣ್ಯ ಜಮೀನಿನ ಬಗ್ಗೆ ಪರಿಶೀಲಿಸಿಕೊಂಡು, ನಕಲಿ ಸಾಗುವಳಿ ಚೀಟಿಗಳು ಇದ್ದಲ್ಲಿ ಮೂಲ ಮಂಜೂರಾತಿ ಕಡತಗಳನ್ನು ಪಡೆದು ನೈಜತೆಯನ್ನು ಪರಿಶೀಲಿಸಿ ಖಚಿತಪಡಿಸಿಕೊಂಡು ಕ್ರಮವಹಿಸಲಾಗುತ್ತಿದೆ. 

ಕೆಲವು ಮಂಜೂರಾದ ಪ್ರಕರಣಗಳು ನೈಜತೆಯಿಂದ ಕೂಡಿದ್ದು, ಪ್ರಸ್ತಾಪಿತ ಮಂಜೂರಾದ ಪ್ರದೇಶದಲ್ಲಿ ಈಗಾಗಲೇ ಅಧಿಸೂಚಿತ ಪರಿಭಾವಿತ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಇದ್ದಲ್ಲಿ ಅರಣ್ಯ ಇಲಾಖೆಯಿಂದ ನಿರಾಕ್ಷೇಪಣಾ ಪತ್ರವನ್ನು ಪಡೆದು ಖಾತೆ ಮಾಡಲಾಗುತ್ತಿದೆ. ಮಂಜೂರಾದ ಮೂಲ ಸರ್ವೆ ನಂಬರಿನ ಪಹಣಿಯ ಅಂಕಣ 9 ರಲ್ಲಿ ಶೂನ್ಯ ವಿಸ್ತೀರ್ಣ ನಮೂದಿದ್ದಲ್ಲಿ ಆಕಾರ್‌ ಬಂದ್ ವಿಸ್ತೀರ್ಣವನ್ನು ಪಹಣಿಯಲ್ಲಿ ಸರಿಪಡಿಸಿ ಖಾತೆ ಮಾಡಲಾಗುತ್ತಿದೆ. ಸಮಿತಿಯ ಸ್ಥಿರೀಕರಣಕ್ಕಾಗಿ ಇರುವ  ಪಕರಣಗಳನ್ನು ಸಮಿತಿಯ ಮುಂದೆ ಮಂಡಿಸಿ ಸ್ಥಿರೀಕರಿಸಿದ ನಂತರ ಖಾತೆಯನ್ನು ಮಾಡಲು ಕ್ರಮವಹಿಸಲಾಗುತ್ತಿದೆ. ಸರ್ಕಾರದ ಸುತ್ತೋಲೆ ಸಂ. ಕಂಇ 33 ಟಿ.ಆರ್.ಎಂ. 2019 (ಇ), ದಿನಾಂಕ 17-10-2020 ರಲ್ಲಿ ಮಂಜೂರಿದಾರರು ಪೌತಿಯಾಗಿದ್ದಲ್ಲಿ ಖಾತೆಯನ್ನು ನೀಡಲಾಗಿದೆ.  ಪೌತಿ ಖಾತೆಯನ್ನು ಮಾಡಲು ಮಾರ್ಗಸೂಚಿಗಳನ್ನು ಸಹ ನೀಡಲಾಗಿದೆ ಎಂದು ತಿಳಿಸಿದರು.

Publisher: ಕನ್ನಡ ನಾಡು | Kannada Naadu

Login to Give your comment
Powered by