ಕನ್ನಡ ನಾಡು | Kannada Naadu

ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ ಉರಗಡೂರು ಗ್ರಾಮದ ರೈತರಿಗೆ ಮಾನವೀಯತೆ ಆಧಾರದಡಿ ಪರಿಹಾರವಾಗಿ ಸಾಮಾನ್ಯ ದರದಲ್ಲಿ ನಿವೇಶನ ನೀಡಲು ಕ್ರಮ

18 Mar, 2025

 

ಬೆಂಗಳೂರು : ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ವಸತಿ ಬಡಾವಣೆ ರಚಿಸಲು ಉರಗಡೂರು ಗ್ರಾಮದಲ್ಲಿ ಒಟ್ಟು 60 ಎಕರೆ 30 ಗುಂಟೆ ಪ್ರದೇಶವನ್ನು 1985ರಲ್ಲಿ ಭೂ ಸ್ವಾಧೀನಪಡಿಸಿಕೊಳ್ಳಲಾಗಿದೆ. ವಶ ಪಡಿಸಿಕೊಳ್ಳಲಾದ ಜಮೀನಿಗೆ ಆಗಲೇ ಅಂದಿನ ದರದಂತೆ ಪರಿಹಾರವನ್ನು ನೀಡಲಾಗಿದೆ. ಸದರಿ ಭೂ ಮಾಲಿಕರಿಗೆ ವಸತಿ ಯೋಜನೆಗೆ ನೀಡಲಾದ ಭೂ ಪರಿಹಾರದ ಜೊತೆಗೆ ನಿವೇಶನಗಳನ್ನು ನೀಡಲು ಕರ್ನಾಟಕ ನಗರಾಭಿವೃದ್ಧಿಗಳ ಕಾಯ್ದೆ 1987ರನ್ವಯ ಅವಕಾಶ ಇಲ್ಲದ ಕಾರಣ ಪರಿಹಾರದ ರೂಪದಲ್ಲಿ ಪ್ರಾಧಿಕಾರದಿಂದ ಯಾವುದೇ ನಿವೇಶನಗಳನ್ನು ನೀಡಿರುವುದಿಲ್ಲ.

ಆದರೂ ಸರ್ಕಾರವು ಈ ಬಗ್ಗೆ ಪರಿಶೀಲಸಿ ಮಾನವೀಯತೆಯ ಆಧಾರದಡಿ ಪರಿಗಣಿಸಿ ಸರ್ಕಾರದ ಆದೇಶ ಸಂ. ನಇ 345 ಬೆಂರೂಪ್ರಾ 2015 ದಿನಾಂಕ: 20-03-2018ರಲ್ಲಿ ಸದರಿ ಜಮೀನುಗಳ ಭೂ ಮಾಲಿಕರಿಗೆ ಹೆಚ್ಚುವರಿ ಪರಿಹಾರವನ್ನಾಗಿ ಪ್ರತಿ ಎಕರೆಗೆ 40x60 ಅಡಿ ಅಳತೆಯ ಒಂದು ನಿವೇಶನವನ್ನು ಸಾಮಾನ್ಯ ಜನರಿಗೆ ಹಂಚಿಕೆ ಮಾಡುವ ದರದಲ್ಲಿ ಹಂಚಿಕೆ ಮಾಡಲು ಆದೇಶಿಸಲಾಗಿರುತ್ತದೆ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರಾದ ಬಿ.ಎಸ್. ಸುರೇಶ್ ಅವರು ತಿಳಿಸಿದರು.

ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ವಿಧಾನ ಪರಿಷತ್ ಸದಸ್ಯೆ ಬಲ್ಕಿಸ್ ಬಾನು ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಉರಗಡೂರು ಗ್ರಾಮದ ಸರ್ವೆ ನಂ. 340ರಿಂದ 357ರ ವರೆಗಿನ ಜಮೀನಿನ ಭೂ ಮಾಲೀಕರುಗಳಿಗೆ ತರಿ ಒಂದು ಎಕರೆಗೆ ರೂ. 19,753 ಖುಷ್ಕಿ ಒಂದು ಎಕರೆಗೆ ರೂ 12,325 ರಂತೆ ಪರಿಹಾರ ಮೊತ್ತವಾಗಿ ಒಟ್ಟು ರೂ 20,69,159.00 ಗಳನ್ನು ನಿಗದಿಪಡಿಸಲಾಗಿದ್ದು, ಭೂ ಪರಿಹಾರ ಮೊತ್ತವನ್ನು ಭೂ ಮಾಲಿಕರು ಪಡೆಯದ ಕಾರಣ ಮಾನ್ಯ ಘನ ನ್ಯಾಯಾಲಯಕ್ಕೆ ಜಮ ಮಾಡಲಾಗಿರುತ್ತದೆ. ಸದರಿ ಪರಿಹಾರವನ್ನು 1995ನೇ ಸಾಲಿನ ಉಪನೋಂದಣಾಧಿಕಾರಿಗಳ ದರಕ್ಕೆ ಅನುಗುಣವಾಗಿ ನಿಗದಿಪಡಿಸಲಾಗಿದೆ. ಆದ್ದರಿಂದ ಕಾಮಗಾರಿ ಪ್ರಾರಂಭವಾದ ದಿನಾಂಕದಿಂದ ದರ ನಿಗದಿಪಡಿಸಲು ಅವಕಾಶ ಇರುವುದಿಲ್ಲ ಎಂದು ತಿಳಿಸಿದರು.  

Publisher: ಕನ್ನಡ ನಾಡು | Kannada Naadu

Login to Give your comment
Powered by