ಕನ್ನಡ ನಾಡು | Kannada Naadu

ಭೂ ಮಾಲೀಕರುಗಳಿಗೆ ಪರಿಹಾರ ವಿತರಿಸಲು ಕ್ರಮ- ಸಚಿವ ಎಂ.ಬಿ.ಪಾಟೀಲ್

14 Mar, 2025

 

ಬೆಂಗಳೂರು : ನೆಲಮಂಗಲ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ನೆಲಮಂಗಲ ತಾಲ್ಲೂಕಿನಾದ್ಯಂತ ಕೆ.ಐ.ಎ.ಡಿ.ಬಿ ಹಾಗೂ ವಿವಿಧ ಸರ್ಕಾರದ ಯೋಜನೆಗಳಿಗಾಗಿ ರೈತರ ಜಮೀನುಗಳನ್ನು ಭೂಸ್ವಾಧೀನ ಪಡಿಸಿಕೊಂಡಿದ್ದು, ಭೂ ಮಾಲೀಕರುಗಳಿಗೆ ಪರಿಹಾರ ವಿತರಿಸಲು ಅಗತ್ಯ ಕ್ರಮ ವಹಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ  ಕೈಗಾರಿಕಾ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು.

ಇಂದು ವಿಧಾನಸಭೆಯ ಕಲಾಪದ ವೇಳೆ ಸದಸ್ಯ ಎನ್ ಶ್ರೀನಿವಾಸ್ ಅವರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ, ನೆಲಮಂಗಲ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ನೆಲಮಂಗಲ ತಾಲ್ಲೂಕಿನಾದ್ಯಂತ ಕೆ.ಐ.ಎ.ಡಿ.ಬಿ ಹಾಗೂ ವಿವಿಧ ಸರ್ಕಾರದ ಯೋಜನೆಗಳಿಗಾಗಿ ರೈತರ ಜಮೀನುಗಳನ್ನು ಭೂಸ್ವಾಧೀನ ಪಡಿಸಿಕೊಂಡಿದ್ದು, ಅದರಲ್ಲಿ ಸರ್ಕಾರಿ ಗೋಮಾಳ ಜಮೀನುಗಳಲ್ಲಿ ಭೂ ರಹಿತ ರೈತರು ನಮೂನೆ-59, ನಮೂನೆ-57 ಅರ್ಜಿ ಸಲ್ಲಿಸಿಕೊಂಡು ಸುಮಾರು 30-40 ವರ್ಷಗಳಿಂದ ಉಳುಮೆ ಮಾಡಿಕೊಂಡು ಜೀವನ ನಡೆಸುತ್ತಿರುತ್ತಾರೆ. ಅವರ ಅರ್ಜಿಗಳು ಭೂ-ಮಂಜೂರಾತಿ ಸಮಿತಿಯ ಮುಂದೆ ಬಾಕಿಯಿದ್ದು, ಅಂತಹ ರೈತರ ಜಮೀನುಗಳನ್ನು ಸಹ ಈ ಕೆ.ಐ.ಎ.ಡಿ.ಬಿ ಹಾಗೂ ವಿವಿಧ ಸರ್ಕಾರದ ಯೋಜನೆಗಳಿಗಾಗಿ ಭೂ-ಸ್ವಾಧೀನಪಡಿಸಿಕೊಂಡಿರುವ ಕಾರಣ ಅವರಿಗೆ ಯಾವುದೇ ಪರಿಹಾರ ಕೊಡದೇ ಅವರನ್ನು ಅಂತಹ ಉಳುಮೆ ಮಾಡಿಕೊಂಡಿರುವ ಜಮೀನುಗಳಿಂದ ಒಕ್ಕಲೆಬ್ಬಸುತ್ತಿರುವ ಕುರಿತು ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಗಮನ ಸೆಳೆದರು.
 
ಈ ಸಂದರ್ಭದಲ್ಲಿ ಉತ್ತರಿಸಿದ ಸಚಿವರು, ಭೂ ಸ್ವಾಧೀನಪಡಿಸಿ ಜಮೀನುಗಳಿಗೆ ಭೂ ಮಾಲೀಕರುಗಳು ತಮ್ಮ ಭೂಮಿಯ ಮೇಲಿನ ಹಕ್ಕಿಗೆ ಸಂಬಂಧಪಟ್ಟಂತೆ ಸೂಕ್ತ ದಾಖಲೆಗಳನ್ನು ಹಾಜರುಪಡಿಸಿದ್ದಲ್ಲಿ ನಿಯಮಾನುಸಾರ ಪರಿಹಾರ ವಿತರಣೆ ಕ್ರಮ ಕೈಗೊಳ್ಳಲಾಗುತ್ತದೆ. ಸ್ವಾಧೀನಪಡಿಸಿದ ಜಮೀನುಗಳ ಮೇಲೆ ಹಕ್ಕಿಗೆ ಸಂಬಂಧಪಟ್ಟಂತೆ ವ್ಯಾಜ್ಯಗಳಿದ್ದಲ್ಲಿ ಅಥವಾ ಭೂ ಸ್ವಾಧೀನವನ್ನು ಪ್ರಶ್ನಿಸಿ ಮಾನ್ಯ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಲ್ಲಿ, ಭೂ ಸ್ವಾಧೀನ ಪ್ರಕ್ರಿಯೆಯು ವಿಳಂಬವಾಗುವುದನ್ನು ತಡೆಯಲು ಹಾಗೂ ರಾಜ್ಯದ ಕೈಗಾರಿಕಾ ಬೆಳವಣಿಗೆ ಹಿತದೃಷ್ಠಿಯಿಂದ ಸಾಮಾನ್ಯ ಐತೀರ್ಪು ರಚಿಸಿ, ಐ ತೀರ್ಪು ಮೊತ್ತವನ್ನು ಸಂಬಂಧಪಟ್ಟ ನ್ಯಾಯಾಲಯಗಳಲ್ಲಿ ಠೇವಣಿಕರಿಸಲಾಗುವುದು.

ಸರ್ಕಾರಿ ಗೋಮಾಳ ಮತ್ತು ಇತರೆ ಜಮೀನುಗಳಲ್ಲಿ ಭೂ ಮಂಜೂರಾತಿ ಅಧಿನಿಯಮದಡಿ ನಮೂನೆ-53 ಹಾಗೂ ನಮೂನೆ 57ರಲ್ಲಿ ಅರ್ಜಿ ಸಲ್ಲಿಸಿ ಭೂ ಸಕ್ರಮಿಕರಣ ಸಮಿತಿಯು ಅರ್ಜಿದಾರರಿಗೆ ಭೂ ಮಂಜೂರಾತಿ ಮಾಡಿ ಸಾಗುವಳಿ ಚೀಟಿ ಮತ್ತು ಇತರೆ ದಾಖಲೆಗಳನ್ನು ನೀಡಿದ್ದಲ್ಲಿ ಹಾಗೂ ಸದರಿ ಮಂಜೂರಾತಿಗಳ ಬಗ್ಗೆ ನೈಜತೆಯನ್ನು ಸಂಬಂಧಪಟ್ಟ ಕಂದಾಯ ಅಧಿಕಾರಿಗಳಿಂದ ಪಡೆದು ಭೂ ಮಾಲೀಕರುಗಳಿಗೆ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

Publisher: ಕನ್ನಡ ನಾಡು | Kannada Naadu

Login to Give your comment
Powered by