ಬೆಂಗಳೂರು : ನಿರ್ಬಂಧಿತ ಪರಿಮಿತಿ ಅಂತರದೊಳಗಿನ ಭೂ ಮಂಜೂರಾತಿ ಅಧಿನಿಯಮಕ್ಕೆ ವಿನಾಯಿತಿ ಇಲ್ಲ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ತಿಳಿಸಿದರು.
ಇಂದು ವಿಧಾನಸಭೆಯ ಕಲಾಪದ ವೇಳೆ ಸದಸ್ಯ ಟಿ.ಡಿ.ರಾಜೇಗೌಡ ಅವರು, ಪಟ್ಟಣ ಪಂಚಾಯ್ತಿ ಮತ್ತು ಪುರಸಭೆ ವ್ಯಾಪ್ತಿಯ 3 ಕಿ.ಮೀ ವ್ಯಾಪ್ತಿಯ ಒಳಗಡೆ ಕಂದಾಯ ಭೂಮಿಯನ್ನು ಪಾರಂ.ನಂ 50, 53 ಮತ್ತು 57 ರೈತರ ಅರ್ಜಿಗಳನ್ನು ಸಕ್ರಮಗೊಳಿಸಬಾರದೆಂದು ಸರ್ಕಾರ ಈಗಾಗಲೇ ಆದೇಶ ಹೊರಡಿಸಿದೆ. ಚಿಕ್ಕಮಗಳೂರು ಜಿಲ್ಲೆಯ ಪಟ್ಟಣ ಪಂಚಾಯ್ತಿ ಮತ್ತು ಪುರಸಭೆ ವ್ಯಾಪ್ತಿಯ ಸಾವಿರಾರು ಅತೀ ಸಣ್ಣ ರೈತರು ತಲತಲಾಂತರದಿಂದ ಭೂಮಿಯನ್ನು ಸಾಗುವಳಿ ಮಾಡಿಕೊಂಡು ಬಂದಿದ್ದಾರೆ. ಇಂತಹ ಸ್ಥಿತಿಯಲ್ಲಿ ಸರ್ಕಾರ ಅಥವಾ ಕಂದಾಯ ಇಲಾಖೆ ರೈತರ ನೆರವಿಗೆ ಬರಬೇಕಾಗಿದೆ, ಇಂತಹ ಸಣ್ಣ ಹಿಡುವಳಿ ಬಿಟ್ಟರೆ ರೈತರಿಗೆ ಜೀವನಾಂಶಕ್ಕೆ ಯಾವುದೇ ಭೂಮಿ ಹಾಗೂ ಆದಾಯ ಇರುವುದಿಲ್ಲ, ಸರ್ಕಾರ ಅವರ ಕೋರಿಕೆಗೆ ಸ್ಪಂದಿಸಬೇಕು ಮತ್ತು ಮೂಡಿಗೆರೆ, ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ಮತ್ತು ಕಳಸ ತಾಲ್ಲೂಕುಗಳ ರೈತರ ಸಂಕಷ್ಟಕ್ಕೆ ಸಕ್ರಮಗೊಳಿಸಿಕೊಡಬೇಕು ಎಂದು ಸದನದ ಗಮನ ಸೆಳೆದರು.
ಈ ಸಂದರ್ಭದಲ್ಲಿ ಉತ್ತರಿಸಿದ ಸಚಿವರು, ಕರ್ನಾಟಕ ಭೂ ಕಂದಾಯ ಕಾಯ್ದೆ 1964 ಕಲಂ 94ಎ, 94-ಬಿ ಮತ್ತು 94ಎ(4)ರಡಿ ಹಾಗೂ ಕರ್ನಾಟಕ ಪೌರಸಭೆಗಳ ಅಧಿನಿಯಮ 1964ರ ಉಪಬಂಧಗಳ ಅಡಿಯಲ್ಲಿ ಎಲ್ಲಾ ಪುರಸಭೆಗಳು (ಟಿ.ಎಂ.ಸಿ) ಮತ್ತು ಪಟ್ಟಣ ಪಂಚಾಯತ್‍ಗಳ 3 ಕಿಮೀ ವ್ಯಾಪ್ತಿಯಲ್ಲಿನ ಅಂತರದೊಳಗೆ ಯಾವುದೇ ಭೂಮಿಯನ್ನು ಮಂಜೂರು ಮಾಡಲು ಅವಕಾಶವಿರುವುದಿಲ್ಲ, ಈ ಬಗ್ಗೆ 30-01-2021ರಲ್ಲೇ ಸುತ್ತೋಲೆ ಹೊರಡಿಸಲಾಗಿದೆ. ಅಧಿನಿಯಮಕ್ಕೆ ಯಾವುದೇ ವಿನಾಯಿತಿ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದರು.
Publisher: ಕನ್ನಡ ನಾಡು | Kannada Naadu