ಕನ್ನಡ ನಾಡು | Kannada Naadu

ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹೆಚ್ಚಳದ ಜೊತೆ, ವಿಕಲಚೇತನರಿಗೆ ಒಂದು ಲಕ್ಷದವರೆಗೂ ವೈದ್ಯಕೀಯ ಪರಿಹಾರ - ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

14 Mar, 2025

 

ಬೆಂಗಳೂರು : ಅಂಗನವಾಡಿ ಕಾರ್ಯಕರ್ತೆಯರ ಬಗ್ಗೆ ಸರ್ಕಾರಕ್ಕೆ ಬದ್ಧತೆ ಇದ್ದು, ಈ ಬಾರಿಯ ಬಜೆಟ್ ನಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಗೌರವ ಧನ ಹೆಚ್ಚಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಖಾತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.

ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯ ಪ್ರತಾಪ್ ಸಿಂಹ ನಾಯಕ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಇತ್ತೀಚಿಗೆÀ ಮಂಡಿಸಲಾದ 2025-26ನೇ ಸಾಲಿನ ಬಜೆಟ್‍ನಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ 1 ಸಾವಿರ ಹಾಗೂ ಅಂಗನವಾಡಿ ಸಹಾಯಕಿಯರಿಗೆ 750 ರೂಪಾಯಿ ಹೆಚ್ಚಿಸಲಾಗಿದ್ದು, ಇದರಿಂದ ವರ್ಷಕ್ಕೆ ಇಲಾಖೆಗೆ 144 ಕೋಟಿ ರೂಪಾಯಿ ಅನುದಾನ ಹೊರೆಯಾಗಿದೆ ಎಂದರು.

ಅಂಗನವಾಡಿ ಕಾರ್ಯಕರ್ತೆಯರ ಗೌರವ ಧನ ನೀಡಿಕೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪಾಲು ಇದ್ದು, ಇದರಲ್ಲಿ ನಮ್ಮ ರಾಜ್ಯದ ಪಾಲು ಹೆಚ್ಚಿದೆ. ಗೌರವ ಧನ ಹೆಚ್ಚಳದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಹಲವಾರು ಬಾರಿ ಮನವಿ ಮಾಡಲಾಗಿದೆ. ಆದರೂ, ಇದುವರೆಗೂ ಅನುದಾನ ಬಿಡುಗಡೆ ಮಾಡಿಲ್ಲ ಎಂದು ತಿಳಿಸಿದರು.

ಅಂಗನವಾಡಿ ಕಾರ್ಯಕರ್ತೆಯರ ಗೌರವ ಧನ ಹೆಚ್ಚಳ ಮಾಡಿರುವ ರಾಜ್ಯಗಳ ಪೈಕಿ ಇಡೀ ದೇಶದಲ್ಲೇ ನಮ್ಮ ಕರ್ನಾಟಕವು ಮೂರನೇ ಸ್ಥಾನದಲ್ಲಿದೆ. ನಮ್ಮ ಸರ್ಕಾರಕ್ಕೆ ಅಂಗನವಾಡಿ ಸಹಾಯಕರು ಹಾಗೂ ಕಾರ್ಯಕರ್ತೆಯರ ಬಗ್ಗೆ ಕಾಳಜಿ ಇದ್ದು, ಹಾಗಾಗಿಯೇ ಅವರ ಗೌರವ ಧನ ಹೆಚ್ಚಳ ಮಾಡಲು ಸರ್ಕಾರ ಮತ್ತು ಇಲಾಖೆ ಅಗತ್ಯ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ವಿಕಲಚೇತನರಿಗೆ ಸರ್ಕಾರದಿಂದ ಅಂಗವಿಕಲತೆ ನಿವಾರಣಾ ವೈದ್ಯಕೀಯ ಪರಿಹಾರ ನಿಧಿ ಯೋಜನೆ, ನಿರಾಮಯ ಆರೋಗ್ಯ ವಿಮಾ ಯೋಜನೆ ಹಾಗೂ ಕಾಕ್ಲಿಯರ್ ಇಂಪ್ಲಾಂಟ್ ಯೋಜನೆಗಳು ಜಾರಿಯಲ್ಲಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು.

ಇಂದು ವಿಧಾನಪರಿಷತ್ ಕಲಾಪದ ವೇಳೆ ಪರಿಷತ್ ಸದಸ್ಯ ವೈ.ಎಂ.ಸತೀಶ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ವಿಕಲಚೇತನರಿಗಾಗಿ ಪ್ರಮುಖ ಮೂರು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಅಂಗವಿಕಲತೆ ನಿವಾರಣಾ ವೈದ್ಯಕೀಯ ಪರಿಹಾರ ನಿಧಿ ಯೋಜನೆಯಡಿ ಶಸ್ತ್ರಚಿಕಿತ್ಸೆಯ ಮುಖಾಂತರ ವಿಕಲಚೇತನತೆಯನ್ನು ನಿವಾರಣೆ ಮಾಡಿಕೊಳ್ಳಲು ಅಥವಾ ಕಡಿಮೆ ಮಾಡಿಕೊಳ್ಳಲು ಎಲ್ಲಾ ಸರ್ಕಾರಿ ಆಸ್ಪತ್ರೆಗಳು ಅಥವಾ ಕರ್ನಾಟಕದ ಸುಸಜ್ಜಿತ ಖಾಸಗಿ ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು 1 ಲಕ್ಷ ರೂಪಾಯಿ ವರೆಗೆ ಸಹಾಯ ಧನ ಮಂಜೂರು ಮಾಡಲಾಗುತ್ತದೆ ಎಂದು ಹೇಳಿದರು.

ಪ್ರಸ್ತುತ ರಾಜ್ಯದಲ್ಲಿ ನ್ಯಾಷನಲ್ ಟ್ರಸ್ಟ್ ಆಕ್ಟ್ ಅಡಿಯಲ್ಲಿ ನಿರಾಮಯ ಆರೋಗ್ಯ ವಿಮಾ ಯೋಜನೆಯನ್ನು ಜಾರಿಗೆ ತಂದಿದ್ದು, ಬಡತನ ರೇಖೆಗಿಂತ ಕೆಳಗಿರುವ ಕುಟಂಬದ ವಿಕಲಚೇತನ ವ್ಯಕ್ತಿ ಒಂದು ಬಾರಿ ವಾರ್ಷಿಕ 250 ರೂಪಾಯಿಗಳನ್ನು ಸರ್ಕಾರದಿಂದ ವಿಮಾ ಕಂತಾಗಿ ಪಾವತಿಸಿ ಪ್ರತಿವರ್ಷ ಒಂದು ಲಕ್ಷಗಳವರೆಗೆ ಉಚಿತವಾಗಿ ವೈದ್ಯಕೀಯ ಸೌಲಭ್ಯ ಪಡೆಯಬಹುದು ಎಂದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಕಾಕ್ಲಿಯಾರ್ ಇಂಪ್ಲಾಂಟ್ ಯೋಜನೆ ಅಡಿಯಲ್ಲಿ ಕಡ್ಡಾಯ ನವಜಾತ ಶಿಶುಗಳ ಶ್ರವಣ ತಪಾಸಣೆ ನಡೆಸಿ, ಗುರುತು ಹಚ್ಚಿದ ತೀವ್ರತರವಾದ/ಗಂಭೀರ ಸ್ವರೂಪದ ಶ್ರವಣದೋಷವುಳ್ಳ 6 ವರ್ಷದ ಕೆಳಗಿನ ಮಕ್ಕಳಿಗೆ ಶ್ರವಣ ಸಾಧನಗಳನ್ನು ನೀಡಲಾಗುವುದು. ಜೊತೆಗೆ ಟ್ರಯಲ್ ಆಡಿಟರಿವರ್ಬಲ್ ಥೆರಪಿಯನ್ನು ಒದಗಿಸಲಾಗುವುದು, ವಿವಿಧ ಥೆರಪಿ ಚಿಕತ್ಸೆಗಳನ್ನು ಉಚಿತವಾಗಿ ಒದಗಿಸಲಾಗುತ್ತಿದ್ದು, 2016-17 ರಿಂದ ಇಲ್ಲಿಯವರೆಗೆ 665 ಫಲಾನುಭವಿಗಳಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ತಿಳಿಸಿದರು.

ಜೊತೆಗೆ ನಿರಾಮಯ ಆರೋಗ್ಯ ವಿಮಾ ಯೋಜನೆಯಡಿ 4 ಬಗೆಯ ವಿಕಲಚೇತನರಿಗೆ ಖಾಸಗಿ ಅಥವಾ ಸರ್ಕಾರಿ ಆಸ್ಪತ್ರೆಗಳಲ್ಲಿ ಪಡೆದ ಚಿಕಿತ್ಸೆಯ ಗರಿಷ್ಠ 1 ಲಕ್ಷದವರೆಗೆ ಶಸ್ತ್ರಚಿಕಿತ್ಸೆ ಹಾಗೂ ವೈದ್ಯಕೀಯ ವೆಚ್ಚಗಳನ್ನು ಕೇಂದ್ರ ಸರ್ಕಾರ ಗುರುತಿಸಿರುವ ಸಂಸ್ಥೆಯ ಮುಖಾಂತರ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.

Publisher: ಕನ್ನಡ ನಾಡು | Kannada Naadu

Login to Give your comment
Powered by