ಕನ್ನಡ ನಾಡು | Kannada Naadu

ಜಾಗತಿಕ ಭಾಷೆಗಳ ಅಧ್ಯಯನ ಕೇಂದ್ರ- 40ನೇ ವಾರ್ಷಿಕೋತ್ಸವ ಸಂಭ್ರಮ

12 Mar, 2025

 

ಬೆಂಗಳೂರು : ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಜಾಗತಿಕ ಭಾಷೆಗಳ ಅಧ್ಯಯನ ಕೇಂದ್ರ ಇದೀಗ 40ನೇ ವಾರ್ಷಿಕೋತ್ಸವ ಸಂಭ್ರಮಕ್ಕೆ ಕಾಲಿಟ್ಟಿದೆ. 1985 ರಲ್ಲಿ ಸ್ಥಾಪಿತವಾದ ವಿದೇಶಿ ಭಾಷೆಗಳ ಇಲಾಖೆ ಕಳೆದ ನಾಲ್ಕು ದಶಕಗಳ ಅವಧಿಯಲ್ಲಿ ಅಗಾಧ ಪ್ರಗತಿಯನ್ನು ಸಾಧಿಸಿದೆ. 2017ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ತ್ರಿಭಜನೆಯಾದಾಗ ಈ ಇಲಾಖೆ ನೂತನವಾಗಿ ಉದಯಿಸಿದ ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಅಡಿಯಲ್ಲಿ ಜಾಗತಿಕ ಭಾಷೆಗಳ ಅಧ್ಯಯನ ಕೇಂದ್ರ ಎಂದು ಮರುನಾಮಕರಣಗೊಂಡಿತು.
 
ಇಡೀ ದಕ್ಷಿಣ ಭಾರತದಲ್ಲಿ ಒಂದೇ ಸೂರಿನಡಿಯಲ್ಲಿ 14 ವಿದೇಶಿ ಭಾಷೆಗಳನ್ನು ಅಲ್ಪಾವಧಿ ಕೋರ್ಸ್‍ಗಳಿಂದ ಡಾಕ್ಟರೇಟ್ ಪದವಿ ಹಂತದವರೆಗೂ ಬೋಧಿಸುತ್ತಿರುವ ಏಕೈಕ ಸಂಸ್ಥೆ ಇದಾಗಿದೆ. ಫ್ರೆಂಚ್, ಜರ್ಮನ್, ಸ್ಪಾನಿಷ್, ಜಪಾನೀಸ್, ಕೊರಿಯನ್, ಚೀನೀ, ಪೋರ್ಚುಗೀಸ್, ಇಟಾಲಿಯನ್, ಫಿನ್ನಿಷ್, ರಷ್ಯನ್ ಮತ್ತು ಅರಾಬಿಕ್ ಭಾಷೆಗಳಲ್ಲಿ ಒಂದು ವರ್ಷದ ಅವಧಿಯ ಸರ್ಟಿಫಿಕೇಟ್, ಯು.ಜಿ. ಡಿಪ್ಲೊಮೊ, ಪಿ.ಜಿ ಡಿಪ್ಲೊಮೊ ಹಾಗೂ ಮೂರು ವರ್ಷಗಳ ಅವಧಿಯ ಪದವಿ ಮತ್ತು ಎರಡು ವರ್ಷಗಳ ಅವಧಿಯ ಸ್ನಾತಕೋತ್ತರ ಪದವಿ ಕೋರ್ಸ್‍ಗಳ ಜೊತೆಗೆ ಪಿಎಚ್‍ಡಿ ಅಧ್ಯಯನದ ಸೌಲಭ್ಯವನ್ನೂ ಒದಗಿಸಲಾಗಿದೆ. ಇದರ ಜೊತೆಗೆ ಒಟ್ಟು ಎಂಟು ಭಾಷೆಗಳಲ್ಲಿ ಸಂಭಾಷಣೆಯ ಕೋರ್ಸ್‍ಗಳನ್ನೂ ನಡೆಸಲಾಗುತ್ತಿದೆ. ಇದೇ ಪ್ರಥಮ ಬಾರಿಗೆ ಬಿ.ಎ. ಪದವಿ ಕೋರ್ಸ್‍ನÀಲ್ಲಿ ಫ್ರೆಂಚ್ ಭಾಷೆಯನ್ನು ಒಂದು ಪ್ರಮುಖ ಭಾಷೆಯಾಗಿ ಕಲಿಯುವ ಅವಕಾಶವನ್ನು ತೆರೆದಿಡಲಾಗಿದೆ. ಬೆಂಗಳೂರು ನಗರ ವಿಶ್ವವಿದ್ಯಾಲಯವು ಜ್ಞಾನಜ್ಯೋತಿ ಕ್ಯಾಂಪಸ್ ಹಾಗೂ ಮಲ್ಲೇಶ್ವರಂನಲ್ಲಿರುವ ಸಂಯೋಜಿತ ಮಹಿಳಾ ಕಾಲೇಜಿನಲ್ಲಿ ಈ ಕೋರ್ಸ್ ಲಭ್ಯವಿದೆ. ಮುಂದೆ ಜರ್ಮನ್, ಸ್ಪಾನಿಷ್ ಮತ್ತು ಜಪಾನೀಸ್ ಭಾಷೆಗಳನ್ನೂ ಬಿ.ಎ. ಪದವಿಯಲ್ಲಿ ಡಬಲ್ ಮೇಜರ್ ವಿಷಯಗಳಾಗಿ ಕಲಿಸುವ ಪ್ರಸ್ತಾಪವಿದೆ.
 
ಜಾಗತಿಕ ಭಾಷೆಗಳ ಅಧ್ಯಯನ ಕೇಂದ್ರದ ಸಂಶೋಧನೆ ಮತ್ತು ಅನುವಾದ ವಿಭಾಗ ಕೆಲವು ಚಾರಿತ್ರಿಕ ದಾಖಲೆಗಳೂ ಸೇರಿದಂತೆ ಮಹತ್ವಪೂರ್ಣ ಸಾಹಿತ್ಯ ಕೃತಿಗಳನ್ನು ಕನ್ನಡದಿಂದ ಜಾಗತಿಕ ಭಾಷೆಗಳಿಗೆ ಅನುವಾದಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ವಿದೇಶಿ ನಿಯೋಗಗಳ ಭೇಟಿ ಹಾಗೂ ಉದ್ಯಮಗಳ ಜೊತೆಗೆ ನಿಕಟ ಸಂಪರ್ಕದ ಮೂಲಕ ಮಹತ್ತರ ಪ್ರಗತಿ ಸಾಧಿಸಲಾಗುತ್ತಿದೆ. ಜಾಗತೀಕರಣದ ಹೊಸ ಮನ್ವಂತರದಲ್ಲಿ ವಿದೇಶಿ ಭಾಷೆಗಳ ಕಲಿಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಉದ್ಯೋಗವಕಾಶಗಳ  ಅದೃಷ್ಟವನ್ನು ನಮ್ಮ ವಿದ್ಯಾರ್ಥಿಗಳಿಗೆ ಒದಗಿಸಿಕೊಟ್ಟಿದೆ. ಅನೇಕ ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪನಿಗಳಲ್ಲಿ ನಮ್ಮ ವಿದ್ಯಾರ್ಥಿಗಳು ಸೇವೆ ಸಲ್ಲಿಸುತ್ತಿದ್ದು ಮುಂಚೂಣಿ ಶಿಕ್ಷಣ ಸಂಸ್ಥೆಗಳಲ್ಲಿ ಬೋಧಕರಾಗಿಯೂ ಕಾರ್ಯನಿರ್ವಹಿಸುತ್ತಿರುವರು.
 
ಜಾಗತಿಕ ಭಾಷೆಗಳ ಅಧ್ಯಯನ ಕೇಂದ್ರದ 40ನೇ ವಾರ್ಷಿಕೋತ್ಸವ ಆಚರಣೆಯ ಅಂಗವಾಗಿ 2025 ಮಾರ್ಚ್ 15ರಂದು ಶನಿವಾರ ಮಧ್ಯಾಹ್ನ 2 ಗಂಟೆಗೆ ಸೆಂಟ್ರಲ್ ಕಾಲೇಜ್ ಆವರಣದಲ್ಲಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಬೆಂಗಳೂರಿನಲ್ಲಿನ ಜಪಾನ್ ಕಾನ್ಸುಲೇಟ್ ಜನರಲ್ ಸಹಯೋಗದಲ್ಲಿ ಪ್ರಧಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಜಪಾನ್‍ನಲ್ಲಿ ಇಂದಿನ ಉದ್ಯೋಗವಕಾಶಗಳ ಕುರಿತ ವಿಚಾರ ಸಂಕಿರಣದ ಜೊತೆಗೆ ಎರಡು ಜಪಾನೀ ಚಲನಚಿತ್ರಗಳ ಪ್ರದರ್ಶನವನ್ನೂ ಏರ್ಪಡಿಸಲಾಗಿದೆ. ಇಡೀ ವರ್ಷ ವಿವಿಧ ಚಟುವಟಿಕೆಗಳು ಮತ್ತು ಉತ್ತಮ ವಿದೇಶಿ ಚಿತ್ರಗಳ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗುತ್ತಿದೆ.
 
ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ.ಲಿಂಗರಾಜಗಾಂಧಿಯವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು ಜಪಾನ್ ಕಾನ್ಸುಲೇಟ್ ಜನರಲ್‍ನ ಪ್ರತಿನಿಧಿಗಳಾದ ನಾಕಾನೆ ಹಾಗೂ ಭಾರತ ಸರ್ಕಾರದ ಜಪಾನ್ ವಿದೇಶಾಂಗ ಸಚಿವಾಲಯದ ಸಲಹೆಗಾರರಾದ ಪ್ರೊ.ಅಶೋಕ್‍ಕುಮಾರ್ ಚಾವ್ಲಾ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಕುಲಸಚಿವರಾದ ಟಿ. ಜವರೇಗೌಡ, ಕುಲಸಚಿವರು (ಮೌಲ್ಯಮಾಪನ) ಪ್ರೊ. ರಮೇಶ್ ಬಿ. ಮತ್ತು ವಿತ್ತಾಧಿಕಾರಿಗಳಾದ ಎಂ.ವಿ ವಿಜಯಲಕ್ಷ್ಮಿ ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳುವರು. ಆಯೋಜಕರಾದ ಕಲಾ ವಿಭಾಗದ ಡೀನ್ ಮತ್ತು ಜಾಗತಿಕ ಭಾಷೆಗಳ ಅಧ್ಯಯನ ಕೇಂದ್ರದ ಅಧ್ಯಕ್ಷರಾದ ಪ್ರೊ. ಜ್ಯೋತಿ ವೆಂಕಟೇಶ್ ಕೇಂದ್ರದ ಕಾರ್ಯಸಾಧನೆಯ ವರದಿಯನ್ನು ಮಂಡಿಸುವರು.

Publisher: ಕನ್ನಡ ನಾಡು | Kannada Naadu

Login to Give your comment
Powered by