ಶಾಲಾ ಮಕ್ಕಳ ದಾಖಲಾತಿ ಮತ್ತು ಹಾಜರಾತಿ ಹೆಚ್ಚಿಸಲು ಮಧ್ಯಾಹ್ನದ ಬಿಸಿಯೂಟ ಯೋಜನೆ ಸಚಿವ ಎಸ್. ಮಧು ಬಂಗಾರಪ್ಪ
ಬೆಂಗಳೂರು : ಶಾಲಾ ಮಕ್ಕಳ ದಾಖಲಾತಿ ಮತ್ತು ಹಾಜರಾತಿ ಹೆಚ್ಚಿಸುವ ಉದ್ದೇಶದೊಂದಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಇದರಿಂದಾಗಿ ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಮಕ್ಕಳು ಶಾಲೆಯನ್ನು ತೊರೆಯದಂತೆ ತಡೆಯಲಾಗುವುದು. ಶಾಲಾ ಮಕ್ಕಳ ಪೌಷ್ಟಿಕಾಂಶ ಹೆಚ್ಚಿಸುವುದರ ಮೂಲಕ ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ವೃದ್ಧಿಗೊಳಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಎಸ್. ಮಧು ಬಂಗಾರಪ್ಪ ಅವರು ತಿಳಿಸಿದರು.
ಇಂದು ವಿಧಾನ ಪರಿಷತ್ತಿನ ಕಲಾಪದ ವೇಳೆ ಪರಿಷತ್ ಸದಸ್ಯ ಎಂ.ಎಲ್ ಅನೀಲ್ ಕುಮಾರ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು ರಾಜ್ಯದಲ್ಲಿ ಶಾಲಾ ಮಕ್ಕಳ ಅಪೌಷ್ಠಿಕತೆ, ಅನಿಮಿಯಾ ಮತ್ತು ಬಹುಪೋಷಕಾಂಶಗಳ ಕೊರತೆಯಿಂದಾಗುವ ಅನಾರೋಗ್ಯ ಪರಿಸ್ಥತಿಯನ್ನು ತಡೆಗಟ್ಟುವುದು, ಶಾಲಾ ಮಕ್ಕಳ ಕಲಿಕಾ ಸಾಮರ್ಥ್ಯ ವೃದ್ಧಿಸುವುದು. ಸಾಮಾಜಿಕ ಸಮಾನತೆಯನ್ನು ಕಾಯ್ದುಕೊಂಡು ರಾಷ್ಟ್ರೀಯ ಭಾವೈಕ್ಯತೆಯನ್ನು ಮಕ್ಕಳ ಮನೋಧೋರಣೆಯಲ್ಲಿ ಬಲಪಡಿಸುವುದಾಗಿದೆ.
ಇದಕ್ಕೆ ಪೂರಕವಾಗಿ, ಪೌಷ್ಠಿಕ ಆಹಾರವಾಗಿ ಬೇಯಿಸಿದ ಮೊಟ್ಟಿ ಅಥವಾ ಮೊಟ್ಟೆ ಸೇವಿಸದ ವಿದ್ಯಾರ್ಥಿಗಳಿಗೆ ಬಾಳೆಹಣ್ಣನ್ನು ಪ್ರತಿ ಸಾಲಾ ಹಂತದಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರು ಶಾಲಾ ಮುಖ್ಯ ಶಿಕ್ಷಕರು ಹಾಗೂ ಇತರರ್ನೊಳಗೊಂಡ ಖರೀದಿ ಸಮಿತಿಯನ್ನು ರಚಿಸಿಕೊಂಡು ಖರೀದಿಸಲಾಗುತ್ತದೆ. ಪೂರಕ ಪೌಷ್ಠಿಕ ಆಹಾರಗಳಾದ ಮೊಟ್ಟೆ / ಬಾಳೆ ಹಣ್ಣಿಗೆ ಪ್ರತಿ ವಿದ್ಯಾರ್ಥಿಗೆ ಒಂದು ದಿನಕ್ಕೆ ರೂ. 6/- ಘಟಕ ವೆಚ್ಚವನ್ನು ನಿಗದಿಪಡಿಸಲಾಗಿದೆ. ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ಮುದ್ದೇನಹಳ್ಳಿ, ಚಿಕ್ಕಬಳ್ಳಾಪುರ ಜಿಲ್ಲೆ ಸಂಸ್ಥೆಯ ವತಿಯಿಂದ ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಸಾಯಿ ಶ್ಯೂರ್ ರಾಗಿ ಹೆಲ್ತ್ ಮಿಕ್ಸ್ ಪುಡಿಯನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ತಿಳಿಸಿದರು.
ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಧ್ಯಾಹ್ನದ ಉಪಹಾರ ಯೋಜನೆಯಡಿ 44,812 ಮುಖ್ಯ ಅಡುಗೆ ಸಿಬ್ಬಂದಿಗಳು, 68,387 ಸಹಾಯಕ ಅಡುಗೆ ಸಿಬ್ಬಂದಿಗಳು ಒಳಗೊಂಡಂತೆ ಒಟ್ಟಾರೆ 1,13,199 ಅಡುಗೆ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಅಡುಗೆ ಸಿಬ್ಬಂದಿಯವರು ಅಡುಗೆ ಕೆಲಸ ನಿರ್ವಹಿಸುವ ಸಂದರ್ಭದಲ್ಲಿ ಸುಟ್ಟಗಾಯಗಳಾದಲ್ಲಿ ರೂ. 30,000/- ಶಾಶ್ವತ ಅಂಗವಿಕಲತೆ ಉಂಟಾದಲ್ಲಿ ಗರಿಷ್ಠ ರೂ 75,000/-ಮತ್ತು ಸುಟ್ಟಗಾಯಗಳಾಗಿ ಮರಣ ಹೊಂದಿದ ಸಂದರ್ಭದಲ್ಲಿ ರೂ 1,00,000/- ಪರಿಹಾರವನ್ನು ನೀಡಲಾಗುತ್ತದೆ.
ಮಧ್ಯಾಹ್ನದ ಉಪಹಾರ ಯೋಜನೆಯು ಕೇಂದ್ರ ಪುರಸ್ಕøತ ಯೋಜನೆಯಾಗಿರುವುದರಿಂದ ಸದರಿ ಯೋಜನೆಯನ್ನು ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಅನುಷ್ಠಾನ ಮಾಡಲಾಗಿರುತ್ತದೆ ಎಂದು ಸಚಿವರು ತಿಳಿಸಿದರು.
Publisher: ಕನ್ನಡ ನಾಡು | Kannada Naadu