ಕನ್ನಡ ನಾಡು | Kannada Naadu

ರೋಗಿಗಳ ಅವಶ್ಯಕತೆಗೆ ಅನುಸಾರ ಔಷಧಿಗಳು ಹಾಗೂ ರೋಗ ಪತ್ತೆ ಹಚ್ಚುವ ಸೇವೇಗಳನ್ನು ಒದಗಿಸಲು ಕ್ರಮವಹಿಸಲಾಗಿದೆ - ಸಚಿವ ದಿನೇಶ್ ಗುಂಡೂರಾವ್

10 Mar, 2025

 

ಬೆಂಗಳೂರು  : ತೀವ್ರ ಸೋಂಕಿಗೆ ಒಳಗಾಗುವ ರೋಗಿಗಳಿಗೆ ಅವಶ್ಯಕತೆಗೆ ಅನುಸಾರ ಔಷಧಿಗಳು ಹಾಗೂ ರೋಗ ಪತ್ತೆ ಹಚ್ಚುವ ಸೇವೆಗಳ ಸೌಲಭ್ಯ ಒದಗಿಸಲು ಎಲ್ಲಾ ಕ್ರಮಗಳನ್ನು ವಹಿಸಲಾಗಿರುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ತಿಳಿಸಿದರು.

ಇಂದು ವಿಧಾನ ಪರಿಷತ್ತಿನ ಕಲಾಪದ ವೇಳೆ ಪರಿಷತ್ ಸದಸ್ಯ ಎಸ್. ರವಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದ ಜನತೆಗೆ ಆರೋಗ್ಯ ಭರವಸೆ ನೀಡುವ ನಿಟ್ಟಿನಲ್ಲಿ ಆಯುಷ್ಮನ್ ಭಾರತ್ ಪ್ರಧಾನ ಮಂತ್ರಿ ಜನ್ ಆರೋಗ್ಯ, ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಫಲಾನುಭವಿಗಳು ಅಧಿಕ ಹಣ ವ್ಯಯ ಮಾಡುವುದನ್ನು ತಡೆಯಲು 2965 ಸರ್ಕಾರಿ ಆಸ್ಪತ್ರೆಗಳು ಹಾಗೂ 592 ಖಾಸಗಿ ಆಸ್ಪತ್ರೆಗಳು ಸೇರಿ ಒಟ್ಟಾರೆ 3557 ಆಸ್ಪತ್ರೆಗಳನ್ನು ಯೋಜನೆಯಡಿ ನೋಂದಾವಣೆ ಮಾಡಲಾಗಿರುತ್ತದೆ. ಈ ಯೋಜನೆಯಡಿ 1650 ಚಿಕಿತ್ಸಾ ವಿಧಾನಗಳು ಲಭ್ಯವಿದ್ದು, 294 ಸಾಮಾನ್ಯ ಚಿಕಿತ್ಸಾ ವಿಧಾನಗಳು ಸಾರ್ವಜನಿಕ ಆರೋಗ್ಯ ಸಂಸ್ಥೆಗಳಿಗೆ ಮಾತ್ರ ಸೀಮಿತವಾಗಿರುತ್ತವೆ. 251 ಕ್ಲಿಷ್ಟಕರ ದ್ವಿತೀಯ ಹಂತದ ಚಿಕಿತ್ಸಾ ವಿಧಾನಗಳು, 934 ತೃತೀಯ ಹಂತದ ಚಿಕಿತ್ಸಾ ವಿಧಾನಗಳು ಹಾಗೂ 171 ತುರ್ತು ಚಿಕಿತ್ಸಾ ವಿಧಾನಗಳನ್ನು ಸಾರ್ವಜನಿಕ ಆರೋಗ್ಯ ಸಂಸ್ಥೆ ಮತ್ತು ನೊಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ. ಈ ಯೋಜನೆಯಡಿಯಲ್ಲಿ ಸರಳ ದ್ವಿತೀಯ ಹಂತದ ಚಿಕಿತ್ಸೆಗಳನ್ನು ಸರ್ಕಾರಿ ಆಸ್ಪತ್ರೆಗಳಿಗೆ ಮಾತ್ರ ಸಿಮೀತಗೊಳಿಸಲಾಗಿರುತ್ತದೆ. ಕ್ಲಿಷ್ಟಕರ ದ್ವಿತೀಯ ಹಾಗೂ ತೃತೀಯ ಹಂತದ ಚಿಕಿತ್ಸೆಗಳು ಸರ್ಕಾರಿ ಆಸ್ಪತ್ರಗಳಲ್ಲಿ ಚಿಕಿತ್ಸಾ ಸೌಲಭ್ಯಗಳು ಪಡೆಯಬಹುದಾಗಿರುತ್ತದೆ. ಒಂದು ವೇಳೆ ಲಭ್ಯವಿಲ್ಲದಿದ್ದ ಸಂದರ್ಭದಲ್ಲಿ ಆನ್‍ಲೈನ್ ರೆಫರಲ್ ಸಿಸ್ಟಮ್ ಮುಖೇನ ರೆಫರಲ್ ಪತ್ರ ಪಡೆದು ಯೋಜನೆಯಡಿ ನೋಂದಾಯಿತ ಉನ್ನತ ಮಟ್ಟದ ಸರ್ಕಾರಿ ಆಸ್ಪತ್ರೆ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದಾಗಿರುತ್ತದೆ.  ತುರ್ತು ಸಂದರ್ಭಗಳಲ್ಲಿ ಯಾವುದೇ ರೆಫರಲ್ ಅವಶ್ಯಕತೆ ಇರುವುದಿಲ್ಲ ಎಂದು ತಿಳಿಸಿದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳನ್ನು ನಿರ್ಲಕ್ಷದಿಂದ ನೋಡುವುದರ ಬಗ್ಗೆ ವೈದ್ಯರುಗಳ ವಿರುದ್ದ ಪ್ರಸ್ತುತ 185 ಪ್ರಕರಣಗಳು ಬಾಕಿ ಇರುತ್ತದೆ. ಸಂಬಂಧಿಸಿದ ವೈದ್ಯರುಗಳ ವಿರುದ್ದ ಕೆ.ಸಿ.ಎಸ್. (ಸಿಸಿಎ) ನಿಯಮಗಳು 1957ರ ಪ್ರಕಾರ ಇಲಾಖೆ ವಿಚಾರಣೆ ನಡೆಸಿ ಶಿಸ್ತು ಕ್ರಮ ಜರುಗಿಸಿ ದಂಡನೆ ವಿಧಿಸಲಾಗುವುದು.
ಆರೋಗ್ಯ ಇಲಾಖೆಯಿಂದ ಗುಣ ಮಟ್ಟದ ಚಿಕಿತ್ಸೆ ನೀಡಲು ಬಹಳಷ್ಟು ಕ್ರಮಗಳನ್ನು ಈಗಾಗಲೇ ತೆಗೆದುಕೊಳ್ಳಲಾಗಿದೆ. ಔಷಧಿಗಳ ಗುಣ ಮಟ್ಟವನ್ನು ಸಹ ಆಗಿಂದಾಗ್ಗೆ ಪರಿಶೀಲನೆ ಮಾಡಲಾಗುವುದು. ಔಷಧಿಗಳ ಪ್ರತಿ ವರ್ಗದಲ್ಲಿ ಚಿಕಿತ್ಸೆಗೆ ಬಹು ಆಯ್ಕೆಯ ಹಲವಾರು ಔಷಧಗಳಿದ್ದು, ನಿರ್ದಿಷ್ಟ ಔಷಧಿಗಳ ದಾಸ್ತಾನು ಇಲ್ಲದಿದ್ದಲ್ಲಿ ಅದೇ ವರ್ಗದಲ್ಲಿ ಸೂಕ್ತ ಪರ್ಯಾಯ ಔಷಧಿಗಳನ್ನು ಒದಗಿಸಲಾಗುವುದು. ಈ ಔಷಧಿಗಳ ಉಪಯೋಗದಿಂದ ರೋಗಿಗಳಿಗೆ ಚಿಕಿತ್ಸೆಗೆ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

Publisher: ಕನ್ನಡ ನಾಡು | Kannada Naadu

Login to Give your comment
Powered by