ಕನ್ನಡ ನಾಡು | Kannada Naadu

ಕೃಷಿ ಪಂಪ್ ಸೆಟ್ ಗಳಿಗೆ 7 ಗಂಟೆಗಳ ಕಾಲ 3 ಫೇಸ್ ವಿದ್ಯುತ್ – ಇಂಧನ ಸಚಿವ ಕೆ.ಜೆ. ಜಾರ್ಜ್

10 Mar, 2025

 

 

ಬೆಂಗಳೂರು : ರಾಜ್ಯದ ರೈತರ ಕೃಷಿ ಪಂಪ್ ಸೆಟ್ ಗಳಿಗೆ ತಾಂತ್ರಿಕ ಸಾಧ್ಯತೆ ಇರುವ ವಿದ್ಯತ್ ಉಪ ಕೇಂದ್ರಗಳಿಂದ ಹಗಲಿನ ವೇಳೆಯಲ್ಲಿಯೇ ನಿರಂತರ 7 ಗಂಟೆಗಳ ಕಾಲ 3 ಫೇಸ್ ವಿದ್ಯುತ್ತನ್ನು ಸರಬರಾಜು ಮಾಡಲಾಗುತ್ತಿದೆ. ಉಳಿದ ಕಡೆ ಹಗಲು 4 ಗಂಟೆ ಹಾಗೂ ರಾತ್ರಿ 3 ಗಂಟೆಗಳ ಕಾಲ ಸೇರಿಸಿ ಪ್ರತಿ ದಿನ 7 ಗಂಟೆಳ ಕಾಲ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ತಿಳಿಸಿದರು.

ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರ ಚುಕ್ಕೆ ರುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು. ರಾಜ್ಯದಲ್ಲಿ ಸದ್ಯ ವಿದ್ಯುತ್ ಗೆ ಯಾವುದೇ ಸಮಸ್ಯೆ ಇರುವುದಿಲ್ಲ. ರಾಜ್ಯದಲ್ಲಿ 2024-25ರಲ್ಲಿ ಅಂದಾಜಿಸಲಾದ ಬಳಕೆಯ ಬೇಡಿಕೆಯ ಪ್ರಮಾಣ 92087 ಮೆಗಾ ಯುನೀಟ್ ಇದ್ದು, 2024ನೇ ಏಪ್ರಿಲ್ ನಿಂದ 2024ನೇ ಡಿಸೆಂಬರ್ ಅಂತ್ಯದ ವರೆಗೆ (ಸರಾಸರಿ ದಿನವಹಿ ಬಳಕೆ) 235 ಮೆಗಾ ವ್ಯಾಟ್ ಯುನಿಟ್ ಗಳಾಗಿರುತ್ತದೆ. ರಾಜ್ಯವು ಈಗಾಗಲೇ 18,365 ಮೆಗಾ ವ್ಯಾಟ್‍ನ ಗರಿಷ್ಠ ಬೇಡಿಕೆಯನ್ನು ಪೂರೈಸಿದ್ದು, ಈ ಪ್ರಮಾಣವು 19000 ಮೆಗಾವ್ಯಾಟ್‍ಗೆ ಏರಿಕೆಯಾಗುವ ನಿರೀಕ್ಷೆಯಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಪ್ರಸ್ತುತ ಬೇಡಿಕೆಗೆ ಅನುಗುಣವಾಗಿ ವಿದ್ಯುತ್ ನ್ನು ಪೂರೈಸಿಲಾಗುತ್ತಿದೆ. ರಾಜ್ಯದಲ್ಲಿ ಉತ್ಪಾದನೆಯು ಕಡಿಮಾದಲ್ಲಿ ಬ್ಯಾಂಕಿಂಗ್ ಸಿಸ್ಟಮ್‍ನಲ್ಲಿ ಮುಕ್ತ ಮಾರುಕಟ್ಟೆಯಲ್ಲಿ ವಿದ್ಯತ್‍ನ್ನು ಪಡೆದು ಬೇಡಿಕೆಯನ್ನು ಪೂರೈಸಲಾಗುತ್ತದೆ. ಈ ವರ್ಷ ರಾಜ್ಯದಲ್ಲಿ ಉತ್ತಮ ಮಳೆಯಾಗಿದ್ದು, ರಾಜ್ಯದ ವಿದ್ಯುತ್ ಜಲಾಶಯಗಳಲ್ಲಿ ನೀರಿನ ಲಭ್ಯತೆಯೂ ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಉತ್ತಮವಾಗಿದೆ. ಬೇಸಿಗೆಯಲ್ಲಿ ಏರಿಕೆಯಾಗುವ ವಿದ್ಯುತ್ ಬೇಡಿಕೆಯನ್ನು ಗಣನೆಗೆ ತೆಗೆದುಕೊಂಡು ಕೊರತೆ ನೀಗಿಸಲು ವಿದ್ಯುತ್ ವಿನಿಮಯ ಕೇಂದ್ರಗಳಿಂದ ದಿನವಹಿ ಆಧಾರದ ಮೇಲೆ ಬೇಡಿಕೆಗೆ ಅನುಗುಣವಾಗಿ ವಿದ್ಯುತ್ ಖರೀದಿ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಅರಣ್ಯ ಪ್ರದೇಶದ ಮೂಲಕ ಹಾದು ಹೋಗುವ ಕೃಷಿ ಫೀಡರ್ ಗಳಿಗೆ ಹಗಲಿನ ವೇಳೆಯಲ್ಲಿಯೇ 7 ಗಂಟೆಗಳ ಕಾಲ ನಿರಂತರವಾಗಿ 3 ಫೇಸ್ ವಿದ್ಯತ್ ಸರಬರಾಜು ಮಾಡಲಾಗುತ್ತಿದೆ. ಅನಿವಾರ್ಯ ಸಂದರ್ಭಗಳಲ್ಲಿ ವಿದ್ಯುತ್ ಜಾಲದಲ್ಲಿ ಅಡಚಣೆಯಾದಾಗ ಮಾತ್ರ ಅಲ್ಪ ಪ್ರಮಾಣದಲ್ಲಿ ವಿದ್ಯತ್ ಕಡಿತ ಮಾಡಲಾಗುತ್ತದೆ. ಎಂದು ತಿಳಿಸಿದರು.

Publisher: ಕನ್ನಡ ನಾಡು | Kannada Naadu

Login to Give your comment
Powered by