ಬೆಂಗಳೂರು : ರಾಜ್ಯದಲ್ಲಿರುವ ಇಂಜಿನಿಯರಿಂಗ್ ಕಾಲೇಜುಗಳ ಗುಣಮಟ್ಟ ಹೆಚ್ಚಿಸಲು ಆದ್ಯತೆ ನೀಡಲಾಗಿದೆ, ಬಹಳಷ್ಟು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರು ತಿಳಿಸಿದರು.
ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ಸದಸ್ಯ ಮಂಜುನಾಥ್ ಬಂಡಾರಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ 18 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳು ಮಂಜೂರಾಗಿರುತ್ತವೆ. 16 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳ ಕಟ್ಟಡ ಕಾಮಗಾರಿ ಪೂರ್ಣಗೊಂಡು ಶೈಕ್ಷಣಿಕ ಚಟುವಟಿಕೆ ಪ್ರಾರಂಭಿಸಲಾಗಿದೆ. 02 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಾದ ಅರಸೀಕೆರೆ ಮತ್ತು ದೇವದುರ್ಗ ಕಾಲೇಜುಗಳ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಪ್ರಸ್ತುತ ರಾಜ್ಯದಲ್ಲಿ 16 ಸರ್ಕಾರಿ, 8 ಖಾಸಗಿ ಅನುದಾನಿತ 138 ಖಾಸಗಿ ಅನುದಾನ ರಹಿತ ಹಾಗೂ 16 ಅಲ್ಪಸಂಖ್ಯಾತ ಖಾಸಗಿ ಅನುದಾನಿತ ಇಂಜಿನಿಯರಿಂಗ್ ಕಾಲೇಜುಗಳಿವೆ. 18 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಿಗೆ ಕಳೆದ 5 ವರ್ಷಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ರೂ. 33159.23 ಲಕ್ಷಗಳ ಅನುದಾನವನ್ನು ಬಿಡುಗಡೆಗೊಳಿಸಲಾಗಿದೆ ಎಂದು ತಿಳಿಸಿದರು.
ಪ್ರಸ್ತುತ ಸರ್ಕಾರಿ ಕಾಲೇಜುಗಳಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವತಿಯಿಂದ ಯಾವುದೇ ಕಟ್ಟಡವನ್ನು ಕಟ್ಟುವಂತಹ ಯೋಜನೆ ಇರುವುದಿಲ್ಲ. ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯವರಿಗೆ ವೇತನ ಹಾಗೂ ಇನ್ನಿತರ ಭತ್ಯೆಗಳನ್ನು ಖಜಾನೆ–2 ತಂತ್ರಾಂಶದ ಮೂಲಕ ಪಾವತಿಸಲಾಗುತ್ತದೆ. ಸದರಿ ಕಾಲೇಜುಗಳ ಸಿಬ್ಬಂದಿ ವೇತನ, ಕಾಲೇಜುಗಳಿಗೆ ಸಾಮಾನ್ಯ ವೆಚ್ಚ, ಕಟ್ಟಡ ವೆಚ್ಚ, ಸಾರಿಗೆ ವೆಚ್ಚ, ನಿರ್ವಹಣಾ ವೆಚ್ಚ, ಸಾಮಗ್ರಿ ಹಾಗೂ ಅತಿಥಿ ಉಪನ್ಯಾಸಕರ ಗೌರವಧನ ಪಾವತಿಸಲು ಒಟ್ಟಾರೆ ಪ್ರಸ್ತುತ ಸಾಲಿನಲ್ಲಿ ರೂ. 8526.46 ಲಕ್ಷಗಳ ಅನುದಾನವನ್ನು ಬಿಡುಗಡೆ ಮಾಡಲಾಗಿರುತ್ತದೆ. ಈ ಬಾರಿ ಆಯವ್ಯಯದಲ್ಲಿ 2000 ಬೋಧಕ ಸಿಬ್ಬಂದಿಗಳನ್ನು ತುಂಬಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.
Publisher: ಕನ್ನಡ ನಾಡು | Kannada Naadu