ಬೆಂಗಳೂರು :
ಶಿಕ್ಷಣ ತಜ್ಞ ಹಾಗೂ ವಿಧಾನ ಪರಿಷತ್ತಿನ ಮಾಜಿ ಸದಸ್ಯರಾಗಿದ್ದ ಮೇದರಪಟ್ಟ ರಾಮ ನಾಯ್ಡು ದೊರೆಸ್ವಾಮಿ ಅವರು ಮಾರ್ಚ್ 6 ರಂದು ನಿಧನ ಹೊಂದಿರುವ ವಿಷಯವನ್ನು ಸಭಾಧ್ಯಕ್ಷ ಬಸವರಾಜ ಹೊರಟ್ಟಿ ಅವರು ಸದನದಲ್ಲಿ ತಿಳಿಸಿ ಸಂತಾಪವನ್ನು ವ್ಯಕ್ತಪಡಿಸಿದರು.
1937ರ ನವೆಂಬರ್ 7 ರಂದು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ನಾವೂರು ಎಂಬ ಹಳ್ಳಿಯಲ್ಲಿ ಜನಿಸಿದ್ದ ಶ್ರೀಯುತರು ಮೂಲತ: ಕೃಷಿ ಕುಟುಂಬದವರಾಗಿದ್ದರು. ಎಂ.ಎ., ಬಿ.ಎಲ್., ಪದವೀಧರರಾಗಿದ್ದು, ಬೆಂಗಳೂರಿನ ದಯಾನಂದಸಾಗರ ಸಂಜೆ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದರು.
ಶ್ರೀಯುತರು ದೂರದೃಷ್ಟಿಯ ಚಿಂತನೆ ಹೊಂದಿದ್ದು, ಪಿಇಎಸ್ ಶಿಕ್ಷಣ ಸಂಸ್ಥೆಯನ್ನು ಶಾಲಾ ಹಂತದಿಂದ ವಿಶ್ವವಿದ್ಯಾಲಯದ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗುವುದರ ಮೂಲಕ ಶಿಕ್ಷಣೋದ್ಯಮಿಯಾದರು. ಸರ್ಕಾರದ ಶೈಕ್ಷಣಿಕ ಸುಧಾರಣೆಗಳ ಸಲಹೆಗಾರರಾಗಿ ಎರಡು ಬಾರಿ ಕಾರ್ಯನಿರ್ವಹಿಸಿದ್ದರು ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
2008 ರಿಂದ 2014ರವರೆಗೆ ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಹೊಂದಿದ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ರಾಜ್ಯದ ಶೈಕ್ಷಣಿಕ ಅಭಿವೃದ್ಧಿಗೆ ಅನನ್ಯ ಕೊಡುಗೆ ನೀಡಿರುತ್ತಾರೆ. ಕೆಜಿಯಿಂದ ಪಿಜಿವರೆಗೆ ಎಲ್ಲಾ ರೀತಿಯ ಶಿಕ್ಷಣ ನೀಡಲು ಕರ್ನಾಟಕ ಮತ್ತು ಆಂಧ್ರಪ್ರದೇಶಗಳಲ್ಲಿ ಪಿಇಎಸ್ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದರಲ್ಲದೇ, ಜಾಗತಿಕ ಪ್ರವೃತ್ತಿಗಳ ಬಗ್ಗೆ ಅರಿವು ಮೂಡಿಸಿದ್ದರು. ಶಿಸ್ತು, ಸಂಯಮ, ಪರಿಶ್ರಮ ಮತ್ತು ದಣಿವರಿಯದ ಇವರ ದುಡಿಮೆಯಿಂದಾಗಿ ಶಿಕ್ಷಣ ಕ್ಷೇತ್ರದ ದೊರೆಯಾಗಿದ್ದರು.
ಶಿಕ್ಷಣ ಕ್ಷೇತ್ರದ ಸುಧಾರಣೆಗಾಗಿ ನೀಡಿರುವ ಅಪಾರ ಕೊಡುಗೆಗೆ ರಾಜ್ಯ ಸರ್ಕಾರವು ರಾಜ್ಯೋತ್ಸವ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಯುಎಸ್ ಶಿಕ್ಷಣ ಸಂಸ್ಥೆಯಿಂದ ಫುಲ್‍ಬೈಟ್ ಫೆಲೋಶಿಪ್ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪ್ರಶಸ್ತಿಗಳಲ್ಲದೆ ಇತರೆ ಹತ್ತು ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿರುತ್ತಾರೆ.
ಶ್ರೀಯುತರ ನಿಧನದಿಂದಾಗಿ ರಾಜ್ಯವು ಅತ್ಯುತ್ತಮ ಶಿಕ್ಷಣತಜ್ಞ ಹಾಗೂ ಹಿರಿಯ ರಾಜಕಾರಣಿಯೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದು ತಿಳಿಸಿದರು.
ಎಂ.ಆರ್ ದೊರೆಸ್ವಾಮಿ ಅವರ ನಿಧನಕ್ಕೆ ಸಭಾನಾಯಕರಾದ ಎನ್. ಎಸ್. ಭೋಸರಾಜು ಹಾಗೂ ವಿರೋಧ ಪಕ್ಷದ ಪರವಾಗಿ ಪರಿಷತ್ ಸದಸ್ಯ ಸಿ.ಟಿ. ರವಿ ಅವರು ಬೆಂಬಲ ಸೂಚಿಸಿ ಸಂತಾಪವನ್ನು ವ್ಯಕ್ತಪಡಿಸಿದರು.
Publisher: ಕನ್ನಡ ನಾಡು | Kannada Naadu