ಕನ್ನಡ ನಾಡು | Kannada Naadu

ಪದ್ಮಶ್ರೀ ಪಂಡಿತ್ ವೆಂಕಟೇಶ್ ಕುಮಾರ್ ಅವರಿಗೆ ಗುರುಗಂಧರ್ವ ರಾಷ್ಟ್ರೀಯ ಪುರಸ್ಕಾರ ಪ್ರದಾನ

10 Mar, 2025

 

ಬೆಂಗಳೂರು: ಇಲ್ಲಿನ ಜೆ.ಸಿ.ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರ ಸಭಾಂಗಣದಲ್ಲಿ ಗಾಯನಾಚಾರ್ಯ ಗುರುರಾವ್ ದೇಶಪಾಂಡೆ ಸಂಗೀತ ಸಭಾ ವತಿಯಿಂದ  ಗುರುರಾವ್ ದೇಶಪಾಂಡೆ - ಭೀಮಸೇನ್ ಜೋಶಿ ಸ್ಮರಣಾರ್ಥ ಅಹೋರಾತ್ರಿ ಸಂಗೀತೋತ್ಸವ ಆಯೋಜಿಸಲಾಗಿತ್ತು
ಈ ಬಾರಿಯ ಸಂಗೀತೋತ್ಸವದ ವೇಳೆ ನಾಡಿನ ಖ್ಯಾತ ಹಿಂದೂಸ್ತಾನಿ ಗಾಯಕರಾದ ಪದ್ಮಶ್ರೀ ಪುರಸ್ಕೃತ ಪಂಡಿತ್ ವೆಂಕಟೇಶ್ ಕುಮಾರ್ ಅವರಿಗೆ *ಗುರುಗಂಧರ್ವ ರಾಷ್ಟ್ರೀಯ ಪುರಸ್ಕಾರ* ಪ್ರದಾನ ಮಾಡಿ ಗೌರವಿಸಲಾಯಿತು. ಇದೇ ವೇಳೆ ಇತ್ತೀಚೆಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮ ವಿಭೂಷಣಕ್ಕೆ ಭಾಜನರಾದ ಡಾ. ಎಲ್.ಸುಬ್ರಮಣ್ಯಂ ಅವರನ್ನೂ ಸನ್ಮಾನಿಸಲಾಯಿತು.
          ಕಾರ್ಯಕ್ರಮದಲ್ಲಿ ಡಾ. ಎಲ್ ಸುಬ್ರಮಣಿಯನ್ ಅವರೊಂದಿಗೆ, ಅಂಕಣಕಾರರೂ, ರಮಣಶ್ರೀ ಹೋಟೆಲ್ ಸಮೂಹದ ಮುಖ್ಯಸ್ಥರಾದ ಶ್ರೀ ಎಸ್.ಷಡಕ್ಷರಿ ಅವರು ಮುಖ್ಯ ಅಭ್ಯಾಗತರಾಗಿ ಪಾಲ್ಗೊಂಡರು.
         ಈ ಬಾರಿಯ ಸಂಗೀತೋತ್ಸವದಲ್ಲಿ ಪ್ರಶಸ್ತಿ ಪುರಸ್ಕೃತ ಪಂಡಿತ್ ವೆಂಕಟೇಶ್ ಕುಮಾರ್ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಪ್ರಸ್ತುತಪಡಿಸಿದರು.
               ಬಳಿಕ ಪಂಡಿತ್ ವಿನಾಯಕ ತೊರವಿ ಗಾಯನ, ವಿದುಷಿ ಅನುಪಮಾ ಭಾಗವತ್ ಸಿತಾರ್, ಶ್ರೀ ಓಜಸ್ ಅಧಿಯ ತಬಲಾ ಸ್ವತಂತ್ರ ವಾದನ ಹಾಗೂ ಶ್ರೀ ಅನಿರುದ್ಧ ಐತಾಳ್ ಗಾಯನದ ಮೂಲಕ ಸಂಗೀತಾಸಕ್ತರಿಗೆ ಮಧುರ ಸಂಗೀತದ ರಸದೌತಣವನ್ನು ಉಣಬಡಿಸಿದರು.
ಸಾಹವಾದನದಲ್ಲಿ ಪಂಡಿತ್ ರವೀಂದ್ರ ಯಾವಗಲ್, ಪಂಡಿತ್ ರವೀಂದ್ರ ಕಟೋಟಿ, ಪಂಡಿತ್ ವ್ಯಾಸಮೂರ್ತಿ ಕಟ್ಟಿ, ಪಂಡಿತ್ ರಾಜೇಂದ್ರ ನಾಕೋಡ್ ಹಾಗೂ ಶ್ರೀ ಸುಧಾಂಶು ಘರ್ಪುರೆ ಕಲಾವಿದರಿಗೆ ಸಮರ್ಥ ಸಾಥ್ ನೀಡಿದರು.
            ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪಂ.ವೆಂಕಟೇಶ್ ಕುಮಾರ್, ಸಂಗೀತ ಹಾಗೂ ನೃತ್ಯ ಕ್ಷೇತ್ರದಲ್ಲಿ ಗುರುಗಳ ಮಾರ್ಗದರ್ಶನ ಹಾಗೂ ಒಡನಾಟ ಬಹಳ ಮುಖ್ಯ. ಇವೆರಡೂ ಕ್ಷೇತ್ರಗಳಲ್ಲಿ ಇನ್ನೂ ಗುರುಗಳನ್ನು ಉನ್ನತ ಸ್ಥಾನದಲ್ಲಿ ಇಡಲಾಗುತ್ತದೆ. ಜನರು ಸಂಗೀತ ಸಿದ್ಧಿ ಮಾಡಿಕೊಂಡರೆ ಪ್ರಸಿದ್ಧಿ ಅದಾಗಿಯೇ ಬರುತ್ತದೆ. ಆದರೆ ಇಂದು ಹೆಚ್ಚಿನ ಜನರು ಸಿದ್ಧಿ ಬದಲು ಪ್ರಸಿದ್ಧಿ ಹಿಂದೆ ಹೋಗುತ್ತಾರೆ ಎಂದರು...
ಬಳಿಕ ಮಾತನಾಡಿದ ಡಾ.ಎಲ್.ಸುಬ್ರಮಣ್ಯಂ, ಸತತ 40 ವರ್ಷಗಳಿಂದ ಇಂತಹ ಅಹೋರಾತ್ರಿ ಸಂಗೀತೋತ್ಸವವನ್ನು ಆಯೋಜಿಸುವುದು ಸವಾಲಿನ ಕೆಲಸವಾಗಿದೆ. ಇಂತಹ ಕಾರ್ಯಕ್ರಮಗಳಿಂದಾಗಿಯೇ ನಾಡಿನಲ್ಲಿ ಸಂಗೀತ ಕ್ಷೇತ್ರ ಬೆಳೆಯುತ್ತಿದೆ ಎಂದರು.

Publisher: ಕನ್ನಡ ನಾಡು | Kannada Naadu

Login to Give your comment
Powered by