ಕನ್ನಡ ನಾಡು | Kannada Naadu

ಸಿಎಮ್‌ ಸಿದ್ದರಾಮಯ್ಯ ಮಂಡಿಸಿದ 2025-26ನೇ ಸಾಲಿನ ಆಯವ್ಯಯ ...

07 Mar, 2025

ಸನ್ಮಾನ್ಯ ಸಭಾಧ್ಯಕ್ಷರೆ,
 
1. 2025-26ನೇ ಸಾಲಿನ ಆಯವ್ಯಯವನ್ನು ಸದನದ ಮುಂದೆ ಮಂಡಿಸಲು ನಾನು ಹರ್ಷಿಸುತ್ತೇನೆ.

2. ಆಯವ್ಯಯ ಎನ್ನುವುದು ಕೂಡಿ ಕಳೆಯುವ ಅಂಕಿ ಸಂಖ್ಯೆಗಳ ನಿರ್ಜೀವ ಆಟವಲ್ಲ. ಏಳು ಕೋಟಿ ಜನರ ಬದುಕಿನ ಭರವಸೆಯ ಉಸಿರು ಎಂಬ ಅರಿವಿನೊಂದಿಗೆ ನಮ್ಮ ಸಂಕಲ್ಪಗಳನ್ನು
ನಾಡಿನ ಜನಕೋಟಿಯ ಮುಂದಿರಿಸುವ ಬಹುದೊಡ್ಡ ಹೊಣೆಗಾರಿಕೆಯೊಂದಿಗೆ ನಿಂತಿದ್ದೇನೆ.
ನಮ್ಮ ಕೈಬುಟ್ಟಿಯಲಿ
ಸಿಡಿಲ ಗೂಡಿಹುದು
ಹುಡುಕಿ ನೋಡಿದರಲ್ಲಿ
ಸುಮದ ಬೀಡಿಹುದು
- ಕುವೆಂಪು

3. ರಾಜ್ಯದ ಪ್ರತಿ ಪ್ರಜೆಯ ಕನಸನ್ನು ಸಾಕಾರಗೊಳಿಸುವ, ನಾಳೆಗಳ ಬಗ್ಗೆ ಭರವಸೆ ಮೂಡಿಸುವ, ನುಡಿದಂತೆ ನಡೆಯುವ ನಮ್ಮ ವಾಗ್ದಾನವನ್ನು ಈ ಆಯವ್ಯಯ ಇನ್ನಷ್ಟು ದೃಢಪಡಿಸುತ್ತದೆ. ಆಯವ್ಯಯವು ಸುಸ್ಥಿರ ಮತ್ತು ನ್ಯಾಯಬದ್ಧ ಆರ್ಥಿಕತೆಯ ಮೂಲಕ ಪ್ರತಿಯೊಬ್ಬರ ಕಲ್ಯಾಣ ಸಾಧ್ಯವೆಂಬ ಮಹಾತ್ಮಾ ಗಾಂಧೀಜಿಯವರ ಆಶಯದ ಸ್ಪಷ್ಟ ದಿಕ್ಸೂಚಿಯಾಗಿದ್ದು,
ಸರ್ಕಾರದ ಸಾಮಾಜಿಕ, ಆರ್ಥಿಕ ಸಮಾನತೆಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

4. ಬಲಿಷ್ಠವಾದುದು ಮಾತ್ರ ಬದುಕುತ್ತದೆ ಎಂಬುದು ಮೃಗೀಯ ತತ್ವ. ಮನುಷ್ಯ ಸಮಾಜದಲ್ಲೂ ಈ ರೀತಿಯಾದರೆ ಅದನ್ನು ʻಸೋಷಿಯಲ್‌ ಡಾರ್ವಿನಿಸಂʼ ಎಂದು ಕರೆಯಲಾಗುತ್ತದೆ. ಈ ತತ್ವಕ್ಕೆ ವಿರುದ್ಧವಾಗಿ ಮಾನವೀಯ ನೆಲೆಯಲ್ಲಿ ಸಮ ಸಮಾಜದ ಆಶಯದ ಮೂಲಕ ದೇಶವನ್ನು ಕಟ್ಟಲು ಬಾಬಾ ಸಾಹೇಬ್‌
ಡಾ|| ಬಿ.ಆರ್.‌ ಅಂಬೇಡ್ಕರ್‌ ಅವರು ಸಂವಿಧಾನ ರಚಿಸಿಕೊಟ್ಟಿದ್ದಾರೆ. ಸಂವಿಧಾನದ ಹಿಂದೆ ಬುದ್ಧ, ಬಸವಣ್ಣ, ನಾರಾಯಣ ಗುರು ಮುಂತಾದ ದಾರ್ಶನಿಕರ ಕನಸುಗಳಿವೆ. ಇವರೆಲ್ಲರ ಆಶಯಗಳಂತೆ ನಾವು ಬದ್ಧತೆಯಿಂದ ರಾಜ್ಯವನ್ನು ಮುನ್ನಡೆಸುತ್ತಿದ್ದೇವೆ. ಸಾಮಾಜಿಕ ನ್ಯಾಯದ ತಳಹದಿ ಭದ್ರಗೊಳ್ಳುತ್ತಲೇ ಇರಬೇಕು ಎನ್ನುವುದು ನಮ್ಮ ಸರ್ಕಾರದ ದೃಢ ಸಂಕಲ್ಪ.
 
ಇರುವೆಲ್ಲವನು ಎಲ್ಲ ಜನಕೆ ತೆರವಾಗಿಸುವ
ಸಮಬಗೆಯ ಸಮಸುಖದ ಸಮದುಃಖದ
ಸಾಮರಸ್ಯದ ಸಾಮಗಾನ ಲಹರಿಯ ಮೇಲೆ
ತೇಲಿ ಬರಲಿದೆ ನೋಡು, ನಮ್ಮ ನಾಡು.
- ಗೋಪಾಲ ಕೃಷ್ಣ ಅಡಿಗ

5. ಲಭ್ಯ ಸಂಪನ್ಮೂಲಗಳನ್ನು ಸರ್ವರಿಗೂ ಲಭ್ಯವಾಗುವಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ. ಆರ್ಥಿಕ ಅಭಿವೃದ್ಧಿ ಹಾಗೂ ಜನಕಲ್ಯಾಣಗಳ ನಡುವೆ ಸಮತೋಲನ ಸಾಧಿಸಿ, ಸಾರ್ವತ್ರಿಕ ಮೂಲ ಆದಾಯ ಪರಿಕಲ್ಪನೆಯ ಮೂಲಕ ಕರ್ನಾಟಕ ಅಭಿವೃದ್ಧಿ ಮಾದರಿಯನ್ನು ರೂಪಿಸುತ್ತಿದ್ದೇವೆ.

6. ಪಂಚ ಗ್ಯಾರಂಟಿಗಳು ಸೇರಿದಂತೆ ನೀಡಿರುವ ಹಲವು ಕಲ್ಯಾಣ ಕಾರ್ಯಕ್ರಮಗಳು ಉಚಿತ ಕೊಡುಗೆಗಳಲ್ಲ; ಇವು ಆರ್ಥಿಕ ಮತ್ತು ಸಾಮಾಜಿಕ ತತ್ವದಲ್ಲಿ ಮಾಡಿರುವ ಹೂಡಿಕೆಗಳು ಎಂದು ಆತ್ಮವಿಶ್ವಾಸದಿಂದ ಹೇಳಬಯಸುತ್ತೇನೆ. ನಾಡಿನ ಖ್ಯಾತ ವಿದ್ವಾಂಸರಾಗಿದ್ದ ಮುಜಾಫರ್‌ ಅಸ್ಸಾದಿಯವರು “ಗ್ಯಾರಂಟಿ ಯೋಜನೆಗಳ ಹಿಂದೆ ಬಡತನದ ನೋವಿದೆ, ಬಡತನದ ಹಿಂಸೆ ಇದೆ, ಮಹಿಳೆಯರಲ್ಲಿ ಮಡುಗಟ್ಟಿದ ನೋವುಗಳಿವೆ, ಅಸಮಾನ ಭಾರತದ ಪರಿಕಲ್ಪನೆ ಇದೆ” ಎಂದಿದ್ದಾರೆ.

7. ‌ವಿಶ್ವದ ವಿವಿಧ ವೇದಿಕೆಗಳು ಯಾವ ಪ್ರಶ್ನೆಗಳಿಗೆ ಇಂದು ಹುಡುಕಾಟ ನಡೆಸುತ್ತಿವೆಯೊ ಅವುಗಳಿಗೆ ಕರ್ನಾಟಕ ಸರ್ಕಾರವು ಉತ್ತರ ರೂಪದಲ್ಲಿ ತನ್ನ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನ ಮಾಡುತ್ತಿದೆ. ಜನರಲ್ಲಿ ಕೊಂಡುಕೊಳ್ಳುವ ಶಕ್ತಿ ಲಭಿಸಲಿ ಎಂಬ ಆಶಯದಿಂದ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದೇವೆ. ಮಹಿಳಾ ಸಶಕ್ತೀಕರಣದ ಮೂಲಕ ನಾಡನ್ನು ಮುನ್ನಡೆಸುವುದು ಒಂದು ಬಗೆಯಾದರೆ, ʻಹಸಿರು ಆರ್ಥಿಕತೆʼ ಯ ಮೂಲಕ ಪರಿಸರದ ಬಿಕ್ಕಟ್ಟುಗಳಿಗೆ ಉತ್ತರ ಕಂಡುಕೊಳ್ಳಲು ಪ್ರಯತ್ನಿಸಲಾಗುತ್ತಿದೆ. ರಾಜ್ಯವು ಇಂದು ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ದೇಶದಲ್ಲಿಯೇ ಮುಂಚೂಣಿಯಲ್ಲಿದೆ. ಪರಿಸರಕ್ಕೆ ಹಾನಿಕಾರಕವಲ್ಲದ ಕೈಗಾರಿಕೆಗಳಿಗೆ ಉತ್ತೇಜನ ನೀಡಲಾಗುತ್ತಿದೆ. ಬಳಸಿದ ನೀರನ್ನು ಶುದ್ಧೀಕರಿಸಿ ಸಶಕ್ತವಾಗಿ ಮರುಬಳಕೆ ಮಾಡುತ್ತಿರುವ ವಿಧಾನವೂ ಕೂಡ ವಿಶ್ವ ವೇದಿಕೆಗಳಿಂದ ಶ್ಲಾಘನೆಗೆ ಒಳಗಾಗಿದೆ. ರಾಜ್ಯವು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡುತ್ತಿದೆ. ನಮ್ಮ ವಸತಿ ಶಾಲೆಗಳಲ್ಲಿ, ವಿದ್ಯಾರ್ಥಿ ನಿಲಯಗಳಲ್ಲಿ ದೇಶದಲ್ಲಿಯೇ ಅತಿ ಹೆಚ್ಚು ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಮತ್ತು ಆಹಾರವನ್ನು ಪಡೆಯುತ್ತಿದ್ದಾರೆ. ಯುವ ಜನರನ್ನು ಜಾಗತಿಕ ಮಟ್ಟದ ಕೌಶಲ್ಯವಂತರನ್ನಾಗಿಸಲು ಹಲವು ರೀತಿಯ ಯೋಜನೆಗಳನ್ನು ರೂಪಿಸಿ ಅನುಷ್ಠಾನ ಮಾಡುತ್ತಿದ್ದೇವೆ.

8. ಈ ವರ್ಷದ ಆಯವ್ಯಯದಲ್ಲಿ ಪ್ರಮುಖವಾಗಿ ಆರು ಅಭಿವೃದ್ಧಿಯ ಆಯಾಮಗಳನ್ನು ಗುರುತಿಸಿ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುತ್ತದೆ:

ಅ.​ಕಲ್ಯಾಣ ಕಾರ್ಯಕ್ರಮಗಳ ಆಯವ್ಯಯ; ಗ್ಯಾರಂಟಿ ಯೋಜನೆಗಳ ಜೊತೆಗೆ ಇತರ ಜನಪರ ಕಾರ್ಯಕ್ರಮಗಳಿಗೂ ನಮ್ಮ ಸರ್ಕಾರ ಒತ್ತು ನೀಡಿದೆ. ದುರ್ಬಲ ವರ್ಗದವರಿಗೆ ನೀಡುತ್ತಿರುವ ಸವಲತ್ತುಗಳನ್ನು ಇನ್ನಷ್ಟು ಬಲಪಡಿಸುವ ಗುರಿ ಹೊಂದಿದ್ದೇವೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು, ಮಹಿಳೆಯರು, ರೈತರು, ಶ್ರಮಿಕರು ಸೇರಿದಂತೆ ವಿವಿಧ ವರ್ಗಗಳ ಅಭ್ಯುದಯಕ್ಕೆ ನಮ್ಮ ಸರ್ಕಾರ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲಿದೆ.

ಆ.​ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಆಯವ್ಯಯ;‌ ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ, ಮೀನುಗಾರಿಕೆ ಮತ್ತು ಗ್ರಾಮೀಣಾಭಿವೃದ್ಧಿಗಳು ಪರಸ್ಪರ ಪೂರಕವಾಗಿ ದುಡಿಯುವ ಕಾರ್ಯಕ್ಷೇತ್ರಗಳು. ಇವುಗಳ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಸರ್ಕಾರ ಹಲವು ಯೋಜನೆಗಳನ್ನು ರೂಪಿಸುತ್ತಿದೆ. ರೈತರು, ಮೀನುಗಾರರು ಮುಂತಾದವರ ಆದಾಯ ಹೆಚ್ಚಿಸುವ ಈ ಯೋಜನೆಗಳು ಭವಿಷ್ಯದ ಕರ್ನಾಟಕದ ಆರ್ಥಿಕಾಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಲಿವೆ. ಕೃಷಿ ಮತ್ತು ಇನ್ನಿತರೆ ಆಸ್ತಿಗಳ ದಾಖಲೀಕರಣ, ಮೂಲಸೌಲಭ್ಯ ಒದಗಿಸುವಿಕೆ, ಸಮರ್ಪಕ ವಿದ್ಯುತ್‌ ಪೂರೈಕೆ, ಗೋದಾಮುಗಳ ಒದಗಿಸುವಿಕೆ ಮುಂತಾದ ಚಟುವಟಿಕೆಗಳ ಮೂಲಕ ಗ್ರಾಮಗಳ ಅಭಿವೃದ್ಧಿಗೆ ಹಾಗೂ ಗ್ರಾಮೀಣ ಜನರ ಆದಾಯ ಹೆಚ್ಚಿಸಲು ಶ್ರಮಿಸಲಾಗುವುದು.

ಇ. ಅಭಿವೃದ್ಧಿ ಕೇಂದ್ರಿತ ಆಯವ್ಯಯ: ನಮ್ಮ ಸರ್ಕಾರ ರಾಜ್ಯದ ಆಮೂಲಾಗ್ರ ಆರ್ಥಿಕ ಬೆಳವಣಿಗೆ ಹೆಚ್ಚಿಸುವಲ್ಲಿ ಮೂಲಸೌಕರ್ಯ ಕ್ಷೇತ್ರದ ನಿರ್ಣಾಯಕ ಪಾತ್ರವನ್ನು ಗುರುತಿಸಿ, ಈ ಬಾರಿ ಬಂಡವಾಳದ ಮೇಲಿನ ವೆಚ್ಚಗಳಿಗೆ ಗಣನೀಯವಾದ ಅನುದಾನ ಒದಗಿಸಿದೆ. ಬಂಡವಾಳ ಲೆಕ್ಕದಲ್ಲಿ ಶೇ. 47.3 ರಷ್ಟು ಹೆಚ್ಚಳವಾಗಿರುವುದು ಅಭಿವೃದ್ಧಿ ಕೇಂದ್ರಿತ ಆಯವ್ಯಯ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮಾಡಿರುವ ಹೂಡಿಕೆಯು ಸ್ವಸ್ಥ ಸಮಾಜದ ನಿರ್ಮಾಣಕ್ಕೆ ದಾರಿಯಾಗಲಿದೆ.
ಈ.​ನಗರಾಭಿವೃದ್ಧಿಗೆ ಆದ್ಯತೆ; ದಿನೇ ದಿನೇ ವೇಗವಾಗಿ ಬೆಳೆಯುತ್ತಿರುವ ರಾಜ್ಯದ ನಗರಗಳಲ್ಲಿ ನಾಗರೀಕರಿಗೆ ಸಮರ್ಪಕ ಮೂಲಸೌಕರ್ಯ ಹಾಗೂ ಗುಣಮಟ್ಟದ ಸೇವೆಗಳನ್ನು ಒದಗಿಸಲು ನಗರಾಭಿವೃದ್ಧಿ ಯೋಜನೆಗಳಿಗೆ ವಿಶೇಷ ಒತ್ತು ನೀಡಲಾಗಿದೆ. ಜೊತೆಗೆ ರಾಜ್ಯದ ಬೊಕ್ಕಸಕ್ಕೆ ಅತಿ ದೊಡ್ಡ ಕೊಡುಗೆ ನೀಡುವ ಬೆಂಗಳೂರು ಮಹಾನಗರದ ಮೂಲಸೌಕರ್ಯ, ಸೇವಾಪೂರೈಕೆ ಹಾಗೂ ಸಂಚಾರ ಸುವ್ಯವಸ್ಥೆಗಳಿಗಾಗಿ ʻಬ್ರ್ಯಾಂಡ್‌ ಬೆಂಗಳೂರುʼ ಎಂಬ
ಪರಿಕಲ್ಪನೆಯಡಿ ಮಹತ್ವಾಕಾಂಕ್ಷಿ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಎರಡನೇ ಮತ್ತು ಮೂರನೇ ಹಂತದ ನಗರಗಳನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸುವುದರ ಮೂಲಕ ಬೆಂಗಳೂರಿನ ಮೇಲಿನ ಒತ್ತಡ ಕಡಿಮೆ ಮಾಡಲು ಯೋಜನೆಗಳನ್ನು ರೂಪಿಸಲಾಗಿದೆ.

ಉ.​ಹೂಡಿಕೆ ಮತ್ತು ಉದ್ಯೋಗ ಸೃಜನೆ; ಅತಿಹೆಚ್ಚು ಉದ್ಯೋಗ ಸೃಜನೆಯಾಗುವ ಎಂ.ಎಸ್.ಎಂ.ಇ, ಪ್ರವಾಸೋದ್ಯಮ, ಐಟಿಬಿಟಿ ವಲಯಗಳಲ್ಲಿ ಹೊಸ  ನೀತಿಗಳನ್ನು ಜಾರಿಗೆ ತರಲಾಗುತ್ತಿದೆ. ಇದರಿಂದ ರಾಜ್ಯದಲ್ಲಿ ಹೂಡಿಕೆದಾರ ಸ್ನೇಹಿ ವಾತಾವರಣ ನಿರ್ಮಾಣವಾಗಿ ಹೆಚ್ಚಿನ ಹೂಡಿಕೆ ಆಕರ್ಷಿಸಿ ಉದ್ಯೋಗ ಸೃಜನೆಗೆ ಆದ್ಯತೆ ನೀಡಲಾಗುತ್ತಿದೆ.

ಊ.​ಆಡಳಿತ ಸುಧಾರಣೆ: ಆಡಳಿತದಲ್ಲಿ ಪಾರದರ್ಶಕತೆ ಮತ್ತು ದಕ್ಷತೆಯನ್ನು ಹೆಚ್ಚಿಸಲು ಹಾಗೂ ಭ್ರಷ್ಟಾಚಾರವನ್ನು ನಿಗ್ರಹಿಸಲು ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗುತ್ತಿದೆ. ನಾಗರೀಕ ಸೇವಾ ಪೂರೈಕೆ ಪ್ರಕ್ರಿಯೆಗಳನ್ನು ಸರಳೀಕರಣಗೊಳಿಸಿ, ಕೌನ್ಸೆಲಿಂಗ್‌ ಮುಖಾಂತರ ವರ್ಗಾವಣೆ ನೀತಿ ಅಳವಡಿಸಿಕೊಂಡು ಆಡಳಿತ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಜನಸ್ನೇಹಿ ಮತ್ತು ಪರಿಣಾಮಕಾರಿಯಾದ ಸೇವೆಯನ್ನು ಒದಗಿಸಲು ಕಾರ್ಯತಂತ್ರಗಳನ್ನು ರೂಪಿಸಿ ಅನುಷ್ಠಾನ ಮಾಡುತ್ತೇವೆ. ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ 1 ಲಕ್ಷ ಕೋಟಿ ರೂ.ಗಳಿಗೂ ಅಧಿಕ ಮೊತ್ತವನ್ನು ಯಾವುದೇ ಮಧ್ಯವರ್ತಿಗಳ ಹಾವಳಿಯಿಲ್ಲದೆ, ನೇರವಾಗಿ ಫಲಾನುಭವಿಗಳ ಖಾತೆಗೆ ಹಾಗೂ ಕೆಲವು ರೀತಿಯ ಸಹಾಯಧನಗಳನ್ನು ಇಲಾಖೆಗಳ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ.  ಗ್ಯಾರಂಟಿ ಯೋಜನೆಗಳೊಂದರಲ್ಲೆ ಈ ವರೆಗೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಸರಾಸರಿ 233 ಕೋಟಿ ರೂ.ಗಳನ್ನು ನೇರವಾಗಿ ವರ್ಗಾಯಿಸಲಾಗಿದೆ. ನೇರ ನಗದು ವರ್ಗಾವಣೆಯಂತಹ ಕ್ರಮಗಳು ನಮ್ಮ ಸರ್ಕಾರದ ಉತ್ತರದಾಯಿತ್ವಕ್ಕೆ ಹಿಡಿದ ಕನ್ನಡಿ. ಇವೆಲ್ಲವೂ ಸರ್ಕಾರದ ಮೇಲೆ ಜನರ ಭರವಸೆಯನ್ನು ಇನ್ನಷ್ಟು ದೃಢಪಡಿಸುವ ಹೆಜ್ಜೆಗಳಾಗಿವೆ.

9. ಇವುಗಳ ಜೊತೆಗೆ ಪ್ರಾದೇಶಿಕ ಅಸಮಾನತೆಯ ನಿವಾರಣೆ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳ ಬಲವರ್ಧನೆ, ಸಾರಿಗೆಯ ಸುಗಮ ವ್ಯವಸ್ಥೆ, ಕಾನೂನು ಮತ್ತು ಸುವ್ಯವಸ್ಥೆ ನಿಭಾವಣೆಗೆ ಹೊಸ ಕಾರ್ಯತಂತ್ರಗಳಿಗೆ ಹೆಚ್ಚು ಆದ್ಯತೆ ನೀಡಲಾಗುವುದು. ಕಲ್ಯಾಣ ಇಲಾಖೆಗಳ ಮೂಲಕ ಅಸಹಾಯಕರ ಸಬಲೀಕರಣಕ್ಕೆ
ಈ ಆಯವ್ಯಯದಲ್ಲಿ ಒತ್ತು ನೀಡಲಾಗಿದೆ.

10. ನಾಡು ಕಟ್ಟುವ ಪ್ರಕ್ರಿಯೆಯಲ್ಲಿ ಸುಸ್ಥಿರ ಅಭಿವೃದ್ಧಿಯ ಇಟ್ಟಿಗೆಗಳನ್ನು ಸುವ್ಯವಸ್ಥಿತವಾಗಿ ಜೋಡಿಸುವ ಆಶಯಕ್ಕೆ ಈ ಆಯವ್ಯಯ ಬಲ ನೀಡುತ್ತದೆ.
ರಾಜ್ಯದ ಆರ್ಥಿಕತೆ

11. ಕರ್ನಾಟಕ ರಾಜ್ಯವು ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ರಾಜ್ಯಗಳಲ್ಲಿ ಒಂದಾಗಿದ್ದು, ದೇಶದ ಜಿ.ಡಿ.ಪಿ. ಗೆ ಶೇ. 8.4ರಷ್ಟು ಕೊಡುಗೆ ನೀಡಿದೆ. 2024-25ನೇ ಸಾಲಿನಲ್ಲಿ ರಾಜ್ಯ ಆರ್ಥಿಕತೆಯ ಬೆಳವಣಿಗೆಯು ಶೇ. 7.4ರಷ್ಟು ದಾಖಲಾಗಿದ್ದು, ದೇಶದ ಆರ್ಥಿಕತೆಯು ಶೇ. 6.4ರಷ್ಟು ಬೆಳವಣಿಗೆಯಾಗಿದೆ. ರಾಜ್ಯವು ಆರ್ಥಿಕ ಅಭಿವೃದ್ಧಿಯ ಪಥದಲ್ಲಿ ಮುಂದುವರೆಯುತ್ತಿದ್ದು, ಪ್ರಸಕ್ತ ವರ್ಷದಲ್ಲಿ ರಾಜ್ಯದ ಆರ್ಥಿಕ ಬೆಳವಣಿಗೆಯು ದೇಶದ ಆರ್ಥಿಕತೆಗಿಂತ ಹೆಚ್ಚಾಗಿದೆ.

12. ಕಳೆದ ವರ್ಷದಲ್ಲಿ ಶೇ.-4.9 ರಷ್ಟು ಬೆಳವಣಿಗೆ ದಾಖಲಾಗಿದ್ದ ಕೃಷಿ ವಲಯವು, 2024-25ರಲ್ಲಿ ಶೇ. 4ರಷ್ಟು ಬೆಳವಣಿಗೆ ಸಾಧಿಸುವ ಮೂಲಕ ಚೇತರಿಕೆ ಕಂಡಿದ್ದು, ದೇಶದ ಕೃಷಿ ವಲಯದ ಬೆಳವಣಿಗೆ ಶೇ.3.8ಕ್ಕಿಂತ ಹೆಚ್ಚಾಗಿದೆ. ಮುಂಗಾರು ಬಿತ್ತನೆಗೆ ಸರ್ಕಾರದ ಸಕಾರಾತ್ಮಕ ಕ್ರಮಗಳೊಂದಿಗೆ ಉತ್ತಮ ಮುಂಗಾರು ಮತ್ತು ಜಲಾಶಯಗಳು ಭರ್ತಿಯಾಗಿದ್ದರಿಂದ 2024-25ನೇ ಸಾಲಿನಲ್ಲಿ ಕೃಷಿ ವಲಯದಲ್ಲಿ ಒಳ್ಳೆಯ ಬೆಳವಣಿಗೆ ಸಾಧಿಸಲು ಕಾರಣವಾಗಿದೆ. ರಾಜ್ಯ ಸರ್ಕಾರವು ರೈತರ ಕಲ್ಯಾಣ ಉದ್ದೇಶಿತ ಯೋಜನೆಗಳಿಗೆ ವಿವಿಧ ಇಲಾಖೆಗಳಿಗೆ ಕಳೆದ ವರ್ಷ 44,000 ಕೋಟಿ ರೂ. ನೀಡಲಾಗಿತ್ತು. ಪ್ರಸಕ್ತ ವರ್ಷದಲ್ಲಿ ಒಟ್ಟು 51,339 ಕೋಟಿ ರೂ. ಅನುದಾನವನ್ನು ನೀಡಿದೆ.

13. ಕೈಗಾರಿಕಾ ವಲಯದಲ್ಲಿ ಹೂಡಿಕೆ ಸ್ನೇಹಿ ವಾತಾವರಣವನ್ನು ನಿರ್ಮಿಸುವಲ್ಲಿ ಕರ್ನಾಟಕವು ನೆಚ್ಚಿನ ರಾಜ್ಯವಾಗಿದೆ. ನಮ್ಮ ಸರ್ಕಾರವು ಹೆಚ್ಚಿನ ಉದ್ಯೋಗವನ್ನು ಸೃಜಿಸುವುದರೊಂದಿಗೆ, ಕೈಗಾರಿಕಾ ಮತ್ತು ಉತ್ಪಾದನಾ ವಲಯದ ಸಮಗ್ರ ಅಭಿವೃದ್ಧಿಗೆ ಬದ್ಧವಾಗಿದೆ. ರಾಜ್ಯ ಸರ್ಕಾರವು  ಕೈಗಾರಿಕಾ ನೀತಿ 2025-30ಕ್ಕೆ ಚಾಲನೆ ನೀಡಿದ್ದು, ಇದು 2030 ರ ವೇಳೆಗೆ ಉತ್ಪಾದನಾ ವಲಯದಲ್ಲಿ ಶೇ.12ರಷ್ಟು ವಾರ್ಷಿಕ ಬೆಳವಣಿಗೆಯನ್ನು ಸಾಧಿಸುವುದರೊಂದಿಗೆ 20 ಲಕ್ಷ ಉದ್ಯೋಗಗಳನ್ನು ಸೃಜಿಸುವ ಗುರಿ ಹೊಂದಿದೆ. 2024-25ನೇ ಸಾಲಿನಲ್ಲಿ ಕೈಗಾರಿಕಾ ವಲಯವು  
ಶೇ.5.8ರಷ್ಟು ಬೆಳವಣಿಗೆ ಸಾಧಿಸಿದೆ. ರಾಜ್ಯಕ್ಕೆ ಹೆಚ್ಚಿನ ಹೂಡಿಕೆಗಳನ್ನು ಆಕರ್ಷಿಸುವ ಉದ್ದೇಶದಿಂದ ಒಟ್ಟು 13,692 ಕೋಟಿ ರೂ. ಆರ್ಥಿಕ ನೆರವು ಮತ್ತು ಸಹಾಯಧನವನ್ನು ಒದಗಿಸಲು ಸರ್ಕಾರವು ಸಮ್ಮತಿಸಿದೆ.

14. ಕರ್ನಾಟಕದ ಆರ್ಥಿಕತೆಯಲ್ಲಿ ಸೇವಾ ವಲಯದ ಕೊಡುಗೆಯೂ ಪ್ರಮುಖವಾಗಿದ್ದು, ಒಟ್ಟು ಮೌಲ್ಯವರ್ಧನೆಯಲ್ಲಿ (Gross Value Added) ಸೇವಾ ವಲಯಗಳ ಪಾಲು ಶೇ.66 ರಷ್ಟಿದೆ.
2024-25ನೇ ಸಾಲಿಗೆ ರಾಜ್ಯದಲ್ಲಿ ಸೇವಾ ವಲಯವು ಗಣನೀಯವಾಗಿ ಬೆಳವಣಿಗೆಯಾಗಿದ್ದು, ಶೇ.8.9 ರಷ್ಟು ಬೆಳವಣಿಗೆ ದಾಖಲಿಸುವ ಮೂಲಕ ದೇಶದ ಆರ್ಥಿಕತೆಯಲ್ಲಿನ ಸೇವಾ ವಲಯದ ಬೆಳವಣಿಗೆ ಶೇ.7.2 ಕ್ಕಿಂತ ಹೆಚ್ಚಾಗಿದೆ.

15. ಆರ್ಥಿಕ ಬೆಳವಣಿಗೆ ಮತ್ತು ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಜಿಸಲು ಸರ್ಕಾರವು ಮಾಹಿತಿ ತಂತ್ರಜ್ಞಾನ, ಪ್ರವಾಸೋದ್ಯಮ, ಜೈವಿಕ ತಂತ್ರಜ್ಞಾನ ಸೇರಿದಂತೆ ಕೈಗಾರಿಕೆ ಮತ್ತು ಸೇವಾ ವಲಯದಲ್ಲಿ ಹಲವು ನೀತಿಗಳನ್ನು ಜಾರಿಗೆ ತಂದಿದೆ. ಈ ನೀತಿಗಳು ಮಾನವ ಸಂಪನ್ಮೂಲವನ್ನು ಸಮರ್ಥವಾಗಿ ಬಳಸುವುದರ ಜೊತೆಗೆ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಹೆಚ್ಚಿನ ಹೂಡಿಕೆಗಳನ್ನು ಉತ್ತೇಜಿಸಲಿವೆ. ಸರ್ಕಾರವು ಜಾರಿಗೆ ತಂದಿರುವ ಈ ನೀತಿಗಳಿಂದ ರಾಜ್ಯದಲ್ಲಿ ಅಂದಾಜು ಒಂದು ಲಕ್ಷ ಕೋಟಿ ರೂ. ಹೂಡಿಕೆಯನ್ನು ನಿರೀಕ್ಷಿಸಲಾಗಿದೆ. ಈ ಉದ್ದೇಶಕ್ಕೆ ಸರ್ಕಾರವು 13,500 ಕೋಟಿ ರೂ. ಸಹಾಯಧನ ಮತ್ತು ಆರ್ಥಿಕ ನೆರವು ನೀಡಲು ಸಹಮತಿಸಿದೆ.

16. ನಮ್ಮ ಸರ್ಕಾರವು ಆರ್ಥಿಕತೆಯ ಬೆಳವಣಿಗೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದು, 2024-25ರ ಡಿಸೆಂಬರ್‌ ಅಂತ್ಯದವರೆಗೆ 4.4 ಬಿಲಿಯನ್ ಡಾಲರ್ ಮೌಲ್ಯದ ವಿದೇಶಿ ಹೂಡಿಕೆಗಳನ್ನು ಆಕರ್ಷಿಸುವ ಮೂಲಕ ದೇಶದಲ್ಲಿಯೇ ಮೂರನೇ ಸ್ಥಾನದಲ್ಲಿದೆ.


ರಾಜ್ಯದ ಹಣಕಾಸು ಪರಿಸ್ಥಿತಿ

17. ಕರ್ನಾಟಕ ರಾಜ್ಯವು, ಸುಸ್ಥಿರ ಋಣ ನಿರ್ವಹಣೆ ಮತ್ತು ವಿತ್ತೀಯ ಶಿಸ್ತು ಪಾಲಿಸುವ ಮೂಲಕ ವಿತ್ತೀಯ ಹೊಣೆಗಾರಿಕೆಯನ್ನು ಉತ್ತಮವಾಗಿ ನಿಭಾಯಿಸಿದೆ. ನಮ್ಮ ರಾಜ್ಯದಲ್ಲಿ ವಿತ್ತೀಯ ಹೊಣೆಗಾರಿಕೆ ಅಧಿನಿಯಮವನ್ನು ಕೇಂದ್ರ ಸರ್ಕಾರವು ಅನುಷ್ಠಾನಕ್ಕೆ ತರುವ ಮುನ್ನವೇ ಜಾರಿಗೆ ತರಲಾಯಿತು. ಅಲ್ಲದೆ, ರಾಜ್ಯದ ಒಟ್ಟು ಹೊಣೆಗಾರಿಕೆಗಳಲ್ಲಿ ಆಯವ್ಯಯದ ಹೊರಗಿನ ಸಾಲಗಳನ್ನು ಪರಿಗಣಿಸಿದ ಮೊದಲ ರಾಜ್ಯ ಕರ್ನಾಟಕ. ಆದಾಗ್ಯೂ, ಜಿ.ಎಸ್.ಟಿ ಜಾರಿಯಿಂದ ರಾಜ್ಯಕ್ಕೆ ಆದ ರಾಜಸ್ವ ನಷ್ಟವನ್ನು ಸಂಪೂರ್ಣವಾಗಿ ಸರಿದೂಗಿಸಲು ಕೇಂದ್ರ ಸರ್ಕಾರ ವಿಫಲವಾದ ಕಾರಣ ಮತ್ತು  ಕೇಂದ್ರ ಸರ್ಕಾರ ವಿಧಿಸುವ ಸೆಸ್ಗಳು ಮತ್ತು ಸರ್‌ಚಾರ್ಜ್‌ಗಳನ್ನು ರಾಜ್ಯಗಳಿಗೆ ಹಂಚಿಕೆಯಾಗುವ ತೆರಿಗೆ ಪಾಲಿನಲ್ಲಿ ಪರಿಗಣಿಸದಿರುವುದರಿಂದ ಹಾಗೂ 15ನೇ ಹಣಕಾಸು ಆಯೋಗದ ಶಿಫಾರಸ್ಸಿನನ್ವಯ ರಾಜ್ಯದ ತೆರಿಗೆ ಪಾಲು ಕಡಿಮೆಯಾದ ಕಾರಣ ರಾಜ್ಯವು ವಿತ್ತೀಯ ಸವಾಲುಗಳನ್ನು ಎದುರಿಸುವಂತಾಯಿತು.

18. ೧೫ನೇ ಹಣಕಾಸು ಆಯೋಗದ ಶಿಫಾರಸ್ಸಿನ ಅನ್ವಯ ತೆರಿಗೆ ಹಂಚಿಕೆಯಲ್ಲಿ ಅತಿ ಹೆಚ್ಚು ನಷ್ಟವನ್ನು ಅನುಭವಿಸಿದ ರಾಜ್ಯ ಕರ್ನಾಟಕ. 14ನೇ ಹಣಕಾಸು ಆಯೋಗವು ಕರ್ನಾಟಕಕ್ಕೆ ಶಿಫಾರಸ್ಸು ಮಾಡಿದ್ದ ತೆರಿಗೆ ಪಾಲು ಶೇ. 4.713 ರಿಂದ, 15ನೇ ಹಣಕಾಸು ಆಯೋಗದ ಅವಧಿಯಲ್ಲಿ ಶೇ.೩.೬47ಕ್ಕೆ ಇಳಿಕೆಯಾಯಿತು. ಇದರಿಂದಾಗಿ ರಾಜ್ಯದ ತೆರಿಗೆ ಹಂಚಿಕೆಯು ಶೇ.೨3ರಷ್ಟು ಕುಸಿತವಾಗಿ, ರಾಜ್ಯವು ವಾರ್ಷಿಕ ಅಂದಾಜು ೧೨ ಸಾವಿರ ಕೋಟಿ ರೂ. ನಷ್ಟ ಅನುಭವಿಸಬೇಕಾಯಿತು. ಅಲ್ಲದೆ, ೧೫ನೇ ಹಣಕಾಸು ಆಯೋಗವು ರಾಜ್ಯದ ತೆರಿಗೆ ಪಾಲು ಕಡಿಮೆಯಾದ ಕಾರಣ 5,495 ಕೋಟಿ ರೂ.ಗಳ ವಿಶೇಷ ಅನುದಾನ, ಬೆಂಗಳೂರಿನಲ್ಲಿ ಕೆರೆಗಳ ಸಂರಕ್ಷಣೆಗಾಗಿ 3,000 ಕೋಟಿ ರೂ. ಮತ್ತು ಪೆರಿಫೆರಲ್‌ ರಿಂಗ್ ರಸ್ತೆ ಅಭಿವೃದ್ಧಿಗೆ 3,000 ಕೋಟಿ ರೂ. ಸೇರಿ ಒಟ್ಟು 11,495 ಕೋಟಿ ರೂ.ಗಳನ್ನು ತನ್ನ ವರದಿಯಲ್ಲಿ ಶಿಫಾರಸ್ಸು ಮಾಡಿತು. ಆದರೆ, ಕೇಂದ್ರ ಸರ್ಕಾರ ಈ ಅನುದಾನವನ್ನು ಬಿಡುಗಡೆ ಮಾಡಿರುವುದಿಲ್ಲ. 2023-24ನೇ ಸಾಲಿನ ಕೇಂದ್ರ ಸರ್ಕಾರದ ಆಯವ್ಯಯ ಭಾಷಣದಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ.ಗಳನ್ನು ಘೋಷಿಸಿತ್ತು. ಆದರೆ, ಕೇಂದ್ರ ಸರ್ಕಾರವು ಈವರೆಗೂ ಯಾವುದೇ ಅನುದಾನ ಬಿಡುಗಡೆ ಮಾಡಿರುವುದಿಲ್ಲ.

19. ರಾಜ್ಯಗಳಿಗೆ ತೆರಿಗೆ ಹಂಚಿಕೆಯನ್ನು ಹೆಚ್ಚಿಸುವ ಬಗ್ಗೆ 16ನೇ ಹಣಕಾಸು ಆಯೋಗದ ಮುಂದೆ ರಾಜ್ಯವು ಪ್ರಬಲವಾಗಿ ತನ್ನ ವಾದವನ್ನು ಪ್ರತಿಪಾದಿಸಿದೆ. 
ಆರೋಗ್ಯಕರ ಮತ್ತು ಸಾಮರಸ್ಯದ ಆರ್ಥಿಕ ಒಕ್ಕೂಟ ರೂಪಿಸಲು ರಾಜ್ಯಗಳಿಗೆ ನೀಡುವ ತೆರಿಗೆ ಪಾಲನ್ನು ಸಮಾನತೆ ಮತ್ತು ದಕ್ಷತೆಯನ್ನು ಆಧರಿಸಿ ಹಂಚಿಕೆ ಮಾಡುವಂತೆ ಹಣಕಾಸು ಆಯೋಗಕ್ಕೆ ಮನವರಿಕೆ ಮಾಡಿದೆ. ಬಲಿಷ್ಠ ಆರ್ಥಿಕತೆ ಹೊಂದಿರುವ ರಾಜ್ಯಗಳು ಬಡ ರಾಜ್ಯಗಳಿಗೆ ನೆರವಾಗಲು ಬದ್ಧರಾಗಿದ್ದರೂ, ಅದು ತನ್ನ 
ನಾಗರೀಕರ

ಹಿತ ಕಾಯುವಲ್ಲಿ ಅಥವಾ ಆರ್ಥಿಕ ಪ್ರಗತಿಗೆ ಕುಂದುಂಟು ಮಾಡುವಂತಿರಬಾರದು. ಆದಾಯ-ಅಂತರ ಮತ್ತು ತಲಾ ಆದಾಯ ನಿರ್ಧರಿಸುವ ಮಾನದಂಡಗಳಲ್ಲಿಯೂ ಲೋಪಗಳಿರುವ ಹಿನ್ನೆಲೆಯಲ್ಲಿ, ಈ ಮಾನದಂಡಗಳಿಗೆ ಕಡಿಮೆ ಅಂಕ ನೀಡುವಂತೆ ಮನವಿ ಮಾಡಿದ್ದೇವೆ.
20. ಕೇಂದ್ರ ಹಾಗೂ ರಾಜ್ಯಗಳ ನಡುವಿನ ತೆರಿಗೆ ಹಂಚಿಕೆಯಲ್ಲಿ ಕನಿಷ್ಠ ಶೇ.50ರಷ್ಟು ಪಾಲನ್ನು ರಾಜ್ಯಗಳಿಗೆ ನೀಡಬೇಕು ಎಂದು ನಾವು ಪ್ರಸ್ತಾವನೆ ಸಲ್ಲಿಸಿದ್ದೇವೆ. ಇದು ಕೇಂದ್ರ ಮತ್ತು ರಾಜ್ಯಗಳ ನಡುವೆ ಸಂಪನ್ಮೂಲಗಳ ನ್ಯಾಯಯುತ ಹಂಚಿಕೆಯನ್ನು ಖಚಿತಪಡಿಸುತ್ತದೆ. ಕೇಂದ್ರ ಸರ್ಕಾರ ವಿಧಿಸುವ ಸೆಸ್ ಮತ್ತು ಸರ್‌ಚಾರ್ಜ್‌ಗಳನ್ನು ಒಟ್ಟು ತೆರಿಗೆ ರಾಜಸ್ವದ ಶೇ.5 ಕ್ಕೆ ಮಿತಿಗೊಳಿಸಬೇಕು. ಇದಕ್ಕಿಂತ ಹೆಚ್ಚಿನ ಸೆಸ್ ಮತ್ತು ಸರ್‌ಚಾರ್ಜ್‌ಗಳನ್ನು ವಿಧಿಸಿದರೆ, ಹೆಚ್ಚಿನ ಮೊತ್ತವನ್ನು ರಾಜ್ಯಗಳಿಗೆ ಹಂಚಿಕೆಯಾಗುವ ತೆರಿಗೆ ಪಾಲಿನಲ್ಲಿ ಪರಿಗಣಿಸಬೇಕು. ರಾಜ್ಯಗಳ ನಡುವಿನ ತೆರಿಗೆ ಹಂಚಿಕೆಗೆ ಸಂಬಂಧಿಸಿದಂತೆ,
ಒಟ್ಟು ತೆರಿಗೆ ಹಂಚಿಕೆಯಲ್ಲಿ ತೆರಿಗೆ ಸಂಗ್ರಹಿಸುವ ರಾಜ್ಯಕ್ಕೆ ಶೇ.60ರಷ್ಟು ಪಾಲನ್ನು ಮರಳಿಸಬೇಕು. ಆದ್ದರಿಂದ, ಹಂಚಿಕೆಯಾಗುವ ತೆರಿಗೆಯಲ್ಲಿ ಇತರೆ ರಾಜ್ಯಗಳ ಪಾಲನ್ನು
ಶೇ.40ಕ್ಕೆ ಮಿತಿಗೊಳಿಸಬೇಕು ಎಂದು ನಾವು 16ನೇ ಹಣಕಾಸು ಆಯೋಗಕ್ಕೆ ಒತ್ತಾಯ ಮಾಡಿದ್ದೇವೆ.

21. ಈ ಸವಾಲುಗಳ ನಡುವೆಯೂ, ರಾಜ್ಯ ಸರ್ಕಾರದ ಸಂಪನ್ಮೂಲ ಕ್ರೊಢೀಕರಣ ಕ್ರಮಗಳಿಂದ ರಾಜಸ್ವ ಸ್ವೀಕೃತಿಗಳು ಉತ್ತಮ ಬೆಳವಣಿಗೆ ಸಾಧಿಸಿದ್ದು, ರಾಜ್ಯದ ಅಭಿವೃದ್ಧಿ ಕುರಿತ ನಮ್ಮ ದೂರದೃಷ್ಟಿಯ ಯೋಜನೆಗಳನ್ನು ಸಾಕಾರಗೊಳಿಸಲು ಸಾಧ್ಯವಾಗಿದೆ. 2024-25ನೇ ಸಾಲಿಗೆ ರಾಜಸ್ವ ಸ್ವೀಕೃತಿಗಳು ವಾರ್ಷಿಕ ಶೇ. 10.3 ರಷ್ಟು ಬೆಳವಣಿಗೆಯನ್ನು ದಾಖಲಿಸುವ ನಿರೀಕ್ಷೆಯಿದೆ.

22. 2024-25ನೇ ಸಾಲಿಗೆ ತೆರಿಗೆಯೇತರ ರಾಜಸ್ವದಲ್ಲಿ 14,500 ಕೋಟಿ ರೂ.ಗಳು ಸಂಗ್ರಹವಾಗುವ ನಿರೀಕ್ಷೆಯಿದ್ದು, ಆಯವ್ಯಯ ಗುರಿಗಿಂತ ಹೆಚ್ಚು ಸಂಗ್ರಹವಾಗಲಿದೆ. ತೆರಿಗೆಯೇತರ ರಾಜಸ್ವವು ವರ್ಷವಾರು ಶೇ.10.5ರಷ್ಟು ಬೆಳವಣಿಗೆ ಸಾಧಿಸುವ ನಿರೀಕ್ಷೆಯಿದೆ. ಆದರೂ ಜಿ.ಎಸ್.ಡಿ.ಪಿ.ಯ ಶೇಕಡಾವಾರು ಪರಿಗಣಿಸಿದಾಗ ತೆರಿಗೆಯೇತರ ಸಂಪನ್ಮೂಲ ಹೆಚ್ಚಳಕ್ಕೆ ವಿಪುಲ ಅವಕಾಶಗಳಿವೆ. ಸಂಪನ್ಮೂಲ ಕ್ರೊಢೀಕರಣಕ್ಕಾಗಿ ರಾಜ್ಯ ಸರ್ಕಾರವು ʻಸಂಪನ್ಮೂಲ ಕ್ರೊಢೀಕರಣ ಸಮಿತಿʼಯನ್ನು ರಚನೆ ಮಾಡಿರುತ್ತದೆ. ಈ ಸಮಿತಿಯು ಮಧ್ಯಂತರ ವರದಿಯನ್ನು ನೀಡಿದ್ದು, ಸಮಿತಿಯ ಶಿಫಾರಸ್ಸಿನ ಅನ್ವಯ ಸರ್ಕಾರವು ಸಮಯಾನುಸಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ.

23. ಪ್ರಸಕ್ತ ಹಣಕಾಸು ವರ್ಷದಲ್ಲಿ ಗ್ಯಾರಂಟಿ ಯೋಜನೆಗಳಿಗಾಗಿ 51,034 ಕೋಟಿ ರೂ. ಒದಗಿಸಲಾಗಿದೆ. ಕಳೆದ ಎರಡು ಆಯವ್ಯಯಗಳಲ್ಲಿ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಮಾಡುವುದರ ಜೊತೆಗೆ ವಿತ್ತೀಯ ಕೊರತೆಯನ್ನು ಜಿ.ಎಸ್.ಡಿ.ಪಿ. ಯ ಶೇ.3ರ ಮಿತಿಯೊಳಗೆ ಮತ್ತು ಒಟ್ಟು ಹೊಣೆಗಾರಿಕೆಯನ್ನು ಜಿ.ಎಸ್.ಡಿ.ಪಿ. ಯ ಶೇ.25ರ ಮಿತಿಯೊಳಗೆ ನಿಯಂತ್ರಿಸುವ ಮೂಲಕ ವಿತ್ತೀಯ ಶಿಸ್ತನ್ನು ಪಾಲಿಸಲಾಗಿರುತ್ತದೆ ಎಂಬುದು ಗಮನಾರ್ಹ.

24. ರಾಜ್ಯದ ರಸ್ತೆ ಮತ್ತು ಮೂಲಸೌಕರ್ಯದ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ರಮ ಎಂಬ ಹೊಸ ಯೋಜನೆಯನ್ನು ಜಾರಿಗೆ ತರಲಾಗುವುದು.
ಈ ಯೋಜನೆಯ ಮೂಲಕ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೂ ರಸ್ತೆ, ಸಣ್ಣ ನೀರಾವರಿ ಹಾಗೂ ಮೂಲಸೌಕರ್ಯ ಒದಗಿಸಲು 8,000 ಕೋಟಿ ರೂ. ನೀಡಲಾಗುವುದು.

25. ಸರ್ಕಾರವು ತನ್ನ ಆಡಳಿತ ಪ್ರಕ್ರಿಯೆಗಳನ್ನು ಸುಗಮಗೊಳಿಸಲು ಹಾಗೂ ಪಾರದರ್ಶಕತೆಯನ್ನು ಹೆಚ್ಚಿಸಲು ಬದ್ಧವಾಗಿದೆ.
ಈ ನಿಟ್ಟಿನಲ್ಲಿ ವಿವಿಧ ತೆರಿಗೆ ಸಂಗ್ರಹಣಾ ಇಲಾಖೆಗಳಾದ ವಾಣಿಜ್ಯ ತೆರಿಗೆ, ಅಬಕಾರಿ, ನೋಂದಣಿ ಮತ್ತು ಮುದ್ರಾಂಕ, ಸಾರಿಗೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗಳ ʻಬಿʼ ಮತ್ತು ʻಸಿʼ ವೃಂದಗಳಲ್ಲಿ ಕೌನ್ಸೆಲಿಂಗ್‌ ಮೂಲಕ ವರ್ಗಾವಣೆ ಪ್ರಕ್ರಿಯೆ ಜಾರಿಗೊಳಿಸಲಾಗುವುದು. ವಿವಿಧ ನಿಯಮಗಳ ಸರಳೀಕರಣದ ಮೂಲಕ ಆಡಳಿತದಲ್ಲಿ ದಕ್ಷತೆಯನ್ನು ಹೆಚ್ಚಿಸಲಾಗುವುದು.

26. ವಿತ್ತೀಯ ಕೊರತೆ ಮತ್ತು ಒಟ್ಟು ಹೊಣೆಗಾರಿಕೆಯನ್ನು ವಿತ್ತೀಯ ಹೊಣೆಗಾರಿಕೆ ಅಧಿನಿಯಮ ಸೂಚಿಸಿರುವ ಮಿತಿಯೊಳಗೆ ನಿರ್ವಹಿಸಿ, ನಾವು ಗ್ಯಾರಂಟಿ ಯೋಜನೆಗಳಿಗೆ ಸಾಕಷ್ಟು ಅನುದಾನ ನೀಡುವುದರೊಂದಿಗೆ ಬಂಡವಾಳ ವೆಚ್ಚದಲ್ಲಿಯೂ ಗಣನೀಯ ಹೆಚ್ಚಳ ಮಾಡಿದ್ದು, ಹೆಮ್ಮೆಯ ಸಂಗತಿ.

27. ವಿತ್ತೀಯ ಶಿಸ್ತು ಕಾಯ್ದುಕೊಂಡು ಜನಕಲ್ಯಾಣ ಹಾಗೂ ಅಭಿವೃದ್ಧಿ ಯೋಜನೆಗಳಿಗೆ ಆಯವ್ಯಯ ಹಂಚಿಕೆ ಮಾಡುವುದರೊಂದಿಗೆ, ಬಂಡವಾಳ ವೆಚ್ಚಗಳಿಗೂ ಅನುದಾನ ಒದಗಿಸಿ, ರಾಜ್ಯದ ಆರ್ಥಿಕತೆಯನ್ನು ಸದೃಢಗೊಳಿಸುವ ಅಂಶಗಳೊಂದಿಗೆ ಕಳೆದ ಸಾಲಿನ ಆಯವ್ಯಯ ಮಂಡಿಸಿದ್ದೆನು. ಇದೀಗ 2025-26ನೇ ಸಾಲಿನ ಆಯವ್ಯಯವನ್ನು ಸಹ ಇದೇ ಆಶಯದೊಂದಿಗೆ ಮಂಡಿಸುತ್ತಿದ್ದೇನೆ.

ಕೃಷಿ
ಕೃಷಿ ಮೊದಲು ಸರ್ವಕ್ಕೆ ಕೃಷಿಯಿಂ
ಪಸರಿಸುವುದು ಆ ಕೃಷಿಯನುದ್ಯೋಗಿಸುವ
ಜನವನು ಪಾಲಿಸುವುದು
- ಕುಮಾರವ್ಯಾಸ
 
28. ರಾಜ್ಯದ ಸಣ್ಣ ಮತ್ತು ಅತಿಸಣ್ಣ ಹಿಡುವಳಿದಾರರಿಗೆ ಕೃಷಿಯನ್ನು ಸುಸ್ಥಿರ ಮತ್ತು ಲಾಭದಾಯಕವಾಗಿಸಲು, ನಮ್ಮ ಸರ್ಕಾರವು ರೈತ ಸಮೃದ್ಧಿ ಯೋಜನೆಯನ್ನು ಜಾರಿಗೊಳಿಸಿದೆ. ಪ್ರಸಕ್ತ ಸಾಲಿನಲ್ಲಿ, ಈ ಯೋಜನೆಯಡಿ 10 ಹವಾಮಾನ ವಲಯಗಳಲ್ಲಿ ಕೃಷಿ ಇಲಾಖೆಯ ಅಧೀನದ ಕ್ಷೇತ್ರಗಳಲ್ಲಿ ಸಮಗ್ರ ಕೃಷಿ ಪದ್ಧತಿಯ ಮಾದರಿ ಪ್ರಾತ್ಯಕ್ಷಿಕೆ ತಾಕುಗಳನ್ನು ಅಭಿವೃದ್ಧಿಪಡಿಸಿ, ಈ ಪದ್ಧತಿಯನ್ನು ಅಳವಡಿಸಿಕೊಳ್ಳಲು ರೈತರಿಗೆ ಪ್ರಚುರಪಡಿಸಲಾಗುವುದು.
29. 2025-26ನೇ ಸಾಲಿನಲ್ಲಿ ರಾಜ್ಯದಲ್ಲಿ ಕೃಷಿ ಯಾಂತ್ರೀಕರಣ ಕಾರ್ಯಕ್ರಮದಡಿ 50 ಸಾವಿರ ರೈತರಿಗೆ ಸಹಾಯಧನ ಒದಗಿಸಲು 428 ಕೋಟಿ ರೂ. ಅನುದಾನ ಕಲ್ಪಿಸಲಾಗುವುದು.
 
30. ಕೃಷಿ ಬೆಳೆಗಳಲ್ಲಿ ನೀರನ್ನು ಸಮರ್ಥ ಬಳಕೆ ಮಾಡಿ, ಮಳೆಯಾಶ್ರಿತ ಪ್ರದೇಶದಲ್ಲಿ ಕೃಷಿ ಉತ್ಪಾದನೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅಂದಾಜು 1.81 ಲಕ್ಷ ರೈತರಿಗೆ ಹನಿ ಮತ್ತು ತುಂತುರು ನೀರಾವರಿ ಘಟಕಗಳ ಅಳವಡಿಕೆಗೆ 440 ಕೋಟಿ ರೂ. ಸಹಾಯಧನವನ್ನು ಒದಗಿಸಲಾಗುವುದು.

31. ತೊಗರಿ ಬೆಳೆಯಲ್ಲಿ ನೂತನ ತಾಂತ್ರಿಕತೆಗಳ ಅಳವಡಿಕೆ,
ಕ್ಷೇತ್ರ ವಿಸ್ತರಣೆ ಮತ್ತು ತೊಗರಿಯನ್ನು ಅಂತರ ಬೆಳೆಯನ್ನಾಗಿ ಪ್ರೋತ್ಸಾಹಿಸುವುದರ ಮೂಲಕ ಉತ್ಪಾದನೆಯಲ್ಲಿ ರಾಷ್ಟ್ರದಲ್ಲೇ ಮುಂಚೂಣಿ ರಾಜ್ಯವನ್ನಾಗಿಸಲು ಉದ್ದೇಶಿಸಿದೆ. ಈ ಮೂಲಕ ರೈತರ ಆದಾಯ ಮತ್ತು ಪೌಷ್ಟಿಕ ಭದ್ರತೆಯನ್ನು ಸುಧಾರಿಸಲು
88 ಕೋಟಿ ರೂ. ಒದಗಿಸಲಾಗುವುದು.

32. ರಾಜ್ಯದಲ್ಲಿ 6,000 ಕಿರು ಆಹಾರ ಸಂಸ್ಕರಣಾ ಘಟಕಗಳು ಹಾಗೂ 14 ಸಾಮಾನ್ಯ ಇನ್‌ಕ್ಯೂಬೇಷನ್‌ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಪ್ರಸಕ್ತ ಸಾಲಿನಲ್ಲಿ 5,000 ಕಿರು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಕ್ರಮವಹಿಸಲಾಗುವುದು.

33. ಕೃಷಿ ಭಾಗ್ಯ ಯೋಜನೆಯಡಿ ಮೂರು ಲಕ್ಷಕ್ಕಿಂತ ಅಧಿಕ
ಕೃಷಿ ಹೊಂಡಗಳನ್ನು ನಿರ್ಮಿಸಿ ಮಳೆಯಾಶ್ರಿತ ಕೃಷಿ ಪ್ರದೇಶದ ಬೆಳೆಗಳಿಗೆ ರಕ್ಷಣಾತ್ಮಕ ನೀರಾವರಿ ಒದಗಿಸುವುದರೊಂದಿಗೆ ರೈತರ ಬೆಳೆಗಳ ಉತ್ಪಾದಕತೆ ಹಾಗೂ ಆದಾಯವನ್ನು ಹೆಚ್ಚಿಸಲಾಗಿದೆ.
ಪ್ರಸಕ್ತ ವರ್ಷದಲ್ಲಿ ಈ ಯೋಜನೆಯಡಿ 12,000
ಕೃಷಿ ಹೊಂಡಗಳನ್ನು ನಿರ್ಮಿಸಲಾಗುವುದು.

34. ಜಾಗತಿಕ ಮಟ್ಟದಲ್ಲಿ ಡಿಜಿಟಲ್‌, ಕೃತಕ ಬುದ್ಧಿಮತ್ತೆ ಹಾಗೂ ಜಿಯೋ ಸ್ಪೇಷಿಯಲ್ ಕ್ಷೇತ್ರದಲ್ಲಿ ಆಗುತ್ತಿರುವ ಆವಿಷ್ಕಾರಗಳನ್ನು ಕೃಷಿ ಕ್ಷೇತ್ರದಲ್ಲಿ ಅಳವಡಿಸಿ, ಡಿಜಿಟಲ್‌ ಕೃಷಿ ಸೇವೆಗಳ ಕೇಂದ್ರವನ್ನು ಸ್ಥಾಪಿಸಲಾಗುವುದು. ಈ ಕೇಂದ್ರವು ರೈತರಿಗೆ ಮತ್ತು ನೀತಿ ನಿರೂಪಕರಿಗೆ ಬೆಳೆಗಳ ಕುರಿತು ನಿಖರವಾದ ತೀರ್ಮಾನವನ್ನು ಕೈಗೊಂಡು ಬೆಳೆಗಳಲ್ಲಿ ಉತ್ಪಾದಕತೆಯನ್ನು ಹೆಚ್ಚಿಸಲು ಸಹಕಾರಿಯಾಗಲಿದೆ.

35. ರಾಜ್ಯದಲ್ಲಿ ಚಾಲ್ತಿಯಿರುವ ಹವಾಮಾನ ವಲಯಗಳ ವರ್ಗೀಕರಣ ಬಹಳ ವರ್ಷಗಳ ಹಿಂದೆ ಗುರುತಿಸಲಾಗಿರುವುದರಿಂದ ಹಾಗೂ ಇತ್ತೀಚಿನ ವರ್ಷಗಳ ನೈಸರ್ಗಿಕ ವೈಪರೀತ್ಯಗಳ ಬದಲಾವಣೆಯಿಂದ ಹವಾಮಾನ ವಲಯಗಳನ್ನು ಮರುವ್ಯಾಖ್ಯಾನಗೊಳಿಸಲು ತಜ್ಞರ ಸಮಿತಿಯನ್ನು ರಚಿಸಲಾಗುವುದು.

36. ಕರ್ನಾಟಕ ರಾಜ್ಯದ ಸಾಗುವಳಿ ಪ್ರದೇಶದ ಶೇ.64ರಷ್ಟು ಪ್ರದೇಶವು ಮಳೆಯಾಶ್ರಿತ ಪ್ರದೇಶವಾಗಿದ್ದು, ಮಳೆಯಾಶ್ರಿತ ಕೃಷಿಯನ್ನು ಜೀವನಾಧಾರವಾಗಿಸಿ ಸುಸ್ಥಿರವನ್ನಾಗಿಸಲು ಹಾಗೂ ರೈತರ ಜೀವನೋಪಾಯವನ್ನು ಸುಧಾರಿಸಲು ʻಸಮಗ್ರ ಮಳೆಯಾಶ್ರಿತ ಕೃಷಿ ನೀತಿʼಯನ್ನು ಅನುಷ್ಠಾನಕ್ಕೆ ತರಲಾಗುವುದು.

37. ರೈತರಿಗೆ ಮಣ್ಣು ಪರೀಕ್ಷೆ ಹಾಗೂ ಅವರು ಬಳಸುವ ಪರಿಕರಗಳಾದ ರಸಗೊಬ್ಬರ, ಬಿತ್ತನೆ ಬೀಜ, ಸಸ್ಯ ಸಂರಕ್ಷಣಾ ಔಷಧಿ, ಜೈವಿಕ ಗೊಬ್ಬರ ಇತ್ಯಾದಿಗಳ ಗುಣಮಟ್ಟವನ್ನು ಪರೀಕ್ಷಿಸಲು ಇಲಾಖೆಯಡಿ ಇರುವ 58 ಪ್ರಯೋಗಾಲಯಗಳನ್ನು ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ಬಲವರ್ಧನೆಗೊಳಿಸಲಾಗುವುದು.

38. ಸುಸ್ಥಿರ ಸಾವಯವ ಕೃಷಿಯನ್ನು ಉತ್ತೇಜಿಸಲು ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕನ್ನು ರಾಜ್ಯದ ಪ್ರಥಮ ಸಾವಯವ ತಾಲ್ಲೂಕನ್ನಾಗಿ ಪರಿವರ್ತಿಸಿ, ರೈತರ ಸಾವಯವ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ಸಾವಯವ ಪ್ರಮಾಣೀಕರಣ ವ್ಯವಸ್ಥೆ ಕಲ್ಪಿಸಲಾಗುವುದು.

39. ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ, ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಒಟ್ಟಾರೆ 3,000 ಹೆಕ್ಟೇರ್ ಪ್ರದೇಶದಲ್ಲಿ ಸಮಗ್ರ ಮಣ್ಣು ಮತ್ತು ನೀರಿನ ನಿರ್ವಹಣೆ, ಸಮರ್ಪಕ ತ್ಯಾಜ್ಯ ನಿರ್ವಹಣೆ, ನೀರಿನ ಬಳಕೆ ಮತ್ತು ಸಮತೋಲನ ಪೋಷಕಾಂಶ ನಿರ್ವಹಣೆಯನ್ನು ಸಕ್ಕರೆ ಕಾರ್ಖಾನೆಗಳ ಸಹಯೋಗದೊಂದಿಗೆ ಜಾರಿಗೊಳಿಸಲಾಗುವುದು.

40. ಜೈವಿಕ ಕೃಷಿ ಪರಿಕರ ಸ್ಟಾರ್ಟ್‌-ಅಪ್‌ಗಳು (Agri Start-up) ಉತ್ಪಾದಿಸುವ ಜೈವಿಕ ಪರಿಕರಗಳನ್ನು ರೈತ ಸಂಪರ್ಕ ಕೇಂದ್ರಗಳ ಮೂಲಕ ರೈತರಿಗೆ ಸೂಕ್ತ ದರದಲ್ಲಿ ಮಾರಾಟ ಮಾಡಲು ಉತ್ತೇಜಿಸಲಾಗುವುದು.

41. ವಿಶ್ವ ಬ್ಯಾಂಕ್‌ ನೆರವಿನ ರಿವಾರ್ಡ್‌ ಯೋಜನೆಯಡಿ ಈವರೆಗೆ ಒಟ್ಟಾರೆ 12.90 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಭೂ-ಸಂಪನ್ಮೂಲ ಸಮೀಕ್ಷೆ ಪೂರ್ಣಗೊಳಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 11 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಸಮೀಕ್ಷೆಯನ್ನು ಪೂರ್ಣಗೊಳಿಸಲು ಕ್ರಮವಹಿಸಲಾಗುವುದು. ಭೂ-ಸಂಪನ್ಮೂಲ ಸಮೀಕ್ಷೆ ಆಧಾರದ ಮೇಲೆ ರೈತರು ಸೂಕ್ತವಾದ ಬೆಳೆಗಳನ್ನು ಬೆಳೆಯಲು, ಅಗತ್ಯವಿರುವ ರಾಸಾಯನಿಕ ಗೊಬ್ಬರ ಹಾಗೂ ಪೋಷಕಾಂಶಗಳನ್ನು ಬಳಸಿ ಬೆಳೆಗಳ ಉತ್ಪಾದನೆ ಹೆಚ್ಚಿಸಲು ಪ್ರೋತ್ಸಾಹಿಸಲಾಗುವುದು.

42. ಮಂಡ್ಯ ಕೃಷಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಈಗಾಗಲೇ ಅನುಮೋದನೆ ನೀಡಿದ್ದು, ಮೂಲಸೌಕರ್ಯ ಕಲ್ಪಿಸಲು
೨೫ ಕೋಟಿ ರೂ. ಒದಗಿಸಿ, ಪ್ರಸಕ್ತ ಸಾಲಿನಲ್ಲಿ ತರಗತಿಗಳನ್ನು ಆರಂಭಿಸಲಾಗುವುದು.

43. ಬರ ಮತ್ತು ರೋಗ ನಿರೋಧಕ ಲಕ್ಷಣಗಳ ಸಂಶೋಧನೆ ಕೈಗೊಂಡು ಬೆಳೆಗಳ ಉತ್ತಮ ತಳಿ ಅಭಿವೃದ್ಧಿಪಡಿಸಲು ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಸ್ಯ ಫೀನೋಟೈಪಿಂಗ್‌ (Phenotyping) ಸೌಲಭ್ಯ ಕಲ್ಪಿಸಲಾಗುವುದು.

44. ಸಾವಯವ ಉತ್ಪನ್ನಗಳು ಮತ್ತು ಸಿರಿಧಾನ್ಯಗಳ ಬೇಡಿಕೆ ಮತ್ತು ಪೂರೈಕೆಗಳ ಅಂತರವನ್ನು ಸರಿದೂಗಿಸಲು ಹಾಗೂ ರೈತರಿಗೆ ಸೂಕ್ತ ಮಾರುಕಟ್ಟೆಯನ್ನು ಕಲ್ಪಿಸುವ ಉದ್ದೇಶದಿಂದ 20 ಕೋಟಿ ರೂ. ಮೊತ್ತದಲ್ಲಿ ʻಸಾವಯವ ಮತ್ತು ಸಿರಿಧಾನ್ಯಗಳ ಹಬ್‌ʼ ಅನ್ನು ಸ್ಥಾಪಿಸಲಾಗುವುದು.

45. ವಿಜಯಪುರದ ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಕೃಷಿ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲಾಗುವುದು.

46. ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನಲ್ಲಿ ಹೊಸ ಕೃಷಿ ಕಾಲೇಜನ್ನು ಸ್ಥಾಪಿಸಲು ತಜ್ಞರಿಂದ ಕಾರ್ಯಸಾಧ್ಯತಾ ವರದಿಯನ್ನು ಪಡೆದುಕೊಳ್ಳಲಾಗುವುದು.


ತೋಟಗಾರಿಕೆ

47. ರೈತರಿಗೆ ಹೆಚ್ಚಿನ ಆದಾಯ ಒದಗಿಸುವಲ್ಲಿ ತೋಟಗಾರಿಕಾ ಬೆಳೆಗಳ ಕೊಡುಗೆ ಮಹತ್ವದ್ದಾಗಿದೆ. ಇತ್ತೀಚಿನ ಬೆಳೆ ಪದ್ಧತಿ, ಸಂಸ್ಕರಣೆ ಮತ್ತು ಮೌಲ್ಯವರ್ಧನೆಯ ತಂತ್ರಜ್ಞಾನದಲ್ಲಾದ ಆಧುನೀಕರಣದ ಅನುಕೂಲವನ್ನು ಬೆಳೆಗಾರರಿಗೆ ತಲುಪಿಸುವ ಉದ್ದೇಶದಿಂದ ಸಮಗ್ರ ತೋಟಗಾರಿಕಾ ಅಭಿವೃದ್ಧಿ ಯೋಜನೆ-2 ಅನ್ನು ಜಾರಿಗೊಳಿಸಲಾಗುವುದು. ಪ್ರಸಕ್ತ ಸಾಲಿನಲ್ಲಿ ಈ ಯೋಜನೆಗೆ
95 ಕೋಟಿ ರೂ. ಅನುದಾನ ಒದಗಿಸಿದೆ.

48. ತೋಟಗಾರಿಕಾ ಬೆಳೆಗಳ ವಿಸ್ತೀರ್ಣ, ಉತ್ಪಾದನೆ, ಬೆಳೆಗಳ ಆರೋಗ್ಯ, ಮಾರುಕಟ್ಟೆ ಇತ್ಯಾದಿಗಳ ಬಗ್ಗೆ ನೈಜ ಸಮಯದ (Real Time) ಆಧಾರದ ಮೇಲೆ ರೈತರಿಗೆ ಮಾಹಿತಿ ಒದಗಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ, ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಸ್ಪೇಸ್‌ ಸೈನ್ಸ್ ಟೆಕ್ನಾಲಜಿ ಮತ್ತು ಖಾಸಗಿ ಸಹಯೋಗದಲ್ಲಿ ಜ್ಞಾನ ಕೋಶ ಸ್ಥಾಪಿಸಲಾಗುವುದು.  

49. ರಾಜ್ಯದ 20 GI ಟ್ಯಾಗ್‌ ಹೊಂದಿರುವ ಬೆಳೆಗಳು ಹಾಗೂ ಇತರೆ ದೇಸಿ ತಳಿಗಳು ಕಣ್ಮರೆಯಾಗಿ ನಶಿಸಿ ಹೋಗುವುದನ್ನು ತಪ್ಪಿಸಲು ದೇಶಿ ತಳಿಗಳ ಬೀಜ ಬ್ಯಾಂಕ್‌ ಸ್ಥಾಪಿಸಲಾಗುವುದು.

50. ಬ್ಯಾಡಗಿ ಮೆಣಸಿನಕಾಯಿ ತಳಿಯ ಸಂರಕ್ಷಣೆ ಮತ್ತು ಎಲೆ ಮುಟುರು ರೋಗ, ತ್ರಿಪ್ಸ್‌ ಇತ್ಯಾದಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಂಶೋಧನೆ ಕೈಗೊಳ್ಳಲಾಗುವುದು.

51. ತೋಟಗಾರಿಕೆ ಇಲಾಖೆಯ ಅಧೀನದ ಆಯ್ದ ಕ್ಷೇತ್ರಗಳು ಮತ್ತು ನರ್ಸರಿಗಳಡಿ ಸಾರ್ವಜನಿಕ-ಖಾಸಗಿ ಸಹಯೋಗದೊಂದಿಗೆ
ಹೂ-ಕೃಷಿ, ಅಲಂಕಾರಿಕ ಸಸ್ಯಗಳು, ಔಷಧೀಯ ಸಸ್ಯಗಳನ್ನು ಬೆಳೆಸಲು ಹಾಗೂ ತೋಟಗಾರಿಕಾ ಪ್ರವಾಸೋದ್ಯಮವನ್ನು ಉತ್ತೇಜಿಸಲು ಕಾರ್ಯಕ್ರಮವನ್ನು ರೂಪಿಸಲಾಗುವುದು.

52. ಗದಗ ಜಿಲ್ಲೆಯ ಡಂಬಳದಲ್ಲಿ ತೋಟಗಾರಿಕಾ ಕಾಲೇಜನ್ನು ಸ್ಥಾಪಿಸಲು ತಜ್ಞರಿಂದ ಕಾರ್ಯಸಾಧ್ಯತಾ ವರದಿಯನ್ನು ಪಡೆದುಕೊಳ್ಳಲಾಗುವುದು.

53. ತೋಟಗಾರಿಕಾ ಬೆಳೆಗಳ ಹನಿ ನೀರಾವರಿ ಕಾರ್ಯಕ್ರಮದಡಿ ಸುಮಾರು 52,000 ಫಲಾನುಭವಿಗಳಿಗೆ 426 ಕೋಟಿ
ರೂ. ಸಹಾಯ ಧನವನ್ನು ಒದಗಿಸಲಾಗುವುದು.

54. ಮಲೆನಾಡು ಜಿಲ್ಲೆಗಳಲ್ಲಿ ಎಲೆ ಚುಕ್ಕೆ ರೋಗದ ಬಾಧೆಗೆ ತುತ್ತಾಗಿ
2 ಲಕ್ಷಕ್ಕಿಂತ ಅಧಿಕ ಅಡಿಕೆ ಬೆಳೆಗಾರರು ಸಂಕಷ್ಟಕ್ಕೀಡಾಗಿದ್ದಾರೆ.
ಈ ರೋಗ ನಿಯಂತ್ರಿಸಲು ಸಸ್ಯ ಸಂರಕ್ಷಣಾ ಕ್ರಮಗಳಿಗಾಗಿ
62 ಕೋಟಿ ರೂ. ಒದಗಿಸಲಾಗಿದೆ.

55. ತೆಂಗು ಬೆಳೆಯುವ ಪ್ರದೇಶಗಳಲ್ಲಿ ಕಪ್ಪು ತಲೆ ಹುಳುವಿನ ಬಾಧೆಯ ಕುರಿತು ವೈಜ್ಞಾನಿಕ ಸಮೀಕ್ಷೆ ನಡೆಸಿ, ಇದರ ಆಧಾರದ ಮೇಲೆ ಸಸ್ಯ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಲಾಗುವುದು.
ರೇಷ್ಮೆ

56. ಅಂತಾರಾಷ್ಟ್ರೀಯ ದರ್ಜೆಯ ದ್ವಿತಳಿ ಕಚ್ಚಾ ರೇಷ್ಮೆಯ ದೇಶೀಯ ಬೇಡಿಕೆಯನ್ನು ಪೂರೈಸಲು ಮಧ್ಯಮ ವರ್ಗದ ರೇಷ್ಮೆ ನೂಲು ಬಿಚ್ಚಾಣಿಕೆದಾರರಿಗೆ 120 ಕೊನೆಗಳ ಸ್ವಯಂಚಾಲಿತ ರೀಲಿಂಗ್‌ ಘಟಕಗಳನ್ನು ಸ್ಥಾಪಿಸಲು ಪ್ರೋತ್ಸಾಹಿಸಲಾಗುವುದು.

57. ರಾಮನಗರ ಮತ್ತು ಶಿಡ್ಲಘಟ್ಟ ಹೈ-ಟೆಕ್‌ ರೇಷ್ಮೆ ಗೂಡಿನ ಮಾರುಕಟ್ಟೆಯ ಮೊದಲನೇ ಹಂತದ ಕಾಮಗಾರಿಗಳು ಮುಕ್ತಾಯಗೊಳ್ಳಲಿದ್ದು, ಪ್ರಸಕ್ತ ಸಾಲಿನಲ್ಲಿ ಎರಡನೇ ಹಂತದ ಕಾಮಗಾರಿಗಳನ್ನು 250 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುವುದು.

58. ಮೈಸೂರು ಮತ್ತು ಸುತ್ತಮುತ್ತಲಿನ ಭಾಗದ ರೇಷ್ಮೆ
ಬೆಳೆಗಾರರಿಗೆ ಅನುಕೂಲವಾಗುವಂತೆ ಮೈಸೂರಿನಲ್ಲಿ
ರೇಷ್ಮೆಗೂಡಿನ ಮಾರುಕಟ್ಟೆಯನ್ನು NABARD ಸಹಯೋಗದಲ್ಲಿ ಸ್ಥಾಪಿಸಲಾಗುವುದು.

59. ರೈತರು ಉತ್ಪಾದಿಸುವ ರೇಷ್ಮೆಗೂಡುಗಳಿಗೆ ಸೂಕ್ತ ಬೆಲೆ ದೊರಕಿಸಲು ಹಾಗೂ ಅಂತಾರಾಷ್ಟ್ರೀಯ ಮಟ್ಟದ ಗುಣಮಟ್ಟವನ್ನು ಸಾಧಿಸುವ ದೃಷ್ಟಿಯಿಂದ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಗಳಲ್ಲಿ ಗುಣಮಟ್ಟ ಪರೀಕ್ಷೆ ಮತ್ತು ಶ್ರೇಣೀಕರಣದ ಕಾರ್ಯಕ್ಕಾಗಿ Assayer ಗಳನ್ನು ನಿಯೋಜಿಸಲಾಗುವುದು.

60. ರಾಜ್ಯದಲ್ಲಿ ರೇಷ್ಮೆ ಬೆಳೆ ವಿಸ್ತರಿಸಲು ರೇಷ್ಮೆ ಗೂಡಿನ ಪೂರ್ವ ಮತ್ತು ನಂತರದ ಚಟುವಟಿಕೆಗಳಿಗೆ ಪ್ರೋತ್ಸಾಹಿಸಲು ರೇಷ್ಮೆ ಅಭಿವೃದ್ಧಿ ಯೋಜನೆಯಡಿಯಲ್ಲಿ ಪ್ರಸಕ್ತ ಸಾಲಿನಲ್ಲಿ 55 ಕೋಟಿ ರೂ. ಅನುದಾನ ಒದಗಿಸಲಾಗುವುದು.

ಪಶುಸಂಗೋಪನೆ

61. ಜಾನುವಾರುಗಳ ಆಕಸ್ಮಿಕ ಸಾವಿನ ಸಂದರ್ಭದಲ್ಲಿ ರೈತರು ಅನುಭವಿಸುತ್ತಿರುವ ಸಂಕಷ್ಟ ನಿವಾರಣೆಗೆ “ಅನುಗ್ರಹ” ಯೋಜನೆಯನ್ನು ಜಾರಿಗೆ ತರಲಾಗಿದೆ. ಇದರಡಿ ಹಸು, ಎಮ್ಮೆ ಮತ್ತು ಎತ್ತುಗಳಿಗೆ ಪ್ರಸ್ತುತ ನೀಡಲಾಗುತ್ತಿರುವ ಪರಿಹಾರದ ಮೊತ್ತವನ್ನು 10,000 ರೂ. ಗಳಿಂದ 15,000 ರೂ. ಗಳಿಗೆ; ಕುರಿ/ಮೇಕೆಗಳಿಗೆ ನೀಡಲಾಗುತ್ತಿರುವ ಮೊತ್ತವನ್ನು 5,000 ರೂ. ಗಳಿಂದ 7,500 ರೂ. ಗಳಿಗೆ ಹಾಗೂ 3-6 ತಿಂಗಳ ಕುರಿ/ಮೇಕೆ ಮರಿಗಳಿಗೆ ನೀಡಲಾಗುತ್ತಿರುವ ಮೊತ್ತವನ್ನು 3,500 ರೂ.ಗಳಿಂದ 5,000 ರೂ.ಗಳಿಗೆ ಹೆಚ್ಚಿಸಲಾಗುವುದು.

62. ಕಳೆದ ಎರಡು ವರ್ಷಗಳಲ್ಲಿ 60 ಹೊಸ ಪಶು ಚಿಕಿತ್ಸಾಲಯಗಳನ್ನು ಕಾರ್ಯಾರಂಭಗೊಳಿಸಲಾಗಿದ್ದು, 2025-26ನೇ ಸಾಲಿನಲ್ಲಿ
50 ನೂತನ ಪಶು ಚಿಕಿತ್ಸಾಲಯಗಳನ್ನು ಪ್ರಾರಂಭಿಸಲಾಗುವುದು.

63. 2025-26ನೇ ಸಾಲಿನಲ್ಲಿ 100 ಪಶು ವೈದ್ಯಕೀಯ ಸಂಸ್ಥೆಗಳ ನೂತನ ಕಟ್ಟಡಗಳನ್ನು ನಬಾರ್ಡ್‌ ಸಹಯೋಗದೊಂದಿಗೆ ನಿರ್ಮಿಸಲಾಗುವುದು.

64. ಅಮೃತ್‌ ಮಹಲ್‌ ಕಾವಲುಗಳಲ್ಲಿನ ಭೂ ಒತ್ತುವರಿ ತಡೆಯಲು ಹಾಗೂ ಅಮೃತ್‌ ಮಹಲ್‌ ರಾಸುಗಳಿಗೆ ಮೇವು ಲಭ್ಯವಾಗುವಂತೆ ಮಾಡಲು, ಅರಣ್ಯ ಇಲಾಖೆ ಹಾಗೂ ನರೇಗಾ ಸಹಯೋಗದೊಂದಿಗೆ ಮೇವಿನ ಮರಗಳ ನೆಡುತೋಪು ಅಭಿವೃದ್ಧಿಗೊಳಿಸಲಾಗುವುದು.

65. ರಾಜ್ಯದ ಹೆಮ್ಮೆಯ ದೇಶಿ ದನದ ತಳಿಗಳಾದ ಹಳ್ಳಿಕಾರ್‌, ಕಿಲಾರಿ, ಅಮೃತ್‌ ಮಹಲ್‌ ಹಾಗೂ ಬಂಡೂರು ಕುರಿ ತಳಿಯ ಸಂರಕ್ಷಣೆ ಹಾಗೂ ಅಭಿವೃದ್ಧಿಗಾಗಿ ಎರಡು ಕೋಟಿ ರೂ. ಒದಗಿಸಲಾಗುವುದು.  

66. ಆಧುನಿಕ ಕುರಿ ಸಾಕಾಣಿಕೆ ಪದ್ಧತಿಗಳು ಮತ್ತು ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ವಲಸೆ ಕುರಿಗಾರರಿಗೆ ಕರ್ನಾಟಕ ಪಶುವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹಯೋಗದಲ್ಲಿ ತರಬೇತಿ ನೀಡಲಾಗುವುದು.

67. ನಮ್ಮ ಸರ್ಕಾರವು ಅಸ್ತಿತ್ವಕ್ಕೆ ಬಂದ ನಂತರ “ನಂದಿನಿ” ಬ್ರ್ಯಾಂಡ್‌ನ ಮಾರುಕಟ್ಟೆಯನ್ನು ವಿಸ್ತರಿಸಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾರಾಜಿಸುವಂತೆ ಮಾಡಿದೆ. 2024-25ನೇ ಸಾಲಿನಲ್ಲಿ ಪ್ರತಿ ಒಂದು ಕೋಟಿಗೂ ಹೆಚ್ಚು ಲೀಟರ್‌ ಹಾಲನ್ನು ಶೇಖರಿಸಲಾಗಿದೆ.


ಮೀನುಗಾರಿಕೆ

68. ರಾಜ್ಯದ ಮತ್ಸ್ಯ ಸಂಪತ್ತಿನ ರಕ್ಷಣೆಯೊಂದಿಗೆ ಸುಸ್ಥಿರ ಮೀನುಗಾರಿಕೆ ಹಾಗೂ ಮೀನುಗಾರರ ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ನೀಡಲು ಮೀನುಗಾರಿಕಾ ನೀತಿಯನ್ನು ರೂಪಿಸಲಾಗುವುದು.

69. ಮಂಗಳೂರಿನಲ್ಲಿರುವ ಮೀನುಗಾರಿಕೆ ಕಾಲೇಜಿಗೆ ಪ್ರಸ್ತುತ ನಿಗದಿಪಡಿಸಿರುವ ವಿದ್ಯಾರ್ಥಿಗಳ ಸಂಖ್ಯಾಬಲವನ್ನು ದ್ವಿಗುಣಗೊಳಿಸಲಾಗುವುದು.

70. ಕರಾವಳಿ ಜಿಲ್ಲೆಗಳಲ್ಲಿನ ಮೀನುಗಾರಿಕೆ ಕೊಂಡಿ ರಸ್ತೆಗಳನ್ನು ನಬಾರ್ಡ್‌ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲು
30 ಕೋಟಿ ರೂ. ಒದಗಿಸಲಾಗುವುದು.  

71. ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡದ ಆಯ್ದ ಮೀನು ಮಾರಾಟಗಾರರಿಗೆ ನಾಲ್ಕು ಚಕ್ರ ವಾಹನ ಖರೀದಿಸಲು ಶೇ.50ರಷ್ಟು ಅಥವಾ ಗರಿಷ್ಠ 3 ಲಕ್ಷ ರೂ. ಆರ್ಥಿಕ ನೆರವು ನೀಡಲಾಗುವುದು.

72. ರಾಜ್ಯದಲ್ಲಿ ನೋಂದಣಿಯಾಗಿರುವ ಮೋಟರೀಕೃತ ದೋಣಿಗಳಲ್ಲಿ 15 ವರ್ಷ ಕಾಲಾವಧಿ ಮೀರಿರುವ ಹಳೆಯ ಇಂಜಿನ್‌ಗಳನ್ನು ಬದಲಾಯಿಸಿ, ಹೊಸ ಇಂಜಿನ್‌ ಖರೀದಿಸಲು ಶೇ.50 ರಷ್ಟು ಒಂದು ಲಕ್ಷ ರೂ. ಮಿತಿಗೊಳಪಟ್ಟು ಸಹಾಯಧನ ನೀಡಲಾಗುವುದು.

73. ಪ್ರವಾಸಿಗರಿಗೆ ಶುಚಿ-ರುಚಿಯಾದ ಪೌಷ್ಟಿಕ ಮೀನು ಖಾದ್ಯಗಳನ್ನು ಒದಗಿಸಲು ಮೈಸೂರಿನಲ್ಲಿ ಹೈ-ಟೆಕ್‌ ಮತ್ಸ್ಯದರ್ಶಿನಿಯನ್ನು ಪ್ರಾರಂಭಿಸಲಾಗುವುದು.  

74. ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ವಾಹನ ದಟ್ಟಣೆಯನ್ನು ನಿರ್ವಹಿಸಲು “ಮಲ್ಟಿ-ಲೆವೆಲ್‌ ಪಾರ್ಕಿಂಗ್‌” ವ್ಯವಸ್ಥೆಯನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಲಾಗುವುದು.

75. ಆಳ ಸಮುದ್ರ ಮೀನುಗಾರಿಕೆಯನ್ನು ಪ್ರೋತ್ಸಾಹಿಸಲು ಪ್ರಸ್ತುತ ಇರುವ ಮೀನುಗಾರಿಕೆ ದೋಣಿಗಳ ಉದ್ದದ ಮಿತಿಯನ್ನು ಸಡಿಲಿಸಲು ಕ್ರಮವಹಿಸಲಾಗುವುದು.


ಸಹಕಾರ

76. 2024-25ನೇ ಸಾಲಿನಲ್ಲಿ 21.78 ಲಕ್ಷ ರೈತರಿಗೆ 18,960 ಕೋಟಿ ರೂ. ಕೃಷಿ ಸಾಲ ವಿತರಿಸಲಾಗಿದೆ. ರಿಯಾಯತಿ ಬಡ್ಡಿ ದರದಲ್ಲಿ ನೀಡುವ ಪುನರ್ಧನದ ಮಿತಿಯನ್ನು ನಬಾರ್ಡ್‌ ಶೇ.58ರಷ್ಟು ಕಡಿಮೆ ಮಾಡಿದ್ದರೂ ಸಹ, ನಿಗದಿತ ಗುರಿಯನ್ನು ಸಾಧಿಸಲು ನಾವು ಬದ್ಧರಾಗಿದ್ದೇವೆ. ಪ್ರಸಕ್ತ ಸಾಲಿನಲ್ಲಿ 37 ಲಕ್ಷ ರೈತರಿಗೆ 28,000 ಕೋಟಿ ರೂ. ಸಾಲವನ್ನು ವಿತರಿಸುವ ಗುರಿಯನ್ನು ಹೊಂದಲಾಗಿದೆ.

77. 2023-24ನೇ ಸಾಲಿನ ಬೆಳಗಾವಿ ಅಧಿವೇಶನದಲ್ಲಿ ಘೋಷಿಸಿದಂತೆ, ಡಿಸಿಸಿ (DCC) ಹಾಗೂ ಪಿಕಾರ್ಡ್‌ (PCARD) ಬ್ಯಾಂಕುಗಳಿಗೆ ಸಂಬಂಧಿಸಿದ ಮಧ್ಯಮಾವಧಿ ಮತ್ತು ದೀರ್ಘಾವಧಿ ಸುಸ್ತಿ ಸಾಲಗಳ ಮೇಲಿನ 240 ಕೋಟಿ ರೂ. ಬಡ್ಡಿಯನ್ನು ಮನ್ನಾ ಮಾಡಲಾಗಿದೆ.

78. ಯಶಸ್ವಿನಿ ಯೋಜನೆಯಡಿ ಇಲ್ಲಿಯವರೆಗೆ 700 ನೆಟ್‌ವರ್ಕ್ ಆಸ್ಪತ್ರೆಗಳು ನೋಂದಣಿಯಾಗಿದ್ದು, ಈ ಆಸ್ಪತ್ರೆಗಳಲ್ಲಿ ಇದುವರೆಗೂ ರಾಜ್ಯಾದ್ಯಂತ 59,000 ಫಲಾನುಭವಿಗಳು 103 ಕೋಟಿ ರೂ. ಮೊತ್ತದ ಚಿಕಿತ್ಸೆ ಪಡೆದಿರುತ್ತಾರೆ.

79. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ (PACS) ಕೇಂದ್ರ ಪುರಸ್ಕೃತ ಗಣಕೀಕರಣ ಯೋಜನೆಯಡಿ 93 ಕೋಟಿ ರೂ.ಗಳಷ್ಟು ಬಿಡುಗಡೆ ಮಾಡಿ, ರಾಜ್ಯದಲ್ಲಿ 110 ಸಂಘಗಳ ಗಣಕೀಕರಣವನ್ನು ಪೂರ್ಣಗೊಳಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ, 3,000 ಸಂಘಗಳನ್ನು ಸಂಪೂರ್ಣವಾಗಿ ಗಣಕೀಕರಣಗೊಳಿಸಲು ಉದ್ದೇಶಿಸಲಾಗಿದೆ.

80. ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ತೊಗರಿ ಖರೀದಿಗೆ ಪ್ರತಿ ಕ್ವಿಂಟಾಲ್‌ಗೆ 7,550 ರೂ. ಜೊತೆಗೆ ರಾಜ್ಯ ಸರ್ಕಾರದ ವತಿಯಿಂದ ಹೆಚ್ಚುವರಿ ಪ್ರೋತ್ಸಾಹಧನ 450 ರೂ.ಗಳಂತೆ ಒಟ್ಟು 138 ಕೋಟಿ ರೂ. ನೀಡಲು ತೀರ್ಮಾನಿಸಲಾಗಿದೆ. ಇದರಿಂದ, ತೊಗರಿ ಬೆಳೆಯುವ ಪ್ರಮುಖ ಜಿಲ್ಲೆಗಳಾದ ಕಲಬುರಗಿ, ಬೀದರ್‌, ಯಾದಗಿರಿ, ವಿಜಯಪುರ, ಬಾಗಲಕೋಟೆ, ರಾಯಚೂರು, ಕೊಪ್ಪಳ, ಕೋಲಾರ, ಚಿತ್ರದುರ್ಗ ಹಾಗೂ ಚಿಕ್ಕಬಳ್ಳಾಪುರ ಭಾಗದ ರೈತರಿಗೆ ಅನುಕೂಲವಾಗಲಿದೆ.  

81. ಸಹಕಾರ ಇಲಾಖೆಯಲ್ಲಿ ಕಾರ್ಯಕ್ಷಮತೆ, ಪಾರದರ್ಶಕತೆ ಹಾಗೂ ಜನಸ್ನೇಹಿ ಸೇವೆಗಳನ್ನು ನೀಡಲು ಈ ಕೆಳಕಂಡ ಸುಧಾರಣಾ ಕ್ರಮಗಳನ್ನು ಜಾರಿಗೆ ತರಲಾಗುವುದು:
i) ರಾಜ್ಯದ ಎಲ್ಲಾ ನೊಂದಾಯಿತ ಗೃಹ ನಿರ್ಮಾಣ ಸಹಕಾರ ಸಂಘಗಳ ಮಾಹಿತಿಯನ್ನು ಕರ್ನಾಟಕ ರಾಜ್ಯ ಸಹಕಾರ ವಸತಿ ಮಹಾಮಂಡಳದ ವತಿಯಿಂದ ಆನ್‌ಲೈನ್‌ನಲ್ಲಿ ಅಳವಡಿಸಲಾಗುವುದು.  
ii) ಠೇವಣಿದಾರರ ಹಿತಾಸಕ್ತಿಯನ್ನು ಕಾಪಾಡಲು ಹಾಗೂ ಅವ್ಯವಹಾರವನ್ನು ತಡೆಯಲು ಸಹಾಯವಾಣಿಯನ್ನು ಪ್ರಾರಂಭಿಸಲಾಗುವುದು.  
iii) ಸಹಕಾರ ಸಂಘಗಳ ಲೆಕ್ಕ ಪರಿಶೋಧನೆ ವರದಿಗಳನ್ನು ಡಿಜಿಟಲೀಕರಣಗೊಳಿಸಲಾಗುವುದು.

82. ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಅಪೂರ್ಣಗೊಂಡಿರುವ ಉಗ್ರಾಣಗಳ ನಿರ್ಮಾಣ ಹಾಗೂ ಮೂಲಸೌಕರ್ಯ ಕಾಮಗಾರಿಗಳನ್ನು ಪೂರ್ಣಗೊಳಿಸಲು 376 ಕೋಟಿ ರೂ. ಸಹಾಯಾನುದಾನವನ್ನು ಹಿಂದಿನ ಆಯವ್ಯಯದಲ್ಲಿ ಘೋಷಿಸಿದ್ದೇನೆ. ಅದರಂತೆ, ಈಗಾಗಲೇ 329 ಕೋಟಿ ರೂ. ಬಿಡುಗಡೆಗೊಳಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ, ಬಾಕಿ ಇರುವ
47 ಕೋಟಿ ರೂ. ಮೊತ್ತವನ್ನು ಒದಗಿಸಲಾಗುವುದು.

83. ರಾಜ್ಯದ ಎಲ್ಲಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಪರವಾನಿಗೆ ಪಡೆದು ಕಾರ್ಯನಿರ್ವಹಿಸುತ್ತಿರುವ ಶ್ರಮಿಕರು ಮೃತರಾದಾಗ ಅವರ ವಾರಸುದಾರರಿಗೆ ಒಂದು ಲಕ್ಷ ರೂ. ವಿಮಾ ಮೊತ್ತವನ್ನು ನೀಡಲಾಗುತ್ತಿದ್ದು, ಸದರಿ ವಿಮಾ ಮೊತ್ತವನ್ನು ಐದು ಲಕ್ಷ ರೂ.ಗಳಿಗೆ ಹೆಚ್ಚಿಸಲಾಗುವುದು.

84. ಬೆಂಗಳೂರಿನಲ್ಲಿರುವ ಮಾರುಕಟ್ಟೆ ಸಮಿತಿಗಳಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿರುವುದರಿಂದ ಬೆಂಗಳೂರಿನ ಹೊರವಲಯದಲ್ಲಿ ಹೊಸ Satellite Market ಅನ್ನು ಸ್ಥಾಪಿಸಲಾಗುವುದು.

85. ಕೊಪ್ಪಳ ಜಿಲ್ಲೆಯ ಬೂದುಗುಂಪ ಗ್ರಾಮದಲ್ಲಿ ಕುರಿ ಮತ್ತು ಮೇಕೆ ಮಾರುಕಟ್ಟೆಯನ್ನು KKRDB ವತಿಯಿಂದ 25 ಕೋಟಿ ರೂ. ವೆಚ್ಚದಲ್ಲಿ ಅಗತ್ಯ ಮೂಲಸೌಲಭ್ಯಗಳೊಂದಿಗೆ ಸ್ಥಾಪಿಸಲಾಗುವುದು.  

86. ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೈನುಗಾರಿಕೆಯನ್ನು ಉತ್ತೇಜಿಸಲು 10 ಕೋಟಿ ರೂ. ಅನುದಾನವನ್ನು ಪ್ರಥಮ ಹಂತದಲ್ಲಿ ನೀಡಲಾಗುವುದು. ಕಲಬುರಗಿಯಲ್ಲಿ ನೂತನ ಮೆಗಾ ಡೈರಿಯನ್ನು ಪ್ರಾರಂಭಿಸಲು KKRDB ವತಿಯಿಂದ 50 ಕೋಟಿ ರೂ. ಅನುದಾನ ಒದಗಿಸಲಾಗುವುದು.

87. KKRDB ವತಿಯಿಂದ ಕಲಬುರಗಿಯಲ್ಲಿ ಪ್ರಾದೇಶಿಕ ಸಹಕಾರ ಭವನವನ್ನು 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿದೆ.

88. KKRDB ಸಹಯೋಗದಿಂದ ಗ್ರಾಮೀಣ ಉಗ್ರಾಣಗಳನ್ನು
60 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು.

89. ಕುರಿ ಮತ್ತು ಮೇಕೆ ಸಾಕಾಣಿಕೆದಾರರಿಗೆ ಅನುವಾಗುವಂತೆ ಬೆಂಗಳೂರಿನಲ್ಲಿ ಸುಸಜ್ಜಿತ ಕುರಿ ಮತ್ತು ಮೇಕೆ ಮಾರುಕಟ್ಟೆಯನ್ನು ಪ್ರಾರಂಭಿಸಲಾಗುವುದು.

90. ಚಿಕ್ಕಬಳ್ಳಾಪುರದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ವತಿಯಿಂದ ಅಂತಾರಾಷ್ಟ್ರೀಯ ಮಟ್ಟದ ಹೈಟೆಕ್‌ ಹೂವಿನ ಮಾರುಕಟ್ಟೆಯನ್ನು ಹಾಗೂ ಕೆ.ಜಿ.ಎಫ್‌. ನಲ್ಲಿ ರೈತರ ಆಧುನಿಕ ಮಾರುಕಟ್ಟೆಯನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪಿಸಲಾಗುವುದು

ಜಲಸಂಪನ್ಮೂಲ

ಹಾ! ಗಂಟಲು ಒಣಗಿದೆ!!
ತಕೋ ಈ ಬಂಗಾರದ ಸರಪಳಿ
ಬದಲಾಗಿ
ಒಂದು ಗುಟುಕು ನೀರು ಕೊಡು
- ವಿಲ್ಸನ್‌ ಕಟೀಲ್

91. ನೀರಾವರಿ ಯೋಜನೆಗಳಡಿ ನೀರಿನ ಬಳಕೆಯಲ್ಲಿ ದಕ್ಷತೆ ಹೆಚ್ಚಿಸಲು ಹಾಗೂ ನೀರು ನಿರ್ವಹಣೆಯಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಕರ್ನಾಟಕ ನೀರಾವರಿ (ತಿದ್ದುಪಡಿ) ವಿಧೇಯಕ 2024ನ್ನು ತಿದ್ದುಪಡಿ ಮಾಡಿ ಜಾರಿಗೊಳಿಸಲಾಗಿದೆ.

92. ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯಡಿ ನೀರನ್ನು ಮೇಲೆತ್ತಿ ಗುರುತ್ವಾ ಕಾಲುವೆಯ ಸರಪಳಿ: 32.5 ಕಿ.ಮೀ ವರೆಗೆ ಹರಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಎಲ್ಲಾ ಎಂಟು ವಿಯರ್‌ಗಳಲ್ಲಿ ಲಭ್ಯವಾಗುವ ನೀರನ್ನು ಗುರುತ್ವಾ ಕಾಲುವೆಯ
ಸರಪಳಿ: 241 ಕಿ.ಮೀ ವರೆಗೆ ಹರಿಸಲಾಗುವುದು. ಈ ಯೋಜನೆಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಲು ಕ್ರಮಕೈಗೊಳ್ಳಲಾಗುವುದು.

93. ಭದ್ರಾ ಮೇಲ್ದಂಡೆ ಯೋಜನೆಗೆ 2023-24ರ ಕೇಂದ್ರ ಸರ್ಕಾರದ ಆಯವ್ಯಯದಲ್ಲಿ ಘೋಷಿಸಿದ 5,300 ಕೋಟಿ ರೂ. ಅನುದಾನ ಇನ್ನೂ ಬಿಡುಗಡೆಯಾಗಿರುವುದಿಲ್ಲ. ಆದರೂ, ರಾಜ್ಯ ಸರ್ಕಾರವು ಅಗತ್ಯ ಅನುದಾನವನ್ನು ಒದಗಿಸಿ ಈ ಯೋಜನೆಯನ್ನು ಪೂರ್ಣಗೊಳಿಸಲು ಕ್ರಮವಹಿಸುತ್ತಿದೆ. ತರೀಕೆರೆ ಏತ ನೀರಾವರಿ ಯೋಜನೆಯಡಿ 79 ಕೆರೆಗಳನ್ನು ತುಂಬಿಸುವ ಮೂಲಕ
49,790 ಎಕರೆ ಸೂಕ್ಷ್ಮ ನೀರಾವರಿ ಸಾಮರ್ಥ್ಯ ಕಲ್ಪಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 2,611 ಕೋಟಿ ರೂ. ಅಂದಾಜು ಮೊತ್ತದ ಚಿತ್ರದುರ್ಗ ಶಾಖಾ ಕಾಲುವೆ ಕಾಮಗಾರಿಗಳನ್ನು ಪೂರ್ಣಗೊಳಿಸುವ ಮೂಲಕ ಹೊಸದುರ್ಗ, ಹೊಳಲ್ಕೆರೆ, ಜಗಳೂರು, ಮೊಳಕಾಲ್ಮೂರು, ಚಳ್ಳಕೆರೆ ಮತ್ತು ಪಾವಗಡ ತಾಲ್ಲೂಕುಗಳಲ್ಲಿನ 30 ಕೆರೆಗಳನ್ನು ತುಂಬಿಸಿ ಒಂದು ಲಕ್ಷದ ಎಪ್ಪತ್ತೇಳು ಸಾವಿರ ಎಕರೆ ಪ್ರದೇಶಕ್ಕೆ ಸೂಕ್ಷ್ಮ ನೀರಾವರಿ ಸಾಮರ್ಥ್ಯವನ್ನು ಕಲ್ಪಿಸಲಾಗುವುದು.  

94. ಕೃಷ್ಣ ಮೇಲ್ದಂಡೆ ಯೋಜನೆ ಹಂತ-3ರ ವ್ಯಾಪ್ತಿಯ ಆಲಮಟ್ಟಿ ಅಣೆಕಟ್ಟಿನ ಗೇಟನ್ನು 524.256 ಮೀಟರ್‌ವರೆಗೆ ಎತ್ತರಿಸುವುದರಿಂದ ಮುಳುಗಡೆಯಾಗುವ ಜಮೀನುಗಳನ್ನು ಒಪ್ಪಂದ ಐತೀರ್ಪಿನ (Consent Award) ಮುಖಾಂತರ ಒಂದೇ ಹಂತದಲ್ಲಿ ಭೂಸ್ವಾಧೀನಪಡಿಸಿಕೊಂಡು ರೈತರಿಗೆ ಪರಿಹಾರ ವಿತರಣೆಗೆ ಕ್ರಮವಹಿಸಲಾಗುವುದು. ಅಲ್ಲದೇ, 2.01 ಲಕ್ಷ ಎಕರೆ ನೀರಾವರಿ ಸಾಮರ್ಥ್ಯ ಕಲ್ಪಿಸುವ ಬಾಕಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಕ್ರಮವಹಿಸಲಾಗುವುದು.

95. ಮೇಕೆದಾಟು ಸಮತೋಲನ ಜಲಾಶಯ ಯೋಜನೆಯ
ಪೂರ್ವ ಸಿದ್ಧತಾ ಕಾರ್ಯ ಅಂತಿಮಗೊಂಡಿದ್ದು, ಕೇಂದ್ರ ಸರ್ಕಾರದ ಸಕ್ಷಮ ಪ್ರಾಧಿಕಾರಗಳ ತೀರುವಳಿ ದೊರೆತ ಕೂಡಲೇ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು.  

96. ಕಳಸಾ-ಬಂಡೂರಾ ನಾಲಾ ತಿರುವು ಯೋಜನೆಯಡಿ 3.9 ಟಿಎಂಸಿ ನೀರಿನ ಬಳಕೆಗಾಗಿ ಕೇಂದ್ರ ಸರ್ಕಾರದಿಂದ ತೀರುವಳಿಗಳನ್ನು ನಿರೀಕ್ಷಿಸಿ ಈಗಾಗಲೇ ಯೋಜನಾ ಕಾಮಗಾರಿಗಳನ್ನು ಕೆಲವು ಷರತ್ತುಗಳೊಂದಿಗೆ ಗುತ್ತಿಗೆ ವಹಿಸಲಾಗಿದೆ. ಕೇಂದ್ರ ಸರ್ಕಾರದ ಅನುಮೋದನೆ ದೊರೆತ ಕೂಡಲೇ ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು.

97. ಕೃಷ್ಣಾ ಕಣಿವೆ, ಕಾವೇರಿ ಕಣಿವೆ ಹಾಗೂ ಇತರ ನದಿಗಳ ಕಣಿವೆಯ ವಿವಿಧ ಯೋಜನೆಗಳಡಿ ಬಾಕಿ ಇರುವ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಪ್ರಸಕ್ತ ಸಾಲಿನಲ್ಲಿ ಪೂರ್ಣಗೊಳಿಸಲು ಕ್ರಮವಹಿಸಲಾಗುವುದು. (ಯೋಜನೆಯ ವಿವರಗಳನ್ನು ಅನುಬಂಧ-1 ರಲ್ಲಿ ಲಗತ್ತಿಸಿದೆ)

98. ಕೃಷ್ಣಾ ಕಣಿವೆಯ ಅನುಷ್ಠಾನ ಹಂತದಲ್ಲಿರುವ ಆಧುನೀಕರಣ ಹಾಗೂ ಏತ ನೀರಾವರಿ ಯೋಜನೆಗಳನ್ನು PMKSY – AIBP ಯೋಜನೆಯಡಿ ಕೇಂದ್ರ ಸರ್ಕಾರದ ಸಹಾಯಧನ ಪಡೆಯಲು ಸೂಕ್ತ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು. (ಯೋಜನೆಯ ವಿವರಗಳನ್ನು ಅನುಬಂಧ-2 ರಲ್ಲಿ ಲಗತ್ತಿಸಿದೆ)

99. ಜಲಸಂಪನ್ಮೂಲ ಇಲಾಖೆಯಲ್ಲಿ ಕಾಮಗಾರಿಗಳ ಅಂದಾಜು ತಯಾರಿಕೆಯಲ್ಲಿ ಏಕರೂಪದ ತಾಂತ್ರಿಕ ಮಾನದಂಡಗಳನ್ನು ಜಾರಿಗೊಳಿಸಲಾಗುವುದು.
100. ತುಂಗಭದ್ರಾ ಜಲಾಶಯದಲ್ಲಿ ತುಂಬಿರುವ ಹೂಳಿನಿಂದಾಗಿ ನೀರಿನ ಸಂಗ್ರಹಣೆಯಲ್ಲಿ ಆಗಿರುವ ಕೊರತೆಯನ್ನು ಸರಿದೂಗಿಸಲು ಕೊಪ್ಪಳ ಜಿಲ್ಲೆಯಲ್ಲಿ ನವಲಿ ಸಮತೋಲನಾ ಜಲಾಶಯ ನಿರ್ಮಾಣವೂ ಸೇರಿದಂತೆ ಪರ್ಯಾಯ ಮಾರ್ಗೋಪಾಯಗಳ ಬಗ್ಗೆ
ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳೊಂದಿಗೆ ಚರ್ಚಿಸಿ ಅಂತಿಮಗೊಳಿಸಲಾಗುವುದು.

101. ರಾಜ್ಯದ ಪ್ರಮುಖ ಅಣೆಕಟ್ಟು ಗೇಟುಗಳ ಸದೃಢತೆಯನ್ನು ತಾಂತ್ರಿಕ ಪರಿಶೀಲನೆಗೊಳಪಡಿಸಿ ಅಗತ್ಯ ಕಂಡುಬಂದಲ್ಲಿ ಗೇಟುಗಳನ್ನು ದುರಸ್ತಿಗೊಳಿಸಲು ಮತ್ತು ಬದಲಿಸಲು ಆದ್ಯತೆಯ ಮೇಲೆ ಕ್ರಮವಹಿಸಲಾಗುವುದು.
ಸಣ್ಣ ನೀರಾವರಿ

102. ಎತ್ತಿನಹೊಳೆಯ ಯೋಜನೆಯಿಂದ ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ 45 ಕೆರೆಗಳನ್ನು ಹಾಗೂ ಕೊರಟಗೆರೆ ತಾಲ್ಲೂಕಿನ 62 ಕೆರೆಗಳನ್ನು ತುಂಬಿಸಿ ಅಂತರ್ಜಲ ಹೆಚ್ಚಿಸುವ ಯೋಜನೆಯನ್ನು 553 ಕೋಟಿ ರೂ. ಮೊತ್ತದಲ್ಲಿ ಅನುಷ್ಠಾನಗೊಳಿಸಲು ಕ್ರಮವಹಿಸಲಾಗುವುದು.

103. ಪ್ರಗತಿಯಲ್ಲಿರುವ ಈ ಕೆಳಗಿನ ಯೋಜನೆಗಳನ್ನು ಪ್ರಸಕ್ತ ಸಾಲಿನಲ್ಲಿ ಪೂರ್ಣಗೊಳಿಸಲಾಗುವುದು.  
i) 1,080 ಕೋಟಿ ರೂ. ಮೊತ್ತದ ವೃಷಭಾವತಿ ವ್ಯಾಲಿ ಮೊದಲನೇ ಹಂತದ 70 ಕೆರೆ ತುಂಬಿಸುವ ಯೋಜನೆ;
ii) 70 ಕೋಟಿ ರೂ. ಮೊತ್ತದ ಹೆಚ್‌.ಎನ್ ವ್ಯಾಲಿ 2ನೇ ಹಂತದ ಯೋಜನೆಯಡಿ 24 ಕೆರೆ ತುಂಬಿಸುವ ಯೋಜನೆ;
iii) 93.50 ಕೋಟಿ ರೂ. ಮೊತ್ತದ ಬೆಂಗಳೂರು ಪೂರ್ವ ತಾಲ್ಲೂಕಿನ 18 ಕೆರೆ ತುಂಬಿಸುವ ಯೋಜನೆ ಹಾಗೂ ಇತರೆ ಯೋಜನೆಗಳು (ಯೋಜನೆಯ ವಿವರಗಳನ್ನು
ಅನುಬಂಧ-3 ರಲ್ಲಿ ಲಗತ್ತಿಸಿದೆ)

104. ಪ್ರಸಕ್ತ ಸಾಲಿನಲ್ಲಿ ರಾಜ್ಯಾದ್ಯಂತ ಸಣ್ಣ ನೀರಾವರಿ ಯೋಜನೆಗಳಾದ ಕೆರೆಗಳ ಆಧುನೀಕರಣ, ಅಣೆಕಟ್ಟು ಮತ್ತು ಪಿಕಪ್‌, ಕಿಂಡಿ ಅಣೆಕಟ್ಟು, ಏತ ನೀರಾವರಿ, ನಿಷ್ಕ್ರಿಯ ಯೋಜನೆಗಳ ಪುನರುಜ್ಜೀವನ ಇತ್ಯಾದಿ ಯೋಜನೆಗಳಡಿ ಒಟ್ಟಾರೆ 2,000 ಕೋಟಿ ರೂ. ಮೊತ್ತದ ಹೊಸ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು.


ಶಾಲಾ ಶಿಕ್ಷಣ

ಶೋಷಿತರ ಬಹಿಷ್ಕೃತರ ಕಣ್ಣೀರನ್ನು ತೊಡೆದು ಹಾಕು,
ಜಾತಿವ್ಯವಸ್ಥೆ ಸಂಕೋಲೆಯನ್ನು ಮುರಿದು ಶಿಕ್ಷಣ ಪಡೆದುಕೋ…..
- ಸಾವಿತ್ರಿಬಾಯಿ ಪುಲೆ

105. ಪೂರ್ವ ಪ್ರಾಥಮಿಕದಿಂದ ಪದವಿ ಪೂರ್ವ ಹಂತದವರೆಗೂ ಒಂದೇ ಸೂರಿನಡಿ ಗುಣಮಟ್ಟದ ಶಿಕ್ಷಣ ನೀಡಲು ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಪ್ರಾರಂಭಿಸಲಾಗಿರುವ ಕರ್ನಾಟಕ ಪಬ್ಲಿಕ್‌ ಶಾಲೆಗಳನ್ನು ವಿಸ್ತರಿಸಲು ಉದ್ದೇಶಿಸಿದೆ. ಏಷಿಯನ್‌
ಡೆವಲಪ್‌ಮೆಂಟ್‌ ಬ್ಯಾಂಕ್‌ ನೆರವಿನೊಂದಿಗೆ 2,500 ಕೋಟಿ ರೂ. ವೆಚ್ಚದಲ್ಲಿ 500 ಹೊಸ ಕರ್ನಾಟಕ ಪಬ್ಲಿಕ್‌ ಶಾಲೆಗಳನ್ನು ಪ್ರಾರಂಭಿಸಲಾಗುವುದು.

106. ಶಾಲಾ ಮಕ್ಕಳ ಅಪೌಷ್ಟಿಕತೆ ನಿವಾರಿಸುವ ನಿಟ್ಟಿನಲ್ಲಿ ಪ್ರಸ್ತುತ ೫೩ ಲಕ್ಷ ಮಕ್ಕಳಿಗೆ ವಾರದಲ್ಲಿ ಎರಡು ದಿನ ವಿತರಿಸಲಾಗುತ್ತಿರುವ ಮೊಟ್ಟೆ/ಬಾಳೆಹಣ್ಣನ್ನು ಅಜೀಮ್‌ ಪ್ರೇಮ್‌ಜಿ ಫೌಂಡೇಶನ್‌ ಸಹಯೋಗದೊಂದಿಗೆ 1,500 ಕೋಟಿ ರೂ. ವೆಚ್ಚದಲ್ಲಿ ವಾರದಲ್ಲಿ ಆರು ದಿನಕ್ಕೆ ವಿಸ್ತರಿಸಲಾಗಿದೆ. ಈ ಯೋಜನೆಯನ್ನು 2025-26ನೇ ಸಾಲಿನಲ್ಲಿಯೂ ಮುಂದುವರೆಸಲಾಗುವುದು.

107. ಶಾಲಾ ಮಕ್ಕಳಿಗೆ ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್‌ ವತಿಯಿಂದ ಪ್ರಸ್ತುತ ವಾರದಲ್ಲಿ ಮೂರು ದಿನ ಸಾಯಿ ಶ್ಯೂರ್‌ ರಾಗಿ ಹೆಲ್ತ್‌ ಮಿಕ್ಸ್‌ ಪುಡಿಯನ್ನು ಬಿಸಿ ಹಾಲಿನೊಂದಿಗೆ ಮಿಶ್ರಣ ಮಾಡಿ ವಿತರಿಸಲಾಗುತ್ತಿದೆ. ಈ ಕಾರ್ಯಕ್ರಮವನ್ನು ವಾರದ ಐದು ದಿನಗಳಿಗೆ ವಿಸ್ತರಿಸಲಾಗುವುದು. ಒಟ್ಟಾರೆ 100 ಕೋಟಿ ರೂ. ವೆಚ್ಚದ ಈ ಯೋಜನೆಯ ಶೇ.25 ರಷ್ಟು ವೆಚ್ಚವನ್ನು ರಾಜ್ಯ ಸರ್ಕಾರದಿಂದ ಭರಿಸಲಾಗುವುದು.

108. ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಅತಿಥಿ ಶಿಕ್ಷಕರು ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ಪ್ರಸ್ತುತ ನೀಡಲಾಗುತ್ತಿರುವ ಮಾಸಿಕ ಗೌರವಧನವನ್ನು ತಲಾ 2,000 ರೂ. ಹೆಚ್ಚಿಸಲಾಗುವುದು.

109. ಸರ್ಕಾರಿ ಶಾಲೆಗಳಲ್ಲಿ ಬಿಸಿಯೂಟ ತಯಾರಿಸುವ ಸಿಬ್ಬಂದಿಗೆ ನೀಡುತ್ತಿರುವ ಮಾಸಿಕ ಗೌರವಧನವನ್ನು ತಲಾ 1,000 ರೂ. ಹೆಚ್ಚಿಸಲಾಗುವುದು.

110. ರಾಜ್ಯದ ಅರ್ಹ 100 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢ ಶಾಲೆಗಳನ್ನಾಗಿ ಹಾಗೂ 50 ಪ್ರೌಢಶಾಲೆಗಳನ್ನು ಪದವಿ ಪೂರ್ವ ಕಾಲೇಜುಗಳನ್ನಾಗಿ ಉನ್ನತೀಕರಿಸಲಾಗುವುದು.

111. LKG ಯಿಂದ ದ್ವಿತೀಯ ಪಿ.ಯು.ಸಿ ವರೆಗಿನ ಎಲ್ಲಾ ತರಗತಿಗಳ ವಿದ್ಯಾರ್ಥಿಗಳು, ಆಯಾ ತರಗತಿಗೆ ತಕ್ಕಂತೆ ಕಲಿಕೆಯ ಮಟ್ಟವನ್ನು ಹೊಂದುವ ನಿಟ್ಟಿನಲ್ಲಿ ಮೂರು ವರ್ಷಗಳ ಮಹತ್ವಾಕಾಂಕ್ಷಿ ಕಾರ್ಯಕ್ರಮವನ್ನು ಜಾರಿಗೊಳಿಸಲಾಗುವುದು. ಈ ಮೂಲಕ SSLC ಮತ್ತು PUC ಪರೀಕ್ಷೆಗಳ ಫಲಿತಾಂಶದಲ್ಲಿ ಸುಧಾರಣೆ ತರಲಾಗುವುದು. ಇದಕ್ಕಾಗಿ, ಈ ಕೆಳಕಂಡ ಉಪಕ್ರಮಗಳನ್ನು ಕೈಗೊಳ್ಳಲಾಗುವುದು:
i) ಪ್ರಸ್ತುತ 2,619 ಸರ್ಕಾರಿ ಶಾಲೆಗಳ ಪೂರ್ವ ಪ್ರಾಥಮಿಕ ತರಗತಿಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು,
ಒಟ್ಟು 90,195 ವಿದ್ಯಾರ್ಥಿಗಳು ದಾಖಲಾಗಿರುತ್ತಾರೆ.
ಈ ಯೋಜನೆಯನ್ನು 70 ಕೋಟಿ ರೂ. ವೆಚ್ಚದಲ್ಲಿ ಒಟ್ಟಾರೆ 5,000 ಶಾಲೆಗಳಿಗೆ ವಿಸ್ತರಿಸಲಾಗುವುದು.
ii) ʻಕಲಿಕಾ ಚಿಲುಮೆʼ ಕಾರ್ಯಕ್ರಮದಡಿ ಒಂದರಿಂದ ಐದನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಸಂತಸದಾಯಕ ಕಲಿಕಾ ಅನುಭವ ಒದಗಿಸುವುದು.
iii) ʻಗಣಿತ ಗಣಕʼ ಕಾರ್ಯಕ್ರಮದಡಿ 3 ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ಫೋನ್‌ ಮೂಲಕ ವೈಯಕ್ತಿಕ ಬೋಧನೆಯೊಂದಿಗೆ ಬುನಾದಿ ಗಣಿತ ಕೌಶಲ್ಯವನ್ನು ಅಭಿವೃದ್ಧಿಪಡಿಸಿ ರಾಜ್ಯಾದ್ಯಂತ ವಿಸ್ತರಿಸುವುದು.
iv) ʻಓದು ಕರ್ನಾಟಕʼ ಯೋಜನೆಯಡಿ 4 ಮತ್ತು 5ನೇ ತರಗತಿ ವಿದ್ಯಾರ್ಥಿಗಳಿಗೆ ಬುನಾದಿ ಸಾಕ್ಷರತೆ ಹಾಗೂ ಸಂಖ್ಯಾಜ್ಞಾನದ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವುದು.
v) ಸರ್ಕಾರಿ ಶಾಲೆಗಳಲ್ಲಿ ಅತೀ ಕಡಿಮೆ ಕಲಿಕಾ ಸ್ತರದಲ್ಲಿರುವ 6 ರಿಂದ 10ನೇ ತರಗತಿ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಹೆಚ್ಚಿಸುವ ʻಮರುಸಿಂಚನʼ ಕಾರ್ಯಕ್ರಮವನ್ನು ರಾಜ್ಯಾದ್ಯಂತ ವಿಸ್ತರಿಸುವುದು.  
vi) ಕನ್ನಡ ಮತ್ತು ಆಂಗ್ಲ ಭಾಷೆಯನ್ನು ಆತ್ಮವಿಶ್ವಾಸದಿಂದ ಓದಲು ಹಾಗೂ ಗಣಿತದ ಆರಂಭಿಕ ಸಾಮರ್ಥ್ಯಗಳನ್ನು ಗಳಿಸಲು Ek-Step ಸಂಸ್ಥೆಯ ಸಹಯೋಗದೊಂದಿಗೆ AI ಆಧಾರಿತ ʻಕಲಿಕಾದೀಪʼ ಕಾರ್ಯಕ್ರಮವನ್ನು 2,000 ಶಾಲೆಗಳಿಗೆ ವಿಸ್ತರಿಸುವುದು.
vii) ʻಜ್ಞಾನಸೇತುʼ ಕಾರ್ಯಕ್ರಮದಡಿ ಸರ್ಕಾರಿ ಶಾಲೆಗಳಲ್ಲಿ ವಿಜ್ಞಾನ ಮತ್ತು ಗಣಿತ ವಿಷಯಗಳ ಬೋಧನಾ ವಿಧಾನದಲ್ಲಿ ನಾವೀನ್ಯತೆ ಅಳವಡಿಸಿ, ಖಾನ್‌ ಅಕಾಡೆಮಿ ಸಹಯೋಗದಲ್ಲಿ ಯೋಜನೆ ರೂಪಿಸಲಾಗುವುದು. ರಾಜ್ಯದ 5,೦೦೦ ಸರ್ಕಾರಿ ಶಾಲೆಗಳ 20 ಲಕ್ಷ ವಿದ್ಯಾರ್ಥಿಗಳು ಹಾಗೂ 15,000 ಶಿಕ್ಷಕರು ಈ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ.
viii) ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಕೋಡಿಂಗ್‌ ಕಲಿಕೆ ಪರಿಚಯಿಸಲು ಅಗಸ್ತ್ಯ ಫೌಂಡೇಶನ್‌ ಸಹಯೋಗದೊಂದಿಗೆ ಐ-ಕೋಡ್‌ ಲ್ಯಾಬ್‌ ಸ್ಥಾಪಿಸಲಾಗುವುದು. ಈ ನಿಟ್ಟಿನಲ್ಲಿ ಪ್ರಸಕ್ತ ವರ್ಷ ICT ಸೌಲಭ್ಯವಿರುವ ಆಯ್ದ 63 ಶಾಲೆಗಳನ್ನು ಹಬ್‌ಗಳೆಂದು ಪರಿಗಣಿಸಿ 756 ಸ್ಪೋಕ್‌ ಶಾಲೆಗಳಿಗೆ ಅನುಕೂಲ ಕಲ್ಪಿಸುವುದು.
ix) ʻವಿದ್ಯಾವಿಜೇತʼ ಕಾರ್ಯಕ್ರಮದಡಿ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ 25,000 ವಿದ್ಯಾರ್ಥಿಗಳಿಗೆ CET/NEET/JEE ತರಬೇತಿ ನೀಡಲಾಗಿದ್ದು, ಸದರಿ ಕಾರ್ಯಕ್ರಮವನ್ನು ಮುಂದುವರೆಸಲು 5 ಕೋಟಿ ರೂ. ಒದಗಿಸಲಾಗುವುದು.

112. ʻನಿರಂತರʼ ಕಾರ್ಯಕ್ರಮದಡಿ Face Recognition ತಂತ್ರಜ್ಞಾನದ ಮೂಲಕ ಮಕ್ಕಳ ಹಾಜರಾತಿಯನ್ನು ಖಚಿತಪಡಿಸುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು.

113. ವಿದ್ಯಾರ್ಥಿಗಳಲ್ಲಿ ಮಾತೃಭಾಷೆಯ ಜೊತೆಗೆ ಆಂಗ್ಲಭಾಷೆಯ ಕೌಶಲ್ಯ ಬೆಳೆಸಲು ರಾಜ್ಯದ 4,000 ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ವಿಭಾಗವನ್ನು ಪ್ರಾರಂಭಿಸಲಾಗುವುದು.

114. ರಾಜ್ಯದ 2,710 ಸರ್ಕಾರಿ ಪ್ರೌಢಶಾಲೆಗಳಲ್ಲಿ ಈಗಾಗಲೇ ಕಂಪ್ಯೂಟರ್‌ ಮತ್ತು ವಿಜ್ಞಾನ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ಇನ್ನೂ ೫೦೦ ಶಾಲೆಗಳಿಗೆ ಈ ಸೌಲಭ್ಯ ವಿಸ್ತರಿಸಲಾಗುವುದು.

115. ಪ್ರೌಢಶಾಲಾ / ಪದವಿ ಪೂರ್ವ ಕಾಲೇಜು ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ ನೀಡಲು Skill at School ಕಾರ್ಯಕ್ರಮ ರೂಪಿಸಲಾಗಿದೆ. ಇದರಡಿ, ಆಯ್ದ 7,500 ವಿದ್ಯಾರ್ಥಿಗಳಿಗೆ ಉನ್ನತೀಕರಿಸಿದ 150 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ತರಬೇತಿ ನೀಡಲಾಗುವುದು.

116. ಸರ್ಕಾರಿ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಹೆಚ್ಚುವರಿ ಕೊಠಡಿ, ಶೌಚಾಲಯಗಳ ನಿರ್ಮಾಣ ಮತ್ತು ದುರಸ್ತಿ ಕಾರ್ಯಗಳಿಗೆ ೭೨೫ ಕೋಟಿ ರೂ. ಹಾಗೂ ಅಗತ್ಯ ಪೀಠೋಪಕರಣಗಳನ್ನು ಒದಗಿಸಲು 50 ಕೋಟಿ ರೂ. ನೀಡಲಾಗಿದೆ.    

117. ಮಧ್ಯಾಹ್ನ ಉಪಹಾರ ಯೋಜನೆಯಡಿ ರಾಜ್ಯದ 16,347 ಶಾಲೆಗಳ ಅಡುಗೆಮನೆ ಆಧುನೀಕರಣ ಕಾರ್ಯ ಮತ್ತು ಹೊಸ ಪಾತ್ರೆ ಪರಿಕರಗಳನ್ನು ಒದಗಿಸಲು 46 ಕೋಟಿ ರೂ. ವೆಚ್ಚ ಮಾಡಲಾಗುವುದು.

118. ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಕ್ಷರ ಆವಿಷ್ಕಾರ ಯೋಜನೆ ಅಡಿ 2೦೦ ಕೋಟಿ ರೂ. ವೆಚ್ಚದಲ್ಲಿ ಆಯ್ದ 50 ಶಾಲೆಗಳನ್ನು ಸುಸಜ್ಜಿತ ಕೆ.ಪಿ.ಎಸ್.‌ ಶಾಲೆಗಳನ್ನಾಗಿ ಉನ್ನತೀಕರಿಸಲಾಗುವುದು.

119. ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ 5,267 ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಮುಂದುವರೆದು, ಇಲಾಖೆಯಲ್ಲಿ ಇನ್ನೂ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ತರ್ಕಬದ್ಧಗೊಳಿಸಿ 5,000 ಹುದ್ದೆಗಳನ್ನು ಭರ್ತಿ ಮಾಡಲು ಕ್ರಮವಹಿಸಲಾಗುವುದು.

120. ದಕ್ಷಿಣ ಕನ್ನಡ ಜಿಲ್ಲೆಯ ಪಿಲಿಕುಳದಲ್ಲಿ ಭಾರತ್ ಸ್ಕೌಟ್ಸ್‌ ಮತ್ತು ಗೈಡ್ಸ್‌ ಅಂತಾರಾಷ್ಟ್ರೀಯ ಯುವಕರ ತರಬೇತಿ ಕೇಂದ್ರದ ಅಭಿವೃದ್ಧಿಗಾಗಿ ಎರಡು ಕೋಟಿ ರೂ. ಒದಗಿಸಲಾಗುವುದು.

ಉನ್ನತ ಶಿಕ್ಷಣ

121. ಗುಣಮಟ್ಟದ ಉನ್ನತ ಶಿಕ್ಷಣವನ್ನು ಒದಗಿಸಲು ರಾಜ್ಯದ ಪ್ರಥಮ ದರ್ಜೆ ಕಾಲೇಜುಗಳ ಬಲವರ್ಧನೆ, ಶಿಕ್ಷಣ ಸಂ‍ಸ್ಥೆಗಳಲ್ಲಿ ಉತ್ಕೃಷ್ಟತಾ ಕೇಂದ್ರಗಳ (Centre of Excellence) ಸ್ಥಾಪನೆ ಹಾಗೂ ಸಂಶೋಧನಾ ಸಾಮರ್ಥ್ಯ ಹೆಚ್ಚಿಸುವ ಉದ್ದೇಶಕ್ಕಾಗಿ ಮುಂದಿನ ನಾಲ್ಕು ವರ್ಷಗಳಲ್ಲಿ ವಿಶ್ವಬ್ಯಾಂಕ್‌ ನೆರವಿನೊಂದಿಗೆ 2,500 ಕೋಟಿ ರೂ. ಯೋಜನೆಯನ್ನು ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ.

122. ಬೆಂಗಳೂರು ನಗರ ವಿಶ್ವವಿದ್ಯಾಲಯವನ್ನು ಡಾ|| ಮನಮೋಹನ್‌ ಸಿಂಗ್‌ ಬೆಂಗಳೂರು ನಗರ ವಿಶ್ವವಿದ್ಯಾಲಯ ಎಂದು ಮರುನಾಮಕರಣ ಮಾಡಲಾಗುವುದು. ಈ ವಿಶ್ವವಿದ್ಯಾಲಯವನ್ನು ದೇಶದಲ್ಲಿ ಮಾದರಿಯನ್ನಾಗಿಸುವ ಉದ್ದೇಶದಿಂದ, ಸರ್ಕಾರಿ
ಕಲಾ ಕಾಲೇಜು ಹಾಗೂ ಸರ್ಕಾರಿ ಆರ್‌.ಸಿ. ಕಾಲೇಜುಗಳನ್ನು ವಿಶ್ವವಿದ್ಯಾಲಯದ ಘಟಕ ಕಾಲೇಜುಗಳನ್ನಾಗಿ ಅಭಿವೃದ್ಧಿಪಡಿಸಲಾಗುವುದು.

123. ಮಹಿಳಾ ಉನ್ನತ ಶಿಕ್ಷಣದ ಬಲವರ್ಧನೆಗಾಗಿ 31 ಮಹಿಳಾ ಕಾಲೇಜುಗಳನ್ನು ಹಿಂದಿನ ವರ್ಷದಲ್ಲಿ ಉನ್ನತೀಕರಿಸಲು ಕ್ರಮ ಕೈಗೊಂಡಿದ್ದು, ಉಳಿದ 26 ಕಾಲೇಜುಗಳ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು 26 ಕೋಟಿ ರೂ. ಒದಗಿಸಲಾಗುವುದು.

124. ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು, ಇಂಜಿನಿಯರಿಂಗ್‌ ಕಾಲೇಜುಗಳು ಮತ್ತು ಪಾಲಿಟೆಕ್ನಿಕ್‌ಗಳಲ್ಲಿ ಖಾಲಿಯಿರುವ 2,000 ಬೋಧಕ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮವಹಿಸಲಾಗುವುದು.  

125. ರಾಜ್ಯದ ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜು, ಪಾಲಿಟೆಕ್ನಿಕ್‌ ಸಂಸ್ಥೆಗಳು ಹಾಗೂ ಪದವಿ ಕಾಲೇಜುಗಳಿಗೆ ಒಟ್ಟಾರೆ 275 ಕೋಟಿ ರೂ. ವೆಚ್ಚದಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲಾಗುವುದು.

126. ಹೊಸದಾಗಿ ಪ್ರಾರಂಭಿಸಲಾದ ಪಾಲಿಟೆಕ್ನಿಕ್‌ ಹಾಗೂ ಇಂಜಿನಿಯರಿಂಗ್‌ ಕಾಲೇಜುಗಳಿಗೆ 10 ಕೋಟಿ ರೂ. ವೆಚ್ಚದಲ್ಲಿ ಪೀಠೋಪಕರಣಗಳು, ಉಪಕರಣಗಳು, ಕಂಪ್ಯೂಟರ್‌ಗಳು ಹಾಗೂ ಪುಸ್ತಕಗಳನ್ನು ಒದಗಿಸಲಾಗುವುದು.

127. ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿನಿಯರಿಗೆ ಇಂಗ್ಲೆಂಡ್‌ ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ Chevening Karnataka Masters Fellowship ನೆರವಿನೊಂದಿಗೆ ಒಂದು ವರ್ಷದ ಸ್ನಾತಕೋತ್ತರ ಪದವಿ ಪಡೆಯುವ ಯೋಜನೆ ರೂಪಿಸಲಾಗಿದೆ.

128. ರಾಜ್ಯದ 16 ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನದಿಂದ ಉದ್ಯೋಗಾರ್ಹತೆಯನ್ನು ಹೆಚ್ಚಿಸಲು ವೃತ್ತಿಪರ ವಿಷಯ ತಜ್ಞರನ್ನು ʻProfessor of Practiceʼ ರನ್ನಾಗಿ ನೇಮಿಸಲು ಉದ್ದೇಶಿಸಲಾಗಿದೆ.

129. ಉನ್ನತ ಶಿಕ್ಷಣ ಸಂಸ್ಥೆಗಳ ಸಮಗ್ರ ನಿರ್ವಹಣೆಗಾಗಿ ಜಾರಿಮಾಡಿರುವ UUCMS ತಂತ್ರಾಂಶವನ್ನು ಇನ್ನೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಒಟ್ಟಾರೆ 30 ಕೋಟಿ ರೂ. ವೆಚ್ಚದಲ್ಲಿ ಉನ್ನತೀಕರಿಸಲಾಗುವುದು.

130. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಘಟಕ ಕಾಲೇಜನ್ನು 150 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುವುದು.

131. ಅಜೀಂ ಪ್ರೇಮ್‌ಜೀ ಫೌಂಡೇಶನ್‌ರವರ ಸಹಯೋಗದೊಂದಿಗೆ ಕಾಲೇಜು ಶಿಕ್ಷಣ ಇಲಾಖೆಯ ಎಲ್ಲಾ ಬೋಧಕರಿಗೆ ಬೋಧನೆ ಮತ್ತು ಕಲಿಕೆಯನ್ನು ಉತ್ತಮಪಡಿಸಲು ಮುಂದಿನ ಮೂರು ವರ್ಷದೊಳಗೆ ಪುನರ್‌ ಮನನ ತರಬೇತಿ ನೀಡಲಾಗುವುದು.

132. ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮಾರುಕಟ್ಟೆ ಆಧಾರಿತ ಕೌಶಲ್ಯ ತರಬೇತಿಗಳನ್ನು ಒದಗಿಸಿ ಉದ್ಯೋಗಕ್ಕೆ ಸಜ್ಜುಗೊಳಿಸಲು ಕೈಗಾರಿಕೆಗಳ ಸಹಭಾಗಿತ್ವದಲ್ಲಿ Internship Program ಹಾಗೂ ವಿಶೇಷ ಕಾರ್ಪೋರೇಟ್‌ ತರಬೇತಿ ಯೋಜನೆಗಳನ್ನು ರೂಪಿಸಲಾಗುವುದು.

133. KKRDB ವತಿಯಿಂದ 23,000 ವಿದ್ಯಾರ್ಥಿಗಳಿಗೆ ವಿಶೇಷ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು 10 ಕೋಟಿ ರೂ. ವೆಚ್ಚದಲ್ಲಿ ಹಮ್ಮಿಕೊಳ್ಳಲಾಗುವುದು.

134. ಪ್ರೊ. ನಂಜುಂಡ ಸ್ವಾಮಿ ಸಂಶೋಧನಾ ಪೀಠವನ್ನು ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರಾರಂಭಿಸಲಾಗುವುದು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ

135. ಆರೋಗ್ಯವಂತ ಜನರಿಂದ ಮಾತ್ರ ಸಮತೋಲಿತ ಸಮಾಜ ನಿರ್ಮಾಣ ಸಾಧ್ಯ ಎಂದು ನಾವು ನಂಬಿದ್ದೇವೆ. ಜನನದಿಂದ ಎಲ್ಲಾ ವಯೋಮಾನದವರಿಗೂ ವರ್ಗಬೇಧವಿಲ್ಲದೇ, ಕೈಗೆಟಕುವ ದರದಲ್ಲಿ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಖಾತ್ರಿಪಡಿಸಲು ನಾವು ಬದ್ಧರಾಗಿದ್ದೇವೆ. ತಡೆಗಟ್ಟಬಹುದಾದ ತಾಯಿ ಮರಣ ಪ್ರಮಾಣವನ್ನು ಶೂನ್ಯಕ್ಕೆ ಇಳಿಸುವುದು ನಮ್ಮ ಸಂಕಲ್ಪವಾಗಿದೆ.

136. ರಾಜ್ಯದಲ್ಲಿ ತಡೆಗಟ್ಟಬಹುದಾದ ತಾಯಿ ಮರಣ ಪ್ರಮಾಣವನ್ನು ಶೂನ್ಯಕ್ಕೆ ಇಳಿಸಲು ಅಭಿಯಾನ ರೂಪದಲ್ಲಿ ಕ್ರಮ ಕೈಗೊಳ್ಳಲು
320 ಕೋಟಿ ರೂ. ಒದಗಿಸಲಾಗಿದೆ:
i) ಗರ್ಭಿಣಿಯರಲ್ಲಿ ಮತ್ತು ಪ್ರಸೂತಿ ವೇಳೆಯಲ್ಲಿನ ತೀವ್ರತರಹದ ರಕ್ತಸ್ರಾವ ತಡೆಗಟ್ಟಲು ಮತ್ತು ಚಿಕಿತ್ಸೆ ನೀಡಲು ಅವಶ್ಯವಿರುವ ಉಪಕರಣಗಳನ್ನು ನೀಡಲಾಗುವುದು. ನವೀನ ಡಿಜಿಟಲ್ ತಂತ್ರಜ್ಞಾನದ ಮೂಲಕ ಹೆರಿಗೆ ಸೇವೆಗಳನ್ನು ಬಲಪಡಿಸಲಾಗುವುದು.
ii) ಗರ್ಭಿಣಿಯರಲ್ಲಿ ರಕ್ತಹೀನತೆ ತಡೆಗಟ್ಟಲು ಹಿಂದುಳಿದ ಜಿಲ್ಲೆಗಳಲ್ಲಿ ಪೌಷ್ಟಿಕಾಂಶ ಕಿಟ್‌ಗಳು, ಪ್ರೋತ್ಸಾಹ ಧನ ಹಾಗೂ ತಾಯಂದಿರಿಗೆ ವಾತ್ಸಲ್ಯ ಕಿಟ್‌ಗಳನ್ನು ವಿತರಣೆ ಮಾಡಲಾಗುವುದು.
iii) ಹುದ್ದೆಗಳನ್ನು ಪುನರ್ ಹಂಚಿಕೆ ಮಾಡುವ ಮೂಲಕ ಪ್ರತಿ ತಾಲ್ಲೂಕು ಆಸ್ಪತ್ರೆಯಲ್ಲಿ MCH ತಜ್ಞರನ್ನು ನಿಯೋಜಿಸಲಾಗುವುದು.
iv) ರಾಜ್ಯದಲ್ಲಿ ಸಂಭವಿಸುವ ತಾಯಿ ಮರಣವನ್ನು ರಾಜ್ಯ ತಾಂತ್ರಿಕ ತಜ್ಞರ ಸಮಿತಿಯಿಂದ ಆಡಿಟ್‌ ಮಾಡಿಸಿ ಶಿಫಾರಸ್ಸುಗಳನ್ನು ರಾಜ್ಯ ಅಧಿಕಾರಯುಕ್ತ ಸಮಿತಿ ಮುಂದೆ ಮಂಡಿಸಲಾಗುವುದು. ಸಮಿತಿಯ ನಿರ್ದೇಶನದಂತೆ ತಾಯಿ ಮರಣ ತಡೆಗಟ್ಟುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಲಾಗುವುದು.

137. ರಾಜ್ಯದಲ್ಲಿ ಆರೋಗ್ಯ ಮೂಲಸೌಕರ್ಯ ಅಭಿವೃದ್ಧಿ ದೃಷ್ಟಿಯಿಂದ ಈ ಕೆಳಕಂಡ ಕ್ರಮಗಳನ್ನು ತೆಗೆದುಕೊಳ್ಳಲಾಗಿರುತ್ತದೆ:
i) ರಾಜ್ಯದಲ್ಲಿ 50 ಹಾಸಿಗೆ ಸಾಮರ್ಥ್ಯದ 14 Critical Care Block ಗಳು ಹಾಗೂ ಬೆಂಗಳೂರು ನಗರದಲ್ಲಿ 100 ಹಾಸಿಗೆ ಸಾಮರ್ಥ್ಯದ ಒಂದು Critical Care Block ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ.
ii) ಅಥಣಿ, ಹುನಗುಂದ ಮತ್ತು ಮುಧೋಳದಲ್ಲಿ 50 ಹಾಸಿಗೆ ಸಾಮರ್ಥ್ಯದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗಳನ್ನು ಸ್ಥಾಪನೆ ಮಾಡಲು ಅನುಮೋದನೆ ನೀಡಲಾಗಿದೆ.
iii) ಆಶಾಕಿರಣ ರಾಷ್ಟ್ರೀಯ ಅಂಧತ್ವ ನಿವಾರಣಾ ಕಾರ್ಯಕ್ರಮದಡಿ 1.4 ಕೋಟಿ ಜನರಿಗೆ ಕಣ್ಣಿನ ತಪಾಸಣೆ; 3.3 ಲಕ್ಷ ಜನರಿಗೆ ಉಚಿತ ಕನ್ನಡಕ ವಿತರಣೆ ಮತ್ತು 93,800 ಜನರಿಗೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಕೈಗೊಳ್ಳಲಾಗಿದೆ.
iv) ನರವೈಜ್ಞಾನಿಕ ಖಾಯಿಲೆಗಳಿಗೆ ಕರ್ನಾಟಕ ಮೆದುಳು ಆರೋಗ್ಯ ಉಪಕ್ರಮದಡಿ (KaBHI) ನಿಮ್ಹಾನ್ಸ್‌ ಸಹಯೋಗದೊಂದಿಗೆ ಒಟ್ಟು 2.61 ಲಕ್ಷ ತಪಾಸಣೆ ಮಾಡಿ  32,630 ನರರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಈ ಯೋಜನೆಯನ್ನು ಈ ವರ್ಷ ಎಲ್ಲಾ ಹಂತದ ಆರೋಗ್ಯ ಕೇಂದ್ರಗಳಿಗೆ ವಿಸ್ತರಿಸಲು 20 ಕೋಟಿ ರೂ. ಒದಗಿಸಲಾಗಿದೆ. ಅಲ್ಲದೇ, ಮಾನಸಿಕ ಅಸ್ವಸ್ಥರ ಆರೈಕೆಗೆ ಜಿಲ್ಲಾ ಮಟ್ಟದ ಆಸ್ಪತ್ರೆಗಳಲ್ಲಿ ಸರ್ಕಾರೇತರ ಸಂಸ್ಥೆಗಳ ಸಹಯೋಗದೊಂದಿಗೆ ಆರೈಕೆ ಕೇಂದ್ರಗಳನ್ನು ಸ್ಥಾಪಿಸಲಾಗುವುದು.

138. 2025-26 ನೇ ಸಾಲಿನಲ್ಲಿ ಈ ಕೆಳಗಿನಂತೆ ಆರೋಗ್ಯ ಮೂಲ ಸೌಕರ್ಯ ಅಭಿವೃದ್ಧಿ ಕಾರ್ಯ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು:
i) ಬೆಂಗಳೂರು ಉತ್ತರ ತಾಲ್ಲೂಕಿನ ವ್ಯಾಪ್ತಿಯಲ್ಲಿ 200 ಹಾಸಿಗೆಯ ಅತ್ಯಾಧುನಿಕ ಮತ್ತು ಸುಸಜ್ಜಿತ ಆಸ್ಪತ್ರೆಯನ್ನು 150 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು.‌
ii) ಹೊಸದಾಗಿ ಘೋಷಣೆಯಾಗಿರುವ ತಾಲ್ಲೂಕುಗಳಾದ ಹನೂರು, ಅಳ್ನಾವರ, ಅಣ್ಣಿಗೇರಿ, ಮಸ್ಕಿ, ಸಿರಿವಾರ, ಕಾಪು, ಬಬಲೇಶ್ವರ, ಕೊಲ್ಹಾರ, ಚೇಳೂರು, ತೇರದಾಳದ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ
ಆರೋಗ್ಯ ಕೇಂದ್ರಗಳಾಗಿ ಉನ್ನತೀಕರಿಸಲಾಗುವುದು. ಪೊನ್ನಂಪೇಟೆಯಲ್ಲಿ ಹೊಸದಾಗಿ ಸಮುದಾಯ ಆರೋಗ್ಯ ಕೇಂದ್ರವನ್ನು ಆರಂಭಿಸಲಾಗುವುದು.
iii) ಮಾಲೂರು, ಮಾಗಡಿ, ಕುಶಾಲನಗರ, ಕೊರಟಗೆರೆ, ಜಗಳೂರು, ಸವಣೂರು, ರಾಮದುರ್ಗ ಮತ್ತು ಸವದತ್ತಿ ತಾಲ್ಲೂಕು ಮಟ್ಟದ ಆಸ್ಪತ್ರೆಗಳನ್ನು ಹಾಗೂ ದಾವಣಗೆರೆ ಜಿಲ್ಲಾ ಆಸ್ಪತ್ರೆ ಮತ್ತು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗಳನ್ನು ಒಟ್ಟು 650 ಕೋಟಿ ರೂ. ವೆಚ್ಚದಲ್ಲಿ ನವೀಕರಣ ಮಾಡಲಾಗುವುದು.
iv) ಪುತ್ತೂರಿನಲ್ಲಿ ಹೊಸ ವೈದ್ಯಕೀಯ ಕಾಲೇಜನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಈಗಿರುವ 100 ಹಾಸಿಗೆ ಸಾಮರ್ಥ್ಯದ ತಾಲ್ಲೂಕು ಆಸ್ಪತ್ರೆಯನ್ನು ಉನ್ನತೀಕರಿಸಲು ಪ್ರಸಕ್ತ ವರ್ಷದಲ್ಲಿ ಕ್ರಮವಹಿಸಲಾಗುವುದು.  
v) ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರಿನಲ್ಲಿ 200 ಹಾಸಿಗೆ ಹಾಗೂ ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ 400 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಗಳನ್ನು ಸ್ಥಾಪಿಸಲಾಗುವುದು.
vi) ಮೈಸೂರು ಜಿಲ್ಲೆಯ ತಗಡೂರು ಸಮುದಾಯ
ಆರೋಗ್ಯ ಕೇಂದ್ರವನ್ನು 100 ಹಾಸಿಗೆ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲಾಗುವುದು.
vii) ಹೆಚ್ಚಿನ ದುರಸ್ತಿ ಅಗತ್ಯವಿರುವ ಜಿಲ್ಲಾ ಆಸ್ಪತ್ರೆ ಮತ್ತು ತಾಲ್ಲೂಕು ಆಸ್ಪತ್ರೆಗಳನ್ನು 183 ಕೋಟಿ ರೂ. ವೆಚ್ಚದಲ್ಲಿ ಹಂತ ಹಂತವಾಗಿ ದುರಸ್ತಿಗೊಳಿಸಲಾಗುವುದು.

139. ಕಲ್ಯಾಣ ಕರ್ನಾಟಕ ಸಂಪೂರ್ಣ ಆರೋಗ್ಯ ಅಭಿವೃದ್ಧಿ ಯೋಜನೆಯಡಿ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸಲು ಹಾಗೂ ಕಲ್ಯಾಣ ಕರ್ನಾಟಕ ಭಾಗದ ಆರೋಗ್ಯ ಸೂಚ್ಯಂಕವನ್ನು ವೃದ್ಧಿಸಲು ಒಟ್ಟು 873 ಕೋಟಿ ರೂ. ವೆಚ್ಚದಲ್ಲಿ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು ವಿವಿಧ ಕಾರ್ಯಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು. (ವಿವರಗಳನ್ನು ಅನುಬಂಧ-4ರಲ್ಲಿ ಲಗತ್ತಿಸಿದೆ.)

140. ಸರ್ಕಾರದ ವಿವಿಧ ಇಲಾಖೆಗಳಲ್ಲಿ ಗುತ್ತಿಗೆ, ಹೊರಗುತ್ತಿಗೆ ಹಾಗೂ ಗೌರವಧನದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಮೂರು ಲಕ್ಷಕ್ಕೂ ಅಧಿಕ ಸಿಬ್ಬಂದಿ ವರ್ಗ ಹಾಗೂ ಅವಲಂಬಿತರಿಗೆ 5 ಲಕ್ಷ ರೂ. ವರೆಗೆ ನಗದು ರಹಿತ ಚಿಕಿತ್ಸೆ ನೀಡಲು ಯೋಜನೆ ರೂಪಿಸಲಾಗಿದೆ. ಸಿಬ್ಬಂದಿಯ ವೈಯಕ್ತಿಕ ಮಾಸಿಕ ವಂತಿಕೆ
100 ರೂ. ಮತ್ತು ಸರ್ಕಾರದ ಮಾಸಿಕ ವಂತಿಕೆ 200 ರೂ. ಗಳೊಂದಿಗೆ ಸುವರ್ಣ ಆರೋಗ್ಯ ಟ್ರಸ್ಟ್‌ ಮೂಲಕ ಅನುಷ್ಠಾನಗೊಳಿಸಲಾಗುವುದು.

141. ಪ್ರಸವ ಪೂರ್ವ ಮತ್ತು ನವಜಾತ ಶಿಶುಗಳಲ್ಲಿ ಅಪರೂಪದ ಚಯಾಪಚಯ ಖಾಯಿಲೆಗಳನ್ನು (Rare Metabolic Disorder) ಪತ್ತೆ ಹಚ್ಚಲು ಕಾರ್ಯಕ್ರಮವನ್ನು ರೂಪಿಸಲಾಗುವುದು. ಮೊದಲನೆಯ ಹಂತದಲ್ಲಿ ಕಲ್ಯಾಣ ಕರ್ನಾಟಕ ಮತ್ತು ಗಣಿಬಾಧಿತ ಪ್ರದೇಶಗಳಲ್ಲಿ ಪ್ರಾಯೋಗಿಕವಾಗಿ 10 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುವುದು.

142. ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸ್‌ರ್‌ ಅನ್ನು ತಡೆಗಟ್ಟಲು ಪ್ರಥಮ ಹಂತದಲ್ಲಿ ಗಣಿ ಬಾಧಿತ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶದ
20 ತಾಲ್ಲೂಕುಗಳಲ್ಲಿ 9 ಕೋಟಿ ರೂ. ವೆಚ್ಚದಲ್ಲಿ 14 ವರ್ಷದ ಹೆಣ್ಣುಮಕ್ಕಳಿಗೆ HPV ಲಸಿಕೆಯನ್ನು ನೀಡಲಾಗುವುದು.

143. ʻಗೃಹ ಆರೋಗ್ಯʼ ಯೋಜನೆಯಡಿ 2024-25 ನೇ ಸಾಲಿನಲ್ಲಿ ಆರು ಅಸಾಂಕ್ರಾಮಿಕ ರೋಗಗಳ ತಪಾಸಣೆ ಮತ್ತು ಚಿಕಿತ್ಸಾ ಕಾರ್ಯಕ್ರಮವನ್ನು ಕೋಲಾರ ಜಿಲ್ಲೆಯಲ್ಲಿ ಪ್ರಾರಂಭಿಸಲಾಗಿದ್ದು, ಈ ಯೋಜನೆಯನ್ನು 100 ಕೋಟಿ ರೂ. ವೆಚ್ಚದಲ್ಲಿ ರಾಜ್ಯಾದ್ಯಂತ ವಿಸ್ತರಿಸಲಾಗುವುದು.

144. ರಾಜ್ಯದಲ್ಲಿ 108 ಆ್ಯಂಬುಲೆನ್ಸ್‌ ಸೇವೆಯನ್ನು ಉತ್ತಮಗೊಳಿಸುವ ಉದ್ದೇಶದಿಂದ, ಈ ಸೇವೆಯನ್ನು ನಿಯಂತ್ರಣ ಮಾಡುವ ಕಮಾಂಡ್ ಕಂಟ್ರೋಲ್ ಕೇಂದ್ರವನ್ನು ಆರೋಗ್ಯ ಇಲಾಖೆಯ ಅಧೀನಕ್ಕೆ ಒಳಪಡಿಸುವುದರ ಮೂಲಕ ʻಆರೋಗ್ಯ ಕವಚʼ ಸೇವೆಯನ್ನು ಬಲಪಡಿಸಲಾಗುವುದು.

145. ಸಾಂಕ್ರಾಮಿಕ ರೋಗಗಳಾದ ಚಿಕೂನ್‌ಗುನ್ಯ, ಡೆಂಗ್ಯೂ ಹಾಗೂ ಮಲೆನಾಡು ಭಾಗದಲ್ಲಿ ಕಾಣಿಸಿಕೊಳ್ಳುವ ಕ್ಯಾಸನೂರು ಕಾಡಿನ ಖಾಯಿಲೆಗಳ (KFD) ಪರಿಣಾಮಕಾರಿ ನಿಯಂತ್ರಣಕ್ಕಾಗಿ
50 ಕೋಟಿ ರೂ. ವೆಚ್ಚದಲ್ಲಿ ವಿಶೇಷ ಅಭಿಯಾನ ರೂಪದಲ್ಲಿ ಮುಂಜಾಗ್ರತಾ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗುವುದು.

146. ʻಶ್ರವಣ ಸಂಜೀವಿನಿʼ ಯೋಜನೆಯಡಿ ಮಕ್ಕಳಲ್ಲಿ ಕಂಡುಬರುವ ಶ್ರವಣದೋಷವನ್ನು ಆರಂಭದಲ್ಲಿಯೇ ಗುರುತಿಸಿ ಕಾಕ್ಲಿಯರ್‌ ಇಂಪ್ಲಾಂಟ್‌ (Cochlear Implant) ಶಸ್ತ್ರ ಚಿಕಿತ್ಸೆ ಹಾಗೂ ಇಂಪ್ಲಾಂಟ್‌ಗಳ ಬಿಡಿಭಾಗಗಳ ನಿರ್ವಹಣೆ, ದುರಸ್ತಿ ಮತ್ತು ಬದಲಾವಣೆ ಮಾಡಲು 12 ಕೋಟಿ ರೂ. ಒದಗಿಸಲಾಗುವುದು.

147. ಹೆಚ್ಚಿನ ಟಿ.ಬಿ ಪ್ರಕರಣಗಳಿರುವ ಆರೋಗ್ಯ ಕೇಂದ್ರಗಳಿಗೆ
2025-26ನೇ ಸಾಲಿನಲ್ಲಿ 100 True-NAT machine ಗಳನ್ನು ಒದಗಿಸಲಾಗುವುದು.

148. ಆಶಾ ಕಾರ್ಯಕರ್ತೆಯರಿಗೆ ತಂಡ ಆಧಾರಿತ ಪ್ರೋತ್ಸಾಹಧನ ನೀಡುವುದರ ಮೂಲಕ ಗೌರವಧನವನ್ನು 1,000 ರೂ. ಹೆಚ್ಚಿಸಲಾಗುವುದು.
149. ಆಹಾರದ ಗುಣಮಟ್ಟ ಮತ್ತು ಸುರಕ್ಷತೆಯನ್ನು ದೃಢಪಡಿಸಲು ಸಂಚಾರಿ ಆಹಾರ ಪ್ರಯೋಗಾಲಯಗಳ ಮೂಲಕ ಆಹಾರ ಮಾದರಿಗಳನ್ನು ವಿಶ್ಲೇಷಿಸಿ, ಅಸುರಕ್ಷಿತ ಮತ್ತು ಕಳಪೆ ಆಹಾರವನ್ನು ಗುರುತಿಸಿ ಕಾನೂನಿನ ಅನುಸಾರ ಕ್ರಮಕೈಗೊಳ್ಳಲಾಗುತ್ತಿದೆ.

150. ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ಗುಣಮಟ್ಟದ ಔಷಧಗಳನ್ನು ವಿತರಿಸಲು KSMSCL ಸಂಸ್ಥೆಯನ್ನು ಬಲಪಡಿಸಲಾಗುವುದು. ವೈದ್ಯಕೀಯ ಉಪಕರಣಗಳ ಮೇಲ್ವಿಚಾರಣೆ ಮತ್ತು ನಿರ್ವಹಣೆಗಾಗಿ ತಂತ್ರಾಂಶವನ್ನು ಪರಿಚಯಿಸಲಾಗುವುದು.

151. ಸುಟ್ಟ ಗಾಯಗಳ ತಡೆಗಟ್ಟುವಿಕೆ ಹಾಗೂ ಸಂತ್ರಸ್ತರ ಚಿಕಿತ್ಸೆಗೆ ಸಂಬಂಧಿಸಿದಂತೆ, ಸುಟ್ಟ ಗಾಯಗಳ ಚಿಕಿತ್ಸಾ ನೀತಿಯನ್ನು ರಾಷ್ಟ್ರದಲ್ಲಿಯೇ ಪ್ರಪ್ರಥಮವಾಗಿ ರಾಜ್ಯದಲ್ಲಿ ಜಾರಿಗೆ ತರಲಾಗುವುದು.

152. ಆರೋಗ್ಯ ಇಲಾಖೆಯಲ್ಲಿ ಈ ಕೆಳಕಂಡ ಸುಧಾರಣಾ ಕ್ರಮಗಳನ್ನು ಪ್ರಸಕ್ತ ಸಾಲಿನಲ್ಲಿ ತೆಗೆದುಕೊಳ್ಳಲಾಗುವುದು:
i) ಕೆ.ಪಿ.ಎಂ.ಇ ಕಾಯ್ದೆಯಡಿ ನೀಡಲಾಗುವ ಮಾನ್ಯತೆ ಪ್ರಮಾಣ ಪತ್ರವನ್ನು (Accreditation Certificate) 30 ದಿನದ ಕಾಲಮಿತಿಯೊಳಗೆ ಒದಗಿಸಲಾಗುವುದು.
ii) ಮೊಬೈಲ್‌ ತಂತ್ರಾಂಶದ ಮೂಲಕ ಹಾಜರಾತಿ ನೀಡುವ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು. ವರ್ಗಾವಣೆ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಎಲ್ಲಾ ಅಧಿಕಾರಿ ಸಿಬ್ಬಂದಿ ವರ್ಗದವರಿಗೂ ಪಾರದರ್ಶಕವಾದ ವರ್ಗಾವಣೆ ನೀತಿಯನ್ನು ರೂಪಿಸಲಾಗುವುದು.
iii) ರಾಜ್ಯದಲ್ಲಿನ ತಾಲ್ಲೂಕು ಆಸ್ಪತ್ರೆಗಳ ಆಡಳಿತವನ್ನು ಜಿಲ್ಲಾ ಶಸ್ತ್ರಚಿಕಿತ್ಸಕರ ವ್ಯಾಪ್ತಿಗೆ ಒಳಪಡಿಸಲಾಗುವುದು.
iv) ಇಲಾಖೆಯಲ್ಲಿ ಖಾಲಿಯಿರುವ Critical Vacancy ಹುದ್ದೆಗಳನ್ನು ತರ್ಕಬದ್ಧಗೊಳಿಸಿ (Rationalize) ಆದ್ಯತೆಯ ಮೇಲೆ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು.

ವೈದ್ಯಕೀಯ ಶಿಕ್ಷಣ

153. ವೈದ್ಯಕೀಯ ಶಿಕ್ಷಣ ಇಲಾಖೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಈ ಕೆಳಕಂಡ ಉಪಕ್ರಮಗಳನ್ನು ತೆಗೆದುಕೊಳ್ಳಲಾಗಿರುತ್ತದೆ.
i) 177 ಕೋಟಿ ರೂ. ಮೊತ್ತದಲ್ಲಿ 114 Modular Operation Theater ಗಳನ್ನು, 34 ಕೋಟಿ ರೂ. ವೆಚ್ಚದಲ್ಲಿ 64 Anaesthesia Work Station ಗಳನ್ನು ಸ್ಥಾಪಿಸಲಾಗಿದೆ.
ii) ಗದಗ ಮೆಡಿಕಲ್‌ ಕಾಲೇಜಿನಲ್ಲಿ Cathlab ಸೌಲಭ್ಯದೊಂದಿಗೆ Super Speciality Cardiac Unit ಅನ್ನು
10 ಕೋಟಿ ರೂ. ವೆಚ್ಚದಲ್ಲಿ ಪ್ರಾರಂಭಿಸಲಾಗಿದೆ.
iii) ಕಲಬುರಗಿಯಲ್ಲಿ 92 ಕೋಟಿ ರೂ. ವೆಚ್ಚದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಹಾಗೂ 304 ಕೋಟಿ ರೂ. ವೆಚ್ಚದ ಜಯದೇವ ಹೃದ್ರೋಗ ಆಸ್ಪತ್ರೆಯನ್ನು ಸ್ಥಾಪಿಸಲಾಗಿದೆ.
iv) 26 ಕೋಟಿ ರೂ. ವೆಚ್ಚದ ಬೆಂಗಳೂರಿನ
ನೆಫ್ರೊ-ಯುರಾಲಾಜಿ ಸಂಸ್ಥೆಯ ಕಟ್ಟಡವನ್ನು ಪೂರ್ಣಗೊಳಿಸಿ ಸಾರ್ವಜನಿಕರ ಸೇವೆಗೆ ಸಮರ್ಪಿಸಲಾಗುವುದು.

154. ಬಾಗಲಕೋಟೆಯಲ್ಲಿ ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಘಟಕ ವೈದ್ಯಕೀಯ ಕಾಲೇಜನ್ನು ಹಾಗೂ ಕೋಲಾರದಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಆಧಾರದ ಮೇಲೆ ವೈದ್ಯಕೀಯ ಕಾಲೇಜನ್ನು ಆರಂಭಿಸಲು ಉದ್ದೇಶಿಸಲಾಗಿದೆ.

155. ಬೀದರ್‌ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಕ್ಯಾನ್ಸರ್‌ ಪತ್ತೆ ವಿಭಾಗವನ್ನು ಆರಂಭಿಸಲಾಗುವುದು.

156. ಬೌರಿಂಗ್‌ ಮತ್ತು ಲೇಡಿ ಕರ್ಜನ್‌ ಆಸ್ಪತ್ರೆಯಲ್ಲಿ 500 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನು 297 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಳಿಸಲಾಗುವುದು.

157. 2025-26ನೇ ಸಾಲಿನಲ್ಲಿ ಸಾರ್ವಜನಿಕರಿಗೆ ಸುಧಾರಿತ
ಆರೋಗ್ಯ ಸೇವೆಯನ್ನು ಒದಗಿಸಲು ಈ ಕೆಳಕಂಡಂತೆ
ಹೊಸ ಕಾರ್ಯಯೋಜನೆಗಳನ್ನು ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ.
i) ರಾಜ್ಯದ 22 ವೈದ್ಯಕೀಯ ಕಾಲೇಜುಗಳಲ್ಲಿ ಲಭ್ಯವಿರುವ ಮೂಲಭೂತ ಸೌಕರ್ಯ ಮತ್ತು ಮಾನವ ಸಂಪನ್ಮೂಲವನ್ನು ಬಳಕೆ ಮಾಡಿಕೊಂಡು ಅಲೈಡ್‌ ಹೆಲ್ತ್‌ ಸೈನ್ಸ್‌ ಕೋರ್ಸ್‌ಗಳನ್ನು ಪ್ರಾರಂಭಿಸಲಾಗುವುದು.
ii) ಬಾದಾಮಿ ತಾಲ್ಲೂಕಿನ ಕುಳಗೇರಿ ಕ್ರಾಸ್ ಹಾಗೂ ಚಿತ್ರದುರ್ಗದಲ್ಲಿ ಸುಸಜ್ಜಿತ ಟ್ರಾಮಾ ಕೇರ್‌ ಕೇಂದ್ರಗಳನ್ನು ಸ್ಥಾಪಿಸಲಾಗುವುದು.
iii) ಮೈಸೂರು ಮತ್ತು ಕಲಬುರಗಿ ವೈದ್ಯಕೀಯ ಕಾಲೇಜುಗಳ ವ್ಯಾಪ್ತಿಯಲ್ಲಿ ಒಟ್ಟು 100 ಕೋಟಿ ರೂ. ವೆಚ್ಚದಲ್ಲಿ ಪ್ರಾದೇಶಿಕ ಎಂಡೋಕ್ರೈನಾಲಜಿ (Endocrinology) ಕೇಂದ್ರಗಳನ್ನು ಆರಂಭಿಸಲಾಗುವುದು.
iv) ಮೈಸೂರು ಮತ್ತು ಕಲಬುರಗಿಯ ವೈದ್ಯಕೀಯ ಕಾಲೇಜುಗಳಲ್ಲಿ ನಿಮ್ಹಾನ್ಸ್‌ ಮಾದರಿಯ ಸಂಸ್ಥೆಗಳನ್ನು ತಲಾ 100 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುವುದು.
v) ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಅಧೀನದಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭಿಸಲಾಗುವುದು.
vi) ರಾಯಚೂರಿನ ರಾಜೀವ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಆವರಣದಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ಕಿದ್ವಾಯಿ ಪೆರಿಫರೆಲ್ ಕ್ಯಾನ್ಸರ್ ಚಿಕಿತ್ಸಾ ಘಟಕ ಸ್ಥಾಪಿಸಲಾಗುವುದು.
vii) ಯಲಬುರ್ಗಾ, ಜೇವರ್ಗಿ ಮತ್ತು ಯಾದಗಿರಿಯಲ್ಲಿ ತಲಾ ಆರು ಕೋಟಿ ರೂ. ವೆಚ್ಚದಲ್ಲಿ ಹೊಸದಾಗಿ ನರ್ಸಿಂಗ್‌ ಕಾಲೇಜುಗಳನ್ನು KKRDB ಅನುದಾನದಲ್ಲಿ ಆರಂಭಿಸಲಾಗುವುದು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ

ರಾಷ್ಟ್ರವು ತನ್ನ ಅರ್ಧದಷ್ಟಿರುವ ಮಹಿಳೆಯರನ್ನು ಆರ್ಥಿಕವಾಗಿ ನಿಷ್ಕ್ರಿಯವಾಗಿಸಿ ಅಭಿವೃದ್ಧಿ ಸಾಧಿಸಲು ಸಾಧ್ಯವಿಲ್ಲ. ಅವರನ್ನು ಆರ್ಥಿಕವಾಗಿ ಸ್ವತಂತ್ರರನ್ನಾಗಿಸದೆ ಮಾಡುವ ಎಲ್ಲಾ ಅಭಿವೃದ್ಧಿ ಮಾದರಿಗಳು ಟೊಳ್ಳಾಗಿರುತ್ತವೆ.
- ಡಾ|| ಬಿ. ಆರ್‌. ಅಂಬೇಡ್ಕರ್‌

158. ಗೃಹಲಕ್ಷ್ಮಿ ಯೋಜನೆಯನ್ನು 2023-24ನೇ ಸಾಲಿನಿಂದ ಜಾರಿಗೊಳಿಸಲಾಗಿದೆ.  2024-25ನೇ ಸಾಲಿನಲ್ಲಿ 1.22 ಕೋಟಿ ಕುಟುಂಬಗಳ ಯಜಮಾನಿಯರಿಗೆ ಧನಸಹಾಯ ಒದಗಿಸಲಾಗಿತ್ತು. ಪ್ರಸಕ್ತ ವರ್ಷದಲ್ಲಿ ಈ ಯೋಜನೆಗೆ 28,608 ಕೋಟಿ ರೂ. ಒದಗಿಸಲಾಗಿದೆ.    

159. ರಾಜ್ಯದ 37 ಲಕ್ಷ ಮಕ್ಕಳ ಆರೈಕೆ ಮತ್ತು ಕಲಿಕೆಯಲ್ಲಿ ಮಹತ್ತರ ಪಾತ್ರ ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರ ಗೌರವಧನವನ್ನು 1,000 ರೂ. ಹಾಗೂ ಸಹಾಯಕಿಯರ ಗೌರವಧನವನ್ನು 750 ರೂ. ಹೆಚ್ಚಿಸಲಾಗುವುದು.

160. ಸಕ್ಷಮ ಅಂಗನವಾಡಿ ಯೋಜನೆಯಡಿ ರಾಜ್ಯದ 17,454 ಅಂಗನವಾಡಿ ಕೇಂದ್ರಗಳಿಗೆ ಹೆಚ್ಚುವರಿ ಸೌಲಭ್ಯಗಳನ್ನು ಕಲ್ಪಿಸಲು ತಲಾ ಒಂದು ಲಕ್ಷ ರೂ. ನಂತೆ ಒಟ್ಟು 
175 ಕೋಟಿ ರೂ. ಒದಗಿಸಲಾಗುವುದು.

161. ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕಾಗಿ ನಗರಸಭೆ/ ಪುರಸಭೆಗಳಲ್ಲಿ ಲಭ್ಯವಿರುವ 173 ಸಿ.ಎ ನಿವೇಶನಗಳನ್ನು ನಗರಾಭಿವೃದ್ಧಿ ಇಲಾಖೆಯಿಂದ ಶೇ.50 ರಷ್ಟು ರಿಯಾಯಿತಿ ದರದಲ್ಲಿ ಖರೀದಿಸಲು 10 ಕೋಟಿ ರೂ. ಮೀಸಲಿರಿಸಲಾಗಿದೆ.

162. ವಿಕಲಚೇತನರ ಸಾಮಾಜಿಕ, ಆರ್ಥಿಕ ಸ್ಥಿತಿಗತಿ ಕುರಿತಂತೆ ನಿಖರ ಮಾಹಿತಿ ಸಂಗ್ರಹಿಸಲು ಹಾಗೂ ಅವರಿಗೆ ಸೂಕ್ತ ಸೌಲಭ್ಯ ಒದಗಿಸುವ ಹಿತದೃಷ್ಟಿಯಿಂದ ವಿಕಲಚೇತನರ ಸಮೀಕ್ಷೆ ನಡೆಸಲಾಗುವುದು.

163. ಮೈಸೂರು ಮತ್ತು ಬೆಳಗಾವಿಯಲ್ಲಿರುವ ವಿಶೇಷ ಮಕ್ಕಳ ಸರ್ಕಾರಿ ವಸತಿಯುತ ಶಾಲೆಗಳನ್ನು ಉನ್ನತೀಕರಿಸಲು ಐದು ಕೋಟಿ ರೂ. ನೀಡಲಾಗುವುದು. ಇವುಗಳ ನಿರ್ವಹಣೆಯನ್ನು ಸ್ವಯಂ ಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಕೈಗೊಳ್ಳಲಾಗುವುದು.

164. Cerebral Palsy, Muscular Dystrophy, Parkinsons ಮತ್ತು Multiple Sclerosis ಕಾಯಿಲೆಗಳಿಂದ ಬಳಲುತ್ತಿರುವ ವ್ಯಕ್ತಿಗಳ ಆರೈಕೆದಾರರಿಗೆ ನೀಡುತ್ತಿರುವ ಮಾಸಿಕ 1,000 ರೂ. ಪ್ರೋತ್ಸಾಹಧನ ಯೋಜನೆಯನ್ನು ಆಟಿಸಂ, ಬೌದ್ಧಿಕ ವಿಕಲತೆ ಮತ್ತು ಬಹುವಿಧ ಅಂಗವಿಕಲತೆ (ಶ್ರವಣ ಮತ್ತು ದೃಷ್ಟಿ ನ್ಯೂನ್ಯತೆ) ಕಾಯಿಲೆಗಳಿಂದ ಬಳಲುತ್ತಿರುವ ಆರೈಕೆದಾರರಿಗೂ ವಿಸ್ತರಿಸಲಾಗುವುದು.

165. ಬಳ್ಳಾರಿಯ ಸರ್ಕಾರಿ ಶ್ರವಣದೋಷವುಳ್ಳ ಮಕ್ಕಳ ಶಾಲೆ ಹಾಗೂ ಹುಬ್ಬಳ್ಳಿಯ ದೃಷ್ಟಿದೋಷವುಳ್ಳ ಮಕ್ಕಳ ಶಾಲೆಗಳನ್ನು ಪ್ರಾಥಮಿಕ ಶಾಲಾ ಹಂತದಿಂದ ಪ್ರೌಢಶಾಲಾ ಹಂತಕ್ಕೆ ಮೇಲ್ದರ್ಜೆಗೇರಿಸಲಾಗುವುದು.

166. ವಿಶೇಷ ಪಾಲನಾ ಯೋಜನೆಯಡಿ ಹೆಚ್‌.ಐ.ವಿ. ಸೋಂಕಿತ ಮತ್ತು ಬಾಧಿತ ಮಕ್ಕಳ ಪೌಷ್ಟಿಕ ಆಹಾರ ಮತ್ತು ಶಿಕ್ಷಣವನ್ನು ಪ್ರೋತ್ಸಾಹಿಸಲು ಪ್ರಸ್ತುತ ನೀಡಲಾಗುತ್ತಿರುವ ಮಾಸಿಕ ಧನಸಹಾಯವನ್ನು 1,000 ರೂ.ನಿಂದ 2,000 ರೂ.ಗೆ ಹೆಚ್ಚಿಸಲಾಗುವುದು.

167. ರಾಜ್ಯ ಅನುದಾನದಡಿಯಲ್ಲಿ ನಡೆಯುತ್ತಿರುವ ವಸತಿಯುತ ವಿಶೇಷ ಶಾಲೆಗಳ ಮಕ್ಕಳ ಪಥ್ಯಾಹಾರ ಭತ್ಯೆಯನ್ನು ಮಾಸಿಕ 1,750 ರೂ.ಗಳಿಗೆ ಹೆಚ್ಚಿಸಲಾಗುವುದು.

168. ಮಹಿಳಾ ಉದ್ದೇಶಿತ ಕಾರ್ಯಕ್ರಮಗಳಿಗಾಗಿ 2025-26ನೇ ಸಾಲಿನಲ್ಲಿ ಒಟ್ಟಾರೆಯಾಗಿ 94,084 ಕೋಟಿ ರೂ. ಒದಗಿಸಲಾಗುವುದು.

169. ಮಕ್ಕಳ ಉದ್ದೇಶಿತ ಕಾರ್ಯಕ್ರಮಗಳಿಗಾಗಿ 2025-26ನೇ ಸಾಲಿನಲ್ಲಿ ಒಟ್ಟಾರೆಯಾಗಿ 62,033 ಕೋಟಿ ರೂ. ಒದಗಿಸಲಾಗುವುದು.

Publisher: ಕನ್ನಡ ನಾಡು | Kannada Naadu

Login to Give your comment
Powered by