ಬೆಂಗಳೂರು: ಬಂಗಾರಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 7 ಸಣ್ಣ ನೀರಾವರಿ ಕೆರೆಗಳಿದ್ದು ಅವುಗಳ ಅಭಿವೃದ್ಧಿಗೆ ಈಗಾಗಲೇ ಅನುದಾನ ಬಿಡುಗಡೆ ಮಾಡಲಾಗಿದೆ. ಕೆ.ಅಂಡ್ ಸಿ ವ್ಯಾಲಿ ಎರಡನೇ ಹಂತದ ಕಾಮಗಾರಿಯನ್ನು ಟರ್ನ್ ಕೀ ಆಧಾರದ ಮೇಲೆ 30 ತಿಂಗಳ ಕಾಲಮಿತಿಯೊಳಗೆ ಪೂರ್ಣಗೊಳಿಸಲು ಒಪ್ಪಂದವಾಗಿದ್ದು ಕರಾರಿನಂತೆ ಕಾಮಗಾರಿಯನ್ನು ನವೆಂಬರ್ 2024 ರೊಳಗೆ ಪೂರ್ಣಗೊಳಿಸಬೇಕಾಗಿದೆ. ಈ ಯೋಜನೆಯಡಿ ಒಟ್ಟು 9 ಸಂಖ್ಯೆ ಪಂಪ್ ಹೌಸ್, 221 ಕಿಮೀ ಉದ್ದದ ರೈಸಿಂಗ್ ಮೈನ್ ನ್ನು ಅಳವಡಿಸಿ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಒಟ್ಟು 272 ಕೆರೆಗಳನ್ನು ತುಂಬಿಸಲು ಯೋಜಿಸಲಾಗಿರುತ್ತದೆ ಎಂದು ಸಣ್ಣ ನೀರಾವರಿ, ವಿಜ್ಞಾನ ತಂತ್ರಜ್ಞಾನ ಸಚಿವರಾದ ಎನ್.ಎಸ್. ಭೋಸರಾಜು ಅವರು ತಿಳಿಸಿದರು.
ಇಂದು ವಿಧಾನಸಭೆಯಲ್ಲಿ ಬಂಗಾರಪೇಟೆ ಶಾಸಕರಾದ ಎಸ್.ಎನ್.ನಾರಾಯಣಸ್ವಾಮಿ ಕೆ.ಎಂ ಇವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪ್ರಸ್ತುತ 9 ಪಂಪಿಂಗ್ ಸ್ಟೇಷನ್ ಗಳ ಎದುರಾಗಿ ಡಿಸೆಂಬರ್ 2024ರ ಅಂತ್ಯಕ್ಕೆ ಮೂರು ಪಂಪ್ ಹೌಸ್ ಗಳನ್ನು ಪೂರ್ಣಗೊಳಿಸಿ ಒಂದು ಪಂಪ್ ಹೌಸ್ ನ್ನು ಪ್ರಾಯೋಗಿಕವಾಗಿ ಚಾಲನೆ ಮಾಡಲಾಗಿರುತ್ತದೆ ಮತ್ತು ಎರಡು ಪಂಪ್ ಹೌಸ್‍ಗಳನ್ನು ಡ್ರೈ ರನ್ ಮಾಡಲಾಗಿರುತ್ತದೆ. ಇನ್ನು ಮೂರು ಪಂಪ್ ಹೌಸ್ ಗಳನ್ನು ಮಾರ್ಚ್ 2025ರ ಅಂತ್ಯದೊಳಗೆ ಪ್ರಾಯೋಗಿಕವಾಗಿ ಚಾಲನೆ ಮಾಡಲಾಗುವುದು. ಬಾಕಿ ಮೂರು ಪಂಪ್ ಹೌಸ್ ಗಳನ್ನು ಶೇ.80ರಷ್ಟು ಪೂರ್ಣಗೊಳಿಸಲಾಗಿರುತ್ತದೆ. ಒಟ್ಟಾರೆ ಕಾಮಗಾರಿಯನ್ನು ಸೆಪ್ಟೆಂಬರ್ 2025ರೊಳಗಾಗಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
Publisher: ಕನ್ನಡ ನಾಡು | Kannada Naadu