ಕನ್ನಡ ನಾಡು | Kannada Naadu

42 ಕೋಟಿ ರೂ.ಗಳ ವೆಚ್ಚದಲ್ಲಿ ಯು.ಆರ್.ರಾವ್ ಭವನ ನಿರ್ಮಾಣ : ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

28 Feb, 2025

 

ಬೆಂಗಳೂರು  : ಜವಾಹರ್‍ಲಾಲ್ ನೆಹರು ತಾರಾಲಯದಲ್ಲಿ 42 ಕೋಟಿ ರೂ ವೆಚ್ಚದಲ್ಲಿ 9,949 ಚದುರ ಸೆಂ.ಮೀಟರ್‍ನಲ್ಲಿ ‘ಯು.ಆರ್.ರಾವ್ ಭವನ’ ನಿರ್ಮಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಬೃಹತ್ ಮತ್ತು ಮಧ್ಯಮ ನೀರಾವರಿ ಹಾಗೂ ಬೆಂಗಳೂರು ನರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.

ಇಂದು ಜವಾಹರ್‍ಲಾಲ್ ನೆಹರು ತಾರಾಲಯದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮತ್ತು ನಗರಾಭಿವೃದ್ಧಿ ಇಲಾಖೆಯು ಹಮ್ಮಿಕೊಂಡಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನದಿಂದ ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ನೂತನವಾಗಿ ನಿರ್ಮಿಸಿರುವ ಯು.ಆರ್. ರಾವ್ ಭವನದ ಉದ್ಘಾಟನೆ ನೆರವೇರಿಸಿ, ವಿದ್ಯಾರ್ಥಿಗಳಿಂದ ದೀಪ ಬೆಳಗಿಸಿ, ಭಾರತರತ್ನ ಸರ್.ಸಿವಿ ರಾಮನ್ ಅವರಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಜವಾಹರ್‍ಲಾಲ್ ನೆಹರು ತಾರಾಲಯವು ಭಾರತ ದೇಶದ ಐದು ತಾರಾಲಯಗಳ ಪೈಕಿ ಒಂದಾಗಿರುತ್ತದೆ.  ಈ ಭವನವು ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯಗಳಿಗೆ ಸಂಬಂಧಿಸಿದ ವಿಜ್ಞಾನಿಗಳಿಗೆ ಹಾಗೂ ಸಂಶೋಧನ ನಿರತ ವಿಜ್ಞಾನಿಗಳಿಗೆ, ವಿದ್ಯಾರ್ಥಿಗಳಿಗೆ ಹೆಚ್ಚು ಕೋರ್ಸ್‍ಗಳನ್ನು ನಡೆಸಲು ಅನುಕೂಲವಾಗಲಿದೆ. ಅಲ್ಲದೇ ವಿವಿಧ  ಕಾರ್ಯಕ್ರಮಗಳನ್ನು ಸಹ ಇಲ್ಲಿ ಆಯೋಜಿಸಬಹುದಾಗಿದೆ. ಈ ಭವನದ ತಾರಸಿನಲ್ಲಿ ಖಗೋಳ ವಿಜ್ಞಾನ ವೀಕ್ಷಣಾ ದೂರದರ್ಶಕವನ್ನು ಕೂಡ ಯು.ಆರ್.ರಾವ್ ಭವನದಲ್ಲಿ ಸ್ಥಾಪಿಸಲಾಗಿದೆ ಎಂದರು.

ಗಾಂಧೀಜಿಯವರ ವಿಜ್ಞಾನದ ಬಗ್ಗೆ ವಿಚಾರ ಮತ್ತು ನೆಹರು ಅವರ ಚಿಂತನೆ, ಯು.ಆರ್.ರಾವ್ ಹಾಗೂ ಸರ್.ಸಿ.ವಿ.ರಾಮನ್ ಅವರ ಹೆಸರುಗಳನ್ನು ನಾವು ಏಕೆ ಇಟ್ಟಿದ್ದೇವೆ ಎಂದು ಚಿಂತಿಸದರೆ,  ಈ ನಾಲ್ವರು ವಿಜ್ಞಾನ-ತಂತ್ರಜ್ಞಾನ ಸಂಸ್ಥಾಪಕರು.  ಇವರು ಹಾಕಿಕೊಟ್ಟಿರುವ ಹಾದಿಯನ್ನು ನೆನೆಸಿಕೊಂಡು ವಿದ್ಯಾರ್ಥಿಗಳು ಮುನ್ನಡೆಯಬೇಕು ಎಂದರು.

ನಾನು ವಿದ್ಯಾರ್ಥಿಯಾಗಿದ್ದಾಗ  ಶಿಕ್ಷಣದ ಬಗ್ಗೆ ಹೆಚ್ಚು ಅರಿವಿಲ್ಲದೆ, ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಲಿಲ್ಲ. ರಾಜಕೀಯಕ್ಕೆ ಬಂದ ಮೇಲೆ ಶಿಕ್ಷಣದ ಮಹತ್ವದ ಅರಿವಾಗಿ 47ನೇ ವಯಸ್ಸಿನಲ್ಲಿ  ಮುಕ್ತ ವಿಶ್ವವಿದ್ಯಾಲಯದಿಂದ ಪದವಿ ಪಡೆದೆ.  ಆಗ ನನಗೆ ಮಂತ್ರಿ ಪದವಿ ದೊರಕಿದಕ್ಕಿಂತಲೂ ಹೆಚ್ಚಿನ ಸಂತೋಷವಾಯಿತು.
ವಿಧಾನಸೌದದ ಮುಂಬಾಗದಲ್ಲಿ ಪುಸ್ತಕ ಮೇಳ ಏರ್ಪಡಿಸಿದ್ದು, ಶಿಕ್ಷಕರು ವಿದ್ಯಾರ್ಥಿಗಳಿಗೆ ಪುಸ್ತಕ ಮೇಳ ಹಾಗೂ ವಿಧಾನಸೌದ ತೋರಿಸುವಂತೆ ಸೂಚಿಸಿದರು.

ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲಿ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಕಿವಿ ಮಾತು ಹೇಳಿದರಲ್ಲದೆ, ಈಗಿನ ವ್ಯವಸ್ಥೆಯಲ್ಲಿ ತಂತ್ರಜ್ಞಾನವು ಮುಂದುವರಿದಿದ್ದು, ಕುಳಿತಲ್ಲಿಯೇ ಜ್ಞಾನದ ಅರಿವನ್ನು ಮೊಬೈಲ್ ಮತ್ತು ಕಂಪ್ಯೂಟರ್‍ಗಳು ಒದಗಿಸುತ್ತವೆ. ಜೊತೆಗೆ ಸರ್ಕಾರವು ಉನ್ನತ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದು, ಈ ಸೌಲಭ್ಯವನ್ನು ಪ್ರತಿಯೊಬ್ಬರು ಪಡೆಯಬೇಕು.  ವಿದ್ಯಾರ್ಥಿಗಳು ಶಿಕ್ಷಕರನ್ನು ಮೀರಿಸುವಂತಿರುಬೇಕು, ಶಿಕ್ಷಕರಿಗೆ ಸವಾಲುಗಳನ್ನು ಒಡ್ಡುವ ರೀತಿಯಲ್ಲಿ ತಯಾರಾಗಬೇಕು.  ಹೆಣ್ಣು ಮಕ್ಕಳು ಸಹ ಗಗನಯಾತ್ರಿಗಳಾದ ಕಲ್ಪನಾ ಚಾವ್ಲಾ ಹಾಗೂ ಸುನಿತ ವಿಲಿಯಮ್ಸ್‍ನಂತೆ ಆಗಬೇಕು ಅವರು ತಿಳಿಸಿದರು.  

ಇದೇ ಸಂದರ್ಭದಲ್ಲಿ ಸಾಂಕೇತಿಕವಾಗಿ ಐದು ವಸತಿ ಶಾಲೆಗಳಿಗೆ ದೂರದರ್ಶಕಗಳನ್ನು ವಿತರಿಸಿದರು.  ವಿಜ್ಞಾನ ರಸಪ್ರಶ್ನೆ ಹಾಗೂ ಪ್ರಬಂಧದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಭೋಸರಾಜು ಅವರು, ವಿಜ್ಞಾನ-ತಂತ್ರಜ್ಞಾನಗಳಿಂದ ದೇಶದ ಅಭಿವೃದ್ಧಿ ಸಾಧ್ಯ ಎಂದು ಮನಗಂಡಿರುವ ಸರ್ಕಾರ ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ವಿಜ್ಞಾನ ಕೇಂದ್ರ ಮತ್ತು ತಾರಾಲಯ ಸ್ಥಾಪನೆ ಕ್ರಮ ವಹಿಸಲಾಗುವುದು.  ಶಾಲಾ ಕಾಲೇಜುಗಳ ಹಂತದಲ್ಲಿಯೇ ಮಕ್ಕಳು ಅಂತರಿಕ್ಷಾದ ಕನಸು ಕಾಣಲು ನೆರವಾಗುವಂತೆ 833 ವಸತಿ ಶಾಲೆಗಳಿಗೆ ದೂರದರ್ಶಕ (ಟೆಲಿಸ್ಕೋಪ್) ಒದಗಿಸಲಾಗಿದೆ.  ದಕ್ಷಿಣ ಭಾರತದಲ್ಲಿ 30 ಎಕರೆ ಜಾಗದಲ್ಲಿ 280 ಕೋಟಿ ರೂ. ವೆಚ್ಚದಲ್ಲಿ  ಸನ್ ಸಿಟಿ ಪ್ರಾರಂಭಿಸಲಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿವಾಜಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ರಿಜ್ವಾನ ಹರ್ಷದ್ ಅವರು ಮಾತನಾಡಿ, ಈ ಭವನವನ್ನು ವಿಜ್ಞಾನದ ವಿದ್ಯಾರ್ಥಿಗಳಿ ಅನುಕೂಲವಾಗುವಂತೆ ನಿರ್ಮಿಸಲಾಗಿದೆ. ಇದನ್ನು ಸದುಪಯೋಗಪಡಿಸಿಕೊಳ್ಳಬೇಕು. ವಿಜ್ಞಾನ ಅಭಿವೃದ್ಧಿಯಾಗಿದ್ದು, ಇಂದಿನ ವಿಜ್ಞಾನಯುಗದಲ್ಲಿ ವಿದ್ಯಾರ್ಥಿಗಳು ಏನನ್ನೂ ಬೇಕಾದರು ಸಾಧಿಸಬಹುದು. ನಿಮಗೆ ಬೇಕಾದಂತಹ ಸೌಲಭ್ಯವನ್ನು ಸಹ ಸರ್ಕಾರ ಒದಗಿಸುತ್ತದೆ ಎಂದರು.

ಗೌರವಾನ್ವಿತ ಅಥಿಗಳಾಗಿ ಭಾಗವಹಿಸಿದ್ದ ಇಸ್ರೋ ಮಾಜಿ ಅಧ್ಯಕ್ಷರು, ಬೆಂಗಳೂರು ಅಸೋಸಿಯೇಷನ್ ಫಾರ್ ಸೈನ್ಸ್ ಎಜುಕೇಷನ್ ಮತ್ತು ಜವಾಹರ್ ಲಾಲ್ ನೆಹರು ತಾರಾಲಯದ ಅಧ್ಯಕ್ಷರಾದ ಎ.ಎಸ್. ಕಿರಣ್ ಕುಮಾರ್ ಅವರು ಪ್ರತಿಜ್ಞಾವಿಧಿ ಬೋಧನೆ ಮಾಡಿ ಮಾತನಾಡಿದ ಅವರು, ವಿಜ್ಞಾನವನ್ನು ಎಲ್ಲಾ ಕ್ಷೇತ್ರದಲ್ಲೂ ಅಳವಡಿಸಿಕೊಳ್ಳಲು ಮುಂದಾಬೇಕು ಹಾಗೂ ಸರ್ಕಾರ ವಿಜ್ಞಾನದ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು ಎಂದರು.  

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ ಶಿವಲಿಂಗಪ್ಪ ಹೊರಟ್ಟಿ, ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ. ಖಾದರ್ ಫರೀದ್, ಕಂದಾಯ ಸಚಿವ ಕೃಷ್ಣಬೈರೇಗೌಡ, ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಮಚಾಯತ್ ರಾಜ್ ಸಚಿವ  ಪ್ರಿಯಾಂಕ್ ಖರ್ಗೆ, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್, ಸರ್ಕಾರಿ ಮುಖ್ಯ ಸಚೇತಕ ಸಲೀಂ ಅಹಮದ್, ಸರ್ಕಾರದ ಅಪರ ಮುಖ್ಯಕಾರ್ಯದರ್ಶಿ ಉಮಾಶಂಕರ್ ಎಸ್.ಆರ್., ವಿದ್ಯುನ್ಮಾನ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ.ಏಕ್‍ರೂಪ್ ಕೌರ್, ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ಸುಶೀಲಮ್ಮ, ಮುಖ್ಯ ಅಭಿಯಂತರರಾದ ಬಸವರಾಜ ಆರ್ ಕಬಾಡೆ ಹಾಗೂ ಜವಾಹರ್‍ಲಾಲ್ ನೆಹರು ತಾರಾಲಯದ ನಿರ್ದೇಶಕರಾದ ಡಾ.ಬಿ.ಆರ್.ಗುರುಪ್ರಸಾದ್ ಉಪಸ್ಥಿತರಿದ್ದರು.  

Publisher: ಕನ್ನಡ ನಾಡು | Kannada Naadu

Login to Give your comment
Powered by