ಕನ್ನಡ ನಾಡು | Kannada Naadu

ಹತ್ತಾರು ವಿಶೇಷತೆಗಳನ್ನೊಳಗೊಂಡ ಬೆಂಗಳೂರಿನ ೧೬ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕ್ಷಣಗಣನೆ

27 Feb, 2025

ಬೆಂಗಳೂರು: 16ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ (BIFFes)ಕ್ಕೆ ಕ್ಷಣಗಣನೆ ಆರಂಭವಾಗಿದೆ.  ಮಾರ್ಚ್ 1ರಿಂದ ಆರಂಭವಾಗಲಿರುವ ಈ ಬಾರಿಯ ಬಿಫೆಸ್ಸ ನಲ್ಲಿ ಸಾಕಷ್ಟು ವಿಶೇಷತೆಗಳು ಒಳಗೊಂಡಿವೆ. 

 ಸುಮಾರು 60 ದೇಶಗಳ 200ಕ್ಕೂ ಹೆಚ್ಚು ಚಲನಚಿತ್ರಗಳನ್ನು ಪ್ರದರ್ಶನ ವಾಗುತ್ತಿರುವುದು ಈ ಬಾರಿಯ ಪ್ರಮುಖ ಆಕರ್ಶಣೆಯಾಗಿದೆ. ‘ಸರ್ವ ಜನಾಂಗದ ಶಾಂತಿಯ ತೋಟ’ ಎಂಬ ಥೀಮ್‌ನಡಿಯಲ್ಲಿ ಚಲನಚಿತ್ರೋತ್ಸವ ನಡೆಯುತ್ತಿರುವುದು ಎಲ್ಲರ ಗಮನ ಸೆಳೆಯುತ್ತಿದೆ. ಮಾರ್ಚ್ 1 ರ ಸಂಜೆ ವಿಧಾನಸೌಧದ ಮುಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಚಲನಚಿತ್ರದ ಉನ್ನತ ವ್ಯಕ್ತಿಗಳು ಚಲನ ಚಿತ್ರೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.

 ‘ಬೆಂಗಳೂರಿನಲ್ಲಿ ಜಗತ್ತು’ ಎಂಬ ಶೀರ್ಷಿಕೆಯಡಿ ವಿದೇಶಿ ಚಿತ್ರಗಳ ಪ್ರದರ್ಶನ ನಡೆಯಲಿದೆ. ಈ ಬಾರಿಯ ಚಲನಚಿತ್ರೋತ್ಸವವನ್ನು ರಾಜಾಜಿನಗರದ ಓರಾಯನ್ ಮಾಲ್‍ನಲ್ಲಿ ಆಯೋಜಿಸಲಾಗಿದ್ದು, ಅಲ್ಲಿನ ಒಟ್ಟು11 ಸ್ಕ್ರೀನ್‍ಗಳಲ್ಲಿ ಸಿನಿಮಾಗಳ ಪ್ರದರ್ಶನಗೊಳ್ಳಲಿದೆ. ಚಿತ್ರೋತ್ಸವವು ಒಟ್ಟು 7 ದಿನಗಳ ಕಾಲ ನಡೆಯಲಿದ್ದು, ಸಿನಿಮಾ ಆಸಕ್ತರು ಪಾಸ್‌ ಪಡೆದುಕೊಂಡು ಚಲನಚಿತ್ರೋತ್ಸವದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. 

      2006ರಲ್ಲಿ ಆರಂಭವಾದ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಇದೀಗ 16ನೇ ಆವೃತ್ತಿಗೆ ಪ್ರವೇಶಿಸುತ್ತಿದೆ. ಸುಮಾರು ರೂ. 9ಕೋಟಿ ವೆಚ್ಚದಲ್ಲಿ ಚಲನಚಿತ್ರೋತ್ಸವನ್ನು ಆಯೋಜಿಸಲಾಗುತ್ತಿದೆ. ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಅಂತಾರಾಷ್ಟ್ರೀಯ ಮನ್ನಣೆ ಪಡೆದಿದ್ದು, ಬೆಂಗಳೂರು ಭಾರತೀಯ ಮತ್ತು ಅಂತಾರಾಷ್ಟ್ರೀಯ ಸಿನೆಮಾ ಸಂಸ್ಕೃತಿಯ ಮುಖ್ಯಕೇಂದ್ರವಾಗಿ ಬೆಳೆದಿದೆ.

        ಪಾಸ್‌ಗೆ ಸಾರ್ವಜನಿಕರಿಗೆ 800 ರೂ. ಹಾಗೂ ವಿದ್ಯಾರ್ಥಿ, ಹಿರಿಯ ನಾಗರಿಕರು, ಚಿತ್ರೋದ್ಯಮದ ಸದಸ್ಯರಿಗೆ 400 ರೂ. ಶುಲ್ಕವನ್ನು ನಿಗದಿ ಮಾಡಲಾಗಿದೆ. ತಮ್ಮ ತಮ್ಮ ಪಾಸ್‌ಗಳಿಗಾಗಿ ಚಿತ್ರೋತ್ಸವದ ಜಾಲತಾಣದ ಮೂಲಕ ನೋಂದಾಯಿಸಿಕೊಳ್ಳಲು ಅವಕಾಶ ಮಾಡಲಾಗಿದೆ. ಆನ್‍ಲೈನ್‍ನಲ್ಲಿ ನೋಂದಾಯಿಸಿಕೊಂಡ ಪ್ರತಿನಿಧಿಗಳು ನಂದಿನಿ ಲೇಔಟ್‍ನಲ್ಲಿರುವ ಚಲನಚಿತ್ರ ಅಕಾಡೆಮಿ ಹಾಗೂ ಶಿವಾನಂದ ಸರ್ಕಲ್‍ನಲ್ಲಿರುವ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಪ್ರತಿನಿಧಿ ಕಾರ್ಡ್‍ಗಳನ್ನು ಪಡೆಯಬಹುದು.

 ಮಾ.8ರ ಸಂಜೆ ಸಮಾರೋಪ ಸಮಾರಂಭ ನಡೆಯಲಿದ್ದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಅಂದು ಏಷಿಯನ್, ಭಾರತೀಯ ಹಾಗೂ ಕನ್ನಡ ಚಲನಚಿತ್ರಗಳ ಸ್ಪರ್ಧಾ ವಿಭಾಗದಲ್ಲಿ ವಿಜೇತರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ. 

ಈ ಬಾರಿಯ ೧೬ನೇ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ ಕುರಿತು ಮಾತನಾಡಿದ  ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸಾಧು ಕೋಕಿಲ ಅವರು, ಚಿತ್ರೋತ್ಸವದಲ್ಲಿ ಏಷಿಯನ್, ಇಂಡಿಯನ್ ಹಾಗೂ ಕನ್ನಡ ಚಲನಚಿತ್ರಗಳ ಸ್ಫರ್ಧಾ ವಿಭಾಗಗಳಿದ್ದು, ಮೂರು ವಿಭಾಗಗಳಲ್ಲಿ ತಲಾ ಮೂರು ಸಿನಿಮಾಗಳಿಗೆ ಪ್ರಶಸ್ತಿ ನೀಡಲಾಗುತ್ತದೆ. ಚಿತ್ರೋತ್ಸವದಲ್ಲಿ ಎಐ ಕುರಿತ ವಿಶೇಷ ಕಾರ್ಯಾಗಾರ ಮಾ.3ರಂದು ನಡೆಯಲಿದೆ. ತಜ್ಞರು ಕಾರ್ಯಾಗಾರ ನಡೆಸಿಕೊಡಲಿದ್ದಾರೆ. ಇದಲ್ಲದೇ ಹಿಂದಿನ ಕಾಲದಲ್ಲಿ ಇದ್ದ ಟೆಂಟ್ ಸಿನಿಮಾ ರೀತಿಯಲ್ಲಿ ಕೆಲ ಸಿನಿಮಾ ಪ್ರದರ್ಶನಗೊಳ್ಳಲಿವೆ. ಜೊತೆಗೆ ಒಟಿಟಿ, 2024ರ ಹಿಟ್ ಚಿತ್ರಗಳ ನಿರ್ದೇಶಕರೊಂದಿಗೆ ಸಂವಾದ, ಚಿತ್ರರಂಗದ ಸಾಧಕರೊಂದಿಗೆ ಮಾತುಕತೆ, ಚಿತ್ರ ವಿತರಣೆ, ನಿರ್ಮಾಣದ ಸವಾಲುಗಳ ಕುರಿತು ಉಪನ್ಯಾಸ ನಡೆಯಲಿದೆ. ಚಿತ್ರೋತ್ಸವಕ್ಕೆ ನಟ ಕಿಶೋರ್ ರಾಯಭಾರಿಯಾಗಿರಲಿದ್ದಾರೆ ಎಂಬ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

 

Publisher: ಕನ್ನಡ ನಾಡು | Kannada Naadu

Login to Give your comment
Powered by