ಬೆಂಗಳೂರು : ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು 2024-25ನೇ ಸಾಲಿನಲ್ಲಿ ಅಕಾಡೆಮಿ ಅಧ್ಯಕ್ಷರಾದ ಶ್ರೀಮತಿ ಶುಭ ಧನಂಜಯ ಅವರ ಅಧ್ಯಕ್ಷತೆಯಲ್ಲಿ ಮೈಸೂರಿನ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ರಂಗಾಯಣದ ಸಹಯೋಗದೊಂದಿಗೆ ಸಂಗೀತ ನೃತ್ಯ ಕಲೆಯನ್ನು ಉತ್ತೇಜಿಸಲು ಕಲೆಯ ಬಗ್ಗೆ ಉನ್ನತ ಮಟ್ಟದ ತಿಳುವಳಿಕೆಯುಳ್ಳವರಿಗಾಗಿ ಫೆಬ್ರವರಿ 28, ಮಾರ್ಚ್ 1 ಹಾಗೂ 2 ರಂದು ಮೂರು ದಿನಗಳ ಭರತನಾಟ್ಯ ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ ಮತ್ತು ಗಮಕ ಕಲಾ ಪ್ರಕಾರಗಳ ಬಗ್ಗೆ ತರಬೇತಿ ಶಿಬಿರ ಹಾಗೂ ಮಾರ್ಚ್ 3 ರಂದು ಮೈಸೂರಿನ ಕಲಾಮಂದಿರದಲ್ಲಿ ಉಪನ್ಯಾಸ, ಶಿಬಿರಾರ್ಥಿಗಳಿಂದ ಪ್ರದರ್ಶನ ಹಾಗೂ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಖ್ಯಾತ ಭರತನಾಟ್ಯ ಕಲಾವಿದೆ ಅಮೇರಿಕದ ನಿವಾಸಿ ಡಾ.ಜಾನಕಿ ರಂಗರಾಜನ್ ಹಾಗೂ ಖ್ಯಾತ ನೃತ್ಯ ಗುರು ಡಾ.ವಸುಂಧರಾ ದೊರೆಸ್ವಾಮಿ ಅವರಿಂದ ಭರತನಾಟ್ಯದ ಬಗ್ಗೆ, ಹಿಂದೂಸ್ತಾನಿ ಸಂಗೀತದಲ್ಲಿ ಖ್ಯಾತ ಸಿದ್ಧರಾಮಯ್ಯ ಮಠಪತಿ ಹಾಗೂ ಮೃತ್ಯುಂಜಯ ಜಿ ಶೆಟ್ಟರ್ ಅವರಿಂದ ಕರ್ನಾಟಕ ಸಂಗೀತದಲ್ಲಿ ಆರ್.ಎಸ್.ನಂದಕುಮಾರ ಅವರು ಶ್ರೀಮತಿ ಚಂದನ ಬಾಲಾ, ರಾಘವೇಂದ್ರ ಎಂ ಬಳ್ಳಾರಿ, ಶ್ರೀಕಾಂತಂ ನಾಗೇಂದ್ರಶಾಸ್ತ್ರಿ ಮತ್ತು ಗಮಕ ಕ್ಷೇತ್ರದ ದಿಗ್ಗಜರಾದ ಶ್ರೀಮತಿ ಗಂಗಮ್ಮ ಕೇಶವಮೂರ್ತಿ ಅವರಿಂದ ಗಮಕದ ಬಗ್ಗೆ ಒಂದೇ ಸೂರಿನಡಿ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಭರತನಾಟ್ಯ, ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ ಮತ್ತು ಗಮಕ ಕಲಾ ಪ್ರಕಾರದ ತರಬೇತಿ ಶಿಬಿರದಲ್ಲಿ ಭಾಗವಹಿಸಲಿಚ್ಛಿಸುವವರು, ವಯೋಮಿತಿ 21 ರಿಂದ 40 ವರ್ಷದ ಒಳಗಾಗಿರಬೇಕು. ಸೀನಿಯರ್ ಪರೀಕ್ಷೆ ಅಥವಾ ತತ್ಸಮಾನ ಪರೀಕ್ಷೆ ಆಗಿರಬೇಕು. ನೃತ್ಯ ಗುರುಗಳು, ಶಿಕ್ಷಕರು, ಸಂಗೀತ ನೃತ್ಯ ಅಭ್ಯರ್ಥಿಗಳು ಶಿಬಿರದಲ್ಲಿ ಭಾಗವಹಿಸಬಹುದು. ಓ.ಓ.ಡಿ.ಪತ್ರ ನೀಡಲಾಗುವುದು.ತರಬೇತಿ ಶಿಬಿರದಲ್ಲಿ ಭಾಗವಹಿಸುವ ಶಿಬಿರಾರ್ಥಿಗಳಿಗೆ ಅಕಾಡೆಮಿ ವತಿಯಿಂದ ವಸತಿ, ಊಟದ ವ್ಯವಸ್ಥೆ ಹಾಗೂ ಪ್ರಮಾಣ ಪತ್ರ ನೀಡಲಾಗುವುದು. ಆದ್ಯತೆ ಮೇರೆಗೆ ಶಿಬಿರಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು. ಶಿಬಿರಾರ್ಥಿಗಳ ಆಯ್ಕೆಯ ಅಂತಿಮ ತೀರ್ಮಾನ ಅಕಾಡೆಮಿಯದಾಗಿರುತ್ತದೆ.
ತರಬೇತಿ ಶಿಬಿರದಲ್ಲಿ ಭಾಗವಹಿಸಲಿಚ್ಛಿಸುವವರು ತಮ್ಮ ಹೆಸರು, ವಿಳಾಸ, ಮೊಬೈಲ್ ನಂಬರ್, ಕಲಾ ಪ್ರಕಾರ, ಜನ್ಮ ದಿನಾಂಕ, ಸೀನಿಯರ್ ಪರೀಕ್ಷೆ ಅಥವಾ ತತ್ಸಮಾನ ಪರೀಕ್ಷೆಯ ಪ್ರಮಾಣ ಪತ್ರ. ಜನ್ಮ ದಿನಾಂಕ ಪ್ರಮಾಣ ಪತ್ರ ಹಾಗೂ ಸಂಕ್ಷಿಪ್ತ ವಿವಿರದೊಂದಿಗೆ ಅರ್ಜಿಯನ್ನು ರಿಜಿಸ್ಟ್ರಾರ್, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಕನ್ನಡ ಭವನ, 2ನೇ ಮಹಡಿ, ಜೆ.ಸಿ.ರಸ್ತೆ, ಬೆಂಗಳೂರು -2 ಇಲ್ಲಿಗೆ ಅಥವಾ karnatakasangeeta@gmail.com ಮೂಲಕ ಫೆಬ್ರವರಿ 20 ರೊಳಗೆ ಕಳುಹಿಸಿಕೊಡಬೇಕು ಎಂದು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಎನ್.ನರೇಂದ್ರ ಬಾಬು ಅವರು ತಿಳಿಸಿದ್ದಾರೆ.
Publisher: ಕನ್ನಡ ನಾಡು | Kannada Naadu