ಕನ್ನಡ ನಾಡು | Kannada Naadu

ಸಾಧನೆಗೆ ದೊಡ್ಡ ಗುರಿ ಮುಖ್ಯ - ಎನ್.ವಿಷ್ಣುವರ್ಧನ

29 Jan, 2025

 

ಮೈಸೂರು : ಸಾಧನೆಗೆ ದೊಡ್ಡ ಗುರಿ ಮುಖ್ಯ. ಹೀಗಾಗಿ ಇಂದಿನಿಂದಲೇ ಗುರಿ ಇಟ್ಟುಕೊಂಡು ನಿಮ್ಮ ದಾರಿ ಸ್ಪಷ್ಟಪಡಿಸಿಕೊಳ್ಳಿ. ಬಳಿಕ ಗುರಿಯ ಕಡೆ ನಿರಂತ ಗಮನ ಹರಿಸಿ ಎಂದು ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.

ಅವರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಏರ್ಪಡಿಸಿದ್ದ ಬ್ಯಾಂಕಿಂಗ್ ಹುದ್ದೆಗಳ ನೇಮಕಾತಿ ಪರೀಕ್ಷಾ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಹುದ್ದೆಗಿಂತಲೂ ಮಾನವೀಯ ಮೌಲ್ಯ ಮುಖ್ಯ. ಹೀಗಾಗಿ ಜೀವನದಲ್ಲಿ ಮಾನವೀಯ ಮೌಲ್ಯ ಅಳವಡಿಸಿಕೊಳ್ಳಿ. ಜೊತೆಗೆ ಶಿಸ್ತು, ಹಿರಿಯರಿಗೆ ಗೌರವ, ಪ್ರೀತಿ ಇಟ್ಟುಕೊಳ್ಳಬೇಕು ಆವಾಗಲೇ ಜೀವನದಲ್ಲಿ ಏನಾದರೂ ಸಾಧಿಸಲು ಸಾಧ್ಯ ಎಂದರು.

ನಿಮ್ಮ ಬೌದ್ಧಿಕ ಬುದ್ಧಿ ಶಕ್ತಿ ತುಂಬಾ ಬಲವಾಗಿದೆ. ಈ ನಿಟ್ಟಿನಲ್ಲಿ ನೀವು ಯಾವುದೇ ಹಾದಿಯನ್ನು ಸುಗಮವಾಗಿ ಸಾಧಿಸಬಹುದು. ಬ್ಯಾಂಕಿಂಗ್, ಯುಪಿಎಸ್‍ಸಿ, ಐಎಎಸ್, ಐಎಫ್‍ಎಸ್, ಕೆಎಎಸ್ ಸೇರಿದಂತೆ ಎಲ್ಲಾ ಪರೀಕ್ಷೆ ತೆಗೆದುಕೊಳ್ಳಿ. ಪ್ರಯತ್ನಂ ಸರ್ವ ಸಾಧನಂ ಎನ್ನುವಂತೆ ಎಂದಾದರೂ ಪ್ರಯತ್ನಕ್ಕೆ ಫಲ ಸಿಕ್ಕೆ ಸಿಗುತ್ತದೆ ಎಂದು ಕಿವಿಮಾತು ಹೇಳಿದರು.

ಶಾಲೆಯಿಂದಲೇ ನಾನು ಗುರಿ ನಿಗದಿಪಡಿಸಿಕೊಂಡಿದ್ದೆ. ಅಂದಿನಿಂದಲೇ ಸತತ ಪ್ರಯತ್ನಿಸಿದೆ. ನಮ್ಮ ತಂದೆ ಕೂಡ ಪೊಲೀಸ್ ಇಲಾಖೆಯ ಅಧಿಕಾರಿಗಳಾಗಿದ್ದರು. ಅವರೇ ನನಗೆ ಮಾದರಿ. ನಾನು ನನ್ನ ಗುರಿ ಕಡೆ ಗಮನ ಹರಿಸಿದೆ. ಪೊಲೀಸ್ ಇಲಾಖೆಗೆ ಸೇರಿದೆ ಎಂದು ತಮ್ಮ ಬಾಲ್ಯದ ದಿನಗಳನ್ನು ಸ್ಮರಿಸಿಕೊಂಡರು.  ಹುದ್ದೆ ಸೇರಿದ ಮೇಲೆ ಪೋಷಕರನ್ನು ಮರೆಯಬಾರದು. ಸಾರ್ವಜನಿಕ ಸೇವೆಯೆ ನಮ್ಮ ಗುರಿ ಎನ್ನುವ ಅಂಶವನ್ನು ಮರೆಯಬಾರದು ಎಂದರು.

ಕುಲಪತಿ ಪ್ರೊ. ಶರಣಪ್ಪ ವಿ.ಹಲಸೆ ಅವರು ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಬೌದ್ಧಿಕ ಸಾಮಥ್ರ್ಯವನ್ನು ಗಟ್ಟಿಗೊಳಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ನಮ್ಮ ಕೆಲಸಗಳನ್ನು ಚುರುಕುಗೊಳಿಸಬೇಕು ಎಂದು ಹೇಳಿದರು.

ಕುಲಸಚಿವ ಪ್ರೊ..ಕೆ.ಬಿ ಪ್ರವೀಣ ಅವರು ಮಾತನಾಡಿ, ಬ್ಯಾಂಕಿಂಗ್ ಹುದ್ದೆಗಳ ತರಬೇತಿಗೆ ಬಂದಿರುವ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ವಿದ್ಯಾರ್ಥಿಗಳು ತಮ್ಮ ಗುರಿ ಸ್ಪಷ್ಟಪಡಿಸಿಕೊಂಡು ಆ ಹಾದಿಯತ್ತ ಗಮನ ಹರಿಸಬೇಕು. ನಿರಂತರ ಪರಿಶ್ರಮ ನಿಮ್ಮನ್ನು ಗೆಲುವಿನ ದಡ ಸೇರಿಸಲಿದೆ. ವಿದ್ಯಾರ್ಥಿಗಳಿಗೆ ಛಲ ಮತ್ತು ಗುರಿಯಿರಬೇಕು. ಆ ಗುರಿ ದೊಡ್ಡದಾಗಿರಲಿ ಎಂದರು.

ಕುಲಸಚಿವರು ಪ್ರೊ.. ಕೆ.ಬಿ ಪ್ರವೀಣ ಮಾತನಾಡಿ, ತರಬೇತಿ ಬಂದಿರುವ ನಿಮಗೆ ವಿಶ್ವವಿದ್ಯಾಲಯವು  ಎಲ್ಲಾ ಸಹಕಾರ ನೀಡಲಿದೆ. ಇಲ್ಲಿರುವ ಗ್ರಂಥಾಲಯ, ವಿವಿಧ ವಿಭಾಗಗಳ ಪ್ರಾಧ್ಯಾಪಕರ ನೆರವು ಪಡೆದುಕೊಳ್ಳಿ ಎಂದರು.
ಕಾರ್ಯಕ್ರಮದಲ್ಲಿ ಡೀನ್ ಅಧ್ಯಯನ ಕೇಂದ್ರದ ಪ್ರೊ. ರಮನಾಥಂ ನಾಯ್ಡು, ಹಣಕಾಸು ಅಧಿಕಾರಿ ಪ್ರೊ.ನಿರಂಜನ್‍ರಾಜ್, ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ, ಸಿದ್ದೇಶ್ ಹೊನ್ನೂರ್, ಗಣೇಶ್ ಕೆ.ಜಿ. ಕೊಪ್ಪಲ್ ಮತ್ತಿತರು ಉಪಸ್ಥಿತರಿದ್ದರು.

Publisher: ಕನ್ನಡ ನಾಡು | Kannada Naadu

Login to Give your comment
Powered by