ಬೆಂಗಳೂರು : ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಬಂದಿವೆ ಎಂಬುದನ್ನು ಕನ್ನಡಿಗರು ಎಲ್ಲೆಡೆ ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ೧೯೬೪ರಲ್ಲಿ ಡಾ. ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು ರಚಿಸಿದ "ನಾಕುತಂತಿ" ಕೃತಿಗೆ ೧೯೭೪ರಲ್ಲಿ ಜ್ಞಾನಪೀಠ ಲಭಿಸಿದೆ ಎನ್ನುವುದು ತಿಳಿದ ವಿಚಾರವೆ.
ಈ ಕೃತಿ ರಚನೆಯಾಗಿ ಅರವತ್ತು ವರ್ಷಗಳಾಗಿದ್ದು, ಜ್ಞಾನಪೀಠ ಪುರಸ್ಕೃತಗೊಂಡು ಐವತ್ತು ವರ್ಷ ತುಂಬುತ್ತಿದೆ. ಈ ನೆನಪಿಗೆ ಅಖಿಲ ಭಾರತೀಯ ಸಾಹಿತ್ಯ ಪರಿಷದ್ನ ಬೆಂಗಳೂರು ಮಹಾನಗರ ಘಟಕದ ವತಿಯಿಂದ ‘ನಾಕುತಂತಿ ಷಷ್ಟಿಪೂರ್ತಿ’ ಸಂಭ್ರಮಾಚರಣೆಯನ್ನು ವರ್ಷವಿಡೀ ಆಚರಿಸಲು ತೀರ್ಮಾನಿಸಿದೆ. ಹೆಸರಾಂತ ಇತಿಹಾಸಕಾರರೂ ವಿಮರ್ಶಕರೂ ಆದ ಡಾ. ಜಿ. ಬಿ. ಹರೀಶರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮಗಳು ನಡೆಯಲಿವೆ. ಮುಂದಿನ ೧೨ ತಿಂಗಳು ಬೆಂಗಳೂರಿನ ವಿವಿಧೆಡೆಗಳಲ್ಲಿ ಒಂದೊಂದು ಕಾರ್ಯಕ್ರಮಗಳನ್ನು ಮಾಡಲಾಗುತ್ತದೆ.
ಡಾ.ಜಿ.ಬಿ.ಹರೀಶ ರವರು ನಾಕುತಂತಿಯ ಆಯ್ದ ಕವನಗಳ ಪರಿಚಯ ಹಾಗೂ ವಿಶ್ಲೇಷಣೆಯನ್ನು ನಡೆಸಿಕೊಡುತ್ತಾರೆ. ಪ್ರಮುಖವಾಗಿ ನಾಕುತಂತಿ ಸಾಹಿತ್ಯದಲ್ಲಿ ಸಂಸ್ಕೃತಿ, ತತ್ವಶಾಸ್ತ್ರ ಮತ್ತು ಅಧ್ಯಾತ್ಮದ ಹಿನ್ನೆಲೆ ಪರಿಚಯವನ್ನು ಈ ಸರಣಿಯ ಮುಖಾಂತರ ಮಾಡಲಾಗುತ್ತದೆ. ಇದು ಸಾಹಿತ್ಯಾಭ್ಯಾಸಿಗಳಿಗೆ ಕವನಗಳ ಒಳಗನ್ನು ತೆರೆದಿಟ್ಟು ಕಾವ್ಯಪ್ರಪಂಚಕ್ಕೆ ಆತ್ಮವಿಶ್ವಾಸದ ಪ್ರವೇಶಕ್ಕೆ ಅನುವಾಗುತ್ತದೆ. ಜತೆಗೆ ಇಂದಿನ ಪೀಳಿಗೆಗೆ ಬೇಂದ್ರೆಯವರ ಕಾವ್ಯ, ಸಂಸ್ಕೃತಿ ಮತ್ತು ಆಧ್ಯಾತ್ಮ ಪರಿಚಯಿಸುವ ಸದುದ್ದೇಶವನ್ನು ಹೊಂದಿದೆ.
ಈ ಸರಣಿಯ ಉದ್ಭಾಟನಾ ಸಮಾರಂಭವನ್ನು ದಿನಾಂಕ ೧ ಫೆಬ್ರವರಿ ೨೦೨೫, ಶನಿವಾರದಂದು ಸಂಜೆ ೫ ಗಂಟೆಗೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಅವರಣದಲ್ಲಿರುವ ಅಕ್ಕಮಹಾದೇವಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು, ಚಿಂತಕರು ಹಾಗೂ ಲೇಖಕರಾದ ಡಾ. ಜಿ.ಬಿ. ಹರೀಶ ಅವರುಗಳು ಮುಖ್ಯ ಅತಿಥಿಗಳಾಗಿರಲಿದ್ದಾರೆ. ಖ್ಯಾತ ಹಾಸ್ಯ ಬರಹಗಾರರು ಹಾಗೂ ಆಖಿಲ ಭಾರತೀಯ ಸಾಹಿತ್ಯ ಪರಿಷದ್, ಬೆಂಗಳೂರು ಮಹಾನಗರದ ಅಧ್ಯಕ್ಷರಾದ ಎಂ.ಎಸ್. ನರಸಿಂಹಮೂರ್ತಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ತಮ್ಮ ಘನತೆವೆತ್ತ ಮಾಧ್ಯಮದಲ್ಲಿ ಕಾರ್ಯಕ್ರಮದ ಕುರಿತು ಸುದ್ದಿ, ಕಾರ್ಯಕ್ರಮದ ದಿನ ಇಂದಿನ ಕಾರ್ಯಕ್ರಮ ವಿಭಾಗದಲ್ಲಿ ವಿವರವನ್ನು ಪ್ರಕಟಿಸಬೇಕು ಹಾಗೂ ಕಾರ್ಯಕ್ರಮದಂದು ತಮ್ಮ ಪ್ರತಿನಿಧಿಯನ್ನು ಕಳಿಸುವ ಮೂಲಕ ವರದಿ ಪ್ರಕಟಿಸಬೇಕು ಎಂದು ಮನವಿ ಮಾಡುತ್ತಿದ್ದೇವೆ.
Publisher: ಕನ್ನಡ ನಾಡು | Kannada Naadu