ಬೆಂಗಳೂರು: ಮಂಡ್ಯ ಜಿಲ್ಲೆಯಲ್ಲಿ ಸ್ವಾಯತ್ತ ಕೃಷಿ ವಿಶ್ವವಿದ್ಯಾನಿಲಯವನ್ನು ನಿರ್ಮಾಣ ಮಾಡಲು ತೀರ್ಮಾನ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಇಂದು ತ್ರಿಪುರವಾಸಿನಿ ಅರಮನೆ ಮೈದಾನದಲ್ಲಿ ಕೃಷಿ ಇಲಾಖೆ ವತಿಯಿಂದ ಅಂತರಾಷ್ಟ್ರೀಯ ವಾಣಿಜ್ಯ ಮೇಳ ಸಾವಯವ ಮತ್ತು ಸಿರಿಧಾನ್ಯ - 2025ರ ಉದ್ಘಾಟನೆ ಮಾಡಿ ಮಾತನಾಡಿದ ಮುಖ್ಯಮಂತ್ರಿಗಳು, ಮಂಡ್ಯ ಜಿಲ್ಲೆಯಲ್ಲಿ ಕೃಷಿ ವಿಶ್ವವಿದ್ಯಾನಿಲಯವನ್ನು ನಿರ್ಮಾಣ ಮಾಡುವುದರಿಂದ ಮಂಡ್ಯ, ಹಾಸನ, ಮೈಸೂರು, ಚಾಮರಾಜನಗರ ರೈತರಿಗೆ ಅನುಕೂಲವಾಗುತ್ತದೆ. ರೈತರು ಹೊಸ ತಳಿಯ ಪರಿಚಯ ಅತ್ಯಾಧಯನಿಕ ತಾಂತ್ರಿಕ ಸಲಹೆಗಳನ್ನು ಪಡೆಯಬಹುದು.
ಭಾರತ ಕೃಷಿ ಪ್ರಧಾನ ದೇಶವಾಗಿದ್ದು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಭಿಗಳಾಗಿದ್ದೇವೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಆಹಾರ ಉತ್ಪಾದನೆ ಕಡಿಮೆ ಇತ್ತು. ಈಗ ನಾವು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಭನೆ ಪಡೆಯುವದರ ಜೊತೆಗೆ ವಿದೇಶಗಳಿಗೆ ರಫ್ತು ಮಾಡುತ್ತಿದ್ದೇವೆ. ಸಿರಿಧಾನ್ಯಕ್ಕೆ ಕನಿಷ್ಠ ಬೆಂಬಲ ಬೆಲೆ ಕಾಯಿದೆ ತರಲು ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಸಿರಿಧಾನ್ಯಗಳನ್ನು ಹಿಂದಿನಿಂದಲೂ ಬೆಳೆಯುತ್ತಿದ್ದರು. ಕಡಿಮೆ ಮಳೆ ಇರುವ ಪ್ರದೇಶದಲ್ಲಿ ಹೆಚ್ಚು ಸಿರಿಧಾನ್ಯಗಳನ್ನು ಬೆಳೆಯುವ ಪ್ರವೃತ್ತಿ ಇತ್ತು. ರಾಗಿ ತಿಂದವನು ನಿರೋಗಿಯಾಗಿರುತ್ತಾನೆ ಹಿಂದಿನ ಕಾಲದಲ್ಲಿ ಹೇಳುತ್ತಿದ್ದರು. ಭಾರತವು ಸಾವಯವ ಕೃಷಿ ಉತ್ಪಾನೆಯಲ್ಲಿ ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿದೆ.
ರೈತರಿಗೆ ಸಿರಿಧಾನ್ಯ ಬೆಳಯಲು, ಮಾರುಕಟ್ಟೆ ಕಲ್ಪಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರೋತ್ಸಾಹ ನೀಡುತ್ತಿದೆ. ರೈತರಿಗೆ ಸಾವಯವ ಮತ್ತು ಸಿರಿಧಾನ್ಯಗಳನ್ನು ಬೆಳೆಯಲು ಉತ್ತೇಜನ ನೀಡುವುದಕ್ಕಾಗಿ 2017ರಲ್ಲಿ ಸಾವಯವ ಕೃಷಿ ನೀತಿ ಜಾರಿಗೆ ತರಲಾಗಿದೆ. 2013ರಲ್ಲಿ ಸಾವಯವ ಭಾಗ್ಯ ಯೋಜನೆ ಮೂಲಕ ರೈತರನ್ನು ಒಗ್ಗೂಡಿಸಿ ಉತ್ತೇಜನ ನೀಡಲಾಗಿದೆ. ರೈತಸಿರಿ ಯೋಜನೆ ಮೂಲಕ ನವಣೆ, ಸಾಮೆ, ಕೊರಲೆ, ಬರಗು, ಊದಲು ಬೆಳೆಯುವ ರೈತರಿಗೆ ಪ್ರತಿ ಹೆಕ್ಟೇರಿಗೆ ರೂ.10,000/-ಗಳಂತೆ ಗರಿಷ್ಠ 2 ಹೆಕ್ಟೇರ್‍ಗಳಿಗೆ ಪ್ರೋತ್ಸಾಹ ಧನವನ್ನು ನೀಡಲಾಗುತ್ತಿದೆ. ಬೆಂಗಳೂರಿನ ಹೆಬ್ಬಾಳದಲ್ಲಿ ಸಾವಯವ ಮತ್ತು ಸಿರಿಧಾನ್ಯ ಹಬ್‍ನ್ನು ರೂ.20 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.
ರಾಜ್ಯದ ಸಾವಯವ ಉತ್ಪನ್ನಗಳ ಮಾರಾಟಕ್ಕೆ ಸೂಕ್ತ ಮಾರುಕಟ್ಟೆ ಕಲ್ಪಿಸಿಕೊಡುವ ನಿಟ್ಟಿನಲ್ಲಿ ರಾಜ್ಯದ ಸಾವಯವ ಕೃಷಿಕರ ಸಂಘಗಳನ್ನು ಒಗ್ಗೂಡಿಸಿ 15 ಪ್ರಾಂತೀಯ ಸಾವಯವ ಒಕ್ಕೂಟಗಳನ್ನೂ ರಚಿಸಲಾಗಿದೆ. ಸಾವಯವ ಹಾಗೂ ಸಿರಿಧಾನ್ಯಗಳ ಕೃಷಿಗೆ ಸಂಬಂಧಿಸಿದ ಸಂಶೋಧನಾ ಕೇಂದ್ರಗಳನ್ನು ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಸ್ಥಾಪಿಸಲಾಗಿದೆ. ಸಿರಿಧಾನ್ಯಗಳ ಉತ್ತೇಜನದಲ್ಲಿ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳಿಗೆ ಕೇಂದ್ರ ಸರ್ಕಾರ ಪ್ರಶಂಸನಾ ಪತ್ರವನ್ನು ಕರ್ನಾಟಕ ಸರ್ಕಾರದ ಕೃಷಿ ಇಲಾಖೆಗೆ ನೀಡಿದೆ. ಮುಂದಿನ ಆರ್ಥಿಕ ವರ್ಷದಿಂದ ರಾಜ್ಯದ ಸಾವಯವ ಉತ್ಪನ್ನಗಳ ಮಾರಾಟಕ್ಕೆ ಎಪಿಎಂಸಿನಲ್ಲಿ ಮಾರುಕಟ್ಟೆ ವ್ಯವಸ್ಥೆಗೆ ಪ್ರಯತ್ನ ಮಾಡಲಾಗುವುದು. ಹೊಸದುರ್ಗ ವಿಧಾನಸಭಾ ಕ್ಷೇತ್ರದದ ಶಾಸಕ ಗೋವಿಂದಪ್ಪ ಅವರು ಸಿರಿಧಾನ್ಯವನ್ನು ಉತ್ತಮವಾಗಿ ಬೆಳೆದು ರೈತರಿಗೆ ಸಿರಿಧಾನ್ಯ ಬೆಳೆಯಲು ಮಾದರಿಯಾಗಿದ್ದಾರೆ ಎಂದು ತಿಳಿಸಿದರು.
ಕೃಷಿ ಸಚಿವ ಎನ್ ಚೆಲುವರಾಯಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ ಸಿರಿಧಾನ್ಯವನ್ನು ಅತ್ಯಂತ ಕಡಿಮೆ ನೀರಿನಿಂದ ಬೆಳೆಯಬಹುದು. ಸಿರಿಧಾನ್ಯ ಹೆಚ್ಚು ಪೋಷಕಾಂಶ ಮತ್ತು ನಾರಿನಿಂದ ಕೂಡಿದೆ. ಹಿಂದೆ ಬಡವರ ಆಹಾರವಾಗಿದ್ದ ಸಿರಿಧಾನ್ಯವು ಇಂದು ಉಳ್ಳವರ ಆಹಾರವಾಗಿದೆ. ಸರ್ಕಾರವು ರೈತಸಿರಿ ಯೋಜನೆ ಮೂಲಕ 1 ಲಕ್ಷ ರೈತರಿಗೆ ರೂ. 104 ಕೋಟಿಗಳನ್ನು ಮಂಜೂರು ಮಾಡಲಾಗಿದೆ. ಸಾವಯವ ಕೃಷಿ ಪದ್ದತಿಯಲ್ಲಿ ಬೆಳೆ ಬೆಳೆಯುವ ರಾಜಸ್ಥಾನ ಮೊದಲನೆ ಸ್ಥಾನದಲ್ಲಿದ್ದು, ಕರ್ನಾಟಕ ಎರಡನೇ ಸ್ಥಾನ ಪಡೆದಿದೆ. ಕೃಷಿ ಇಲಾಖೆಯಲ್ಲಿ 950 ಹುದ್ದೆಗಳಿಗೆ ಭರ್ತಿ ಮಾಡಲು ಅನುಮೋದನೆ ದೊರೆತಿದೆ. ರೈತರು ಶ್ರೀಮಂತರಾಗಿ ಜನರಿಗೆ ಉದ್ಯೋಗ ನೀಡುವಂತವರಾಗಬೇಕು ಎಂದು ತಿಳಿಸಿದರು.
ಅಂತರಾಷ್ಟ್ರೀಯ ವಾಣಿಜ್ಯ ಮೇಳ ಸಾವಯವ ಮತ್ತು ಸಿರಿಧಾನ್ಯ 2025ರ ಮೇಳದಲ್ಲಿ ಜರ್ಮನಿ, ಸ್ವಿಟ್ಜರ್‍ಲ್ಯಾಂಡ್, ಸ್ಪೈನ್, ಆಸ್ಟ್ರೇಲಿಯಾ, ಕೀನ್ಯಾ, ತಾಂಜೇನಿಯ, ಇಟಲಿ, ಇಂಗ್ಲೇಂಡ್, ಪೆರು ದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. 8 ಹೊರ ರಾಜ್ಯಗಳ ಕೃಷಿ ಸಚಿವರು, 300 ಕ್ಕೂ ಹೆಚ್ಚು ಮಳಿಗೆಗಳು, ಹೊರ ರಾಜ್ಯಗಳು 17 ಇಲಾಖೆಗಳು 7 ಸಂಸ್ಥೆಗಳು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಮಾನ್ಯ ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಹಾಗೂ ಕಾರ್ಮಿಕ ಮತ್ತು ಉದ್ಯೋಗದ ರಾಜ್ಯ ಸಚಿವರಾದ ಕುಮಾರಿ ಶೋಭಾ ಕರಂದ್ಲಾಜೆ ಅವರು ಮಾತನಾಡಿ ಹಿಂದಿನ ಕಾಲದಲ್ಲಿ ಋಷಿ ಮುನಿಗಳು, ಹಿರಿಯವರು ಸಿರಿಧಾನ್ಯ ಸೇವಿಸುತ್ತಿದ್ದರು. ಆರೋಗ್ಯ ಮನಸ್ಸು ಪ್ರಕೃತಿಗೆ ಹಿತವಾದ ಆಹಾರವಾಗಿದೆ. ಅತ್ಯಂತ ಕಡಿಮೆ ವೆಚ್ಚ ಹಾಗೂ ನೀರಿನಲ್ಲಿ ಸಿರಿಧಾನ್ಯಗಳನ್ನು ಬೆಳೆಯಬಹುದು. ಕರ್ನಾಟಕ ರಾಜ್ಯ ಸಿರಿಧಾನ್ಯ ಬೆಳೆಯುವುದರಲ್ಲಿ ಮುಂಚೂಣಿಯಲ್ಲಿದೆ. ರೈತರನ್ನು ಅಂತರಾಷ್ಟ್ರೀಯ ಮಾರುಕಟ್ಟೆಗೆ ಕೊಂಡೊಯ್ಯಬೇಕು. ಇದಕ್ಕಾಗಿ ಕೃಷಿ ಇಲಾಖೆಯಲ್ಲಿ ಪ್ರತ್ಯೇಕ ಘಟಕಗಳನ್ನು ಸ್ಥಾಪಿಸಬೇಕು. ತಕ್ಷಣ ಮಾಡಿ ತಕ್ಞಣ ತಿನ್ನುವ ಆಹಾರಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆಯಿದೆ ಎಂದು ತಿಳಿಸಿದರು.
ಜಾರ್ಖಂಡ್‍ನ ಪಶುಸಂಗೋಪನೆ ಮತ್ತು ಸಹಕಾರ ಇಲಾಖೆ ಸಚಿವೆ ಶ್ರೀಮತಿ ಶಿಲ್ಪಿ ನೇಹಾ ಟಿರ್ಕಿ ಮಾತನಾಡಿ ಜಾರ್ಖಂಡ್‍ನಲ್ಲಿ ಸಿರಿಧಾನ್ಯ ಬೆಳೆಯುವ ರೈತರಿಗೆ ಉತ್ತೇಜನ ನೀಡಲಾಗುತ್ತಿದೆ. ಹಲವು ಸಂಸ್ಥೆಗಳು ಸಹ ರೈತರಿಗೆ ತರಬೇತಿ ನೀಡುತ್ತಿದೆ. ಸಿರಿಧಾನ್ಯಕ್ಕೆ ಉತ್ತೇಜನ ನೀಡಿ ಉತ್ತಮ ಮಾರುಕಟ್ಟೆಗಳನ್ನು ಕಲ್ಪಿಸುವುದು ಸರ್ಕಾರಗಳ ಕರ್ತವ್ಯ. ವಿಶ್ವವಿದ್ಯಾಲಯಗಳಲ್ಲಿ ಸಾಗುವಳಿ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಸಿರಿಧಾನ್ಯವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಸಿಗಲು ನಾವೆಲ್ಲ ಕೈಜೋಡಿಸಬೇಕು ಎಂದು ತಿಳಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಾತನಾಡಿ ಸಿರಿಧಾನ್ಯ ನವಧಾನ್ಯಗಳಾಗಿದ್ದು ಜೀವಕ್ಕೆ ಶಕ್ತಿ ನೀಡುತ್ತದೆ. ರೈತರನ್ನು ಉಳಿಸಿ ಬೆಳೆಸಬೇಕು. ವಿಶ್ವದಲ್ಲಿ ಸಿರಿಧಾನ್ಯಕ್ಕೆ ಮಹತ್ವವಿದೆ. ರೈತರಿಗೆ ಸಂಬಳ, ಪೆನ್ಷನ್ ಇಲ್ಲ. ಅವರ ಪರಿಸ್ಥಿತಿಯು ಕಷ್ಟದಾಯಕವಾಗಿದೆ. ಸಿರಿಧಾನ್ಯಗಳನ್ನು ಕಡಿಮೆ ನೀರು ವೆಚ್ಚದಲ್ಲಿ ಬೆಳೆಯಬಹುದು. ಸರ್ಕಾರ ಸಿರಿಧಾನ್ಯ ಬೆಳೆಯಲು ರೈತರಿಗೆ ಪ್ರೋತ್ಸಾಹವನ್ನು ನೀಡುತ್ತಿದೆ ಎಂದರು.
ಇದೇ ಸಂರ್ಭದಲ್ಲಿ ರೂ. 20 ಕೋಟಿ ವೆಚ್ಚದಲ್ಲಿ ಸ್ಥಾಪಿಸಲಾಗುತ್ತಿರುವ “ಸಾವಯವ ಮತ್ತು ಸಿರಿಧಾನ್ಯ ಹಬ್”(ಮಿಲೇಟ್ ಹಬ್)ಗೆ ಸನ್ಮಾನ್ಯ ಮುಖ್ಯ ಮಂತ್ರಿಗಳು ಶಂಕುಸ್ಥಾಪನೆ ನೆರವೇರಿಸಿ, ಕೃಷಿ ಇಲಾಖೆಯ “ಶತ ಸಂಭ್ರಮ” ಸ್ವಾವಲಂಭನೆಯಿಂದ ಸಮೃದ್ಧಿಯಡೆಗೆ ಪುಸ್ತಕವನ್ನು ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಅರುಣಾಚಲ ಪ್ರದೇಶ, ಪದುಚೇರಿ ಕೃಷಿ ಸಚಿವರು, ಕಂದಾಯ ಸಚಿವ ಕೃಷ್ಣ ಬೈರೇಗೌಡ, ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಸುರೇಶ್. ಬಿ.ಎಸ್, ಹೊಸದುರ್ಗ ವಿಧಾನಸಭಾ ಕ್ಷೇತ್ರದದ ಶಾಸಕ ಗೋವಿಂದಪ್ಪ ಸೇರಿದಂತೆ ಹಿರಿಯ ಗಣ್ಯರು ಇಲಾಖೆಯ ಹಿರಿಯ ಅಧಿಕಾರಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
Publisher: ಕನ್ನಡ ನಾಡು | Kannada Naadu