ಕನ್ನಡ ನಾಡು | Kannada Naadu

ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ನಿಧನಕ್ಕೆ ಸಂಸದ ಬಸವರಾಜ ಬೊಮ್ಮಾಯಿ ಸಂತಾಪ

27 Dec, 2024

ಭಾರತ ಆರ್ಥಿಕವಾಗಿ ಬೆಳೆಯಲು ಮನಮೋಹನ್ ಸಿಂಗ್ ಭದ್ರ ಬುನಾದಿ ಹಾಕಿದ್ದರು
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ನಿಧನಕ್ಕೆ ಸಂಸದ ಬಸವರಾಜ ಬೊಮ್ಮಾಯಿ ಸಂತಾಪ

ಬೆಂಗಳೂರು, :

ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ನಿಧನ ಹೊಂದಿರುವ ಸುದ್ದಿ ಕೇಳಿ ಅತ್ಯಂತ ದುಖ ಉಂಟು ಮಾಡಿದೆ. ಆರ್ಥಿಕ ತಜ್ಞರಾಗಿ, ಪ್ರಧಾನ ಮಂತ್ರಿಯಾಗಿ ಹತ್ತು ವರ್ಷಗಳ ಕಾಲ ದೇಶವನ್ನು ಮುನ್ನಡೆಸಿದ್ದರು. ದೇಶದ ಆರ್ಥಿಕತೆಗೆ ದೊಡ್ಡ ಬದಲಾವಣೆ ತಂದಿದ್ದರು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಮನಮೋಹನ್ ಸಿಂಗ್ ಅವರು ಅಂತಾರಾಷ್ಟ್ರೀಯ ಸಂಸ್ಥೆಗಳಾದ ವಿಶ್ವ ಸಂಸ್ಥೆ, ಐಎಂಎಫ್ ನಲ್ಲಿ ಒಳ್ಳೆಯ ಸಂಪರ್ಕ ಇಟ್ಟುಕೊಂಡಿದ್ದರಿಂದ ಈ ದೇಶವನ್ನು ಉಳಿಸಲು ಸಾಧ್ಯವಾಯಿತು. ರಿಸರ್ವ್ ಬ್ಯಾಂಕ್ ಗೌರ್ನರ್ ಆಗಿ ಕೆಲಸ ಮಾಡಿದ್ದು, ಈ ದೇಶದಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತರಲು ಕಾರಣವಾಗಿದೆ. ದೇಶ ಆರ್ಥಿಕವಾಗಿ ಇಷ್ಟು ದೊಡ್ಡ ಮಟ್ಟದಲ್ಲಿ ಬೆಳೆಯಲು ಮನಮೋಹನ್ ಸಿಂಗ್ ಭದ್ರ ಬುನಾದಿ ಹಾಕಿದ್ದಾರೆ ಎಂದು ತಿಳಿಸಿದ್ದಾರೆ.

ಮನಮೋಹನ್ ಸಿಂಗ್ ಅವರು ಅತ್ಯಂತ ಸಜ್ಜನ ರಾಜಕಾರಣಿ ಆಗಿದ್ದರು. ಒಬ್ಬ ಮುತ್ಸದ್ದಿ ರಾಜಕಾರಣಿಯನ್ನು ದೇಶ ಕಳೆದುಕೊಂಡಿದೆ. ಅವರು ದೇಶಕ್ಕಾಗಿ ಸದಾ ಚಿಂತನೆ ಮಾಡುತ್ತಿದ್ದರು. ಹಲವಾರು ದೂರದೃಷ್ಟಿಯ ನಿರ್ಣಯಗಳನ್ನು ತೆಗೆದುಕೊಂಡಿದ್ದರು. ಅದರ ಲಾಭ ಈಗ ದೇಶಕ್ಕೆ ಆಗುತ್ತಿದೆ. ಅವರು ಪ್ರಚಾರ ಪ್ರಿಯ ರಾಜಕಾರಣ ಮಾಡಿರಲಿಲ್ಲ, ವಾಸ್ತವ ರಾಜಕಾರಣ ಮಾಡಿದ್ದರು. ಕೆಲವು ಅಪ್ರೀಯವಾದ ನಿರ್ಣಯಗಳನ್ನು ದೇಶದ ಹಿತ ದೃಷ್ಟಿಯಿಂದ ತೆಗೆದುಕೊಂಡಿದ್ದರು. ಅವರ ಗಟ್ಟಿ ನಿಲುವು, ಧಿಮಂತಿಕೆಯ ಗುಣ ಹಲವಾರು ಸಂದರ್ಭಗಳಲ್ಲಿ ಗೊತ್ತಾಗುತ್ತದೆ. ಭಾರತ ಚೀನಾ, ಅಮೇರಿಕಾ, ಯುರೋಪ್ ದೇಶಗಳಿಗೆ ಪೈಪೆÇೀಟಿ ಕೊಡಲು ಮನಮೊಹನ್ ಸಿಂಗ್ ಅವರು ಭದ್ರ ಬುನಾದಿ ಹಾಕಿದ್ದರು ಎಂದು ತಿಳಿಸಿದ್ದಾರೆ.
ಅವರ ಅಗಲಿಕೆ ದೇಶಕ್ಕೆ ತುಂಬಲಾರದ ನಷ್ಟವುಂಟು ಮಾಡಿದೆ.

ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ, ಅವರ ಅಗಲಿಕೆಯ ದುಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ಹಾಗೂ ಅವರ ಅಭಿಮಾನಿಗಳಿಗೆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಂತಾಪದಲ್ಲಿ ತಿಳಿಸಿದ್ದಾರೆ.

Publisher: ಕನ್ನಡ ನಾಡು | Kannada Naadu

Login to Give your comment
Powered by