ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ವಿಧಿವಶ
ಬೆಂಗಳೂರು : ನವಭಾರತಕ್ಕೆ ಆರ್ಥಶಾಸ್ತ್ರ ಬರೆದ ಶ್ರೇಷ್ಠ ಆರ್ಥಿಕ ತಜ್ಞ ಮತ್ತು ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಅಗಲಿಕೆ ಭಾರತದ ಮಾತ್ರವಲ್ಲ, ಜಗತ್ತಿನ ಆರ್ಥಿಕತೆಗೂ ತುಂಬಲಾರದ ನಷ್ಟವಾಗಿದೆ ಎಂದು ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ. ಖಾದರ್ ಫರೀದ್ ಎಂದು ಸಂತಾಪ ಸೂಚಿಸಿದ್ದಾರೆ.
1991 ರ ಆರ್ಥಿಕ ಬಿಕ್ಕಟ್ಟಿನ ತೀವ್ರ ಸಂಕಷ್ಟದ ಸಮಯದಲ್ಲಿ, ಅಧಿಕಾರ ಚುಕ್ಕಾಣಿ ಹಿಡಿದ ಡಾ. ಮನಮೋಹನ್ ಸಿಂಗ್ ಅವರ ದೂರದರ್ಶಿತ್ವವು ದೇಶವನ್ನು ಆರ್ಥಿಕ ಪುನಶ್ಚೇತನದ ಮಾರ್ಗದಲ್ಲಿ ನಡೆಸಿತು. ಅವರು ವಿದೇಶದಲ್ಲಿ ಅಡವಿಟ್ಟಿದ್ದ ಚಿನ್ನವನ್ನು ಬಿಡುಗಡೆ ಮಾಡಿದ್ದು ಮಾತ್ರವಲ್ಲದೆ, ಅವರ ನೇತೃತ್ವದಲ್ಲಿ ಆರಂಭವಾದ ಆರ್ಥಿಕ ಉದಾರೀಕರಣದ ನೀತಿಗಳು, ಭಾರತದ ಪಾಲಿಗೆ ಆರ್ಥಿಕ ಸ್ವಾವಲಂಬನೆ, ಸಮೃದ್ಧಿಯ ಹೊಸ ಅಧ್ಯಾಯವನ್ನೇ ತೆರೆಯಿತು.
ಇಡೀ ವಿಶ್ವ ಆರ್ಥಿಕತೆಯಿಂದ ಕಂಗಾಲಾದಾಗ ಭಾರತದ ಆರ್ಥಿಕತೆ ದೃಢವಾಗಿತ್ತು ಮತ್ತು ಭಾರತದ ಪ್ರತಿ ಮನೆ ಬಾಗಿಲಲ್ಲೂ ಇಂದು ಆರ್ಥಿಕ ಸ್ವಾತಂತ್ರ್ಯ ಹಾಗೂ ಸ್ವಾವಲಂಬನೆ ಕಂಡುಬಂದಿದ್ದರೆ ಅದು ಅವರ ಕೊಡುಗೆ ಎಂಬುವುದನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಅವರ ಪ್ರಗತಿಪರ ದೃಷ್ಠಿಕೋನ ಮತ್ತು ಅವಿಸ್ಮರಣೀಯ ಕೊಡುಗೆಗಳು ದೇಶದ ಮುಂದಿನ ತಲೆಮಾರಿಗೆ ಸ್ಫೂರ್ತಿಯಾಗಿವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಭಾಧ್ಯಕ್ಷರಾದ ಖಾದರ್ ಅವರು ತಿಳಿಸಿದ್ದಾರೆ.
Publisher: ಕನ್ನಡ ನಾಡು | Kannada Naadu