ಕನ್ನಡ ನಾಡು | Kannada Naadu

ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ನಿಧನಕ್ಕೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತೀವ್ರ ಸಂತಾಪ

27 Dec, 2024

 

ಬೆಂಗಳೂರು: ವಿಶ್ವ ಕಂಡ ಶ್ರೇಷ್ಠ ಆರ್ಥಿಕ ತಜ್ಞ, ಉದಾರ ಆರ್ಥಿಕ ನೀತಿಯ ಹರಿಕಾರ ಹಾಗೂ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರ ನಿಧನಕ್ಕೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಶೋಕ ಸಂದೇಶದಲ್ಲಿ ಅವರು, ದೇಶದ ಪ್ರಧಾನಿಯಾಗಿ 2004ರಿಂದ 2014ರವರೆಗೆ ದೇಶವನ್ನು ಮುನ್ನಡೆಸಿದ್ದ ಮನಮೋಹನ್ ಸಿಂಗ್, ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರು ಹಾಗೂ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ನಂತರ ಅತಿಹೆಚ್ಚು ಅವಧಿಗೆ ಪ್ರಧಾನಿಯಾಗಿ ಕೆಲಸ ನಿರ್ವಹಿಸಿದ ಹಿರಿಮೆ ಹೊಂದಿದ್ದರು,

ಹಣದುಬ್ಬರ ನಿಯಂತ್ರಣಕ್ಕೆ ಸಾಕಷ್ಟು ಶ್ರಮಿಸಿದ್ದ ಮನಮೋಹನ್ ಸಿಂಗ್, ಆಹಾರ ಹಕ್ಕು ಕಾಯ್ದೆ, ಆರ್ ಟಿ ಐ ಕಾಯ್ದೆ, ಸರ್ವ ಶಿಕ್ಷಣ ಅಭಿಯಾನ, ಮನ್ರೇಗಾ ಯೋಜನೆ, ಕಡ್ಡಾಯ ಶಿಕ್ಷಣವನ್ನು ಮೂಲಭೂತ ಹಕ್ಕನ್ನಾಗಿಸಿದ್ದು ಸೇರಿದಂತೆ ಹಲವು ಕ್ರಾಂತಿಕಾರಿ ಯೋಜನೆಗಳನ್ನು ಜಾರಿಗೊಳಿಸಿ ದೇಶದ ಸವಾರ್ಂಗೀಣ ಅಭ್ಯುದಯಕ್ಕೆ ಶ್ರಮಿಸಿದ್ದ ಶ್ರೇಷ್ಠ ರಾಜನೀತಿಜ್ಞ ಎಂದು ಹೊರಟ್ಟಿ ಬಣ್ಣಿಸಿದ್ದಾರೆ.

ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿ, ಮಿತಭಾಷಿಯಾಗಿದ್ದ ಡಾ.ಮನಮೋಹನ್ ಸಿಂಗ್, ಹಲವಾರು ಸಂದರ್ಭದಲ್ಲಿ ದೇಶದಲ್ಲಿ ಎದುರಾಗಿದ್ದ ಆರ್ಥಿಕ ಸಂಕಷ್ಟಗಳಿಗೆ ಸೂಕ್ತ ಪರಿಹಾರ ಕಂಡುಹಿಡಿದ ನವಭಾರತದ ನಿರ್ಮಾತೃ ಎಂದರೇ ಅತಿಶಯೋಕ್ತಿಯಾಗಲಾರದು ಎಂದಿರುವ ಬಸವರಾಜ ಹೊರಟ್ಟಿ, ಡಾ.ಸಿಂಗ್ ಅವರ ನಿಧನದಿಂದ ಭಾರತ ಶ್ರೇಷ್ಠ ಆರ್ಥಿಕ ತಜ್ಞನನ್ನು ಕಳೆದುಕೊಂಡು ಬಡವಾಗಿದೆ, ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗಕ್ಕೆ ಹಾಗೂ ಅವರ ಅಪಾರ ಅಭಿಮಾನಿಗಳಿಗೆ ಭಗವಂತ ಕರುಣಿಸಲಿ ಎಂದು ಬಸವರಾಜ ಹೊರಟ್ಟಿ ಪ್ರಾರ್ಥಿಸಿದ್ದಾರೆ.

Publisher: ಕನ್ನಡ ನಾಡು | Kannada Naadu

Login to Give your comment
Powered by