ಕನ್ನಡ ನಾಡು | Kannada Naadu

ಹುಟ್ಟೂರು ತಲುಪಿದ ಹುತಾತ್ಮರಾದ ಯೋಧ ಅನೂಪ್ ಪೂಜಾರಿಯವರ ಪಾರ್ಥಿವ ಶರೀರ

26 Dec, 2024

ಜಮ್ಮು-ಕಾಶ್ಮೀರದಲ್ಲಿ ನಡೆದ ವಾಹನ ಅಪಘಾತದಲ್ಲಿ ಹುತಾತ್ಮರಾದ ಕುಂದಾಪುರ ಬೀಜಾಡಿಯ ಅನೂಪ್ ಪೂಜಾರಿ ಪಾರ್ಥಿವ ಶರೀರ ಇಂದು ಅವರ ಹುಟ್ಟೂರಿಗೆ ತಲುಪಿದೆ.

ಅನೂಪ್ ಪೂಜಾರಿ ಅವರ ಪಾರ್ಥಿವ ಶರೀರ ಉಡುಪಿಯಿಂದ ಬೆಳಿಗ್ಗೆ ಬೀಜಾಡಿಗೆ ರವಾನೆ ಮಾಡಲಾಯಿತು. ತೆಕ್ಕಟ್ಟೆಯಿಂದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅನೂಪ್ ಪಾರ್ಥಿವ ಶರೀರದ ಅಂತಿಮ ಯಾತ್ರೆ ನಡೆಸಲಾಯಿತು. ಅಂತಿಮ ಯಾತ್ರೆಯಲ್ಲಿ ಸಾವಿರಾರು ಜನ ಭಾಗಿಯಾಗಿದ್ದರು. ಅಂತಿಮ ಯಾತ್ರೆ ಮುಗಿದ ಬಳಿಕ ಹುತಾತ್ಮ ಯೋಧನ ದೇಹವನ್ನು ಕುಟುಂಬಕ್ಕೆ ಹಸ್ತಾಂತರ ಮಾಡಲಾಯಿತು.

ಬೀಜಾಡಿ ಗ್ರಾಮದ ಮನೆಯಲ್ಲಿ ಅಂತಿಮ ವಿಧಿವಿಧಾನ ನಡೆಯಲಿದ್ದು, ಕುಟುಂಬದ ಆಪ್ತರಿಗೆ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬೀಜಾಡಿಪಡು ಸರ್ಕಾರಿ ಶಾಲೆ ಮೈದಾನದಲ್ಲಿ ಸಾರ್ವಜನಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಇರಲಿದೆ. ಆಪ್ತರು, ಸಾರ್ವಜನಿಕರು, ಜನಪ್ರತಿನಿಧಿಗಳಿಗೆ ಅಂತಿಮ ನಮನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಸಂಸದ ಕೋಟ ಶ್ರೀನಿವಾಸ್‌ ಪೂಜಾರಿ ಮತ್ತು ಮಾಜಿ ಸಚಿವ ಸುನಿಲ್ ಕುಮಾ‌ರ್ ಈ ಸಂದರ್ಭ ಹುತಾತ್ಮ ಯೋಧನಿಗೆ ಅಂತಿಮ ನಮನ ಸಲ್ಲಿಸಿದರು.

ಬೀಜಾಡಿ ಕಡಲ ತೀರದಲ್ಲಿ ಅನೂಪ್ ಅಂತ್ಯಸಂಸ್ಕಾರ ನಡೆಯಲಿದೆ. ಸಮುದ್ರ ತೀರದ ಸರ್ಕಾರಿ ಜಮೀನಿನಲ್ಲಿ ಇದಕ್ಕಾಗಿ ಸಿದ್ಧತೆ ಮಾಡಲಾಗಿದೆ. ಸಮುದ್ರ ತೀರದಲ್ಲಿ ಅನೂಪ್‌ ಪಾರ್ಥಿವ ಶರೀರಕ್ಕೆ ಅಗ್ನಿಸ್ಪರ್ಶ ಮಾಡಲಾಗುವುದು. ಅಂತಿಮ ವಿಧಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್‌, ಸೇನಾ ಸಿಬ್ಬಂದಿ ಭಾಗಿಯಾಗಲಿದ್ದಾರೆ.

ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ವಿಮಾನ ನಿಲ್ದಾಣಕ್ಕೆ ಭೇಟಿ, ಸೇನಾ ವಿಮಾನದಿಂದ ಪಾರ್ಥೀವ ಶರೀರವನ್ನು ಹೊರಗೆ ತೆಗೆಯುವ ವೇಳೆ ಶವ ಪಟ್ಟಿಗೆಗೆ ಹೆಗಲು ನೀಡಿದರು.

ಮಾಜಿ ಯೋಧರೂ ಆಗಿರುವ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಆನಂದ್ ಸಿ.ಎಲ್. ಅವರೂ ಸೇನಾ ಸಿಬಂದಿಗಳಿಗೆ ಜತೆಯಾದರು.

ಅನೂಪ್‌ ಪೂಜಾರಿ ಮೃತಪಟ್ಟ ಸುದ್ದಿ ಹರಡುತ್ತಿದ್ದಂತೆ ಶಾಸಕ ಕಿರಣ್‌ ಕುಮಾರ್‌ ಕೊಡ್ಗಿ ಸಹಿತ ನೂರಾರು ಜನರು ಮೃತರ ಮನೆಗೆ ತೆರಳಿ ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿದರು.

Publisher: ಕನ್ನಡ ನಾಡು | Kannada Naadu

Login to Give your comment
Powered by