ವಿಶ್ವವಿಖ್ಯಾತ ತಬಲ ಮಾಂತ್ರಿಕ ಉಸ್ತಾದ್ ಝಾಕೀರ್ ಹುಸೇನ್ ಅವರ ನಿಧನಕ್ಕೆ ವಿಧಾನ ಪರಿಷತ್ತಿನಲ್ಲಿ ಡಿ.16 ರಂದು ಸಂತಾಪ ಸೂಚಿಸಲಾಯಿತು.
ಸಭಾಪತಿ ಬಸವರಾಜ ಹೊರಟ್ಟಿ ಅವರು, ಉಸ್ತಾದ್ ಝಾಕೀರ್ ಹುಸೇನ್ ಅವರ ನಿಧನರಾದ ವಿಷಯವನ್ನು ಸದನಕ್ಕೆ ತಿಳಿಸಲು ವಿμÁಧಿಸುತ್ತೇನೆ ಎಂದು ಹೇಳಿ ಸಂತಾಪ ಸೂಚನೆಯ ನಿರ್ಣಯವನ್ನು ಮಂಡಿಸಿದರು.
ವಿಶ್ವವಿಖ್ಯಾತ ತಬಲ ಮಾಂತ್ರಿಕ ಝಾಕೀರ ಹುಸೇನ್ ಅವರು ಡಿಸೆಂಬರ್ 15 ರಂದು ನಿಧನ ಹೊಂದಿರುತ್ತಾರೆ. 1951ರ ಮಾರ್ಚ್ 9 ರಂದು ಮುಂಬೈನಲ್ಲಿ ಜನಿಸಿದ್ದ ಶ್ರೀಯುತರು ಬಾಲ್ಯದಿಂದಲೇ ತಬಲವಾದಕರಾಗಿ ಪ್ರಖ್ಯಾತಿ ಹೊಂದಿದ್ದರು. ತಮ್ಮ 12ನೆಯ ವಯಸ್ಸಿನಲ್ಲಿಯೇ ಪ್ರತಿಷ್ಠಿತ ವೇದಿಕೆಗಳಲ್ಲಿ ಖಾಯಂ ಕಲಾವಿದರಾಗಿದ್ದರು. ತಬಲವಾದಕರಾಗಿ ಅವರ ಗಮನಾರ್ಹ ಕೌಶಲ್ಯಕ್ಕಾಗಿ ಮಾತ್ರವಲ್ಲದೆ ಸಂಯೋಜಕ ಮತ್ತು ನಿರ್ಮಾಪಕರಾಗಿ ಸಂಗೀತ ಕ್ಷೇತ್ರಕ್ಕೆ ಅಪಾರವಾದ ಸೇವೆ ಸಲ್ಲಿಸಿದ್ದ ಶ್ರೀಯುತರು ವಿವಿಧ ಸಂಗೀತ ಶೈಲಿಗಳನ್ನು ಸಂಯೋಜಿಸುವ ಸಾಮಥ್ರ್ಯದಿಂದಾಗಿ ಅಂತಾರಾಷ್ಟ್ರೀಯ ಖ್ಯಾತಿ ಹೊಂದಿದ್ದರು. ಸಂಗೀತದ ಮೂಲಕ ಗಡಿಗಳನ್ನೂ ಮೀರಿ ಜನರ ಹೃದಯಗಳನ್ನು ಬೆಸೆದ ಉಸ್ತಾದ್ ಝಾಕಿರ್ ಹುಸೇನ್ ಅವರು ಭಾರತದ ಶಾಸ್ತ್ರೀಯ ಸಂಗೀತ ಹಾಗೂ ಜಾಗತಿಕ ಕಲೆಗೆ ನೀಡಿದ ಕೊಡುಗೆ ಅಪಾರ. ತಬಲಾ ವಾದನಕ್ಕೆ ಅಂತಾರಾಷ್ಟ್ರೀಯ ಮನ್ನಣೆ ಗಳಿಸಿಕೊಟ್ಟಿದ್ದ ಶ್ರೀಯುತರು ಆರು ದಶಕಗಳ ಕಾಲ ತಬಲಾ ಪ್ರಯಾಣದಲ್ಲಿ ವಿಶ್ವದಾದ್ಯಂತ ಸಾವಿರಾರು ಸಂಗೀತ ಕಚೇರಿಗಳನ್ನು ನೀಡಿದ್ದಾರೆ. ಶ್ರೀಯುತರು ತಾಜ್ ಮಹಲ್ ಮುಂದೆ 'ವಾಹ್ ತಾಜ್ ಬೋಲಿಯೇ' ಎನ್ನುತ್ತ ತಬಲಾ ನುಡಿಸಿದ್ದು ವ್ಯಾಪಕ ಪ್ರಶಂಸೆಗೆ ಪಾತ್ರವಾಗಿತ್ತು.
ಶ್ರೀಯುತರು 1988ರಲ್ಲಿ ಪದ್ಮಶ್ರೀ, 2002ರಲ್ಲಿ ಪದ್ಮಭೂಷಣ ಮತ್ತು 2023ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಐದು ಗ್ರ್ಯಾಮಿ ಪ್ರಶಸ್ತಿಗಳಲ್ಲದೆ ಇತರೆ ಹತ್ತು ಹಲವಾರು ರಾಷ್ಟ್ರೀಯ, ಅಂತರರಾಷ್ಟ್ರೀಯ ಪ್ರತಿಷ್ಠಿತ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದರು ಎಂದು ಸಭಾಪತಿ ಅವರು ಸಂತಾಪ ಸೂಚನೆಯ ನಿರ್ಣಯವನ್ನು ಸದನಕ್ಕೆ ತಿಳಿಸಿದರು.
ಸಭಾ ನಾಯಕರು ಮತ್ತು ಸಚಿವರಾದ ಎನ್.ಎಸ್. ಬೋಸರಾಜು ಹಾಗೂ ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ ಅವರು ಸಂತಾಪ ಸೂಚನಾ ನಿರ್ಣಯದ ಮೇಲೆ ಮಾತನಾಡಿ, ಝಾಕೀರ್ ಹುಸೇನ್ ಅವರ ನಿಧನದಿಂದಾಗಿ ರಾಷ್ಟ್ರವು ಜಾಗತಿಕ ಸಂಗೀತ ಸಾಮರಸ್ಯದ ಸರ್ವಕಾಲಿಕ ಶ್ರೇಷ್ಠ ತಬಲವಾದಕರೊಬ್ಬರನ್ನು ಕಳೆದುಕೊಂಡಂತಾಗಿದೆ. ಮೃತರ ಆತ್ಮಕ್ಕೆ ಸದ್ಗತಿಯನ್ನು ಕೋರುತ್ತಾ, ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗಕ್ಕೆ ಪರಮಾತ್ಮನು ಕರುಣಿಸಲೆಂದು ಪ್ರಾರ್ಥಿಸುವೆ ಎಂದು ತಿಳಿಸಿದರು. ಮೃತರ ಗೌರವಾರ್ಥ ಮಾನ್ಯ ಸದಸ್ಯರು ಎದ್ದು ನಿಂತು ಒಂದು ನಿಮಿಷ ಮೌನ ಆಚರಿಸಿ ಸಂತಾಪ ಸಲ್ಲಿಸಿದರು.
Publisher: ಕನ್ನಡ ನಾಡು | Kannada Naadu