ಕನ್ನಡ ನಾಡು | Kannada Naadu

ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಿಗೆ ವಿವಿಧ ನಾಯಕರಿಂದ ಸಂತಾಪ

10 Dec, 2024

ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅಗಲಿಕೆಗೆ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಸಂತಾಪ

 

ರಾಜ್ಯ ರಾಜಕಾರಣದಲ್ಲಿ ಮೇರು ಪರ್ವತದಂತೆ ಬೆಳೆದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ರಾಜಕಾರಣದಲ್ಲಿ ಎಲ್ಲಾ ನಾಯಕರನ್ನು ಪ್ರೀತಿ ವಾತ್ಸಲ್ಯದಿಂದ ನೋಡುತ್ತಿದ್ದವರು. ದೇಶದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿರುವ ಎಸ್.ಎಂ.ಕೃಷ್ಣ ಅವರು ನಾನು ಕೇಂದ್ರದಲ್ಲಿ ಸಚಿವನಿದ್ದಾಗ, ಅವರ ಸಲಹೆ ಸೂಚನೆಗಳನ್ನು ಪಡೆಯುತ್ತಿದ್ದೆ. ಒಬ್ಬ ಅತ್ಯುತ್ತಮ ಶಾಂತಿಪ್ರಿಯ ರಾಜಕಾರಣಿ ಎಸ್.ಎಂ.ಕೃಷ್ಣ ಅವರ ಅಗಲಿಕೆಯಿಂದ ತುಂಬಾ ದುಃಖವಾಗಿದ್ದು, ಅವರ ಆತ್ಮಕ್ಕೆ ಶಾಂತಿಯನ್ನು ಕೋರುತ್ತೇನೆ ಎಂದು ಸಚಿವರು ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

---------------------------------------------------------------------------------------------------------------------

ಹಿರಿಯ ಮುತ್ಸದ್ದಿ ಎಸ್.ಎಂ.ಕೃಷ್ಣ ಅವರ ನಿಧನಕ್ಕೆ ಸಚಿವ ತಂಗಡಗಿ ಸಂತಾಪ

 

ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ  ಅವರ ನಿಧನಕ್ಕೆ ಕನ್ನಡ ಮತ್ತು ಸಂಸ್ಕøತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಎಸ್.ಎಂ.ಕೃಷ್ಣ ಅವರ ಅಗಲಿಕೆ ತೀವ್ರ ನೋವು ತರಿಸಿದ್ದು, ದೇಶ ಒಬ್ಬ ಧೀಮಂತ ನಾಯಕನನ್ನು ನಾವು ಕಳೆದುಕೊಂಡಿದೆ.

ರಾಜ್ಯದ ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿ, ಸ್ಪೀಕರ್ ಆಗಿ, ಕೇಂದ್ರ ಸಚಿವರಾಗಿ ಹಾಗೂ ರಾಜ್ಯಪಾಲರಾಗಿ ಎಸ್.ಎಂ.ಕೃಷ್ಣ ಅವರು ನೀಡಿರುವ ಕೊಡುಗೆ ಅಪಾರವಾದದ್ದು. ಕರ್ನಾಟಕ ಅಭಿವೃದ್ಧಿಯ ವಿಚಾರದಲ್ಲಿ ಎಸ್.ಎಂ.ಕೃಷ್ಣ ಅವರು ತಮ್ಮದೇ ಆದ ದೂರದೃಷ್ಟಿಯನ್ನು ಹೊಂದಿದ್ದರು. ಬೆಂಗಳೂರಿನ ಅಭಿವೃದ್ಧಿಯಲ್ಲಿ ಮಹತ್ತರ ಕೊಡುಗೆ ನೀಡಿದ್ದ ಎಸ್.ಎಂ.ಕೃಷ್ಣ ಅವರಿಂದಲೇ ಬೆಂಗಳೂರಿಗೆ ವಿಶ್ವಮಟ್ಟದಲ್ಲಿ ಸಿಲಿಕಾನ್ ಸಿಟಿ, ಐಟಿ- ಬಿಟಿ ಸಿಟಿ ಎಂಬ ಹೆಸರು ಬಂದಿತ್ತು. ತಮ್ಮ ಅನನ್ಯವಾದ ಕೊಡುಗೆಗೆ ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರು. ಅವರ ಬದುಕು ಎಲ್ಲರಿಗೂ ಸ್ಪೂರ್ತಿ.

ಹಿರಿಯ ಮುತ್ಸದ್ದಿ ರಾಜಕಾರಣಿಯನ್ನು ನಾವು ಕಳೆದುಕೊಂಡಿದ್ದು, ಕರ್ನಾಟಕಕ್ಕೆ ತುಂಬಲಾರದ ನಷ್ಟ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬ ಹಾಗೂ ಬಂಧು ಬಳಗಕ್ಕೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ಸಚಿವರು ಸಂತಾಪದಲ್ಲಿ ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ಸಚಿವ ಎಸ್.ಎಂ. ಕೃಷ್ಣ ನಿಧನಕ್ಕೆ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಷಾ ಖಾನಂ ಸಂತಾಪ

ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ಸಚಿವ ಎಸ್. ಎಂ. ಕೃಷ್ಣ ಅವರ ನಿಧನಕ್ಕೆ ಕರ್ನಾಟಕ ಮಾಧ್ಯಮ ಆಕಾಡೆಮಿ ಅಧ್ಯಕ್ಷರಾದ ಶ್ರೀಮತಿ ಆಯೇಷಾ ಖಾನಂ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ತಮ್ಮ ಮಾದ್ಯಮ ವೃತ್ತಿಯ ಆರಂಭದ ದಿನಗಳಲ್ಲಿ ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದರು ಎಂದು ಸ್ಮರಿಸಿದ ಅವರು, ಕೃಷ್ಣ ಅವರು ತಮಗೆ ಎದುರಾದ ಕಠಿಣ ಸವಾಲುಗಳನ್ನು ಅತ್ಯಂತ ತಾಳ್ಮೆಯಿಂದ, ಪ್ರಬುದ್ಧತೆಯಿಂದ ಎದುರಿಸಿದರು ಎಂದು ಸ್ಮರಿಸಿಕೊಂಡಿದ್ದಾರೆ.


ಇದರೊಂದಿಗೆ ರಾಜ್ಯದ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಿದ್ದರಲ್ಲದೆ, ರಾಜ್ಯವು ಇಂದು ಐಟಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರಲು ಅವರ ಕೊಡುಗೆ ಅತಿ ಮುಖ್ಯವಾದುದು ಎಂದು ತಿಳಿಸಿದ್ದಾರೆ.

ವಿದೇಶಾಂಗ ಸಚಿವರಾಗಿಯೂ ಅವರು ತಮ್ಮ ಛಾಪು ಮೂಡಿಸಿದ್ದರು. ಭಗವಂತನು ಅವರ ಆತ್ಮಕ್ಕೆ ಶಾಂತಿಯನ್ನು ನೀಡಲಿ, ಅವರ ಕುಟುಂಬದವರಿಗೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ.


ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ನಿಧನಕ್ಕೆ ಗೃಹ ಸಚಿವ ಪರಮೇಶ್ವರ ಸಂತಾಪ

ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅಗಲಿಕೆಗೆ ಗೃಹ ಸಚಿವರಾದ ಡಾ. ಜಿ.ಪರಮೇಶ್ವರ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಎಸ್.ಎಂ.ಕೃಷ್ಣ ಅವರು ಕರ್ನಾಟಕ ಕಂಡಂತ ಮೇರು ವ್ಯಕ್ತಿತ್ವದ ಅಪ್ರತಿಮಾ ರಾಜಕಾರಣಿ, ದೂರದೃಷ್ಟಿಯುಳ್ಳ ಮುತ್ಸದ್ಧಿ ನಾಯಕನನ್ನು ಕಳೆದುಕೊಂಡಿರುವುದು ಅತೀವ ನೋವನ್ನುಂಟು ಮಾಡಿದೆ. ಅವರ ಅಗಲಿಕೆ ರಾಜ್ಯಕ್ಕೆ ತುಂಬಲಾಗದ ನಷ್ಟ.

ರಾಜ್ಯದ ಉಪಮುಖ್ಯಮಂತ್ರಿಗಳಾಗಿ, ಮುಖ್ಯಮಂತ್ರಿಗಳಾಗಿ, ಮಹಾರಾಷ್ಟ್ರ ರಾಜ್ಯಪಾಲರಾಗಿ, ಕೇಂದ್ರದ ಸಚಿವರಾಗಿ ಅವರು ಕೈಗೊಂಡ ಜನಪರ ಕಾರ್ಯಗಳು ಅನನ್ಯ. ಐಟಿ-ಬಿಟಿ ಕ್ಷೇತ್ರದಲ್ಲಿ ಕರ್ನಾಟಕವನ್ನು, ಪ್ರಮುಖವಾಗಿ ಬೆಂಗಳೂರು ನಗರವನ್ನು ವಿಶ್ವಕ್ಕೆ ಪರಿಚಯಿಸಿದರು. ಈ ಮೂಲಕ ರಾಜ್ಯದ ಲಕ್ಷಾಂತರ ಯುವಕರಿಗೆ ಉದ್ಯೋಗ ಕಲ್ಪಿಸಿದರು. ರಾಜ್ಯದ ಅಭಿವೃದ್ಧಿಯ ಬಗ್ಗೆ ದೂರದೃಷ್ಟಿ ಹೊಂದಿದ್ದ ನಾಯಕರಾಗಿದ್ದರು. ಅವರ ರಾಜಕೀಯ ಜೀವನ ನನಗೆ ಅನುಕರಣೀಯ.

ಮೃತರ ಆತ್ಮಕ್ಕೆ ಚಿರ ಶಾಂತಿ ಕೊರುತ್ತೇನೆ. ಅವರ ಕುಟುಂಬ ವರ್ಗ, ಅಭಿಮಾನಿಗಳು, ಆಪ್ತರಿಗೆ ದುಃಖ ಭರಿಸುವ ಶಕ್ತಿ ಭಗವಂತನು ನೀಡಲಿ ಎಂದು ಸಚಿವರು ಸಂತಾಪದಲ್ಲಿ ಹೇಳಿದ್ದಾರೆ.

-------------------------------------------------------------------------------------------------------------------------
ಶಿಸ್ತು ಬದ್ದ ರಾಜಕಾರಣಿ ಎಸ್.ಎಂ ಕೆ: ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್

 

ಮಾಜಿ ಮುಖ್ಯಮಂತ್ರಿಗಳು, ಮಾಜಿ ಕೇಂದ್ರ ಸಚಿವರು ಹಾಗೂ ರಾಜ್ಯದ ಮುತ್ಸದ್ದಿ ರಾಜಕಾರಣಿ ಎಸ್.ಎಂ.ಕೃಷ್ಣ ಅವರ ನಿಧನದಿಂದಾಗಿ ನಾಡಿನ ಜನತೆ ಶಿಸ್ತು ಬದ್ಧ ರಾಜಕಾರಣಿಯೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದು ಉನ್ನತ ಶಿಕ್ಷಣ ಸಚಿವರಾದ ಡಾ. ಎಂ.ಸಿ. ಸುಧಾಕರ್ ಅವರು ಕಂಬನಿ ಮಿಡಿದಿದ್ದಾರೆ.

ರಾಜಕೀಯದ ಜೊತೆಗೆ ಕಲೆ, ಸಾಹಿತ್ಯ, ಕ್ರೀಡೆ ಗಳಲ್ಲೂ ಅತ್ಯಂತ ಆಸಕ್ತರಾಗಿದ್ದ ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣ ಅವರು ಯುವರಾಜಕಾರಣಿಗಳಿಗೆ ಆದರ್ಶಪ್ರಾಯರು.

ರಾಜ್ಯದ ಮುಖ್ಯಮಂತ್ರಿ ಆಗಿದ್ದಾಗ ಅವರು ಸಲ್ಲಿಸಿದ ಸೇವೆಯಿಂದಾಗಿ ಬೆಂಗಳೂರು ಇಂದು ಐಟಿಬಿಟಿ ಸಿಟಿಯಾಗಿ ಬೃಹದಾಕಾರವಾಗಿ ಬೆಳೆಯಲು ಸಾಧ್ಯವಾಗಿದೆ. ಸಾಮಾಜಿಕ ಕಳಕಳಿ, ಜಾಗತಿಕ ಮಟ್ಟದಲ್ಲಿ ಅಭಿವೃದ್ಧಿಯ ದೂರ ದೃಷ್ಟಿ ಹಾಗೂ ಕಟ್ಟುನಿಟ್ಟಿನ ಆಡಳಿತ ಶೈಲಿ ನಮ್ಮಂತವರಿಗೆ ಸದಾ ಪ್ರೇರೇಪಣೆ ನೀಡುವಂತದ್ದು ಎಂದು ಡಾ. ಎಂ.ಸಿ.ಸುಧಾಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ರಾಜ್ಯ ಒಬ್ಬ ಧೀಮಂತ ಮುಖಂಡರನ್ನು ಕಳೆದುಕೊಂಡಿದೆ ಈ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ಭಗವಂತನು ಆತ್ಮಸ್ಥೈರ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಸಚಿವರು ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದರು.

-------------------------------------------------------------------------------------------------------------------------------


ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಎಂ.ಕೃಷ್ಣ ಅವರಿಗೆ ಸಂತಾಪ ಸೂಚಿಸಿ ಆಡಿದ ಮಾತುಗಳ ಹೈಲೈಟ್ಸ್

 

ಎಸ್.ಎಂ.ಕೃಷ್ಣ ಅವರು, ಮುತ್ಸದ್ದಿ, ದೂರದೃಷ್ಟಿ ಉಳ್ಳವರಾಗಿದ್ದರು. ದೀರ್ಘಕಾಲ ರಾಜಕಾರಣ ಮಾಡಿದ್ದರು.

ನಾನು ವಿದ್ಯಾರ್ಥಿ ಆಗಿದ್ದಾಗ ಎಸ್.ಎಂ.ಕೃಷ್ಣ ಅವರು ಕರೆದಿದ್ದ ಪ್ರಜಾ ಸೋಷಿಯಲಿಸ್ಟ್ ಪಾರ್ಟಿಯ ಸಭೆಯಲ್ಲಿ ಭಾಗವಹಿಸಿದ್ದೆ. ಬಳಿಕ ನಾನು ಲೋಹಿಯಾ ಅವರ ಸಮಾಜವಾದಿ ಪಕ್ಷ ಸೇರ್ಪಡೆಯಾದೆ.

ಎಸ್.ಎಂ.ಕೃಷ್ಣ ಅವರು, 1962 ರಲ್ಲೇ ಸ್ವತಂತ್ರವಾಗಿ ವಿಧಾನಸಭೆಗೆ ಸ್ಪರ್ಧಿಸಿದ್ದರು. ವಿಧಾನಸಭೆ, ವಿಧಾನ ಪರಿಷತ್, ರಾಜ್ಯಸಭೆ, ಲೋಕಸಭೆ ನಾಲ್ಕೂ ಸದನಗಳ ಸದಸ್ಯರೂ ಆಗಿದ್ದು, ರಾಜ್ಯದ ಮುಖ್ಯಮಂತ್ರಿ, ವಿಧಾನಸಭೆ ಸ್ಪೀಕರ್, ಕೇಂದ್ರ ಸಚಿವರು ಹಾಗೂ ರಾಜ್ಯಪಾಲರೂ ಆಗಿದ್ದ ಅಪರೂಪದ ರಾಜಕಾರಣಿ.

ಎಸ್.ಎಂ.ಕೃಷ್ಣ ಅವರು ಮಹಾರಾಷ್ಟ್ರ ರಾಜ್ಯಪಾಲರಾಗಿದ್ದಾಗಲೇ ನಾನು ಕಾಂಗ್ರೆಸ್ ಸೇರಿದ್ದು. ಅವರು ರಾಜ್ಯಪಾಲರಾಗಿದ್ದಾಗ ನಾನು ಅವರನ್ನು ಭೇಟಿಯಾಗಿ, ನಾನು ಕಾಂಗ್ರೆಸ್ ಸೇರುವ ತೀರ್ಮಾನವನ್ನು ಅವರಿಗೆ ತಿಳಿಸಿದೆ. ಅವರು ನನ್ನ ತೀರ್ಮಾನವನ್ನು ಸ್ವಾಗತಿಸಿದ್ದರು.

ಒಳ್ಳೆ ಸಂಸದೀಯ ಪಟು, ಎಲ್ಲರನ್ನೂ ಗೌರವದಿಂದ ಕಾಣುತ್ತಿದ್ದರು. ಯಾವತ್ತೂ ದ್ವೇಷದ ರಾಜಕಾರಣ ಮಾಡಿದವರಲ್ಲ. ಅವರ ಕಾಲದಲ್ಲೇ ಡಾ.ರಾಜ್ ಕುಮಾರ್ ಅವರ ಅಪಹರಣ ಆಗಿ ಆ ಸಂದರ್ಭದ ದೊಡ್ಡ ಸವಾಲನ್ನು ಎದುರಿಸಿದ್ದರು. ಅದನ್ನು ನಿಭಾಯಿಸಿದ್ದರು.

ಬೆಂಗಳೂರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಸಿಂಗಾಪುರದಂತೆ ಮಾಡಬೇಕು ಎನ್ನುವ ಉದ್ದೇಶ ಹೊಂದಿದ್ದರು. ಬೆಂಗಳೂರಿಗೆ ಸಿಲಿಕಾನ್ ವ್ಯಾಲಿ ಆಫ್ ಇಂಡಿಯಾ ಎನ್ನುವ ಹೆಗ್ಗಳಿಕೆ ಬರಲು ಎಸ್.ಎಂ.ಕೃಷ್ಣ ಅವರ ಕೊಡುಗೆ ಅಪಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

Publisher: ಕನ್ನಡ ನಾಡು | Kannada Naadu

Login to Give your comment
Powered by