ಕನ್ನಡ ನಾಡು | Kannada Naadu

ಹಸಿದ ಹೊಟ್ಟೆಯಲ್ಲಿ ಕಲಿಕೆ ಕಷ್ಟʼ ಎಂದು ಹೇಳಿದ್ದರು ಎಸ್‌.ಎಮ್‌.ಕೃಷ್ಣ

10 Dec, 2024

 

 

ಅವರ ಸರಳತೆ ಎಂಥವರನ್ನಾದರೂ ಗಮನ ಸೆಳೆಯುತ್ತಿತ್ತು. ಅವರು ತನ್ನ ಜೀವನದಲ್ಲಿ ಅಳವಿಡಿಸಿಕೊಂಡು ಬಂದ ಸಿಸ್ತು ಎಲ್ಲರಿಗೂ ಮಾದರಿ.. ನಾಡು ಕಂಡ ಸೃಜನಶೀಲ, ಸರಳ ಸಜ್ಜನಿಕೆಯ, ಸುರಾಜ್ಯ ನೀಡಿದ, ಉತ್ತಮ ಆಡಳಿತ ವ್ಯವಸ್ಥೆಗೆ ಹೆಸರಾಗಿ, ಹಲವಾರು ಜನಪರ ಯೋಜನೆಗಳನ್ನು ನೀಡಿರುವ ನಾಡಿನ ಮಾಜಿಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ಇನ್ನೂ ಮುಂದೆ ನೆನಪು ಮಾತ್ರ ಎಂದಾಗ ಅವರ ಜೊತೆಗಿನ ಒಡನಾಟ ಒಮ್ಮೆ ನೆನಪಾಗದೆ ಇರಲಾರದು. 
                ಒಂದು ದಿನ ಅದೇನೋ ಕಾರಣಕ್ಕೆ ಕೃಷ್ಣ ಅವರು ಕಾರವಾರಕ್ಕೆ ಬೇಟಿ ನೀಡಿದ ಸಂದರ್ಭ.  ಕಾರವಾರದ ಕಡಲ ತೀರದಲ್ಲಿಇರದ್ದ ಐಬಿಯಲ್ಲಿ ಕುಳಿತು ಚಾಹಾ ಹಿರುತ್ತ, ನಮ್ಮ ಜೊತೆಗೆ ಮಾತಿಗಿಳದ ಎಸ್‌.ಎಮ್‌. ಕೃಷ್ಣ ಅವರು ಹೇಳಿದ ಮಾತು  ʻʻಹಸಿದ ಹೊಟ್ಟೆಯಲ್ಲಿ ಕಲಿಕೆ ಕಷ್ಟʼʼ ಎಂದು ಯಾವುದೋ ಮಾತಿಗೆ ಈ ಮಾತನ್ನು ಹೇಳುತ್ತಿದ್ದಾರೆ ಎಂದು ಮೊದಲು ಅಂದುಕೊಂಡಿದ್ದೆ. ಆದರೆ ಅದರ ಹಿಂದಿನ ದೊಡ್ಡ ಪ್ಲಾನ್‌ ಗೊತ್ತಾಗಿದ್ದೆ ಕೆಲವ ತಿಂಗಳು ಕಳೆದ ಮೇಲೆ. ಅವರ ಕಾಲದಲ್ಲಿ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ ಜಾರಿಗೆ ತಂದಿದ್ದು, ಅದಕ್ಕೂ ಮುನ್ನ ತನ್ನ ಕನಸನ್ನು ನಮ್ಮೆಲ್ಲರ ಮುಂದೆ ಹಂಚಿಕೊಂಡಿದ್ದು ನಾವು ಯಾರೂ ಮರೆಯಲು ಸಾಧ್ಯವಿಲ್ಲ.  ಅದಕ್ಕೆ ಅವರು ಹೇಳಿದ್ದು ʻಹಸಿದ ಹೊಟ್ಟೆಯಲ್ಲಿ ಕಲಿಕೆ ಕಷ್ಟʼ ಎನ್ನುವುದು ಮನವರಿಕೆ ಮಾಡಿಕೊಂಡು ಈ ಮಹತ್ವದ ಯೋಜನೆ ಜಾರಿಗೆ ತಂದಿದ್ದರು.  ಜೊತೆಗೆ ನಾನು ಕಂಡಂತೆ ಕಾವೇರಿ ,ಕೃಷ್ಣಾ ವಿಚಾರದಲ್ಲಿ ಅವರು ತೆಗೆದುಕೊಂಡ ನಿಲುವುಗಳು, ಅದರಲ್ಲಿಯೂ ಕೆಲವು ವಿಚಾರಗಳಲ್ಲಿ ಇಡೀ ವ್ಯವಸ್ಥೆಯನ್ನೇ ಎದುರು ಹಾಕಿಕೊಂಡು ರೀತಿ , ರೈತಪರ ಹೋರಾಟ, ಜ್ಞಾನಾಧಾರಿತ ಅಭಿವೃದ್ಧಿಗೆ ಎಸ್.ಎಮ್.ಕೃಷ್ಣ ಅವರು ಕೊಟ್ಟಿರು ಕೊಡುಗೆ ಅಪಾರವಾಗಿದ್ದು. 
            ಸೋಮನಹಳ್ಳಿ ಮಲ್ಲಯ್ಯನವರ ಮಗ ಕೃಷ್ಣ. 1932ರಲ್ಲಿ ಹುಟ್ಟಿದ ಕೃಷ್ಣ ಅವರು  1999 ರಿಂದ 2004ರವರೆಗೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿ ಮಾಡಿದ ಕೆಲಸಗಳನ್ನು ಮರೆಯಲು ಸಾಧ್ಯವೇ ಇಲ್ಲ.  ಬೆಂಗಳೂರಿನಲ್ಲಿ ಈ ಪ್ರಮಾಣದಲ್ಲಿ ಐ.ಟಿ, ಬಿಟಿ ಕೈಗಾರಿಕೆಗಳು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿಯಾಗಲು ಮೂಲ ಬೀಜಾಂಕುರ ಮಾಡಿದ್ದೆ ಎಸ್‌ಎಮ್‌ಕೆ ಅವರು.  ಎಲ್ಲ ರಂಗದಲ್ಲೂ ಕೂಡ ಉತ್ತಮ ಆಡಳಿತ, ಉತ್ತಮ ಕಾರ್ಯಕ್ರಮಗಳು,  ನಾಡಿನ ಪರ ಗಟ್ಟಿಯಾದ ನಿಲುವು, ಇವೆಲ್ಲವೂ ಸಮ್ಮಿಳಿತಗೊಂಡಿರುವುದು ಎಸ್. ಎಮ್. ಕೃಷ್ಣ ಅವರಗೆ ಪದ್ಮವಿಭೂಷಣ ಪ್ರಶಸ್ತಿ ನೀಡಿರುವುದು  ಅವರ ಸಾಧನೆ ಮತ್ತು ಅವರಲ್ಲಿ ಗುಪ್ತವಾಗಿ ಸೇರಿಕೊಂಡ  ಮುತ್ಸದ್ದಿ ರಾಜಕಾರಣಿಯನ್ನು ಎತ್ತಿ ತೋರಿಸುತ್ತದೆ.
              ಮಹಾರಾಷ್ಟ್ರದ 19 ನೇ ರಾಜ್ಯಪಾಲರಾಗಿದ್ದ ಇವರ ಕಾರ್ಯದಕ್ಷತೆ ಮರಾಠಿ ನೆಲದ ಜನರು ಮೆಚ್ಚಿಕೊಂಡಿದ್ದರು. ಕೇಂದ್ರ ವಿದೇಶಾಂಗ ಸಚಿವರಾಗಿಯೂ ಸಹ ಕಾರ್ಯ ನಿರ್ವಹಿಸಿದ್ದಾರೆ.  ನಮ್ಮ ರಾಜ್ಯದಲ್ಲಿ ಆಗಿರುವ ಮುಖ್ಯಮಂತ್ರಿಗಳ ಪೈಕಿ ಹೆಚ್ಚು ಸುಶಿಕ್ಷಿತ ಮುಖ್ಯಮಂತ್ರಿ ಎನ್ನುವ ಹೆಗ್ಗಳಿಕೆಗೆ ಪ್ರಾತ್ರರಾದವರೆ ಎಸ್‌.ಎಮ್‌.ಕೃಷ್ಣಅವರು. ಇವರು ಬಹುಕಾಲ ಕಾಂಗ್ರೆಸ್ ಪಕ್ಷದ ಸದಸ್ಯರಾದ ಇವರು ಕರ್ನಾಟಕದ ೧೬ ನೇ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಮುಂದೆ ದಿನಗಳಲ್ಲಿ ರಾಜಕೀಯ ವಿಪ್ಲವಗಳಿಗೆ ಸಿಲುಕಿ ಮಾರ್ಚ್ 2017 ರಂದು ಭಾರತೀಯ ಜನತಾ ಪಕ್ಷದ ಸದಸ್ಯತ್ವವನ್ನು ಪಡೆದಿದ್ದರು. 1989 ರಿಂದ ಜನವರಿ 1993ರವರೆಗೆ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಆಗಿಸೇವೆ ಸಲ್ಲಿಸಿದ ಮಾಹಾನುಭಾವರು. 
               ತಮ್ಮ ಆಡಳಿತದ ಕಾಲದಲ್ಲಿ ಹತ್ತು ಹಲವು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಜನರಿಗೆ ನೀಡಿದ ಕೃಷ್ಣ ಅವರ ಜನಪರ ಆಡಳಿತಕ್ಕೆ ಹೆಸರಾಗಿದ್ದರು. ಎಲ್ಲಾ ವರ್ಗಗಳಿಗೆ ಉತ್ತಮ ಯೋಜನೆಗಳನ್ನು ರೂಪಿಸಿದ್ದರು. ಅವರ ಕಾಲದಲ್ಲಿಯೇ ಯಶಸ್ವಿನಿ ಯೋಜನೆ  ಅಸ್ಥಿತ್ವಕ್ಕೆ ಬಂದಿದ್ದು.  ಆಗಿನ್ನೂ ನಮ್ಮ ದೇಶದಲ್ಲಿ  ಆರೋಗ್ಯ ವಿಮೆ ಎನ್ನುವುದು ಪರಿಚಯ ಆಗದ ಕಾಲದಲ್ಲಿ  ವೈದ್ಯಾಧಿಕಾರಿಗಳನ್ನು ಕರೆಸಿ ಯೋಜನೆಯನ್ನು ರೈತರಿಗಾಗಿ ನೀಡಿದ್ದನ್ನು ಸ್ಮರಿಸಿಕೊಳ್ಳಬೇಕು.
             ತಂದೆ ಮಲ್ಲಯ್ಯನವರು ರಾಜಕೀಯ ಹಿನ್ನೆಲೆಯುಳ್ಳವರು. ಅವರ ಮಾರ್ಗದರ್ಶನದಲ್ಲಿಯೇ ರಾಜಕೀಯಕ್ಕೆ ಬಂದ ಕೃಷ್ಣ ಅವರು ಮೈಸೂರು ಮಹಾರಾಜ ಕಾಲೇಜಿನಲ್ಲಿ ಪದವೀಧರರಾದ ನಂತರ ಬೆಂಗಳೂರಿನ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಓದಿದರು. ಇದರ ನಂತರ ಅಮೆರಿಕದ ಟೆಕ್ಸಸ್ ರಾಜ್ಯದಲ್ಲಿರುವ ಸದರ್ನ್ ಮೆಥಡಿಸ್ಟ್ ವಿಶ್ವವಿದ್ಯಾಲಯದಲ್ಲಿ ಓದಿದ್ದರು. ನಂತರ ವಾಷಿಂಗ್ಟನ್ ನಲ್ಲಿರುವ ಜಾರ್ಜ್ ವಾಷಿಂಗ್ಟನ್ ವಿಶ್ವವಿದ್ಯಾಲಯದಲ್ಲಿ ಪ್ರತಿಷ್ಠಿತ ಫುಲ್‍ಬ್ರೈಟ್ ವಿದ್ಯಾರ್ಥಿವೇತನವನ್ನು ಪಡೆದ ಕೆಲವೆ ಭಾರತಿಯರಲ್ಲಿ ಇವರು ಒಬ್ಬರು. ತನ್ನ ಶಿಕ್ಷಣದ ನಂತರ ಭಾರತಕ್ಕೆ ಮರಳಿದ ಅವರು ಬೆಂಗಳೂರಿನ ರೇಣುಕಾಚಾರ್ಯ ಕಾಲೇಜಿನಲ್ಲಿ ಸ್ವಲ್ಪ ಕಾಲ ಅಂತಾರಾಷ್ಟ್ರೀಯ ನ್ಯಾಯದ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು. 
             1962ರಲ್ಲಿ ಚುನಾವಣಾ ಕಣ ಇಳಿದು ಮೊದಲ ಬಾರಿಗೆ ವಿಧಾನ ಸಭೆಗೆ ಪ್ರವೇಶ ಮಾಡಿದರು.  1968ರಲ್ಲಿ ಲೋಕಸಭೆಗೆ ಚುನಾಯಿತರಾದರು. 1971ರಲ್ಲಿ ಅಲ್ಲಿಗೆ ಮರು ಚುನಾಯಿತರಾಗಿ ಮತ್ತೆ 1972ರಲ್ಲಿ ಕರ್ನಾಟಕ ವಿಧಾನ ಪರಿಷತ್ತಿಗೆ ಚುನಾಯಿತರಾದರು. ಇದೇ ಸಮಯದಲ್ಲಿ ವಾಣಿಜ್ಯ, ಉದ್ಯಮ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದರು. 1983ರಲ್ಲು ಉದ್ಯಮ ಖಾತೆ ಮತ್ತು 1984 ರಲ್ಲಿ ವಿತ್ತ ಖಾತೆಯ ಸಚಿವರಾದರು. 1989 ರಿಂದ 1992ರ ವರೆಗೆ ವಿಧಾನಸಭೆಯ ಸ್ಪೀಕರ್ ಆಗಿ ನೇಮಿತರಾದರು. 1992 ರಿಂದ 1994ರ ವರೆಗೆ ಕರ್ನಾಟಕದ ಉಪ-ಮುಖ್ಯಮಂತ್ರಿಗಳಾದರು. 1996ರಲ್ಲಿ ರಾಜ್ಯಸಭೆಗೆ ನೇಮಕಗೊಂಡ ಕೃಷ್ಣ, 1999 ರಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದರು. 1999ರಿಂದಲೇ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿಯ ಅಧ್ಯಕ್ಷರಾಗಿದ್ದರು. ವಿಶ್ವಸಂಸ್ಥೆಯಲ್ಲಿ ಹಾಗೂ ಕಾಮನ್ ವೆಲ್ತ್ ಒಕ್ಕೂಟದಲ್ಲಿ ಒಮ್ಮೆ ಸೇರಿದಂತೆ ವಿದೇಶಗಳಲ್ಲಿ ಎರಡು ಬಾರಿ ಭಾರತವನ್ನು ಪ್ರತಿನಿಧಿಸಿದ್ದರು.   2017 ರ ಜನವರಿ 28 ರಂದು ಎಸ್.ಎಂ.ಕೃಷ್ಣಅವರು  ಅಧಿಕೃತವಾಗಿ ಕಾಂಗ್ರೆಸ್ ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಘೋಷಣೆ ಮಾಡಿದರು. ಮುಂದೆ ಮಾರ್ಚ್ 2017 ರಂದು ಭಾರತೀಯ ಜನತಾ ಪಕ್ಷದ ಸದಸ್ಯತ್ವ ಪಡೆದರು. ಮುಂದೆ 2023ರ ಸಾಲಿನ ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾದರು.


             ಕರುನಾರು ಕಂಡ ಮುಸ್ಸದಿ ರಾಜಕಾರಣಿ ಅಸ್ಥಂಗತವಾದ ಸುದ್ದಿ ತಿಳಿಯುತ್ತಿದ್ದಂತೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಕನ್ನಡಲ್ಲಿ ಟ್ವಿಟ್‌ ಮಾಡಿ, ಎಸ್.ಎಂ ಕೃಷ್ಣ ಅವರು ಅಸಾಧಾರಣ ನಾಯಕರಾಗಿದ್ದರು, ಸಮಾಜದ ಎಲ್ಲ ವರ್ಗಗಳ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು. ಅವರು ಯಾವಾಗಲೂ ಇತರರ ಜೀವನವನ್ನು ಸುಧಾರಿಸಲು ದಣಿವರಿಯದೆ ಶ್ರಮಿಸಿದರು. ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅವರು ವಿಶೇಷವಾಗಿ ಮೂಲಸೌಕರ್ಯ ಅಭಿವೃದ್ಧಿಗೆ ಗಮನಹರಿಸಿದ್ದನ್ನು ಸ್ಮರಿಸಿಕೊಳ್ಳಲಾಗುತ್ತದೆ.  ಎಸ್.ಎಂ ಕೃಷ್ಣ ಅವರು ಸಮೃದ್ಧ ಓದುಗ ಮತ್ತು ಚಿಂತಕರೂ ಆಗಿದ್ದರು ಎಂದು ಕೊಂಡಾಡಿದ್ದಾರೆ. ಜೊತೆಗೆ ರಾಜ್ಯ ಹಾಗೂ ಕೇಂದ್ರದ ನಾಯಕರು ಪಕ್ಷ ಬೇದ ಮರೆತು ಎಸ್‌. ಕೃಷ್ಣ ಅವರಿಗೆ ಶ್ರದ್ಧಾಂಜಲಿಯನ್ನು ಸಲ್ಲಿದ್ದಾರೆ. 
             ಸರಾಸರಿ ಏಳು ದಶಕಗಳ ಕಾಲ ಜನಸೇವೆಯಲ್ಲಿ ತಮ್ಮನ್ನು ತಾವು ತೊಡಗಿಕೊಂಡು, ನಿತ್ಯವು ಅಭಿವೃದ್ಧಿಯ ಪಾಂಚಜನ್ಯವನ್ನು ಮೊಳಗುತ್ತಲೇ ಇದ್ದ ಎಸ್‌. ಎಮ್‌. ಕೃಷ್ಣ ಎನ್ನುವ ಕನ್ನಡದ ಅನರ್ಘ್ಯ ನಕ್ಷತ್ರವು ಅಸ್ಥಗತವಾಗಿದ್ದು ಕನ್ನಡ ನಾಡಿಗೆ ಮಾತ್ರವಲ್ಲದೆ  ದೇಶಕ್ಕೆ ಒಂದು ರೀತಿಯ ನಿರ್ವಾತ ಸೃಷಿಮಾಡಿದೆ. 

 
ಶ್ರೀನಾಥ್‌ ಜೋಶಿ ಸಿದ್ದರ
9060188081

Publisher: ಕನ್ನಡ ನಾಡು | Kannada Naadu

Login to Give your comment
Powered by