ಕನ್ನಡ ನಾಡು | Kannada Naadu

ಶ್ರೀರಂಗ ಕುಡಿಯುವ ನೀರಿನ ಕೆರೆ ತುಂಬಿಸುವ ಯೋಜನೆಯ ವರದಿ ಬಿಡುಗಡೆ

09 Dec, 2024

ಬೆಂಗಳೂರು : ಶ್ರೀರಂಗ ಕುಡಿಯುವ ನೀರಿನ ಕೆರೆ ತುಂಬಿಸುವ ಯೋಜನೆಗೆ ನೀರನ್ನು ಖಾತರಿ ಪಡಿಸುವ ಸಲುವಾಗಿ ಗುರುತ್ವಾಕರ್ಷಣೆ ಕೊಳವೆಗಳ ಮೂಲಕ ಕುಡಿಯುವ ನೀರನ್ನು ಹೇಮಾವತಿ ಯೋಜನೆಯ ತುಮಕೂರು ಶಾಖಾ ನಾಲೆಯ ಸರಪಳಿ 70.00 ಕಿ.ಮೀ. ನಿಂದ ಮಾಗಡಿ ಮತ್ತು ಕುಣಿಗಲ್ ತಾಲ್ಲೂಕಿಗೆ ಸರಬರಾಜು ಮಾಡುವ ಹಂತ-1-0.00ಕಿ.ಮೀ. ರಿಂದ 17.00 ಕಿ.ಮೀ. ವರೆಗೆ ಮತ್ತು ಹಂತ-2 - 17.00 ಕಿ.ಮೀ. ರಿಂದ 34.54ಕಿ.ಮೀ. ವರೆಗೆ ಕಾಮಗಾರಿ ಕುರಿತು ವರದಿಯನ್ನು ಮಾನ್ಯ ಉಪ ಮುಖ್ಯಂತ್ರಿಗಳು ಹಾಗೂ ಜಲಸಂಪನ್ಮೂಲ ಸಚಿವರ ಪರವಾಗಿ ರಚಿಸಿರುವ ತಾಂತ್ರಿಕ ಸಲಹೆಗಾರ ಕೆ. ಜಯಪ್ರಕಾಶ್ ಬಿಡುಗಡೆ ಮಾಡಿದರು.
 
ಬೆಂಗಳೂರಿನ ಆನಂದ್‍ರಾವ್ ವೃತ್ತದಲ್ಲಿ ಕಾವೇರಿ ನೀರಾವರಿ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರ ಕಚೇರಿಯಲ್ಲಿ ವರದಿ ಬಿಡುಗಡೆ ಮಾಡಿ ಮಾಧ್ಯಮದವರೊಂದಿಗೆ ಮಾತನಾಡಿದ ತಾಂತ್ರಿಕ ಸಲಹೆಗಾರರು,  ಮಾಗಡಿ ಮತ್ತು ಕುಣಿಗಲ್ ತಾಲ್ಲೂಕುಗಳಿಗೆ ಶ್ರೀರಂಗ ಕುಡಿಯುವ ನೀರಿನ ಯೋಜನೆಗೆ ನೀರನ್ನು ಒದಗಿಸುವ ಆಧ್ಯತಾ ವಲಯದ ಕಾಮಗಾರಿಯಾಗಿರುತ್ತದೆ.  ಈ ಯೋಜನೆಗೆ ಅಂದಾಜು ಮೊತ್ತದ ಒಟ್ಟು ರೂ 986 ಕೋಟಿ ರೂಗಳಿಗೆ 2024ನೇ ಜನವರಿ 12 ರಂದು ಆಡಳಿತಾತ್ಮಕ ಅನುಮೋದನೆ ದೊರೆತಿರುತ್ತದೆ ಎಂದು ತಿಳಿಸಿದರು.

ತುಮಕೂರು ಶಾಖಾ ನಾಲೆಯ ಸರಪಳಿ 70.00ಕಿ.ಮೀ. ನಿಂದ ಪ್ರತ್ಯೇಕವಾಗಿ ಗುರುತ್ವ ಪೈಪ್ ಲೈನ್ (Necessity of Gravity pipe line) ಅಗತ್ಯತೆ ಇದೆ.  ತುಮಕೂರು ಶಾಖಾ ನಾಲೆಯ 10 ವರ್ಷಗಳ ಹರಿವಿನ ವಿವರಗಳನ್ನು (2014-15 ರಿಂದ 2024-25 ರ ಅವಧಿ) ಪರಿಶೀಲಿಸಿದಾಗ, ತುಮಕೂರು ಶಾಖಾ ನಾಲೆಯ 167 ಕಿ. ಮೀ ನಂತರ ಹರಿಯಬೇಕಾದ ನೀರಿನ ಪ್ರಮಾಣ 3.676 ಟಿ.ಎಂ.ಸಿ ಇದ್ದು. ವಾಸ್ತವವಾಗಿ ಹರಿದ ನೀರಿನ ಸರಾಸರಿ ಪ್ರಮಾಣವು ನಿಗಧಿಪಡಿಸಿದ ನೀರಿನ ಪ್ರಮಾಣದ ಕೇವಲ 10.73% ಮಾತ್ರ ಇದ್ದು, 89.27% ದಷ್ಟು ಕೊರತೆ ಇರುತ್ತದೆ.

ಕುಣಿಗಲ್ ತಾಲ್ಲೂಕು ಕಾವೇರಿ ಜಲಾನಯನ ಪ್ರದೇಶದ ವ್ಯಾಪ್ತಿಗೆ ಒಳಪಡುತ್ತಿದ್ದರೂ ಸಹ ಒಂದು ದಶಕದಿಂದ ಸತತವಾಗಿ ಕಾಲುವೆಯು ಕೊನೆಯ ಭಾಗದಲ್ಲಿರುವ ಕಾರಣದಿಂದ ಹಂಚಿಕೆಯಾಗಿರುವ ನೀರನ್ನು ಪಡೆಯುತ್ತಿಲ್ಲ. ಆದರೆ ಮೇಲ್ಬಾಗದಲ್ಲಿರುವ ತಾಲ್ಲೂಕುಗಳು ತಮ್ಮ ನೀರಿನ ಹಂಚಿಕೆಯ ಪ್ರಮಾಣವನ್ನು ಪಡೆಯುವುದಲ್ಲದೆ. ಕೆಲವೊಮ್ಮೆ ಹೆಚ್ಚುವರಿ ನೀರಿನ ಪ್ರಯೋಜನ ಪಡೆಯುತ್ತಿವೆ.

ಕಾವೇರಿ ಜಲಾನಯನ ಪ್ರದೇಶಕ್ಕೆ ಒಳಪಡದ ತಾಲ್ಲೂಕುಗಳಾದ ಚಿಕ್ಕನಾಯಕನಹಳ್ಳಿ ಮತ್ತು ಶಿರಾ ತಾಲ್ಲೂಕು ಯಾವುದೇ ಅಡೆತಡೆಗಳಿಲ್ಲದೆ ತಮ್ಮ ಪಾಲಿನ ನೀರನ್ನು ಪಡೆಯುತ್ತಿರುವುದನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ ಎಂದು ತಿಳಿಸಿದರು.

ವಾಸ್ತವವಾಗಿ ಯಾವುದೇ ತತ್ವ ಹಾಗೂ ನಿಯಮಗಳನ್ವಯ ಕಾವೇರಿ ಜಲಾನಯನ ವ್ಯಾಪ್ತಿಗೆ ಒಳಪಡುವ ಪ್ರದೇಶವು ಜಲಾನಯನ ಪ್ರದೇಶಕ್ಕೆ ಒಳಪಡದ ಪ್ರದೇಶಕ್ಕೆ ಹೋಲಿಸಿದಾಗ ನೀರಿನ ಹಂಚಿಕೆಯಲ್ಲಿ ಮೊದಲ ಆದ್ಯತೆ ಪಡೆಯಬೇಕಿರುತ್ತದೆ. ಸದರಿ ತತ್ವದಂತೆ ಕುಣಿಗಲ್ ತಾಲ್ಲೂಕು ಆರಂಭದಿಂದಲೂ ನೀರನ್ನು ಪಡೆಯುವಲ್ಲಿ ವಂಚಿತವಾಗಿದ್ದು. ಸಮಸ್ಯೆಯನ್ನು ಪರಿಹರಿಸುವುದು ಮೊದಲ ಆದ್ಯತೆಯಾಗಿರುತ್ತದೆ. ಈ ಸಂಬಂಧ ಪರಿಶೋಧನೆ ನಡೆಸುವಾಗ ಸವಿವರವಾದ ಸಮೀಕ್ಷೆ. ಯೋಜನೆ ಮತ್ತು ವಿನ್ಯಾಸದ ಮೂಲಕ ಹೊರಹೊಮ್ಮಿದ ಪರಿಹಾರವೆಂದರೆ, ಕುಣಿಗಲ್ ಮತ್ತು ಮಾಗಡಿ ತಾಲ್ಲೂಕಿನ ಕುಡಿಯುವ ನೀರಿನ ಅಗತ್ಯತೆಗಳನ್ನು ಪೂರೈಸಲು ಪ್ರತ್ಯೇಕವಾಗಿ ತುಮಕೂರು ಶಾಖಾ ನಾಲೆಯ ಕಿ.ಮಿ. 70.00 ರಿಂದ ಸ್ವತಂತ್ರ ಗುರುತ್ವ ಪೈಫ್‍ಲೈನ್ ಮುಖಾಂತರ ನೀರು ಹರಿಸುವುದು.

ತುಮಕೂರು ಶಾಖಾ ನಾಲೆಯ ಕಿ.ಮಿ 70.00 ರ ಗುರುತ್ವ ಪೈಫ್‍ಲೈನ್ ಒಂದು ಸ್ವತಂತ್ರ ಜಾಲವಾಗಿದ್ದು, ಇದು ಕುಣಿಗಲ್ (ಕುಡಿಯುವ ನೀರಿನ ಅಗತ್ಯಗಳು ಮತ್ತು ನೀರಾವರಿ) ಮತ್ತು ಮಾಗಡಿ (ಕುಡಿಯುವ ನೀರಿನ ಅಗತ್ಯಗಳು) ತಾಲ್ಲೂಕುಗಳಿಗೆ ಹಂಚಿಕೆಯಾದ ನೀರನ್ನು, ತುಮಕೂರು ಶಾಖಾ ನಾಲೆಯ ಮೇಲ್ಬಾಗದಲ್ಲಿ ಬರುವ ತಾಲ್ಲೂಕುಗಳ ನೀರಿನ ಹಂಚಿಕೆಗೆ ಯಾವುದೇ ತೊಂದರೆ ಇಲ್ಲದಂತೆ, ಒದಗಿಸುವುದಾಗಿರುತ್ತದೆ. ಗುರುತ್ವ ಪೈಫ್‍ಲೈನ್ ಉದ್ದೇಶವು ನಿರ್ದಿಷ್ಟ ಸಮಯದವರೆಗೆ ಅಗತ್ಯವಿರುವ ನೀರಿನ ಹರಿವನ್ನು ನಿಯಂತ್ರಿಸುವುದಾಗಿರುತ್ತದೆ. ಕುಣಿಗಲ್ ತಾಲ್ಲೂಕು ಕಾವೇರಿ ಜಲಾನಯನ ಪ್ರದೇಶದ ಮೂಲ ಫಲಾನುಭವಿಯಾಗಿದ್ದರೂ ಸಹ ಪ್ರಾರಂಭದಿಂದಲೂ ನೀರಿನ ಹಂಚಿಕೆಯಿಂದ ವಂಚಿತವಾಗಿದೆ. ಇದನ್ನು ಸರಿದೂಗಿಸುವುದು ಈ ಯೋಜನೆಯ ಏಕೈಕ ಉದ್ದೇಶವಾಗಿದೆ ಎಂದು ತಿಳಿಸಿದರು.

ರಾಷ್ಟ್ರೀಯ ಜಲನೀತಿ ಮತ್ತು ರಾಜ್ಯ ಜಲನೀತಿ ಎರಡರಲ್ಲಿಯೂ ಕುಡಿಯುವ ನೀರಿನ ಅಗತ್ಯಗಳಿಗೆ ಮೊದಲ ಆದ್ಯತೆಯನ್ನು ನೀಡಬೇಕೆಂದು ಉಲ್ಲೇಖಿಸಿರುವುದರಿಂದ ಎಲ್ಲ ರಾಜ್ಯಗಳು ಅದನ್ನು ಪಾಲಿಸಬೇಕಿರುತ್ತದೆ. ತುಮಕೂರು ಶಾಖಾ ನಾಲೆಯ ಕಿ.ಮೀ 0.00 ರಿಂದ 167.00 ಕಿ.ಮೀವರೆಗಿನ ಆಧುನೀಕರಣ ಕಾಮಗಾರಿಯು ಕುಣಿಗಲ್ ತಾಲ್ಲೂಕಿನ ಅಚ್ಚುಕಟ್ಟು ಪ್ರದೇಶಕ್ಕೆ ಪೂರ್ಣ ಅಥವಾ ಭಾಗಶಃ ನೀರನ್ನು ಖಾತರಿಪಡಿಸುತ್ತದೆ. ಆದರೆ ಶ್ರೀರಂಗ ಕುಡಿಯುವ ನೀರಿನ ಯೋಜನೆಯನ್ನು ಕುಣಿಗಲ್ ತಾಲ್ಲೂಕಿನ ತುಮಕೂರು ಶಾಖಾ ನಾಲೆಯ ಕೊನೆಯ ಭಾಗಕ್ಕೆ (ತು.ಶಾ.ನಾಲೆಯ ಕಿ.ಮೀ 167.00 ರಿಂದ 228.00ಕಿ.ಮೀ) ಸ್ಥಿರ ಮತ್ತು ನಿರಂತರವಾಗಿ ನೀರು ಪೂರೈಸಲು ವಿನ್ಯಾಸಗೊಳಿಸಲಾಗಿದೆ (ಇದು ರಾಷ್ಟ್ರೀಯ ಮತ್ತು ರಾಜ್ಯ ಜಲನೀತಿಗಳ ನಿಬಂಧನೆಗಳಿಗೆ ಒಳಪಟ್ಟಿರುತ್ತದೆ). ಆದ್ದರಿಂದ, ನೀರು ಒದಗಿಸಲು ಪರ್ಯಾಯ ಮತ್ತು ಪ್ರತ್ಯೇಕ ಯೋಜನೆಯನ್ನು ಕೈಗೆತ್ತಿಕೊಂಡಿರುವುದು ಸೂಕ್ತವಾಗಿರುತ್ತದೆ.

ತುಮಕೂರು, ಎತ್ತಿನಹೊಳೆ ಮತ್ತು ಭದ್ರಾ ಮೇಲ್ದಂಡೆ ಯೋಜನೆಗಳಿಂದ ತುಮಕೂರು ಜಿಲ್ಲೆಯು ಹೇಮಾವತಿಯಿಂದ 19.95 ಟಿ.ಎಂ.ಸಿ, ಎತ್ತಿನಹೊಳೆಯಿಂದ 5.74 ಟಿ.ಎಂ.ಸಿ ಮತ್ತು ಭದ್ರ ಮೇಲ್ದಂಡೆಯಿಂದ 2.38 ಟಿ.ಎಂ.ಸಿ ಹೀಗೆ ಒಟ್ಟು 28.07 ಟಿ.ಎಂ.ಸಿ ನೀರನ್ನು  ಪಡೆಯುತ್ತಿದೆ.

ಈ ಕಾಮಗಾರಿಗೆ 2024ನೇ ಫೆಬ್ರವರಿ 03 ರಂದು ಟೆಂಡರ್ ಆಹ್ವಾನಿಸಿ, ಟೆಂಡರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ತಾಂತ್ರಿಕ ಉಪ ಸಮಿತಿಯಿಂದ ತೀರುವಳಿ ಪಡೆದು. 2024ನೇ ಫೆಬ್ರವರಿ 27 ರಂದು  ನಡೆದ 83ನೇ ನಿಗಮದ ನಿರ್ದೇಶಕರ ಮಂಡಳಿಯಲ್ಲಿ ಆರ್ಥಿಕ ಬಿಡ್‍ಗೆ ಅನುಮೋದನೆ ಪಡೆಯಲಾಗಿರುತ್ತದೆ. ಹಾಗೂ ನಿಗಮದಿಂದ 2024ನೇ ಮಾರ್ಚ್ 05 ರಂದು ಕಾಮಗಾರಿಗೆ ಕಾರ್ಯಾದೇಶ ನೀಡಲಾಗಿದೆ. ಗುತ್ತಿಗೆ ಮೊತ್ತ ರೂ.918.43 ಕೋಟಿಗಳಿದ್ದು, 2026ನೇ ಮಾರ್ಚ್ 05ರ ಒಳಗಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕಾಗಿರುತ್ತದೆ.  

ಈಗಾಗಲೇ 2024ನೇ ಮಾರ್ಚ್ 06 ರಿಂದ ಕಾಮಗಾರಿಯನ್ನು ಗುತ್ತಿಗೆದಾರರು ಪ್ರಾರಂಭಿಸಿರುತ್ತಾರೆ. ಕಾಮಗಾರಿಯನ್ನು ಪ್ರಾರಂಭಿಸಿದ ಅವಧಿಯಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು ಹಾಗೂ ರೈತರು ಸದರಿ ಯೋಜನೆಯನ್ನು ವಿರೋಧಿಸಿ, ಪ್ರತಿಭಟನೆಗಳನ್ನು ಕೈಗೊಂಡು ಕಾಮಗಾರಿಗೆ ಅಡಚಣೆ ಉಂಟು ಮಾಡಿರುತ್ತಾರೆ. ಇದಲ್ಲದೆ ತುಮಕೂರು ಜಿಲ್ಲಾ ಕೆ.ಡಿ.ಪಿ. ಸಭೆಯಲ್ಲಿ ಜಿಲ್ಲೆಯ ಕೆಲವೊಂದು ಶಾಸಕರುಗಳು ಕಾಮಗಾರಿ ಕುರಿತು ಪ್ರತಿಭಟಿಸಿರುತ್ತಾರೆ. ಆದರೂ ಕಾಮಗಾರಿಯ ಆರ್ಥಿಕ ಪ್ರಗತಿಯು 207.38 ಕೋಟಿ (22.57%) ರಷ್ಟಾಗಿದೆ ಎಂದು ತಿಳಿಸಿದರು.

ಈ ಪ್ರತಿಭಟನೆಗಳ ಬಗ್ಗೆ ಹಾಗೂ ಯೋಜನೆಯ ಅನುμÁ್ಠನದ ಕುರಿತು ಮಾನ್ಯ ಉಪ ಮುಖ್ಯಮಂತ್ರಿಗಳು ಹಾಗೂ ಜಲಸಂಪನ್ಮೂಲ ಸಚಿವರು 2024ನೇ ಜೂನ್ 20 ರಂದು ಮಾನ್ಯ ಗೃಹ ಮಂತ್ರಿಗಳು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಮಂತ್ರಿಗಳ ಉಪಸ್ಥಿತಿಯಲ್ಲಿ ಯೋಜನೆಗೆ ಒಳಪಡುವ ಎಲ್ಲಾ ಜನಪ್ರತಿನಿಧಿಗಳ ಸಭೆಯನ್ನು ಕರೆದು ಕಾಮಗಾರಿಯ ಅಗತ್ಯತೆ ಬಗ್ಗೆ ತಾಂತ್ರಿಕ ತಜ್ಞರಿಂದ ಮಾಹಿತಿ ಒದಗಿಸಲಾಗಿತ್ತು. ಸಭೆಯಲ್ಲಿ ಕೆಲವು ಜನಪ್ರತಿನಿಧಿಗಳು ಕಾಮಗಾರಿಯ ಅಗತ್ಯತೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದರಿಂದ, ಮಾನ್ಯ ಉಪ ಮುಖ್ಯಮಂತ್ರಿಗಳು ಹಾಗೂ ಜಲಸಂಪನ್ಮೂಲ ಸಚಿವರು ಸದರಿ ಯೋಜನೆಯ ಕಾರ್ಯಸಾಧ್ಯತೆ ಕುರಿತು ಒಂದು ತಾಂತ್ರಿಕ ಸಮಿತಿಯನ್ನು ರಚಿಸಿ. ಅಗತ್ಯತೆಯ ಬಗ್ಗೆ ಸಮಗ್ರ ವರದಿ ಪಡೆಯಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಅದರಂತೆ 2024ನೇ ಜುಲೈ 03 ರಂದು ನಿವೃತ್ತ ಮುಖ್ಯ ಇಂಜಿನಿಯರ್ ಅರವಿಂದ ಡಿ. ಕಣಗಿಲೆ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದ್ದು, ನಿವೃತ್ತ ಮುಖ್ಯ ಇಂಜಿನಿಯರ್‍ಗಳಾದ ಕೆ. ಬಾಲಕೃಷ್ಣ, ಶಂಕರೇಗೌಡ ಹಾಗೂ ಎಂ. ಜಿ. ಶಿವಕುಮಾರ್ ಅವರು ಸಮಿತಿಯ ಸದಸ್ಯರಾಗಿದ್ದು, ಅಧೀಕ್ಷಕ ಇಂಜಿನಿಯರ್ ಅವರು ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ.  

ತಾಂತ್ರಿಕ ಸಮಿತಿಯು ಯೋಜನೆ ವ್ಯಾಪ್ತಿಯ ಸ್ಥಳ ಪರಿಶೀಲನೆಗಳನ್ನು ನಡೆಸಿ. ಸ್ಥಳೀಯ ಜನ ಪ್ರತಿನಿಧಿಗಳ, ಸಂಘ ಸಂಸ್ಥೆಗಳ ಅಹವಾಲುಗಳನ್ನು ಪಡೆದು. ಒಟ್ಟು 02 ಸ್ಥಳ ಪರಿವೀಕ್ಷಣೆಗಳ ಮತ್ತು ಒಟ್ಟು 7 ಸಭೆಗಳನ್ನು ನಡೆಸಿ, ಅಂತಿಮವಾಗಿ ಯೋಜನೆಯ ಕುರಿತು ವಿವರವಾದ ಅಧ್ಯಯನವನ್ನು ನಡೆಸಿ, ಯೋಜನೆಯ ಸಾಧಕ ಬಾಧಕಗಳ ಬಗ್ಗೆ ಶಿಫಾರಸ್ಸುಗಳನ್ನೊಳಗೊಂಡ ವರದಿಯನ್ನು ಸೆಪ್ಟೆಂಬರ್ 27ರಂದು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

Publisher: ಕನ್ನಡ ನಾಡು | Kannada Naadu

Login to Give your comment
Powered by