ಕನ್ನಡ ನಾಡು | Kannada Naadu

ರಾಜ್ಯದ ಮನವಿಗೆ ಸ್ಪಂದಿಸಿದ ಕೇಂದ್ರ - ಸವದತ್ತಿ ಯಲ್ಲಮ್ಮ ಅಭಿವೃದ್ಧಿ 100 ಕೋಟಿ ರೂಪಾಯಿ ಮಂಜೂರು

05 Dec, 2024

 

ಬೆಂಗಳೂರು : ರಾಜ್ಯದ ಪ್ರಮುಖ ಧಾರ್ಮಿಕ ಮತ್ತು ಪ್ರವಾಸಿ ತಾಣವಾಗಿರುವ ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮ ದೇಗುಲ ಅಭಿವೃದ್ಧಿಗೆ ಸಹಕಾರಿಯಾಗುವಂತೆ ರಾಜ್ಯ ಪ್ರವಾಸೋದ್ಯಮ, ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ ಅವರು ಕೇಂದ್ರ ಸರ್ಕಾರವನ್ನು ಕೋರಿದ ಪರಿಣಾಮ ಕೇಂದ್ರವು ರಾಜ್ಯದ ಈ ಧಾರ್ಮಿಕ ಕೇಂದ್ರದ ಅಭಿವೃದ್ಧಿಗೆ ನೂರು ಕೋಟಿ ರೂಪಾಯಿ ಮಂಜೂರು ಮಾಡಿದೆ.

ಸವದತ್ತಿ ಯಲ್ಲಮ್ಮ ದೇಗುಲ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಚಿವ ಎಚ್.ಕೆ.ಪಾಟೀಲ ಅವರು  9-01-2024ರಂದು ಕೇಂದ್ರ ಪ್ರವಾಸೋಧ್ಯಮ ಕಾರ್ಯದರ್ಶಿ ಅವರಿಗೆ ಪತ್ರ ಮುಖೇನ ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರವಾಗಿರುವ ಸವದತ್ತಿ ಅಭಿವೃದ್ಧಿ ಅಗತ್ಯದ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದರು.

ಸವದತ್ತಿ ಯಲ್ಲಮ್ಮ ದೇಗುಲಕ್ಕೆ ಒಂದು ಕೋಟಿಗೂ ಅಧಿಕ ಪ್ರವಾಸಿಗರೂ ಮತ್ತು ಭಕ್ತರು ಭೇಟಿ ನೀಡಿದ್ದು ಈ ಹಿನ್ನೆಲೆಯಲ್ಲಿ ಪ್ರವಾಸಿಗರಿಗೆ ಅದರಲ್ಲೂ ಗ್ರಾಮೀಣ ಪ್ರದೇಶದ ಪ್ರವಾಸಿಗರಿಗೆ ಅಗತ್ಯ ವಸತಿ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಲಭ್ಯ ಕಲ್ಪಿಸಬೇಕಿದ್ದು ಈಗಿರುವ ಸೌಕರ್ಯ ಉನ್ನತೀಕರಣ ಮತ್ತು ಹೊಸ ಮೂಲ ಸೌಕರ್ಯಗಳ ಅಭಿವೃದ್ಧಿಗೆ ನೂರು ಕೋಟಿ ರೂ.ಗಳ ಅಗತ್ಯವಿದೆ ಎಂಬುದನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದಿದ್ದರು.
ತಮ್ಮ ಈ ಮನವಿಯನ್ನು ಸಕಾರಾತ್ಮಕವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರವು ಸವದತ್ತಿ ದೇಗುಲ ಅಭಿವೃದ್ಧಿಗೆ 100 ಕೋಟಿ ರೂ. ಸೇರಿದಂತೆ ಬೆಂಗಳೂರಿನ ರೋವಿತ್ ಮತ್ತು ದೇವಿಕಾರಾಣಿ ಎಸ್ಟೇಟ್ ಅಭಿವೃದ್ಧಿಗೆ 99.17 ಕೋಟಿ ರೂ. ಬಿಡುಗಡೆಗೆ ಮುಂದಾಗಿರುವುದಕ್ಕೆ ರಾಜ್ಯ ಪ್ರವಾಸೋದ್ಯಮ, ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ ಹರ್ಷ ವ್ಯಕ್ತಪಡಿಸಿದ್ದಾರೆ.

ದೇಶದಲ್ಲೇ ‘ಗ್ಯಾರಂಟಿ’ ಸರ್ಕಾರ ಎಂದೇ ಜನಪ್ರಿಯವಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ರಾಜ್ಯ ಸರ್ಕಾರವು ತಮ್ಮ ಚುನಾವಣಾ ಪೂರ್ಣ ವಾಗ್ದಾನದಂತೆ ಪಂಚ ಗ್ಯಾರಂಟಿಗಳನ್ನು ಯಶಸ್ವಿಯಾಗಿ ಜಾರಿ ಮಾಡಿದೆ. ಈ ಪೈಕಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಜಾರಿ ಮೂಲಕ ಪ್ರವಾಸೋದ್ಯಮ ಯೋಜನೆಯನ್ನು ಜನ ಸಾಮಾನ್ಯರ ಕೈಗೆಟಕುವಂತೆ ಮಾಡಿದ್ದು, ಇದರ ಪರಿಣಾಮ ರಾಜ್ಯದ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡುತ್ತಿರುವ ಪ್ರವಾಸಿಗರೂ ಏರಿಕೆಯಾಗಿದ್ದಾರೆ. ಹೀಗಾಗಿ ಕೋಟಿ ಮಂದಿ ಭೇಟಿಯಿಂದ ಹೊಸ ದಾಖಲೆ ನಿರ್ಮಿಸಿರುವ ಸವದತ್ತಿ ಯಲ್ಲಮ್ಮ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧವಾಗಿದೆ. ನಮ್ಮ ಮನವಿಗೆ ಸ್ಪಂದಿಸಿ ಕೇಂದ್ರ ಸರ್ಕಾರವು ಸವದತ್ತಿ ಯಲ್ಲಮ್ಮ ದೇಗುಲ ಮತ್ತು ರೋವಿತ್ ಎಸ್ಟೇಟ್ ಅಭಿವೃದ್ಧಿಗೆ ಸ್ಪಂದಿಸಿರುವುದು ಹರ್ಷ ತಂದಿದೆ ಎಂದು ಪ್ರವಾಸೋದ್ಯಮ, ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ ಅವರು ತಿಳಿಸಿದ್ದಾರೆ.

Publisher: ಕನ್ನಡ ನಾಡು | Kannada Naadu

Login to Give your comment
Powered by