ಬೆಂಗಳೂರು : ಅವಕಾಶ ವಂಚಿತರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ವಿವಿಧ ಸಂಸ್ಥೆಗಳು ಸರ್ಕಾರದ ಸಹಭಾಗ್ವಿತದಲ್ಲಿ ಕೌಶಲ್ಯಾಭಿವೃದ್ಧಿ, ಹಾಗೂ ಇನ್ನಿತರ ವಿಷಯಗಳಲ್ಲಿ ತರಬೇತಿ ನೀಡುತ್ತದೆ ಎಂದು ಉನ್ನತ ಶಿಕ್ಷಣ ಸಚಿವರಾದ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.
ಇಂದು ನಗರದ ಖಾಸಗಿ ಹೋಟೆಲ್‍ನಲ್ಲಿ ಉನ್ನತ ಶಿಕ್ಷಣ ಪರಿಷತ್, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾದ ‘ನಾಳೆಗಳ ಸಬಲೀಕರಣ ಉತ್ಕøಷ್ಟತೆಯ ಕಡೆಗೆ ಪಯಣ’ ಶೀರ್ಷಿಕೆಯಡಿ ಹಮ್ಮಿಕೊಳ್ಳಲಾದ ‘ಸಹಭಾಗಿಗಳ ಸಮಾವೇಶ- 2024’ ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು ಸಾವಿರಾರು ವಿದ್ಯಾರ್ಥಿಗಳು ಪದವೀಧರರಾಗಿ ಹೊರಬರುತ್ತಿದ್ದಾರೆ. ಎಲ್ಲರಿಗೂ ಉದ್ಯೋಗ ದೊರಕುವುದು ಕಷ್ಟÀ. ಶಿಕ್ಷಣಕ್ಕೆ ಪೂರಕವಾದ ಕೌಶಲ್ಯ ತರಬೇತಿ ಅವರಿಗೆ ಅವಶ್ಯ. ಈ ನಿಟ್ಟಿನಲ್ಲಿ ಉನ್ನತ ಶಿಕ್ಷಣ ಇಲಾಖೆಯು, ಇನ್ಫೋಸಿಸ್ ಸ್ಟ್ರಿಂಗ್ ಬೋರ್ಡ್, ಉನ್ನತ ಫೌಂಡೇಶನ್, ಬ್ರಿಟಿಷ್ ಕೌನ್ಸಲ್, ವಾದ್ವಾನಿ ಫೌಂಡೇಶನ್, ಟಯೋಟಾ ಕಿರ್ಲೋಸ್ಕರ್, ಕೆಟೆಕ್ ಮೆಟಾ, ಸಿಕ್ಕೋ ಮುಂತಾದ ಖಾಸಗಿ ಕೈಗಾರಿಕೆಗಳು ಮತ್ತು ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ ಎಂದರು.
ಈ ಕಂಪನಿಗಳ ಸಹಭಾಗಿತ್ವದಲ್ಲಿ ಸರ್ಕಾರಿ ಕಾಲೇಜುಗಳ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳಿಗೆ ಉದ್ಯೋಗಾರ್ಹತೆ ಕೌಶಲ್ಯ, ಜೀವನ ಕೌಶಲ್ಯ, ಆಂಗ್ಲ ಭಾಷೆ ಪ್ರಾವೀಣ್ಯತೆ, ಡಿಜಿಟಲ್, ಸೈಬರ್ ಜಾಗೃತಿ - ಸುರಕ್ಷತೆ, ಮಹಿಳೆಯರು ಮತ್ತು ಕೃತಕ ಬುದ್ಧಿಮತ್ತೆ (ಎಐ) ಮುಂತಾದ ವಿಷಯಗಳ ಕುರಿತು ಉಚಿತವಾಗಿ ತರಬೇತಿ ನೀಡಲಾಗುತ್ತಿದೆ. ಈ ಕೌಶಲ್ಯ ತರಬೇತಿ ಉತ್ಕøಷ್ಟವಾಗಿದ್ದು, ಇದು ಅವರು ಮಾಡುವ ಉದ್ಯೋಗಕ್ಕೆ ಪೂರಕವಾಗಿದ್ದು, ಉದ್ಯೋಗವೂ ಸಿಗುವಂತಾಗುತ್ತದೆ ಎಂದರು.
ಗ್ರಾಮೀಣ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಅರಸಿ ಪಟ್ಟಣಕ್ಕೆ ಬಂದರೆ ಅವರಿಗೆ ಹೊರಗಿನ ಜಗತ್ತು ತೆರೆದುಕೊಳ್ಳುತ್ತದೆ. ಬ್ರಿಟಿಷ್ ಕೌನ್ಸಿಲ್ ಸಹಕಾರದೊಂದಿಗೆ 6 ವಿಶ್ವವಿದ್ಯಾಲಯಗಳ ಸುಮಾರು 30 ವಿದ್ಯಾರ್ಥಿಗಳು ಹಾಗೂ 6 ಅಧ್ಯಾಪಕರು ಲಂಡನ್‍ಗೆ ಅಧ್ಯಯನ ಪ್ರವಾಸ ಬೆಳೆಸಿ ಜೀವನ ಕೌಶಲ್ಯ, ತರಬೇತಿ ಪಡೆದುಕೊಂಡಿದ್ದಾರೆ ಎಂದರು.
ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಪ್ರದಾನ ಕಾರ್ಯದರ್ಶಿಗಳಾದ ಶ್ರೀಕರ್.ಎಂ.ಎಸ್ ಮಾತನಾಡಿ, ರಾಜ್ಯದ ಶೇಕದ 30 ರಷ್ಟು ವಿದ್ಯಾರ್ಥಿಗಳು ಸರ್ಕಾರಿ ಪದವಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಕಲಿಕೆ ಜೊತೆ ಕೌಶಲ್ಯ ಕಾರ್ಯಕ್ರಮವನ್ನು ಸರ್ಕಾರ ನೀಡುತ್ತಿದ್ದು, 2023-24 ಸಾಲಿನಲ್ಲಿ 28909 ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ಇದರಲ್ಲಿ ಅನಿಮೇಷನ್, ಗ್ರಾಫಿಕ್ ಡಿಸೈನ್, ಡಿಜಿಟಲ್ ಮಾರುಕಟ್ಟೆ, ಸಂವಹನ ಮಾಧ್ಯಮ ಮತ್ತು ಸಿನಿಮಾ ತಯಾರಿಕೆ ಮುಂತಾದ ವಿಷಯಗಳಲ್ಲಿ ತರಬೇತಿ ನೀಡಲಾಗುತ್ತದೆ ಎಂದರು.
ಅಲ್ಲದೆ ‘ಪ್ರೇರಣಾ’ ಕಾರ್ಯಕ್ರಮದಡಿ ಸರ್ಕಾರಿ ಪಾಲಿಟೆಕ್ನಿಕ್, ಇಂಜಿನಿಯರಿಂಗ್ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ, ಕಾರ್ಯಾಗಾರ, ಸಂಶೋಧನಾ ಪೀಠಿಕೆ ಮುಂತಾದ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ. ‘ಆವಿಷ್ಕಾರ” ಕಾರ್ಯಕ್ರಮದಡಿ ಬೌದ್ಧಿಕ ಅಸ್ತಿ ಮತ್ತು ನಾವೀನ್ಯತೆ ವಿಷಯ ಕುರಿತಂತೆ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ತಾಂತ್ರಿಕ ತರಬೇತಿ ಹಾಗೂ ಧನ ಸಹಾಯ ನೀಡುತ್ತದೆ ಎಂದು ತಿಳಿಸಿದರು.
ಅಜೀಂ ಪ್ರೇಮ್‍ಜಿ ಅವರು ಫೌಂಡೇಷನ್ ಸೇರಿದಂತೆ ಇತರ ಸಂಸ್ಥೆಗಳು, ಕಂಪನಿಗಳು ಸರ್ಕಾರಿ-ಖಾಸಗಿ ಸಹಭಾಗಿತ್ವದಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ, ಔದ್ಯೋಗಿಕ ಅಭಿವೃದ್ದಿ ಸಾದ್ಯವಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಸಂಸ್ಥೆಗಳಿಂದ ಸಂಪನ್ಮೂಲ ವ್ಯಕ್ತಿಗಳು ಕೌಶಲ್ಯಾಭಿವೃದ್ಧಿ, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಸೇರಿದಂತೆ ಹಲವು ವಿಷಯಗಳ ಕುರಿತು ಉಪನ್ಯಾಸ ಮಾಡಿದರು.
ಕಾರ್ಯಕ್ರಮದಲ್ಲಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತರಾದ ಮಂಜುಶ್ರೀ. ಎನ್ ಪ್ರಾಸ್ತಾವಿಕ ಭಾಷಣ ಮಾಡಿದರು. ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಉಪಧ್ಯಕ್ಷರಾದ ಪ್ರೊ.ಎಸ್.ಆರ್.ನಿರಂಜನ ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕಿ ಡಾ. ಶೋಬಾ.ಜಿ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.
Publisher: ಕನ್ನಡ ನಾಡು | Kannada Naadu