ಕನ್ನಡ ನಾಡು | Kannada Naadu

ಹಾಲಾಡಿ: ಕಾದಂಬರಿ ಲೋಕಾರ್ಪಣೆ

26 Nov, 2024

ಕುಂದಾಪುರ :  ಹಾಲಾಡಿಯ ಬೆಳಾರ್‌ಮಕ್ಕಿ ಮಂಜುನಾಥ ಕಾಮತ್‌ರವರು ಬರೆದ ‘ಕಣ್ತೆರೆದ ಕನಸು’ ಕಾದಂಬರಿಯ ಲೋಕಾರ್ಪಣೆಯು ಹಾಲಾಡಿಯ ಹೆಗ್ಗುಂಜೆ ರಾಜೀವ ಶೆಟ್ಟಿ ಪದವಿಪೂರ್ವ ಕಾಲೇಜು ಸಭಾಂಗಣದಲ್ಲಿ ನೆರವೇರಿತು. ಕೃಷ್ಣ ಕಾಮತ್ ಹಾಲಾಡಿ ಮತ್ತು ಕಾಲೇಜು ವಿಧ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಕುಂದಾಪುರ ತಾಲೂಕು ಸಾಹಿತ್ಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವುದು ಹೆಮ್ಮೆಯ ವಿಚಾರ, ಮಂಜುನಾಥ ಕಾಮತ್ ರಂತಹ ಬರಹಗಾರರು ಕುಂದಾಪುರ ತಾಲೂಕಿಗೆ ದೊಡ್ಡ ಆಸ್ತಿ, ಅವರು ಬರೆದ ಕಾದಂಬರಿ ‘ಕಣ್ತೆರೆದ ಕನಸು’ ತಮ್ಮ ಹುಟ್ಟೂರಿನಲ್ಲಿಯೇ 
ಬಿಡುಗಡೆಯಾಗುವ ಅವರ ಕನಸು ನನಸಾಗಿರುವುದು. ಸಂತಸ, ಅಲ್ಲದೆ ಹಾಲಾಡಿ ಊರಿಗೆ ಹೆಗ್ಗಳಿಕೆ, ತಮ್ಮಿಂದ ಇನ್ನಷ್ಟು ಕಾದಂಬರಿಗಳು ಮೂಡಿಬರಲಿ ಎಂದು ಹಾರೈಸಿದರು. ಹೆಗ್ಗುಂಜೆ ರಾಜೀವ ಶೆಟ್ಟಿ ಪದವಿಪೂರ್ವ ಕಾಲೇಜು ಹಾಲಾಡಿ, ಪ್ರಾಂಶುಪಾಲರಾದ ಬಾಲಕೃಷ್ಣ ಭಟ್ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.
ಕುಂದಾಪುರ ಚಿನ್ಮಯಿ ಆಸ್ಪತ್ರೆಯ ವೈದ್ಯಕೀಯ ನಿರ್ದೆಶಕರು ಹಾಗೂ ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಉಮೇಶ್ ಪುತ್ರನ್ ಪುಸ್ತಕ ಲೋಕಾರ್ಪಣೆಗೈದು, ಇಳಿವಯಸ್ಸಿನಲ್ಲೂ ಕಥೆ, ಕಾದಂಬರಿ ಬರೆಯುವುದರ ಮೂಲಕ ತಾವು ಸಮಾಜಕ್ಕೆ ಮಾದರಿಯಾಗಿದ್ದೀರಿ, ತಾವು ಬರೆದ ಇತರ ಕಾದಂಬರಿಗಳಲ್ಲಿ ‘ಅನಾಥ ಪ್ರೀತಿಯ ಅನುಬಂಧ’, ‘ಬೆಂಗಳೂರಿನಲ್ಲಿ’ ಹಾಗೂ ‘ಮತ್ತೊಂದು ದಿನ’ ಮತ್ತು ಇತರ ಕಥೆಗಳು ಸಿದ್ಧಾಪುರದಲ್ಲಿ ನಡೆದ ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಲೋಕಾರ್ಪಣೆಗೊಂಡಿದ್ದು, ಮಂಜುನಾಥ ಕಾಮತ್ ರವರು ನಿವೃತ್ತ ಬ್ಯಾಂಕ್ ಅಧಿಕಾರಿಯಾಗಿದ್ದು ಅವರು ಬ್ಯಾಂಕ್ ವೃತ್ತಿಯಲ್ಲಿರುವಾಗಲೇ ತುಷಾರ, ಮಂಗಳ, ಹಾಗೂ ತರಂಗ ಪತ್ರಿಕೆಗಳಲ್ಲಿ ಕಥೆ ಮತ್ತು ಲೇಖನಗಳನ್ನು.
ಬರೆಯುವ ಹವ್ಯಾಸ ಮೈಗೂಡಿಸಿಕೊಂಡಿದ್ದರು. ಅವರ ಪುಸ್ತಕ ಪ್ರೇಮ ಹಾಗೆ ಮುಂದುವರಿಯಲಿ ಎಂದು ಆಶಿಸಿದರು.
ಉಡುಪಿ ಪೂರ್ಣಪ್ರಜ್ಞಾ ಕಾಲೇಜು ನಿವೃತ್ತ ಪ್ರಾಧ್ಯಾಪಕರಾದ ಡಾ. ಶ್ರೀಕಾಂತ್ ರಾವ್ ಸಿದ್ಧಾಪುರ, ಲೋಕಾರ್ಪಣೆಗೊಳ್ಳಲಿರುವ ಪುಸ್ತಕ ಪರಿಚಯಿಸಿದರು. ವೇದಿಕೆಯಲ್ಲಿ ಕುಂದಾಪುರ ಭಂಡಾರ್‌ಕರ‍್ಸ್ ಕಾಲೇಜಿನ ನಿವೃತ್ತ ಕನ್ನಡ ಪ್ರಾಧ್ಯಾಪಕರಾದ ಡಾ. ಉಪೇಂದ್ರ ಸೋಮಯಾಜಿ, ಹೆಗ್ಗುಂಜೆ ರಾಜೀವ ಶೆಟ್ಟಿ ಪದವಿಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ ಮುಖ್ಯ ಶಿಕ್ಷಕಿ ರೋಷನ್ ಬೀಬಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಮಂಜುನಾಥ ಕಾಮತ್‌ರವರ ಬಾಲ್ಯ ಸ್ನೇಹಿತರಾದ ಶ್ರೀ ಶಂ. ರಾಧಾಕ್ರಷ್ಣ ಜೋಯಿಸ, ಪಾಂಡುರಂಗ ಶೆಣೈ, ಎಚ್ ಮಹಮ್ಮದ್, ಲೇಖಕಿ ಪೂರ್ಣಿಮಾ ಕಮಲಶಿಲೆ, ಹಾಲಾಡಿ ಪ್ರೇಮಾನಂದ ಕಾಮತ್, ದಿನೇಶ ಉಪ್ಪೂರ, ಕಾಲೇಜು ಉಪನ್ಯಾಸಕರು, ಪ್ರೌಢಶಾಲಾ ಶಿಕ್ಷಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಬೆಳಾರ್‌ಮಕ್ಕಿ ಮಂಜುನಾಥ ಕಾಮತ್ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಶಿಕ್ಷಕಿ ರೇಖಾ ಪ್ರಭಾಕರ್ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕಿ ಆಶಾ ರಾಜೀವ ಕುಲಾಲ ವಂದಿಸಿದರು.
ಸಭಾ ಕಾರ್ಯಕ್ರಮದ ನಂತರ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರಸಿದ್ಧ ಭಾಗವತರಾದ ಹಾಲಾಡಿ ರಾಘವೇಂದ್ರ ಮಯ್ಯ ಇವರ ಸಾರಥ್ಯದಲ್ಲಿ ‘ಭೀಷ್ಮ ಭಾರ್ಗವ” ಯಕ್ಷಗಾನ ಪ್ರಸಂಗವನ್ನು, ಉಪನ್ಯಾಸಕರಾದ ಗಣಪತಿ ಹೆಗಡೆ ಹಾಗೂ ಕುಮಾರ್ ಬೇರ್ಕಿ ಪ್ರದರ್ಶಿಸಿದರು. ಕಾಲೇಜಿನ ಬಾಲ ಯಕ್ಷ ಕಲಾವಿದರಿಂದ ಯಕ್ಷಗಾನ ನೃತ್ಯ ನೆರವೇರಿತು.

Publisher: ಕನ್ನಡ ನಾಡು | Kannada Naadu

Login to Give your comment
Powered by