ಕನ್ನಡ ನಾಡು | Kannada Naadu

ದೇವಳ ಉಳಿಸುವ ಸಂಕಲ್ಪ ಮಾಡಿ: ಸೂರ್ಯನಾರಾಯಣ ಉಪಾಧ್ಯಾಯ

22 Nov, 2024

ಕುಂದಾಪುರ: ದೇವರ ಆರಾಧನೆಯಿಂದ ಮನುಕುಲದ ಅಭಿವೃದ್ಧಿಯಾಗುತ್ತದೆ. ಸಾಧು– ಸಂತರು, ಋಷಿ– ಮುನಿಗಳು ನೀಡಿದ ವಿಶಿಷ್ಟ ಪರಂಪರೆ ಉಳಿಸುವ ನಿಟ್ಟಿನಲ್ಲಿ ಪ್ರತಿಯೊಂದು ದೇವಳವನ್ನು ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ ಮತ್ತು ಕರ್ತವ್ಯ ಎಂದು ಕುಂಭಾಸಿ ಆನೆಗುಡ್ಡೆ ವಿನಾಯಕ ದೇವಸ್ಥಾನದ ಮಾಜಿ ಆಡಳಿತ ಧರ್ಮದರ್ಶಿ ಕೆ. ಸೂರ್ಯನಾರಾಯಣ ಉಪಾಧ್ಯಾಯ ಹೇಳಿದರು.
ಕುಂಭಾಸಿ ನಾಗಾಚಲ ಅಯ್ಯಪ್ಪ ಸ್ವಾಮಿ, ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನೂತನವಾಗಿ ಶೃಂಗೇರಿ ಶಂಕರ ಮಠ ಸ್ಥಾಪಿಸುವ ನಿಮಿತ್ತ ಲೋಕ ಕಲ್ಯಾಣಾರ್ಥವಾಗಿ ನಡೆಯಲಿರುವ ಕೋಟಿ ಮಂಗಳ ಗೌರಿ ಜಪ, ಪಂಚಾಕ್ಷರಿ ಜಪ ಯಜ್ಞ ಸಂಕಲ್ಪದ ಜಪ ಪತ್ರಿಕೆಯನ್ನು ದೇವಳದ ಸಭಾಭವನದಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಧರ್ಮ ಸ್ಥಾಪನೆ ನೆಲೆಯಲ್ಲಿ ಶೃಂಗೇರಿ ಜಗದ್ಗುರುಗಳ ಮಾರ್ಗದರ್ಶನದಲ್ಲಿ ನಡೆಯಲಿರುವ ಕಾರ್ಯಗಳು ಶ್ಲಾಘನೀಯ. ಇಲ್ಲಿನ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ದೇವತಾ ಕಾರ್ಯಗಳನ್ನು ಯಶಸ್ವಿಗೊಳಿಸುವ ಸಂಕಲ್ಪ ಇರಿಸಿಕೊಳ್ಳಿ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶೃಂಗೇರಿ ಪೀಠದ ಪ್ರಾಂತೀಯ ಧರ್ಮಾಧಿಕಾರಿ ಲೋಕೇಶ್ ಅಡಿಗ ಬಡಾಕೆರೆ ಅವರು, ನಾಗಾಚಲ ಕ್ಷೇತ್ರ ಮುಂದಿನ ದಿನದಲ್ಲಿ ಶೃಂಗೇರಿ ಶಂಕರ ಮಠವಾಗಲಿದೆ. ಆ ಪ್ರಯುಕ್ತ 2025ನೇ ಮಾರ್ಚ್ ತಿಂಗಳಲ್ಲಿ ಸಾಮೂಹಿಕವಾಗಿ ಸಮಸ್ತರ ಕೂಡುವಿಕೆಯಲ್ಲಿ ಶೃಂಗೇರಿ ಜಗದ್ಗುರುಗಳ ನೇತೃತ್ವದಲ್ಲಿ ಶಂಕರಾಚಾರ್ಯ, ಶಾರದಾ ಅಮ್ಮನ ಮೂರ್ತಿ ಪ್ರತಿಷ್ಠಾಪಿಸಲಾಗುತ್ತದೆ. ಈ ಸಂದರ್ಭ ದೇವರಿಗೆ ಬ್ರಹ್ಮಕಲಶೋತ್ಸವ ಪುನರ್ ಪ್ರತಿಷ್ಠಾಪನಾ ವಿಧಿ, ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ನಿರಂತರ ಭಜನೆಗಾಗಿ ತಾಲ್ಲೂಕಿನ ಎಲ್ಲಾ ಭಜನಾ ಮಂಡಳಿಗಳಿಗೂ ಅವಕಾಶ ನೀಡಲಾಗುತ್ತದೆ ಎಂದು ತಿಳಿಸಿದರು.

Publisher: ಕನ್ನಡ ನಾಡು | Kannada Naadu

Login to Give your comment
Powered by