ಕೊಲ್ಲೂರು:ಅರ್ಹ ಬಿಪಿಎಲ್ ಕಾರ್ಡುದಾರರಿಗೆ ಅನ್ಯಾಯ ಆಗಲು ಬಿಡುವುದಿಲ್ಲ. ನಮ್ಮ ಸರಕಾರ ಮತ್ತು ನಮ್ಮ ಪಕ್ಷ ರಾಜ್ಯದ ಜನತೆಗೆ ಅನ್ಯಾಯ ಮಾಡುವುದಿಲ್ಲ. ಬಿಪಿಎಲ್ ಕಾರ್ಡ್ ರದ್ದುಗೊಳಿಸುವ ಫಲಾನುಭವಿಗಳ ಪಟ್ಟಿ ನೀಡಲು ಹೇಳಿದ್ದೇವೆ. ಎಲ್ಲರಿಂದ ಮರು ಅರ್ಜಿ ಪಡೆಯುತ್ತೇವೆ ಎಂದು ರಾಜ್ಯ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕೊಲ್ಲೂರಿನಲ್ಲಿ ಇಂದು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಗೆ ವಿಶೇಷ ಪೂಜೆ- ಪ್ರಾರ್ಥನೆ ಸಲ್ಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಬಿಪಿಎಲ್ ರೇಷನ್ ಕಾರ್ಡ್ ರದ್ದತಿ ವಿವಾದದ ಕುರಿತು ಪ್ರಶ್ನಿಸಿದಾಗ, ನಾನು ದೇವರ ಸನ್ನಿಧಿಯಲ್ಲಿ ಹೇಳುತ್ತಿದ್ದೇನೆ, ಸರಕಾರದ ಪ್ರತಿನಿಧಿಯಾಗಿ ಹೇಳುತ್ತಿದ್ದೇನೆ, ಉಪ ಮುಖ್ಯಮಂತ್ರಿಯಾಗಿ ಹೇಳುತ್ತಿದ್ದೇನೆ, ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ಹೇಳುತ್ತೇನೆ.... ಅರ್ಹ ಬಿಪಿಎಲ್ ಕಾರ್ಡುದಾರರಿಗೆ ಅನ್ಯಾಯ ಆಗಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಐದು ಗ್ಯಾರಂಟಿ ಜಾರಿ ನೋಡಿಕೊಳ್ಳಲು ತಾಲೂಕು ಸಮಿತಿಗಳಿವೆ. ರಾಜ್ಯಮಟ್ಟದ ಸಮಿತಿ ಕೂಡ ಇದೆ. ಸಮಿತಿ ಎಲ್ಲಾ ಪ್ರಕರಣಗಳನ್ನು ಪರಿಶೀಲಿಸಿ ಅದು ಎಲ್ಲರಿಗೂ ನ್ಯಾಯ ಕೊಡುತ್ತದೆ. ಯಾರು ಭಯಪಡಬೇಕಾಗಿಲ್ಲ ಎಂದರು.
ವಿರೋಧ ಪಕ್ಷಗಳು ಏನಾದರೂ ಮಾತನಾಡಬೇಕಲ್ಲ, ಎಂದು ಮಾತನಾಡುತ್ತಿವೆ ಎಂದು ಡಿಸಿಎಂ ಲೇವಡಿ ಮಾಡಿದರು.
ನಬಾರ್ಡ್ ಸಾಲ ಕಡಿತ ವಿಚಾರವಾಗಿ ಕೇಂದ್ರ ವಿತ್ತ ಸಚಿವೆ ಜೊತೆ ಸಿಎಂ ಮಾತುಕತೆ"
ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಹೊಸದಿಲ್ಲಿಗೆ ತೆರಳಿದ್ದು, ರಾಜ್ಯಕ್ಕೆ ನಬಾರ್ಡ್ ಸಾಲದಲ್ಲಿ ಮಾಡಿರುವ ಶೇ.58ರಷ್ಟು ಕಡಿತದ ಕುರಿತಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಂ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ನಂದಿನಿ ಹಾಲಿನ ಮಾರ್ಕೆಟ್ ಮಾಡಲು ಸಿಎಂ ದಿಲ್ಲಿಗೆ ಹೋಗಿದ್ದು, ಕೇಂದ್ರ ವಿತ್ತ ಸಚಿವೆಯ ಭೇಟಿಗೆ ಸಮಯ ಕೇಳಿದ್ದಾರೆ. ಅವರನ್ನು ಭೇಟಿಯಾಗಿ ಕರ್ನಾಟಕಕ್ಕೆ ಅನ್ಯಾಯ ಆಗುತ್ತಿದೆ. ನ್ಯಾಯ ಒದಗಿಸಿಕೊಡಬೇಕು ಎಂದು ಕೇಳುತ್ತಾರೆ ಎಂದರು.
ವಿಶೇಷ ಅಗತ್ಯತೆಯುಳ್ಳ ಮಕ್ಕಳಿಗೆ ವೈದ್ಯಕೀಯ ತಪಾಸಣಾ ಶಿಬಿರ
ಉಡುಪಿ: ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಸಮಗ್ರ ಶಿಕ್ಷಾ ಕರ್ನಾಟಕ ಯೋಜನೆಯಡಿ ಪೂರ್ವ ಪ್ರಾಥಮಿಕ ತರಗತಿಯಿಂದ ಪದವಿಪೂರ್ವ ತರಗತಿವರೆಗಿನ ಶಾಲಾ ಶಿಕ್ಷಣ ಇಲಾಖೆಯ ವಿಶೇಷ ಅಗತ್ಯತೆಯುಳ್ಳ ಮಕ್ಕಳಿಗೆ ವೈದ್ಯಕೀಯ ತಪಾಸಣಾ ಶಿಬಿರವು ಕಾರ್ಕಳ ವಲಯಕ್ಕೆ ನವೆಂಬರ್ 23 ರಂದು ಕಾರ್ಕಳ ಬಿ.ಆರ್.ಸಿ ಯಲ್ಲಿ, ಬೈಂದೂರು ಮತ್ತು ಕುಂದಾಪುರ ವಲಯದವರಿಗೆ ನವೆಂಬರ್ 25 ರಂದು ಕುಂದಾಪುರದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಾಗೂ ಉಡುಪಿ ಮತ್ತು ಬ್ರಹ್ಮಾವರ ವಲಯದವರಿಗೆ ನವೆಂಬರ್ 26 ರಂದು ನಗರದ ಅಜ್ಜರಕಾಡು ಬಿ.ಆರ್.ಸಿಯಲ್ಲಿ ನಡೆಯಲಿದೆ. ಮಕ್ಕಳ ಅಗತ್ಯ ದಾಖಲೆಗಳಾದ ಯು.ಡಿ.ಐ.ಡಿ ಕಾರ್ಡ್, ರೇಷನ್ ಕಾರ್ಡ್, ಆಧಾರ್ ಕಾರ್ಡ್, ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ಆದಾಯ ಪ್ರಮಾಣ ಪತ್ರ ಹಾಗೂ ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ಪ್ರತಿಯೊಂದಿಗೆ ಶಿಬಿರದ ಪ್ರಯೋಜನವನ್ನು ಸಂಬಂಧಿಸಿದ ಪಾಲಕರು ಪಡೆದುಕೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.
ಉದ್ಯಮಶೀಲತಾ ತರಬೇತಿ ಕಾರ್ಯಾಗಾರ
ರಾಷ್ಟೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ಉಡುಪಿ ಜಿಲ್ಲಾ ಕೇಂದ್ರ ಗ್ರಂಥಾಲಯ ಹಾಗೂ ಕೌಶಲ್ಯಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಕಾರ್ಕಳ ಶಾಖಾ ಗ್ರಂಥಾಲಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಉಧ್ಯಮಶೀಲತಾ ತರಬೇತಿಯ ಕುರಿತು ಒಂದು ದಿನದ ಕಾರ್ಯಗಾರ ನಡೆಯಿತು. ಜಿಲ್ಲಾ ಕೌಶಲ್ಯಭಿವೃದ್ಧಿ ಅಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಶ್ರೀನಿವಾಸ ರಾವ್ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಕಾರ್ಕಳ ಶಾಖಾ ಗ್ರಂಥಾಲಯದ ಗ್ರಂಥಪಾಲಕಿ ವನಿತಾ, ಕಾರ್ಕಳ ಶ್ರೀ ವೆಂಕಟರಮಣ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಉಷಾ ನಾಯಕ್, ಉಡುಪಿ ಪೂರ್ಣಪ್ರಜ್ಞಾ ಕಾಲೇಜಿನ ಹೆಚ್.ಓ.ಡಿ ಜೈಕಿಶನ್ ಭಟ್, ಕೌಶಲ್ಯಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕ ಅರುಣ್ ಬಿ, ಸೀಡಾಕ್ ಸೆಂಟರ್ ಮ್ಯಾನೇಜರ್ ಪೃಥ್ವಿರಾಜ್ ನಾಯಕ್, ಸಿಡಾಕ್‌ನ ಶ್ರುತಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಧಿಕಾರಿ ಜಯಶ್ರೀ ಸ್ವಾಗತಿಸಿ, ಪ್ರೇಮ ನಿರೂಪಿಸಿ, ಗ್ರಂಥಾಪಾಲಕಿ ನಮಿತಾ ವಂದಿಸಿದರು.
Publisher: ಕನ್ನಡ ನಾಡು | Kannada Naadu