ಕನ್ನಡ ನಾಡು | Kannada Naadu

ಅಂಚೆ ಮೂಲಕ ಕನ್ನಡ ಶಿಕ್ಷಣ ಯೋಜನೆ

22 Nov, 2024



ಉಡುಪಿ : ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಹಾಗೂ ಮೈಸೂರಿನ ಭಾರತೀಯ ಭಾಷೆಗಳ ಕೇಂದ್ರಗಳು ಒಂದಾಗಿ 1985ರ ನವೆಂಬರ್ 1ರಿಂದ ರಾಜ್ಯದಲ್ಲಿರುವ ಕನ್ನಡ ಬಾರದ ಎಲ್ಲ ಸರಕಾರಿ ನೌಕರರಿಗಾಗಿ ಹನ್ನೆರಡು ತಿಂಗಳುಗಳ ಅಂಚೆ ಮೂಲಕ ಕನ್ನಡ ಶಿಕ್ಷಣ ಯೋಜನೆಯನ್ನು ನಡೆಸುತ್ತಿವೆ. ಇದಕ್ಕೆ ರಾಜ್ಯದಲ್ಲಿರುವ ಎಲ್ಲಾ ನಗರಸಭೆ, ಕ.ವಿ.ಪ್ರ.ನಿ.ನಿ., ಕೆ.ಎಸ್.ಆರ್.ಟಿ.ಸಿ., ವಿಶ್ವವಿದ್ಯಾಲಯಗಳು, ಶಾಲಾ- ಕಾಲೇಜುಗಳು, ಸರಕಾರಿ ಅನುದಾನ ಪಡೆಯುವ ಸಂಸ್ಥೆಗಳ ನೌಕರರು ಮತ್ತು ಎಲ್ಲಾ ರಾಷ್ಟ್ರೀಕೃತ ಬ್ಯಾಂಕುಗಳ ನೌಕರರು ಉಚಿತವಾಗಿ ಹೆಸರುಗಳನ್ನು ನೋಂದಾಯಿಸಿ ಕೊಳ್ಳಬಹುದಾಗಿದೆ.

ಸರಕಾರಿ ನೌಕರರು ಸಂಪರ್ಕ ಶಿಬಿರ ಹಾಗೂ ಪರೀಕ್ಷೆಗಳಿಗೆ ಹಾಜರಾದ ದಿನದಂದು ಅವರ ಕಚೇರಿ ಗೈರುಹಾಜರಿಯನ್ನು ಅನ್ಯಕಾರ್ಯ ನಿಮಿತ್ತ ಎಂದು ಪರಿಗಣಿಸಲಾಗುತ್ತದೆ. ಅಂಚೆ ಮೂಲಕ ಕನ್ನಡ ಶಿಕ್ಷಣ ಯೋಜನೆಗೆ ನೋಂದಾಯಿಸಿಕೊಂಡು ಉತ್ತೀರ್ಣರಾದವರಿಗೆ ಕರ್ನಾಟಕ ಲೋಕಸೇವಾ ಆಯೋಗದ ಕನ್ನಡ ಪರೀಕ್ಷೆಯಿಂದ ಕರ್ನಾಟಕ ಸರ್ಕಾರದ ಅಧಿಸೂಚನೆಯಲ್ಲಿ ತಿಳಿಸಿರುವಂತೆ ವಿನಾಯಿತಿ ಲಭ್ಯವಿದೆ.   
ಈ ಯೋಜನೆಯನ್ನು ಈಗ ಸಾರ್ವಜನಿಕರಿಗೂ ವಿಸ್ತರಿಸಲಾಗಿದ್ದು, ಎಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಹಾಗೂ 18ರಿಂದ 50 ವಯಸ್ಸಿನ ಒಳಗಿನ ಆಸಕ್ತರು ಭರ್ತಿ ಮಾಡಿದ ಅರ್ಜಿಯ ಜೊತೆಯಲ್ಲಿ 250 ರೂ. ಡಿಮ್ಯಾಂಡ್ ಡ್ರಾಫ್ಟ್‌ನ್ನು  ಕಳುಹಿಸಿ ಕೊಡಬೇಕು. ನೋಂದಾಯಿತರಿಗೆ ಇಪ್ಪತ್ತು ಪಾಠಾವಳಿ ಗಳನ್ನು ಕಳುಸಿಕೊಡಲಾಗುತ್ತದೆ. ತರಬೇತಿ ಮತ್ತು ಸಂಪರ್ಕ ಶಿಬಿರದ ಅಂತ್ಯದಲ್ಲಿ ಪರೀಕ್ಷೆಗಳನ್ನು ನಡೆಸಲಾಗುವುದು.  

ತಂಡದ ತರಬೇತಿ ನವೆಂಬರ್ ತಿಂಗಳಿನಿಂದ ಪ್ರಾರಂಭಗೊಂಡಿದ್ದು, ಅರ್ಜಿ ಸಲ್ಲಿಸಲು ನವೆಂಬರ್ 30 ಕೊನೆಯ ದಿನ. ಅರ್ಜಿ ನಮೂನೆ ಮತ್ತು ತರಬೇತಿ ವಿವರಗಳನ್ನು ಪ್ರಭಾರಿ ಅಧಿಕಾರಿ, ಅಂಚೆ ಮೂಲಕ ಕನ್ನಡ ಶಿಕ್ಷಣ ಯೋಜನೆ, ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆ, ಮಾನಸಗಂಗೊತ್ರಿ, ಮೈಸೂರು- 570006. ದೂ.ಸಂ.-0821-2345128 ಇವರಿಗೆ ಐದು ರೂ. ಅಂಚೆ ಚೀಟಿ ಹಚ್ಚಿದ ಸ್ವವಿಳಾಸ ಇರುವ ಲಕೋಟಿಯನ್ನು ಕಳುಹಿಸಿ ಪಡೆದು ಕೊಳ್ಳಬಹುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.   

Publisher: ಕನ್ನಡ ನಾಡು | Kannada Naadu

Login to Give your comment
Powered by