Article
ಒನಕೆ ಓಬವ್ವ ಸ್ತ್ರೀ ಶಕ್ತಿಯ ಸಂಕೇತ: ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ
ಒನಕೆ ಓಬವ್ವ 18ನೇ ಶತಮಾನದ ಓರ್ವ ವೀರ ವನಿತೆ. ಹೈದರಾಲಿಯ ಸೈನಿಕರು ಕೋಟೆಯನ್ನು ಮುತ್ತಿಗೆ ಹಾಕಿದ ಸಂದರ್ಭದಲ್ಲಿ, ಒಬ್ಬ ಸಾಮಾನ್ಯ ಹೆಣ್ಣುಮಗಳು, ಅಸಾಮಾನ್ಯವಾಗಿ ಯುದ್ಧಕಲೆಯ ಆಳ, ಅಗಲದ ಅರಿವಿಲ್ಲದೆ, ಊಟ ಮಾಡುತ್ತಿರುವ ಗಂಡನನ್ನು ಎಬ್ಬಿಸದೇ, ಶತ್ರು ಸೈನ್ಯವನ್ನು ಕೇವಲ ಒನಕೆಯಿಂದ ಸದೆ ಬಡಿದ ಆಕೆಯ ಸಾಹಸ, ಇಂದು ರಾಜ್ಯಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ. ಸರಕಾರ ಒನಕೆ ಓಬವ್ವ ಜಯಂತಿಯನ್ನು ಆಚರಿಸುತ್ತಿರುವುದು ಇಡೀ ನಾರಿಕುಲಕ್ಕೆ ಸಂದ ಗೌರವ ಎಂದವರು ನುಡಿದರು. ದೇಶದ ಇತಿಹಾಸವನ್ನು ಗಮನಿಸಿದಾಗ ಪುರುಷರಷ್ಟೇ ಮಹಿಳೆಯರು ಕೂಡ ಪ್ರಭಾವಶಾಲಿಗಳಾಗಿ ಅವರಿಗೆ ಸರಿ ಸಮಾನರಾಗಿ ದಿಟ್ಟತನದಿಂದ ಹೋರಾಡಿ ರುವುದನ್ನು ನಾವು ಕಾಣುತ್ತೇವೆ. ಇವರಲ್ಲಿ ಒಬ್ಬರಾದ ವೀರ ವನಿತೆ ಒನಕೆ ಓಬವ್ವಳ ಸಮಯಪ್ರಜ್ಞೆ, ಧೈರ್ಯ, ಪ್ರಾಮಾಣಕತೆ, ಸಂವೇದನಾಶೀಲತೆ ಮತ್ತು ಸಾಹಸದಂತಹ ಧೀಮಂತ ವ್ಯಕ್ತಿತ್ವವನ್ನು ಎಲ್ಲರೂ ಅಳವಡಿಸಿ ಕೊಳ್ಳಬೇಕು ಎಂದರು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಒನಕೆ ಓಬವ್ವ ಅವರ ಕುರಿತು ಉಪನ್ಯಾಸ ನೀಡುತ್ತಾ, ವೀರವನಿತೆ ಓಬವ್ವ ಅವರ ಶೌರ್ಯ, ಮಾತೃಭೂಮಿಯ ಮೇಲಿನ ಭಕ್ತಿ ಅನನ್ಯವಾದದ್ದು. ಅವರ ಧೈರ್ಯ, ಸಾಹಸ ಪ್ರತಿಯೊಬ್ಬರಿಗೂ ಸ್ಪೂರ್ತಿ ನೀಡುತ್ತದೆ. ಚಿತ್ರದುರ್ಗದ ಉಕ್ಕಿನಂತಹ ಏಳು ಸುತ್ತಿನ ಕೋಟೆಯನ್ನು ಹೈದರಾಲಿಯ ಸೈನಿಕರು ಕುತಂತ್ರದಿಂದ ವಶಪಡಿಸಿಕೊಳ್ಳಲು ಹಠಾತ್ತಾಗಿ ಆಕ್ರಮಣ ಮಾಡಿದಾಗ, ಓಬವ್ವ ತನ್ನ ಒನಕೆಯನ್ನು ಅಸ್ತ್ರವ ನ್ನಾಗಿ ಇಟ್ಟುಕೊಂಡು, ಶತ್ರುಗಳನ್ನು ಎದುರಿಸಿ, ಚಿತ್ರದುರ್ಗದ ಕೋಟೆಯ ಕಿಂಡಿಯಿಂದ ಬಂದ ನೂರಾರು ಶತ್ರು ಸೈನಿಕ ರನ್ನು ತನ್ನ ಒನಕೆಯಿಂದಲೇ ಕೊಂದಿದ್ದಳು. ಅಂದಿನಿಂದ ಅವರು ಒನಕೆ ಓಬವ್ವ ಎಂದು ಪ್ರಸಿದ್ಧಿ ಪಡೆದಿದ್ದು, ಚಿತ್ರದುರ್ಗದ ಆ ಕಿಂಡಿಯನ್ನು ಒನಕೆ ಓಬವ್ವನ ಕಿಂಡಿ ಎಂದು ಕರೆಯಲಾಗುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕೋಶಾಧಿಕಾರಿ ನರಸಿಂಹಮೂರ್ತಿ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
