ಕನ್ನಡ ನಾಡು | Kannada Naadu

ಆರ್.ಕೃಷ್ಣಪ್ಪ ಅವರಿಗೆ KUWJ ಮನೆಯಂಗಳದ ಗೌರವ

09 Nov, 2024


         ಬೆಂಗಳೂರು:  ಅಂತೆ ಕಂತೆಗಳ ಪತ್ರಿಕೋದ್ಯಮಕ್ಕೆ ನಾವಾಗಿಯೇ ಕಡಿವಾಣ ಹಾಕಿಕೊಳ್ಳದಿದ್ದರೆ, ಮಾಧ್ಯಮಗಳ ಮೇಲಿನ ವಿಶ್ವಾಸರ್ಹತೆ ಇನ್ನೂ ಕಡಿಮೆಯಾಗಲಿದೆ ಎಂದು ಹಿರಿಯ ಪತ್ರಕರ್ತ ಆರ್.ಕೃಷ್ಣಪ್ಪ ಆತಂಕ ವ್ಯಕ್ತಪಡಿಸಿದಾರೆ.
        ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದಿಂದ ಮನೆಯಂಗಳದಲ್ಲಿ ಮನದುದುಂಬಿ ಕಾರ್ಯಕ್ರಮದಲ್ಲಿ ಕೆಯುಡಬ್ಲೂೃಜೆ ಗೌರವ ಸ್ವೀಕರಿಸಿ ಮಾತನಾಡಿದರು. ಯಾವುದೇ ಸುದ್ದಿಯಾಗಿರಲಿ ಅದರ ವಿಶ್ವಾಸರ್ಹತೆ ಬಹಳ ಮುಖ್ಯ. ಸುದ್ದಿ ಸಿಕ್ಕ ತಕ್ಷಣವೇ ಅದರ ಪೂರ್ವಾಪರತೆಯನ್ನು ನೋಡಬೇಕು. ಸುದ್ದಿ ನಿಖರತೆಯನ್ನು ಮೊದಲು ಸ್ಪಷ್ಟಪಡಿಸಿಕೊಳ್ಳಬೇಕು. ಬಳಿಕ ಅದನ್ನು ಸುದ್ದಿರೂಪಕ್ಕೆ ತರಬೇಕು. ಆದರೆ, ಈಗಿನ ಪತ್ರಿಕೋದ್ಯಮದಲ್ಲಿ ನಾನೇ ಮೊದಲು ಸುದ್ದಿಕೊಡಬೇಕು ಎನ್ನುವ ಒತ್ತಡ ಮತ್ತು ಧಾವಂತದಲ್ಲಿ ಸುದ್ದಿ ಮಾಡುತ್ತಿರುವುದು ಸರಿಯಾದ ಕ್ರಮ ಅಲ್ಲವೇ ಅಲ್ಲ ಎಂದು ಹೇಳಿದರು.
      ಓದು ಮುಗಿಸಿದ ಕೂಡಲೇ ಪ್ರಜಾವಾಣಿ ಪತ್ರಿಕೆಯ ನೆಟ್ಟಕಲ್ಲಪ್ಪ ಅವರು ಉದ್ಯೋಗ ಕರುಣಿಸಿದ್ದರಿಂದ ಸುಧಾ ವಾರ ಪತ್ರಿಕೆಯ ಪ್ರೂಪ್ ರೀಡರ್ ಆಗಿ ಸೇರಿಕೊಂಡೆ. ಅಲ್ಲಿಂದ ಪ್ರಾರಂಭವಾದ ವೃತ್ತಿ ಜೀವನ ಕೋಲಾರ ಜಿಲ್ಲಾ ವರದಿಗಾರ, ಮೈಸೂರು ಜಿಲ್ಲಾ ವರದಿಗಾರನಾಗಿ ಮತ್ತು ಬೆಂಗಳೂರು ಕೇಂದ್ರ ಕಚೇರಿಯಲ್ಲಿ ವಿವಿಧ ಹಂತದಲ್ಲಿ ಕೆಲಸ ಮಾಡಿದೆ ಎಂದರು. ಕೋಲಾರ ಜಿಲ್ಲೆಯ ಕಂಬಾಳಪಲ್ಲಿಯಲ್ಲಿ 7 ಜನ ದಲಿತರನ್ನು ಜೀವಂತ ದಹಿಸಿದ ಘಟನೆಯನ್ನು ನಾನೇ ಖುದ್ದು ವರದಿ ಮಾಡಿದ್ದೇನೆ. ಒಂದೇ ಕೋಮಿನ ಎರಡು ಗುಂಪುಗಳ ನಡುವೆ ಘರ್ಷಣೆಯಾಗಿ ಪೈರಿಂಗ್ ನಡೆದಾಗ ನಾನು ಸಾಕ್ಷಿಯಾಗಿದ್ದು ವರಿದಿ ಮಾಡಿದ್ದೆ ಎಂದು ವೃತ್ತಿ ಬದುಕನ್ನು ನೆನಪಿಸಿಕೊಂಡರು.
        ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಒಂದೇ ಪತ್ರಿಕೆಯಲ್ಲಿ 40 ವರ್ಷಗಳ ಕಾಲ ಕೆಲಸ ಮಾಡಿ ನಿವೃತ್ತರಾಗುವುದು ಅಪರೂಪ. ಆರ್.ಕೃಷ್ಣಪ್ಪ ಅವರು ಪ್ರಜಾವಾಣಿಯಲ್ಲಿಯೇ ಸುದೀರ್ಘ ಅವಧಿಯ ವೃತ್ತಿ ಜೀವನ ಸಾಗಿಸುವ ಮೂಲಕ ಅಪರೂಪದ ಪತ್ರಕರ್ತರಾಗಿ ಸುದ್ದಿಮನೆಯಲ್ಲಿ ಗುರುತಿಸಿಕೊಂಡಿರುವುದು ಅಭಿನಂದನೀಯ ಎಂದು ಹೇಳಿದರು.
         ಕೋಲಾರವಾಣಿ ಪತ್ರಿಕೆ ಸಂಪಾದಕ ಬಿ.ಎನ್.ಮುರುಳಿ ಪ್ರಸಾದ್ ಮಾತನಾಡಿ, ಕೆಯುಡಬ್ಲೂೃಜೆ ವತಿಯಿಂದ ಮನೆಯಂಗಳದಲ್ಲಿಯೇ ಹಿರಿಯ ಪತ್ರಕರ್ತರನ್ನು ಗೌರವಿಸುತ್ತಿರುವುದು ಅಭಿನಂದನೀಯ ಕೆಲಸ. ಪತ್ರಕರ್ತರಾದ ಆರ್.ಕೃಷ್ಣಪ್ಪ ಅವರು ಕೋಲಾರದಲ್ಲಿ ಸಲ್ಲಿಸಿದ ಸೇವೆ ಅನನ್ಯವಾದದ್ದು ಎಂದು ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್, ಖಜಾಂಚಿ ವಾಸುದೇವ ಹೊಳ್ಳ, ಬೆಂಗಳೂರು ನಗರ ಘಟಕದ ಶರಣ ಬಸಪ್ಪ ಈ ಸಂದರ್ಭದಲ್ಲಿ ಹಾಜರಿದ್ದರು.

Publisher: ಕನ್ನಡ ನಾಡು | Kannada Naadu

Login to Give your comment
Powered by