ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಯುಕೆ ದೇಶಕ್ಕೆ ಶೈಕ್ಷಣಿಕ ಪ್ರವಾಸ
08 Nov, 2024
ಬೆಂಗಳೂರು: ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಲಿಂಗರಾಜ ಗಾಂಧಿ ಅವರು ಬ್ರಿಟಿಷ್ ಕೌನ್ಸಿಲ್ ಪ್ರಾಯೋಜಿತ ಪ್ರತಿಭಾವಂತ ಸ್ನಾತಕ ವಿದ್ಯಾರ್ಥಿಗಳ ಎರಡು ವಾರದ ಶೈಕ್ಷಣಿಕ ಪ್ರವಾಸಕ್ಕೆ ಆಯ್ಕೆಯಾದ ಐದು ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಶುಭಕೋರಿದರು.
ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು, ಬ್ರಿಟಿಷ್ ಕೌನ್ಸಿಲ್ ಮತ್ತು ಆಯ್ದ ಸಾರ್ವಜನಿಕ ವಿಶ್ವವಿದ್ಯಾನಿಲಯಗಳು ಜೊತೆಯಾಗಿ ಪರಿಕಲ್ಪಿಸಿದ ಸ್ಕೌಟ್ (SCOUT – Scholars for Outstanding Undergraduate Talent) ಕಾರ್ಯಕ್ರಮದ ಭಾಗವಾಗಿ ಮೂವತ್ತು ಪ್ರತಿಭಾವಂತ ಸ್ನಾತಕ ವಿದ್ಯಾರ್ಥಿಗಳಿಗೆ ಯು.ಕೆ ದೇಶದ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ನವೆಂಬರ್ 9 ರಿಂದ 23 ರವರೆಗೆ ಭೇಟಿ ನೀಡುವ ಎರಡು ವಾರಗಳ ಶೈಕ್ಷಣಿಕ ಪ್ರವಾಸವನ್ನು ಮಾಡಲಿದ್ದಾರೆ. ಈ ಪ್ರವಾಸದಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಆರು ಜನ ಶಿಕ್ಷಕರನ್ನು ಹಾಗೂ ಉನ್ನತ ಶಿಕ್ಷಣ ಪರಿಷತ್ತಿನ ಇಬ್ಬರು ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಸ್ಕೌಟ್ ಕಾರ್ಯಕ್ರಮ ವಿಶ್ವವಿದ್ಯಾಲಯದ ಸ್ನಾತಕ ವಿದ್ಯಾರ್ಥಿಗಳಿಗೆ ಅಂತರಾಷ್ಟ್ರೀಯ ಶಿಕ್ಷಣ ಅದರಲ್ಲೂ ಯು.ಕೆ. ದೇಶದ ಉನ್ನತ ಶಿಕ್ಷಣದ ಅನುಭವವನ್ನು ನೀಡಲಿದ್ದು, ಇದರಿಂದಾಗಿ ವಿದ್ಯಾರ್ಥಿಗಳಿಗೆ ಪದವಿ ಶಿಕ್ಷಣದ ನಂತರದ ಶೈಕ್ಷಣಿಕ ಹಾಗೂ ವೃತ್ತಿಪರತೆ ಕುರಿತು ಅಗಾಧವಾದ ಮಾಹಿತಿ ದೊರೆಯಲಿದ್ದು, ಜೀವನವನ್ನು ರೂಪಿಸಿಕೊಳ್ಳುವಲ್ಲಿ ಅನುಕೂಲವಾಗಲಿದೆ.
ಬೆಂಗಳೂರು ನಗರ ವಿಶ್ವವಿದ್ಯಾನಿಲಯ ಈ ಕಾರ್ಯಕ್ರಮಕ್ಕಾಗಿ ಆಯ್ಕೆ ಆಗಿದ್ದು, ಅರ್ಹತ ಮಾನದಂಡಗಳನ್ನು ಅನುಸರಿಸಿ ಸಾಮಾಜಿಕ ನ್ಯಾಯದ ಆಧಾರದ ಮೇಲೆ ಮೂರನೇ ಸೆಮಿಸ್ಟರ್‍ನಲ್ಲಿ ವ್ಯಾಸಂಗ ಮಾಡುತ್ತಿರುವ ಮಲ್ಲೇಶ್ವರಂ ಮಹಿಳಾ ವಿಶ್ವವಿದ್ಯಾಲಯ ಕಾಲೇಜಿನ ಬಿಸಿಎ 3ನೇ ಸೆಮಿಸ್ಟರ್‍ನ ವಿದ್ಯಾರ್ಥಿನಿರಾದ ರಾಧಿಕಾ ಎಲ್.ಜಾಧವ್, ಅನುರಾಧ ಲಕ್ಷ್ಮಿ, ಬೆಂಗಳೂರು ನಗರ ವಿಶ್ವವಿದ್ಯಾಲಯದ ಕಾಮರ್ಸ್ ವಿಭಾಗದ ಬಿ.ಕಾಂ 3ನೇ ಸೆಮಿಸ್ಟರ್‍ನ ಖುಲೂದ್ ಎಸ್ ಅಹಮದ್, ಕಂಪ್ಯೂಟರ್ ಅಪ್ಲಿಕೇಶನ್ ವಿಭಾಗದ ಬಿಸಿಎ 3ನೇ ಸೆಮಿಸ್ಟರ್‍ನ ನಿತಿನ್‍ಕುಮಾರ್ ಎನ್.ಕೆ. ಹಾಗೂ ಕಂಪ್ಯೂಟರ್ ಅಪ್ಲಿಕೇಶನ್ ವಿಭಾಗದ ಬಿಸಿಎ 3ನೇ ಸೆಮಿಸ್ಟರ್‍ನ ಹರ್ಷಿತಾ ಕೆ.ಎಂ ಐದು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಪ್ರೊ. ಕೆ.ಆರ್. ಜಲಜ, ಡೀನರು ವಾಣಿಜ್ಯ ನಿಕಾಯ ಮತ್ತು ನೋಡಲ್ ಅಧಿಕಾರಿಗಳು ವಿದ್ಯಾರ್ಥಿಗಳ ಮಾರ್ಗದರ್ಶನಕ್ಕಾಗಿ ಜೊತೆಗೆ ಪ್ರಯಾಣ ಮಾಡಲಿದ್ದಾರೆ.
ಇದೊಂದು ವಿನೂತನವಾದ ಅವಕಾಶವಾಗಿದ್ದು ಸ್ನಾತಕ ವಿದ್ಯಾರ್ಥಿಗಳಿಗೆ ಯು.ಕೆ ದೇಶದ ಉನ್ನತ ಶಿಕ್ಷಣದ ಪರಿಚಯದ ಜೊತೆಗೆ ಅಲ್ಲಿಯ ಕಲಿಕಾ ವಾತಾವರಣದ ಅನುಭವವಾಗಲಿದೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ತಮ್ಮ ಕೌಶಲ್ಯ ಅಭಿವೃದ್ಧಿಗಾಗಿ ಮತ್ತು ಶೈಕ್ಷಣಿಕ ಉನ್ನತಿಗಾಗಿ ಅನುಕೂಲವಾಗಲಿದೆ.
ಈ ಕಾರ್ಯಕ್ರಮದಲ್ಲಿ ವಿಶ್ವವಿದ್ಯಾನಿಲಯದ ಕುಲಸಚಿವರು, ಕುಲಸಚಿವರು (ಮೌಲ್ಯಮಾಪನ), ವಿವಿಧ ವಿಭಾಗಗಳ ಡೀನರು ಮತ್ತು ಪ್ರಾಧ್ಯಾಪಕರು ಉಪಸ್ಥಿತರಿದ್ದರು.
Publisher: ಕನ್ನಡ ನಾಡು | Kannada Naadu