ಬೆಂಗಳೂರು : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ವಿನೂತನ ಕಾರ್ಯಕ್ರಮ ‘ನಾಡೋರ್ಮೆ’ಯು ಅರೆಕಾಡು-ಹೊಸ್ಕೇರಿ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಮನೆಮಾತಾಗಿದೆ. ನಾಡೊರ್ಮೆಯ ವೈಭವವನ್ನು ಕಣ್ತುಂಬಿಕೊಳ್ಳಲು ನಾಡಿನ ಜನತೆ ಕಾತರರಾಗಿದ್ದು, ಇದೇ ನವೆಂಬರ್ 14ನೇ ಗುರುವಾರ ಬೆಳಿಗ್ಗೆ 9 ಗಂಟೆಗೆ ಆರಂಭವಾಗುವ ನಾಡೊರ್ಮೆಗೆ ಅರೆಕಾಡಿನ ರಿಯಾವರ್ ರೆಸಾರ್ಟ್ ಮಧುಮಗಳಂತೆ ಸಿಂಗಾರಗೊಳ್ಳುತ್ತಿದೆ.
ಅಂದು ಬೆಳಗ್ಗೆ ವೀರಾಜಪೇಟೆ ಶಾಸಕ ಹಾಗೂ ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರಾಗಿರುವ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರಿಂದ ‘ಕೊಡವ ವೆಲ್ಫೇರ್ ಅಂಡ್ ರಿಕ್ರಿಯೇಷನ್ ಅಸೋಸಿಯೇಷನ್” ಕಟ್ಟಡಕ್ಕೆ ಅರೆಕಾಡುವಿನಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗುವುದು. ಕಾರ್ಯಕ್ರಮದಲ್ಲಿ ಮಡಿಕೇರಿ ಶಾಸಕ ಡಾ. ಮಂತರ್ ಗೌಡ, ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ, ಜಿಲ್ಲಾಧಿಕಾರಿ ವೆಂಕಟರಾಜ, ಸರ್ಕಾರಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ತಕ್ಕರಾದ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಹಾಗೂ ‘ಕೊಡವ ವೆಲ್ಫೇರ್ ಅಂಡ್ ರಿಕ್ರಿಯೇಷನ್ ಅಸೋಸಿಯೇಷನ್” ಅಧ್ಯಕ್ಷ ಕುಕ್ಕೆರ ಜಯಾ ಚಿಣ್ಣಪ್ಪ ಹಾಗೂ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿರುವರು.
ನಾಡೊರ್ಮೆಯ ಶುರುವಾರ್ಥ ಅಕಾಡೆಮಿಯ ತಕ್ಕರು ತಪ್ಪಡಕ ಕಟ್ಟುವರು. ತದನಂತರ ಮುಖ್ಯ ಅತಿಥಿಗಳನ್ನು ಒಡ್ಡೋಲಗ, ತಳಿಯತಕ್ಕಿ ಬೊಳ್ಚ, ದುಡಿಕೊಟ್ಟ್ ಪಾಟ್ನ ಜೊತೆ ಕೊಡವ ಪುರುಷರು ನಿಪ್ಪುಲ್ ತೋಕಾಯಿ ಮೆರವಣಿಗೆಯೊಂದಿಗೆ ಸಭಾ ಸ್ಥಳಕ್ಕೆ ಕರೆತರಲಾಗುವುದು. ಈ ಕೊಡವ ಸಾಂಸ್ಕೃಂತಿಕ ಮೆರವಣಿಗೆಯನ್ನು ಅಸಂಖ್ಯಾತ ಪುರುಷರು ಗುಂಡು ಹಾರಿಸುವುದರ ಮೂಲಕ ಚಾಲನೆ ನೀಡಲಿರುವರು.
ಸಭಾ ಕಾರ್ಯಕ್ರಮವನ್ನು ದೇವರ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಿ, ಶಾಸಕ ಡಾ. ಮಂತರ್ ಗೌಡರು ಉದ್ಘಾಟಿಸಲಿರುವರು. ಮೈಸೂರಿನ ‘ಪಡಿಪು ಕಯ್ಯಾಲೆ’ ತಂಡದವರಿಂದ ಸ್ವಾಗತ ನೃತ್ಯ, ಉಮ್ಮತ್ತಾಟ್, ಕೊಡವ ನೃತ್ಯಗಳನ್ನು ಪ್ರದರ್ಶಿಸಲಿರುವರು. ಉರ್ಟಿಕೊಟ್ಟ್ ಆಟ್, ಬಾಳೋಪಾಟ್, ಬೊಳಕಾಟ್, ಕತ್ತಿಯಾಟ್, ಚೋದ್ಯ-ಚೋದ್ ಇರುವುದು. ಅಕಾಡೆಮಿಯ ತ್ರೈಮಾಸಿಕ ಸಂಚಿಕೆ ‘ಕೊಡವೋಲೆ’ಯನ್ನು ಬಿಡುಗಡೆ ಮಾಡಲಾಗುವುದು. ಕೊಡವ ಸಂಸ್ಕೃಂತಿ, ಸಾಹಿತ್ಯ ಹಾಗೂ ಸಮಾಜಕ್ಕೆ ಕಾಣಿಕೆ ನೀಡಿರುವ ಸ್ಥಳೀಯ ಒಂದಷ್ಟು ಗಣ್ಯರಿಗೆ ಸನ್ಮಾನ ಮಾಡಲಾಗುವುದು. ಅರೆಕಾಡ್-ಹೊಸ್ಕೇರಿ ಗ್ರಾಮದ “ಪೊಮ್ಮಕ್ಕಡ ಒಕ್ಕೂಟ”ದವರ ಹಲವಾರು ಕೊಡವ ಕಾರ್ಯಕ್ರಮಗಳಿಗೆ ಸಿದ್ದತೆಗಳನ್ನು ಕೈಗೊಳ್ಳಲಾಗುತ್ತಿದೆ.
ಈ ವೇಳೆ “ಕೊಡವಡ ಮಾಲ್-ಮಟ ಚಿಂಗಾರ” ವಿಷಯವಾಗಿ ಡಾ. ಮುಲ್ಲೇಂಗಡ ರೇವತಿ ಪೂವಯ್ಯರಿಂದ ವಿಚಾರ ಮಂಡನೆ ಮಾಡಲಿರುವರು. ತಮಿಳಿನ ಮಹಾನ್ ಗ್ರಂಥ ‘ತಿರುಕ್ಕುರಳ್’ನ್ನು ಕೊಡವಕ್ಕೆ ಭಾಷಾಂತರಿಸಿರುವ ರೇವತಿ ಪೂವಯ್ಯರಿಗೆ ಅಕಾಡೆಮಿ ವತಿಯಿಂದ ಕಿರುಕಾಣಿಕೆ ನೀಡಲಾಗುವುದು.
‘ಕೊಡವ ವೆಲ್ಫೇರ್ ಅಂಡ್ ರಿಕ್ರಿಯೇಷನ್ ಅಸೋಸಿಯೇಷನ್” ಉಪಾಧ್ಯಕ್ಷರಾದ ಬಲ್ಲಚಂಡ ವಿಠಲ್ ಕಾವೇರಪ್ಪನವರು “ಅರೆಕಾಡು-ಹೊಸ್ಕೇರಿ ಕೋವುಲ್ ಕೊಡವಡ ನೇರ್ ನೆಲೆ’ ವಿಷಯವಾಗಿ ವಿಚಾರ ಮಂಡಿಸಲಿರುವರು.
‘ನಾಡೊರ್ಮೆ’ಯ ವೈಭವಕ್ಕೆ ಜಿಲ್ಲೆಯ ಶಾಸಕರುಗಳು, ಜಿಲ್ಲಾಧಿಕಾರಿಗಳು, ಅತಿಥಿ ಗಣ್ಯರು ಸಾಕ್ಷಿಯಾಗಲಿರುವುದು ನಾಡಿನ ಜನತೆಗೆ ಸಂತಸ ತಂದಿದೆ ಎಂದು ಅಸೋಸಿಯೇಷನ್ ಅಧ್ಯಕ್ಷರಾದ ಕುಕ್ಕೆರ ಜಯ ಚಿಣ್ಣಪ್ಪ, ರಿಯಾವರ್ ರೆಸಾರ್ಟ್ ಮಾಲಿಕ ಮುಕ್ಕಾಟಿರ ವಿನಯ್, ಶಿಲ್ಪ ತಿಳಿಸಿದ್ದಾರೆ.
Publisher: ಕನ್ನಡ ನಾಡು | Kannada Naadu