ಕನ್ನಡ ನಾಡು | Kannada Naadu

ಕರಾವಳಿಯಲ್ಲಿ 'ಹಿಂಗಾರು' ಮತ್ತೆ ಚುರುಕಾಗಲಿದೆ...  ನ. 9ರ ನಂತರ ಜೋರಾಗಲಿರುವ  ಮಳೆ

02 Nov, 2024

           ಮಂಗಳೂರು:  ದಾನಾ ಚಂಡಮಾರುತದಿಂದಾಗಿ ಕರ್ನಾಟಕದಲ್ಲಿ ಹಿಂಗಾರು ಮಳೆ ಮತ್ತೆ ಚುರುಕಾಗಿದೆ. ಬಂಗಾಳ ಕೊಲ್ಲಿಯ ಅಂಡಮಾನ್‌ ಕರಾವಳಿಯಲ್ಲಿ ಸಣ್ಣ ಪ್ರಮಾಣದ ತಿರುಗುವಿಕೆ (ಮೇಲ್ಮೈ ಸುಳಿಗಾಳಿ) ಉಂಟಾಗುವ ಲಕ್ಷಣಗಳಿದ್ದು, ನ. 4ರಿಂದ ಹಿಂಗಾರು ದುರ್ಬಲಗೊಂಡರೂ ಕೂಡ ನ. 9ರಿಂದ ಮತ್ತೆ ಚುರುಕಾಗುವ ಲಕ್ಷಣಗಳಿವೆ.
          ಮಲೆನಾಡು ಸೇರಿದಂತೆ ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಸಾಧಾರಣದಿಂದ ಮತ್ತೆ ಉತ್ತಮ ಮಳೆ ನಿರೀಕ್ಷೆ ಮಾಡಬಹುದು. ತೀರಾ ಇತ್ತೀಚೆಗೆ ಬಂಗಾಳ ಕೊಲ್ಲಿಯಲ್ಲಿ ದಾನಾ ಚಂಡಮಾರುತ ಕಾಣಿಸಿಕೊಂಡ ಪರಿಣಾಮ ರಾಜ್ಯದಲ್ಲಿ ಹಿಂಗಾರು ಮಳೆ ಕೊಂಚ ಇಳಿಮುಖವಾಗಿತ್ತು. ಚಂಡಮಾರುತ ಪ್ರಬಲವಾಗಿ ಮುಂದುವರಿದರೆ ಹಿಂಗಾರಿನ ತೇವಾಂಶವನ್ನು ಎಳೆದುಕೊಂಡು ಹೋಗಿ ಮಳೆಯನ್ನು ಮತ್ತಷ್ಟು ಇಳಿಸುವ ಸಾಧ್ಯತೆ ಇತ್ತು. ಆದರೆ ದಾನಾದ ಅಬ್ಬರ ಕಡಿಮೆಯಾಗಿದ್ದು, ಉತ್ತರ ಭಾರತದ ಕಡೆಯಿಂದ ಈಗ ಬೀಸುತ್ತಿರುವ ಗಾಳಿಯಿಂದ ಕರ್ನಾಟಕದಲ್ಲಿ ಒಣ ಹವೆ ಉಂಟಾಗಿತ್ತು.
       ನ. 15ರ ನಂತರ ಉತ್ತರ ಭಾರತದಿಂದ ಬೀಸುವ ಗಾಳಿ ಪ್ರಬಲಗೊಂಡರೆ ಮಳೆಯ ಬದಲು ಚಳಿ ಉಂಟಾಗುವ ಸಾಧ್ಯತೆ ಇದೆ. ಹಿಂಗಾರಿನ ವಿಚಾರದಲ್ಲಿ ಕರಾವಳಿಯಲ್ಲಿ ಈ ಬಾರಿ ಮಳೆ ಕಡಿಮೆ ಇದ್ದರೂ ಮಲೆನಾಡು ಮತ್ತು ಉತ್ತರ ಹಾಗೂ ದಕ್ಷಿಣ ಒಳನಾಡು ಭಾಗದಲ್ಲಿ ಉತ್ತಮ ಮಳೆ ಸಾಧ್ಯತೆ ಇದೆ. ಪ್ರತಿ ವರ್ಷವೂ ಮಲೆನಾಡು ಹಾಗೂ ಉತ್ತರ, ದಕ್ಷಿಣ ಒಳನಾಡು ಭಾಗದಲ್ಲಿ ಮಳೆ ಸಾಧ್ಯತೆ ಜಾಸ್ತಿ ಇರುತ್ತದೆ.
           ಹಿಂಗಾರು ಪ್ರಬಲಗೊಳ್ಳುವ ವಿಚಾರದಲ್ಲಿ ಬಂಗಾಳಕೊಲ್ಲಿ ಹಾಗೂ ಅರಬ್ಬಿ ಸಮುದ್ರದಲ್ಲಿ ಬೀಸುವ ಗಾಳಿಯ ಪ್ರಮಾಣ ಹೆಚ್ಚಿದರೆ ಮಳೆ ಸಾಧ್ಯತೆ ಇರುತ್ತದೆ. ಉತ್ತರ ಭಾರತ ಕಡೆಯಿಂದ ಕೇವಲ ಗಾಳಿ ಬೀಸುವುದು ಬಿಟ್ಟರೆ ಮಳೆ ಮೋಡಗಳನ್ನು ಸೃಷ್ಟಿಸುವ ತಾಕತ್ತು ಇರುವುದಿಲ್ಲ ಎನ್ನುತ್ತಾರೆ ಹವಾಮಾನ ವಿಶ್ಲೇಷಕರು.
"ಹಿಂಗಾರು ಮಳೆ ಈ ಬಾರಿ ಇತರ ವರ್ಷಕ್ಕೆ ಹೋಲಿಕೆ ಮಾಡಿದರೆ ಜಾಸ್ತಿ ಇದೆ. ಬೀದರ್‌, ಕಲಬುರ್ಗಿ ಕಡೆಯಲ್ಲಿ ಹೆಚ್ಚಿನ ಮಳೆಯನ್ನು ನಿರೀಕ್ಷೆ ಮಾಡಬಹುದು. ಇದರ ಜತೆಯಲ್ಲಿ ಕರಾವಳಿಯಲ್ಲಿ ಈಗ ಅಲ್ಲಲ್ಲಿ ಮಳೆಯಾಗುತ್ತಿರುವುದು ಹಿಂಗಾರಿನ ಚುರುಕಿಗೆ ಸಾಕ್ಷಿಯಾಗಿದೆ' ಎಂದು ಭಾರತೀಯ ಹವಾಮಾನ ಇಲಾಖೆ ಹಿರಿಯ ವಿಜ್ಞಾನಿ ಸಿ.ಎಸ್‌. ಪಾಟೀಲ್‌ ಮಾಹಿತಿ ನೀಡಿದ್ದಾರೆ. 

Publisher: ಕನ್ನಡ ನಾಡು | Kannada Naadu

Login to Give your comment
Powered by