ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಶುಕ್ರವಾರ ಭಂಡಾರ್ಕಾರ್ಸ್ ಕಾಲೇಜಿನ ಆವರ್ತ ವೇದಿಕೆ, ಅಕಾಡೆಮಿ ಆಫ್ ಜನರಲ್ ಎಜುಕೇಷನ್ ಮಣಿಪಾಲ ಸಹಯೋಗದಲ್ಲಿ ನಡೆದ ರಾಜ್ಯೋತ್ಸವ
49ನೇ ತಾಳಮದ್ದಳೆ ಕಾರ್ಯಕ್ರಮದಲ್ಲಿ ಬಡಗುತಿಟ್ಟು ಯಕ್ಷಗಾನ ಯುವ ಕಲಾವಿದ ಚಂದ್ರಕಾಂತ ರಾವ್ ಮೂಡುಬೆಳ್ಳೆ ಅವರಿಗೆ ಎಚ್. ಶಾಂತಾರಾಮ್ ಯಕ್ಷಗಾನ ಪುರಸ್ಕಾರ ಪ್ರದಾನ ಮಾಡಲಾಯಿತು.
ಅಧ್ಯಕ್ಷತೆ ವಹಿಸಿದ್ದ ಭಂಡಾರ್ಕಾರ್ಸ್ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಎಚ್. ಶಾಂತಾರಾಮ್ ಮಾತನಾಡಿ, ಕಲಾವಿದ ಚಂದ್ರಕಾಂತ ರಾವ್ ಅವರ ಸಾಧನೆ ದೊಡ್ಡದು. ಅವರ ಸಾಧನೆ ವಿಶ್ವದ ಉದ್ದಗಲಕ್ಕೂ ಬೆಳೆಯಲಿ. ಪುರಸ್ಕಾರವು ಅವರ ಸಾಧನಾ ಪೂರ್ಣ ಯಶಸ್ಸಿಗೆ ಪ್ರೇರಣೆಯಾಗಲಿ ಎಂದರು.
ಸಾಲಿಗ್ರಾಮ ಮೇಳದ ಯಜಮಾನ ಕಿಶನ್ ಹೆಗ್ಡೆ ಅಭಿನಂದನಾ ಭಾಷಣ ಮಾಡಿದರು. ಕಾಲೇಜು ಆಡಳಿತ ಮಂಡಳಿ ಸದಸ್ಯ ಯು.ಎಸ್.ಶೆಣೈ ಶುಭ ಹಾರೈಸಿದರು.
ಪುರಸ್ಕಾರ ಪಡೆದುಕೊಂಡ ಚಂದ್ರಕಾಂತ ರಾವ್ ಮೂಡುಬೆಳ್ಳೆ ಮಾತನಾಡಿ, ಪುರಸ್ಕಾರ ದೊರೆತಿರುವುದು ನನ್ನ ಪಾಲಿನ ಅದೃಷ್ಟ, ಸುಯೋಗ. ನನಗೆ ಯಕ್ಷಗಾನ ಕಲಿಸಿದ ಗುರುಗಳು, ವೃತ್ತಿ ಜೀವನದಲ್ಲಿ ಸಹಕಾರ ನೀಡಿದ ಮೇಳದ ಯಜಮಾನರಿಗೆ ಅರ್ಪಿಸುತ್ತೇನೆ ಎಂದರು.
ಭಂಡಾರ್ಕಾರ್ಸ್ ಕಾಲೇಜು ವಿಶ್ವಸ್ಥ ಶಾಂತಾರಾಮ್ ಪ್ರಭು, ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಪ್ರೊ.ಸತ್ಯನಾರಾಯಣ, ಆವರ್ತ ಯಕ್ಷ ವೇದಿಕೆ ಸಂಯೋಜಕ ಶಶಾಂಕ್ ಪಟೇಲ್ ಇದ್ದರು. ಪದವಿ ಕಾಲೇಜು ಪ್ರಾಂಶುಪಾಲ ಶುಭಕರಾಚಾರಿ ಸ್ವಾಗತಿಸಿದರು. ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಜಿ.ಎಂ.ಗೊಂಡ ವಂದಿಸಿದರು. ಉಪನ್ಯಾಸಕ ದುರ್ಗಾಪ್ರಸಾದ್ ಮಯ್ಯ ಅಭಿನಂದನಾ ಪತ್ರ ವಾಚಿಸಿದರು. ಭಂಡಾರ್ಕಾರ್ಸ್ ಕಾಲೇಜಿನ ಸಮುದಾಯ ಬಾನುಲಿ ಕೇಂದ್ರ ರೇಡಿಯೊ ಕುಂದಾಪ್ರ 89.6 ಎಫ್.ಎಂ.ನ ಇದರ ಕಾರ್ಯಕ್ರಮ ನಿರ್ವಾಹಕಿ ಜ್ಯೋತಿ ಅಲ್ಸೆ ನಿರೂಪಿಸಿದರು.
Publisher: ಕನ್ನಡ ನಾಡು | Kannada Naadu