ಕನ್ನಡ ನಾಡು | Kannada Naadu

“ಐರಾವತ ಕ್ಲಬ್ ಕ್ಲಾಸ್-2.0” 20 ವೋಲ್ವೋ ಬಸ್ಸುಗಳಿಗೆ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ

30 Oct, 2024

ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ “ಐರಾವತ ಕ್ಲಬ್ ಕ್ಲಾಸ್ – 2.0” 20 ವೋಲ್ವೋ ಬಸ್‍ಗಳಿಗೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದ ಮುಂಭಾಗ ಹಸಿರು ಧ್ವಜ ತೋರಿಸುವುದರ ಚಾಲನೆ ನೀಡಿದರು.
 
ಇದೇ ಸಂದರ್ಭದಲ್ಲಿ ಸೇವೆಯಲ್ಲಿದ್ದಾಗಲೇ ಮೃತರಾದ ಕುಟುಂಬದವರ ಮಕ್ಕಳಿಗೆ ಹಾಗೂ ಕುಟುಂಬದ ಅವಲಂಬಿತರಿಗೆ ರೂ 1.00 ಕೋಟಿ ಚೆಕ್‍ನ್ನು ವಿತರಿಸಿದರು.



ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕರ್ನಾಟಕ ರಾಜ್ಯವು ದೇಶದ ರಸ್ತೆ ಸಾರಿಗೆ ಸಂಸ್ಥೆಗಳಲ್ಲಿಯೇ ಮಂಚೂಣಿಯಲ್ಲಿದ್ದು, 24282  ರಾಜ್ಯ ಸಾರಿಗೆ ಬಸ್ಸುಗಳನ್ನು ಹೊಂದಿದ್ದು ಪ್ರಥಮ ಸ್ಥಾನದಲ್ಲಿದೆ ಎಂದು ತಿಳಿಸಿದರು.

ಸರ್ಕಾರವು ರಾಜ್ಯ ರಸ್ತೆ ಸಾರಿಗೆ ನಿಗಮಗಳಿಗೆ 5800 ಹೊಸ ಬಸ್ಸುಗಳ ಸೇರ್ಪಡೆಗೆ ಅನುಮೋದನೆ ನೀಡಿದ್ದು, ಈ ಪೈಕಿ ನಾಲ್ಕು ನಿಗಮಗಳಲ್ಲಿ ಕಳೆದ ಒಂದು ವರ್ಷದಲ್ಲಿ 3417 ಬಸ್ಸುಗಳನ್ನು ಸೇರ್ಪಡೆಗೊಳಿಸಲಾಗಿದೆ. ನಾಲ್ಕು ನಿಗಮಗಳಲ್ಲಿ 9000 ಹುದ್ದೆಗಳ ನೇಮಕಾತಿಗೆ ಸರ್ಕಾರವು ಅನುಮತಿ ನೀಡಿದ್ದು, ಈ ಪೈಕಿ 1833, ಚಾಲಕ ಕಂ ನಿರ್ವಾಹಕ ಹಾಗೂ ತಾಂತ್ರಿಕ ಸಿಬ್ಬಂದಿಗಳಿಗೆ ನೇಮಕಾತಿ ಆದೇಶ ನೀಡಲಾಗಿದೆ. 6500 ಹುದ್ದೆಗಳ ನೇಮಕಾತಿಗೆ ಪ್ರಕ್ರಿಯೆ ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.

ಕಳೆದ ಒಂದು ವರ್ಷದ ಅವಧಿಯಲ್ಲಿ ನಾಲ್ಕು ನಿಗಮಗಳಲ್ಲಿ 1000 ಮೃತ ಸಿಬ್ಬಂದಿಗಳ ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿಗೆ ಆದೇಶ ನೀಡಲಾಗಿದೆ. ಸಾರಿಗೆ  ಇಲಾಖೆಯ ಸಚಿವರಾದ ರಾಮಲಿಂಗಾ ರೆಡ್ಡಿ ಅವರು ಸಾರಿಗೆ ಇಲಾಖೆಯಲ್ಲಿ ಹೊಸ ಕ್ರಾಂತಿಯನ್ನೇ ಮಾಡಿದ್ದಾರೆ ಎಂದು ಶ್ಲಾಘಿಸಿದರು.

ಕೆಲವು ಮಹಿಳೆಯ ನಾವು ಹಣ ನೀಡಿ ಪ್ರಯಾಣ ಮಾಡಲು ಸಿದ್ದರಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ. ಈ ವಿಷಯದ ಕುರಿತು  ಸಭೆ ಕರೆದು ಚರ್ಚೆ ಮಾಡಿ ನಿರ್ಧರಿಸಲಾಗುವುದು. ಉಪಮುಖ್ಯಮಂತ್ರಿಗಳು ಐರಾವತ ಬಸ್ಸಿನಲ್ಲಿ ಸಂಚಾರ ಮಾಡಲು ವ್ಯಕ್ತ ಪಡಿಸಿದಾಗ ಸಾರಿಗೆ ಸಚಿವರು ಬೆಳಗಾಂ ಅಧಿವೇಶನದಲ್ಲಿ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಅಪಘಾತಕ್ಕೆ ಒಳಪಟ್ಟು ಮೃತಪಟ್ಟ ಇಬ್ಬರು ಸಿಬ್ಬಂದಿಗಳ ಅವಲಂಬಿತರಿಗೆ ತಲಾ ರೂ.1 ಕೋಟಿ ಚೆಕ್ ನೀಡಲಾಯಿತು.



ಕಾರ್ಯಕ್ರಮದಲ್ಲಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್,  ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರು ಹಾಗೂ ಶಾಸಕ ಎಸ್.ಆರ್.ಶ್ರೀನಿವಾಸ್, ಉಪಾಧ್ಯಕ್ಷ ಮೊಹಮ್ಮದ್ ರಿಜ್ವಾನ್ ನವಾಬ್, ಸಾರಿಗೆ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ ಎನ್.ವಿ ಪ್ರಸಾದ್ ಸೇರಿದಂತೆ ಹಿರಿಯ ಗಣ್ಯರು ಸಾರಿಗೆ ನಿಗಮದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Publisher: ಕನ್ನಡ ನಾಡು | Kannada Naadu

Login to Give your comment
Powered by