ಉಡುಪಿ : ನಾಳೆ ಬೆಳಗಾದರೆ ಬೆಳಕಿನ ಹಬ್ಬ ದೀಪಾವಳಿ... ಹಬ್ಬದ ಸಂಭ್ರಮಕ್ಕೆ ಎಲ್ಲೆಡೆ ತಯಾರಿ ಜೋರು . ಕೃಷ್ಣನನಾಡು ಉಡುಪಿಯಲ್ಲಿಯೂ ಹಬ್ಬದ ಭರಾಟೆ ಕಳೆಕಟ್ಟುತ್ತಿದೆ. ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಭರ್ಜರಿಯಾಗಿ ಮುಂದುವರೆದಿದೆ..
ಒಂದು ಕಡೆ ನಗರಿಕರಣ ಬೆಳೆಯುತ್ತಿದ್ದಂತೆ ಮಾಲ್ ಸಂಸ್ಕೃತಿ ನಾಯಿಕೊಡೆಯಂತೆ ಹುಟ್ಟಿಕೊಳ್ಳುತ್ತಿದೆ. ಅದರ ಜೊತೆಗೆ ಶಾಪಿಂಗ್ ಸೆಂಟರ್ ಗಳ ಭರಾಟೆಯೂ ಹೆಚ್ಚಾಗುತ್ತಿವೆ. ಈ ಮಧ್ಯ ಚಿಕ್ಕ-ಪುಟ್ಟ ಅಂಗಡಿಯವರು, ಬೀದಿ ವ್ಯಾಪಾರಿಗಳು ಇನ್ನು ಮುಂದೆ ವ್ಯಾಪಾರ ಹೆಂಗಪ್ಪ ಎನ್ನುವ ಹೊತ್ತಿಗೆ ಹಬ್ಬದ ಶಾಪಿಂಗ್ ಸಕ್ಕತ್ತಾಗಿಯೇ ನಡೆಯುತ್ತಿದೆ.
ಹಬ್ಬದ ಸಿಹಿ ಹೆಚ್ಚಿಸಲು ವಿವಿಧ ರುಚಿಯ ಸಿಹಿ ತಿಂಡಿಗಳು ಬೇಕರಿ ಅಂಗಡಿಗಳಲ್ಲಿ ಮಾರಾಟಕ್ಕಿಡಲಾಗಿದೆ. ಸಿಹಿತಿಂಡಿ ವ್ಯಾಪಾರ ಮಳಿಗೆ ಮತ್ತು ಜವಳಿ ಮಳಿಗೆಯಲ್ಲಿ ವ್ಯಾಪಾರ ಚಟುವಟಿಕೆ ಗರಿಗೆದರಿದೆ. ಗ್ರಾಹಕರು ಮನೆ ಮತ್ತು ಹಿತೈಷಿಗಳಿಗೆ ವಿತರಿಸಲು, ಉಡುಗೊರೆಯ ಜತೆ ನೀಡಲು ಬಗೆಬಗೆ ಸಿಹಿತಿಂಡಿ ಮತ್ತು ಡ್ರೈಫ್ರುಟ್ಸ್ಗಳನ್ನು ಖರೀದಿ ಮಾಡುತ್ತಿದ್ದಾರೆ. ಹೊಸ ಬಟ್ಟೆ ಖರೀದಿಯೂ ಜೋರಾಗಿದೆ.
ಮಾರುಕಟ್ಟೆಯಲ್ಲಿ ಸಾಂಪ್ರದಾಯಿಕ ಶೈಲಿಯ ಗೂಡುದೀಪ ಗಳೊಂದಿಗೆ ನವೀನ ವಿನ್ಯಾಸದ ಬಣ್ಣಬಣ್ಣದ ಗೂಡುದೀಪ, ಮಣ್ಣಿನ ಹಣತೆಗಳು ಕಂಗೊಳಿಸುತ್ತಿದೆ. ಸ್ಥಳೀಯರಷ್ಟೆ ಅಲ್ಲದೇ ಅನ್ಯ ಜಿಲ್ಲೆಗಳ ವ್ಯಾಪಾರಿಗಳು ರಸ್ತೆ ಬದಿ ಹಣತೆ ಮಾರಾಟ ಮಾಡುತ್ತಿದ್ದಾರೆ. ಬಟ್ಟೆ, ಬಣ್ಣದ ಕಾಗದಗಳಿಂದ ಮಾಡಿದ ಗೂಡು ದೀಪಗಳು ಮಾರುಕಟ್ಟೆಯಲ್ಲಿವೆ. ಇವುಗಳ ಪೈಕಿ ಬಣ್ಣದ ಕಾಗದದ ಗೂಡುದೀಪಗಳಿಗೆ ಹೆಚ್ಚಿನ ಬೇಡಿಕೆ ಇದೆ. ಮಂಗಳವಾರ ಮಾರುಕಟ್ಟೆಯಲ್ಲಿ ಹಣ್ಣು, ತರಕಾರಿ ದರ ಎಂದಿಗಿಂತ ತುಸು ಏರಿಕೆಯಾಗಿತ್ತು. ಬುಧವಾರ, ಗುರುವಾರ ಮತ್ತಷ್ಟೂ ಬೆಲೆ ಏರಿಳಿಕೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಹೂವಿನ ವ್ಯಾಪಾರಿಗಳು.
ಬಂಗಾರದ ಬೆಲೆ ಏರಿದ್ದರೂ ಖರೀದಿ ಮಾತ್ರ ಕಡಿಮೆಯಾಗಿಲ್ಲ. ಇನ್ನು ಲಕ್ಷ್ಮೀ ಪೂಜಾ ಸಾಮಗ್ರಿಗಳು ಮಳಿಗೆ ತುಂಬಿಕೊಂಡಿದೆ. ಬೆಳ್ಳಿ-ಬಂಗಾರದ ಆಭರಣಗಳು ಕಾಲಿಟ್ಟಿವೆ. ಪ್ರತಿವರ್ಷದಂತೆ ಈ ವರ್ಷವೂ ಜುವೆಲರಿ ಶಾಪ್ಗ್ಳು ನಾನಾ ಬಗೆಯ ಕೊಡುಗೆಗಳನ್ನು ಪ್ರಕಟಿಸಿವೆ. ಇದರೊಂದಿಗೆ ಆಭರಣಗಳ ಸೆಟ್ಗಳ ಮಾರಾಟದಲ್ಲಿ ಹೆಚ್ಚಳ ಕಂಡಿದೆ.
ದೀಪಾವಳಿ ಹಬ್ಬಕ್ಕೆ ಈಗಾಗಲೇ ಮನೆಗಳಲ್ಲಿ ಶುಚಿತ್ವ ಕಾರ್ಯ ನಡೆದಿದೆ. ಕೃಷಿ ಸಲಕರಣೆ, ಗದ್ದೆ, ತೋಟ ಮತ್ತಿತರ ಕಡೆ ಪೂಜೆ, ಪೊಲಿ ಪೂಜೆ, ಗೋಪೂಜೆ, ಬಲೀಂದ್ರ ಕರೆಯುವುದು, ದೈವಗಳಿಗೆ ವಿಶೇಷ ಪೂಜೆ ನಡೆಸಲು ಸಿದ್ಧತೆ ನಡೆಯುತ್ತಿದೆ. ಗೃಹಾಲಂಕಾರ ಹಾಗೂ ಎಲೆಕ್ಟ್ರಾನಿಕ್ ಐಟಂಗಳ ಮಾರಾಟ ಕೂಡ ಹೆಚ್ಚಾಗಿದೆ. ಒಟ್ಟಾರೆಯಾಗಿ ಉಡುಪಿ ಜಿಲ್ಲೆಯಾಧ್ಯಂತ ದಿಪಾವಳಿ ಕಳೆ ಕಟ್ಟಿದೆ.
Publisher: ಕನ್ನಡ ನಾಡು | Kannada Naadu