ಕನ್ನಡ ನಾಡು | Kannada Naadu

ಶೃಂಗೇರಿ ಜಗದ್ಗುರುಭಾರತೀತೀರ್ಥಸ್ವಾಮೀಜಿ ಅವರ ಸಂನ್ಯಾಸ ಧೀಕ್ಷೆಯ ಸುವರ್ಣ ಮಹೋತ್ಸವ.

27 Oct, 2024



ಬೆಂಗಳೂರು ; ಹಿಂದೂ ಸಂಸ್ಕೃತಿ ಎಲ್ಲವನ್ನೊಳಗೊಂಡಿದ್ದು, ದೈವತ್ವದಲ್ಲಿ ಬಿನ್ನತೆ ಕಾಣಬಾರದು. ಸಂತಸದ ಮೂಲ ಸಂಪತ್ತಲ್ಲ, ಸತ್ಯ ಮಾರ್ಗದಲ್ಲಿ ನಡೆಯುವುದರಲ್ಲಿ ನೈಜ ಸಂತೋಷ ಸಿಗುತ್ತದೆ ಎಂದು ಉಪರಾಷ್ಟ್ರಪತಿ ಜಗದೀಪ್ ಧನಕರ್ ಹೇಳಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿಂದು ಕೆ.ಆರ್.ನಗರದ ಯಡತೊರೆ ಯೋಗಾನಂದೇಶ್ವರ ಸರಸ್ವತೀ ಮಠಾಧೀಶರಾದ ಶಂಕರಭಾರತೀ ಸ್ವಾಮೀಜಿ ನೇತೃತ್ವದಲ್ಲಿ ದಕ್ಷಿಣಾಮ್ನಾಯ ಶ್ರೀ ಶೃಂಗೇರಿ ಶಾರದಾಪೀಠಾಧೀಶ್ವರರಾದ ಜಗದ್ಗುರು ಶಂಕರಾಚಾರ್ಯ ಭಾರತೀ ತೀರ್ಥ ಮಹಾಸ್ವಾಮೀಜಿ ಅವರ ಸಂನ್ಯಾಸ ಸ್ವೀಕಾರದ ಸುವರ್ಣ ಮಹೋತ್ಸವ ನಿಮಿತ್ತ ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದ್ದ ಸುವರ್ಣ ಭಾರತೀ ಸಮಾವೇಶದಲ್ಲಿ ಲಕ್ಷಾಂತರ ಭಕ್ತರಿಂದ ನಮ: ಶಿವಾಯ ಸ್ತೋತ್ರಮಹಾಸಮರ್ಪಣೆ ನಡೆಯಿತು. ಇದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲಾಯಿತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಉಪರಾಷ್ಟ್ರಪತಿ ಅವರು, ನಮ್ಮಲ್ಲಿ ದಿರಿದ್ರ ನಾರಾಯಣ ಪರಿಕಲ್ಪನೆ ಅತ್ಯಂತ ಆಳವಾದದ್ದು. ಬಡವರಲ್ಲಿಯೂ ಸಹ ದೇವರನ್ನು ಕಾಣುವ ಉದಾತ್ತ ಚಿಂತನೆ ನಮ್ಮದಾಗಿದೆ. ಬಡವರಿಗೆ ನೆರವಾಗುವುದು ಇದರ ಅರ್ಥ ಎಂದರು.

ವಿವಿಧತೆಯಲ್ಲಿ ಏಕತೆ ಕಾಣುವ ದೇಶ ನಮ್ಮದು. ವಸುದೈವ ಕುಟುಂಬಕಂ ಎಂಬುದು ನಮ್ಮ ಜೀವನಶೈಲಿ, ಮಾನವೀಯತೆಯೇ ಭಾರತೀಯ ಸಂಸ್ಕೃತಿ. ಇಡೀ ಮಾನವೀಯತೆಗೆ ಭಾರತ ನೆಲೆಯಾಗಿದೆ. ಆದಿ ಶಂಕರಾಚಾರ್ಯರು ನಡೆದು ಬಂದ ಹಾದಿಯಲ್ಲಿ ಮತ್ತು ಅವರು ಬೋಧಿಸಿದ ಧಾರ್ಮಿಕ ತತ್ವವನ್ನು ನಾವೆಲ್ಲ ಅನುಕರಣೆ ಮಾಡಬೇಕಿದೆ ಎಂದು ಹೇಳಿದರು.
ಒಂದು ಕಾಲದಲ್ಲಿ ಭಾರತದ ಶ್ರೀಮಂತ ಸಂಸ್ಕತಿ ಪರಂಪರೆಯ ಸುವರ್ಣ ಯುಗವಾಗಿತ್ತು. ಇಂದು ಅನೇಕ ಸವಾಲುಗಳನ್ನು ನಾವು ಎದುರಿಸುತ್ತಿದ್ದೇವೆ. ಈ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ನಮ್ಮ ಸಂಸ್ಕೃತಿ, ಧರ್ಮದ ಉಳಿವಿಗೆ ಒಗ್ಗಟ್ಟಾಗಿ ಶ್ರಮಿಸಬೇಕಾಗಿದೆ ಎಂದು ಉಪರಾಷ್ಟ್ರಪತಿ ಹೇಳಿದರು.
ಸಮಾನತೆ, ಅಹಿಂಸೆ, ಏಕತೆಯಂತಹ ಅಂಶಗಳನ್ನು ಪಾಲಿಸುವ ಮೂಲಕ ಶತಶತಮಾನಗಳಿಂದ ಭಾರತ ಜಗತ್ತಿಗೆ ಒಳಗೊಳ್ಳುವಿಕೆ ಏನೆಂಬುದನ್ನು ತೋರಿಸಿಕೊಟ್ಟಿದೆ. ಭಾರತ ಹಲವು ಧರ್ಮಗಳ ಜನ್ಮಸ್ಥಳವಾಗಿದೆ. ನಾನು ವೈಯಕ್ತಿಕವಾಗಿ ಈ ಮಂತ್ರ ಪಾರಾಯಣ ಕೇಳಿ  ಮಂತ್ರಮುಗ್ಧನಾಗಿರುತ್ತೇನೆ. ಮಂತ್ರಪಾರಾಯಣದ ಲಯ, ಸಂಯೋಜನೆ, ಆಲಿಸಿದ ನನ್ನ ಮನಸ್ಸು ಸಂತೃಷ್ಟಗೊಂಡಿತು. ಇದು  ನಮ್ಮ  ಭಾರತೀಯ ಸಂಸ್ಕೃತಿಯ ಕೊಂಡಿಯನ್ನು ಬಲಪಡಿಸುವ ಕೆಲಸವಾಗಿದೆ. ಸನಾತ ಧರ್ಮವು  ತಾಳ್ಮೆ, ಅನುಕಂಪ, ಇತರರ ಕಲ್ಯಾಣಕ್ಕೆ  ಹೆಸರಾಗಿದೆ.  ನಾವು ನಮ್ಮ ಬಗ್ಗೆ ಅಲ್ಲದೇ ಇತರರ ಒಳಿತಿನ ಬಗ್ಗೆ ಚಿಂತಿಸಬೇಕಾಗಿದೆ ಎಂದರು.
ಉಪ ಮುಖ್ಯಮಂತ್ರಿ ಡಿ. ಕೆ.ಶಿವಕುಮಾರ್ ಮಾತನಾಡಿ, ಭಾರತೀ ತೀರ್ಥರು ಧರ್ಮ ಉಳಿಸುವ ಕೆಲಸ ಮಾಡಿದ್ದಾರೆ. ನಾವೆಲ್ಲರೂ ಭಕ್ತಿ ಸಾಗರದಲ್ಲಿ ಭಾಗಿಯಾಗಿದ್ದೇವೆ. ನಮ್ಮ ಪ್ರಯತ್ನದಲ್ಲಿ ಸೋಲಾಗಬಹುದು. ಆದರೆ ಪ್ರಾರ್ಥನೆ ನಿಷ್ಪಲವಾಗುವುದಿಲ್ಲ.  ಶೃಂಗೇರಿ ಮಠ ಧರ್ಮ ಉಳಿಸುವ ಕೆಲಸ ಮಾಡುತ್ತಿದೆ. ಇಡೀ ಸರ್ಕಾರ ಮಠದ ಜೊತೆಗೆ  ಇದೆ. ಧರ್ಮ ಕಾರ್ಯಗಳ ಮೂಲಕ ಜನರ ಗೌರವ ಉಳಿಸಿಕೊಂಡಿರುವ ಮಠಗಳಲ್ಲಿ ಶೃಂಗೇರಿ ಮಠವು ಮುಂಚೂಣಿಯಲ್ಲಿದೆ". ಈ ಸುದಿನದಂದು ಶಿವನ ಧ್ಯಾನ, ಪ್ರಾರ್ಥನೆಯ ಮೂಲಕ ಸಮಸ್ತ ಜನರಿಗೆ ಒಳ್ಳೆಯದನ್ನು ಮಾಡುವಂತೆ ನಾವೆಲ್ಲರೂ ಸೇರಿ ಪ್ರಾರ್ಥನೆ ಮಾಡೋಣ". "ಧರ್ಮ ಯಾವುದಾದರೂ ತತ್ವ ಒಂದೇ. ನಾಮ ನೂರಾದರೂ ದೈವ ಒಂದೇ. ಪೂಜೆ ಯಾವುದಾದರೂ ಭಕ್ತಿ ಒಂದೇ. ಕರ್ಮ ಯಾವುದಾದರೂ ನಿಷ್ಠೆ ಒಂದೇ. ದೇವನೊಬ್ಬ ನಾಮ ಹಲವು. ನನಗೂ ಮಠಕ್ಕೂ ಗುರುಭಕ್ತನ ಸಂಬಂಧ ಎಂದರು.
ಶೃಂಗೇರಿ ಶಾರದ ಪೀಠಾಧೀಶ್ವರರಾದ ಪರಮಪೂಜ್ಯ ಭಾರತಿ ತೀರ್ಥ ಸ್ವಾಮಿಗಳು ಕಳೆದ ಐದು ದಶಕಗಳಿಂದ ಜನಕಲ್ಯಾಣಕ್ಕಾಗಿ ಅದ್ಭುತ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಮಾರ್ಗದರ್ಶನದಿಂದ ನಾವು ಮುನ್ನೆಡೆಯುತ್ತಿರುವುದು ಅದೃಷ್ಟವೇ ಸರಿ. ಇವರ ಆಧ್ಯಾತ್ಮಿಕ ಚಿಂತನೆಗಳು ನಮ್ಮ ಮನಸ್ಸಿಗೆ ಹಾಗೂ ವಾತಾವರಣಕ್ಕೆ  ಆಹ್ಲಾದಕರ ಭಾವನೆಯನ್ನು ಉಂಟುಮಾಡುತ್ತದೆ ಎಂದರು.
ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಕಳುಹಿಸಿದ್ದ ಸಂದೇಶವನ್ನು  ಹಿರಿಯ ನ್ಯಾಯವಾದಿ ಅಶೋಕ ಹಾರ್ನಳ್ಳಿ ಓದಿದರು. ಸಮಾಜದಲ್ಲಿನ ಸಮಸ್ಯೆಗಳ ನಿವಾರಣೆ ಹಾಗೂ ಜ್ಞಾನಕ್ಕಾಗಿ ತಮ್ಮ ಜೀವನವನ್ನು ಶಂಕರಾಚಾರ್ಯರು ಮುಡುಪಾಗಿಟ್ಟಿದ್ದರು. ಈಗ ಸನ್ಯಾಸ ಸ್ವೀಕಾರಿಸಿ ಸುವರ್ಣ ಮಹೋತ್ಸವ ಆಚರಿಸುತ್ತಿರುವ ಶ್ರೀ ಭಾರತಿತೀರ್ಥ ಸ್ವಾಮೀಜಿ ಅವರು ಕ್ಲಿಷ್ಟಕರ ಆಧ್ಯಾತ್ಮಿಕ ವಿಷಯಗಳನ್ನು ಸಾಮಾನ್ಯ ಜನರಿಗೆ ತಿಳಿಯುವಂತೆ ಪ್ರತಿಪಾದಿಸುತ್ತಿದ್ದರು ಎಂದರು.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತನಾಡಿ, ಎಲ್ಲರು ಸಮಾನರು ಎಂದು ಸಾರಿದ ಜಗತ್ತಿನ ಮೊದಲನೇ ಸಮಾನತೆಯ ಹರಿಕಾರ ಶಂಕರಾಚಾರ್ಯರಾಗಿದ್ದರು. ನಡವಳಿಕೆ ಎಲ್ಲರಿಗೂ ಆದರ್ಶವಾಗಿರುತ್ತದೆ. ತಾವು ನುಡಿದಂತೆ ನಡೆದು, ಸಮಸ್ತ ಜನರಿಗೆ ಭಾರತಿ ತೀರ್ಥ ಸ್ವಾಮೀಜಿಗಳು ಆದರ್ಶಪ್ರಾಯರಾಗಿದ್ದಾರೆ ಎಂದು ಹೇಳಿದರು.
ನಮ: ಶಿವಾಯ ಸ್ತೋತ್ರಮಹಾಸಮರ್ಪಣೆಯಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೆ ಪಾತ್ರವಾಗಿದ್ದು, ಈ ಕುರಿತು ದಾಖಲೆಗಳನ್ನು ಸ್ವೀಕರಿಸಿ ಮಾತನಾಡಿದ ಶೃಂಗೇರಿ ಪೀಠಾಧೀಶರಾದ ವಿಧುಶೇಖರಭಾರತೀ ಸ್ವಾಮೀಜಿ, ಹಿಂದೂ ಧರ್ಮ ಉಳಿದರೆ ಜಗತ್ತಿನ ಎಲ್ಲಾ ಧರ್ಮಗಳು ಉಳಿಯಲಿದೆ. ಹಿಂದೂ ಧರ್ಮ ರಕ್ಷಣೆಗೆ ಎಲ್ಲರೂ ಏಕ ಧ್ವನಿಯಿಂದ ಮುನ್ನಡೆಯಬೇಕಾಗಿದೆ ಎಂದರು.
ಶಂಕರಭಾರತೀ ಮಹಾಸ್ವಾಮೀಜಿಯವರು ಆಡಂಬರಗಳಿಲ್ಲದೇ ನೈಜ ಕೆಲಸ ಮಾಡುವ ಯತಿಗಳಾಗಿದ್ದು, ಈ ಕಾರ್ಯಕ್ರಮ ಯಶಸ್ಸು ಸಾಧಿಸಿರುವುದು ಅತ್ಯಂತ ಸಂತೋಷವಾಗಿದೆ. ಭ್ರಹ್ಮಾನಂದ ಭಾರತಿ ಸ್ವಾಮೀಜಿ ಅವರು ಸಹ ಗುರುಗಳನ್ನು ಅನುಸರಣೆ ಮಾಡುತ್ತಿದ್ದು, ವೇದಾಂತ ಭಾರತಿ ಸಂಸ್ಥೆ ಕಾಯಕ ನಿಷ್ಟೆಗೆ ಹೆಸರಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಬ್ರಹ್ಮಾನಂದ ಭಾರತಿ ಸ್ವಾಮೀಜಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Publisher: ಕನ್ನಡ ನಾಡು | Kannada Naadu

Login to Give your comment
Powered by