ಕನ್ನಡ ನಾಡು | Kannada Naadu

ಸ್ನಾತಕೋತ್ತರ ಪದವಿಯ ಸಂಶೋಧನಾ ಮಾರ್ಗದರ್ಶಿಗಳ ಕ್ಷಮತೆ ವೃದ್ಧಿ ರಾಷ್ಟ್ರೀಯ ಕಾರ‍್ಯಗಾರ 

26 Oct, 2024


 
 ಮೂಡುಬಿದಿರೆ : ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಹಾಗೂ ಭಾರತೀಯ ಔಷಧ ಪದ್ಧತಿಯ ರಾಷ್ಟ್ರೀಯ ಆಯೋಗದ ಜಂಟಿ ಆಶ್ರಯದಲ್ಲಿ ಮೂರು ದಿನಗಳ ಕಾಲ ನಡೆದ ರಾಷ್ಟ್ರೀಯ ಕಾರ‍್ಯಗಾರ- ‘ಸ್ನಾತಕೋತ್ತರ ಪದವಿಯ ಸಂಶೋಧನಾ ಮಾರ್ಗದರ್ಶಿಗಳ ಕ್ಷಮತೆ ವೃದ್ಧಿ ಶನಿವಾರ ವಿಎಸ್ ಆಚಾರ‍್ಯ ಸಭಾಂಗಣದಲ್ಲಿ ಸಂಪನ್ನಗೊಂಡಿತು. ಸಮಾರೋಪ ಕರ‍್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಸಂಶೋಧನಾ ಕ್ಷೇತ್ರದ ನಾವಿನ್ಯತೆಗಳ ಕುರಿತು ತಿಳಿದುಕೊಳ್ಳಲು ಆಯೋಜಿಸಿದ ಈ ಕಾರ‍್ಯಗಾರವು ಹೆಚ್ಚು ಅರ್ಥಪೂರ್ಣವಾಗಬೇಕಾದರೆ, ಭಾಗವಹಿಸಿದ ಫಲಾನುಭವಿಗಳು ತಾವು ಆಯ್ಕೆ ಮಾಡಿಕೊಂಡ ಕ್ಷೇತ್ರದಲ್ಲಿ ಗಹನವಾಗಿ ಅಧ್ಯಯನ ನಡೆಸಿ, ಸಂಶೋಧನೆಯನ್ನು ಇನ್ನಷ್ಟು ಮೌಲ್ಯಯುತಗೊಳಿಸಬೇಕು ಎಂದರು. ಇದಕ್ಕೆಲ್ಲಾ ಪ್ರೇರಣೆ ನಮ್ಮೊಳಗೆ ಮೂಡಬೇಕಿದೆ ಎಂದರು. ಜನರು ತಾವು ನಿರ್ಮಿಸಿಕೊಂಡ ಆರಾಮ ವಲಯದಿಂದ ಹೊರಬರಬೇಕಿದೆ. ಮಾನವ ಸಂಪತ್ತು ಭಾರತದ ದೊಡ್ಡ ಆಸ್ತಿ. ಇದರ ಸದುಪಯೋಗವಾಗಬೇಕಿದೆ ಎಂದರು. ಮೂರು ದಿನಗಳ ಕಾರ‍್ಯಗಾರದಲ್ಲಿ ಲೇಖನ ಪ್ರಕಟಣೆ, ಕ್ಲಿನಿಕಲ್ ಸಂಶೋಧನೆ, ಜೌಷಧ ಸಂಶೋಧನೆ, ಸಾಹಿತ್ಯ ಸಂಶೋಧನೆ, ಹಾಗೂ ಪ್ರಾಣಿ ಪ್ರಯೋಗಗಳು, ಇವೇ ಮುಂತಾದ ವಿಷಯಗಳ ಕುರಿತು ದೇಶದಾದ್ಯಂತ ಆಗಮಿಸಿದ 10 ಸಂಪನ್ಮೂಲ ವ್ಯಕ್ತಿಗಳು ಒಟ್ಟು 20 ಅಧಿವೇಶನಗಳಲ್ಲಿ ಮಾಹಿತಿ ನೀಡಿದರು. ದೇಶದ 10 ವಿವಿಧ ಆಯುರ್ವೇದ ಕಾಲೇಜುಗಳಿಂದ 59 ಜನ ಸಂಶೋಧನಾ ಮಾರ್ಗದರ್ಶಿ ಭಾಗವಹಿಸಿದರು.
 
          ಸಮಾರೋಪ ಸಮಾರಂಭದಲ್ಲಿ ಕಣ್ಣೂರು ಆಯುರ್ವೇದ ಕಾಲೇಜು, ಎಸ್‌ಡಿಎಮ್ ಆಯುರ್ವೇದ ಕಾಲೇಜು ಉಡುಪಿ, ಕರ್ನಾಟಕ ಆಯುರ್ವೇದ ಕಾಲೇಜು ಮಂಗಳೂರು, ಕೆವಿಜಿ ಕಾಲೇಜು ಸುಳ್ಯ, ಎಸ್‌ಡಿಎಮ್ ಆಯುರ್ವೇದ ಕಾಲೇಜು, ಹಾಸನ, ಜೆಎಸ್‌ಎಸ್ ಎಸ್‌ಡಿಎಮ್ ಆಯುರ್ವೇದ ಕಾಲೇಜು, ಮೈಸೂರು, ಇಂಚಲ ಎಸ್‌ಡಿಎಮ್ ಆಯುರ್ವೇದ ಕಾಲೇಜಿನ ಪ್ರತಿನಿಧಿಗಳು ಅನಿಸಿಕೆ ವ್ಯಕ್ತಪಡಿಸಿದರು. ಆಗಮಿಸಿದ ಸಂಶೋಧನಾ ಮಾರ್ಗದರ್ಶಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಚಾರ‍್ಯ ಡಾ ಸಜಿತ್ ಎಂ ಅಧ್ಯಕ್ಷತೆ ವಹಿಸಿದ್ದರು. ಮುಂಬೈನ ಡಿವೈ ಪಾಟೀಲ್ ಆಯುರ್ವೇದ ಮೆಡಿಕಲ್ ಕಾಲೇಜಿನ ಡಾ. ಕವಿತಾ ಜಾಧವ್ ಇದ್ದರು. ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ವೈದ್ಯಕೀಯ ಅಧೀಕ್ಷಕ ಡಾ. ಮಂಜುನಾಥ ಭಟ್ ಸ್ವಾಗತಿಸಿ, ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ಸ್ನಾತಕೋತ್ತರ ವಿಭಾಗದ ಡೀನ್ ಹಾಗೂ ಕಾರ‍್ಯಕ್ರಮದ ಮುಖ್ಯ ಸಂಯೋಜಕ ಡಾ. ರವಿಪ್ರಸಾದ ಹೆಗ್ಡೆ ವಂದಿಸಿ, ಸಹಾಯಕ ಪ್ರಾಧ್ಯಾಪಕಿ ಡಾ. ಸ್ಮಿತಾ ಸೂರಜ್ ಕಾರ‍್ಯಕ್ರಮ ನಿರೂಪಿಸಿದರು.

Publisher: ಕನ್ನಡ ನಾಡು | Kannada Naadu

Login to Give your comment
Powered by